





ನಮ್ಮನ್ನು ನಾವು ಅರಿಯುವುದೇ ನಿಜವಾದ ಶಿಕ್ಷಣ: ವೃಷಾಂಕ್ ಭಟ್ ನಿವಣೆ



ಪುತ್ತೂರು: ವಿವೇಕ ಎಂದರೆ ಯಾವುದು ಸರಿ ಯಾವುದು ತಪ್ಪು ಎಂದು ಗುರುತಿಸುವುದು. ಸ್ವಾಮಿ ವಿವೇಕಾನಂದರಲ್ಲಿ ಎರಡು ರೀತಿಯ ದಾರಿ ಇತ್ತು. ಒಂದು ಮುಕ್ತಿಯನ್ನು ಪಡೆಯುವುದು, ಇನ್ನೊಂದು ದೇಶಕೋಸ್ಕರ ಕೆಲಸ ಮಾಡುವುದು, ಆದರೆ ಒಬ್ಬ ಸಾಧಕನಾಗಿ ಮುಕ್ತಿಯನ್ನು ಪಡೆಯುವ ಅವಕಾಶ ಇದ್ದರೂ ಸಮಾಜಕೋಸ್ಕರ ಕೆಲಸ ಮಾಡಿದರು. ಇಂತಹ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು.ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಗುರಿ ಇರಬೇಕು. ನೀರಿನಲ್ಲಿ ಹರಿಯುವ ಎಲೆ ಆಗಬಾರದು. ಯಾವತ್ತೂ ನಮ್ಮತನವನ್ನು ಕಳೆದುಕೊಳ್ಳಬಾರದು ಇದರಿಂದ ನಷ್ಟ ಉಂಟಾಗುತ್ತದೆ. ಪ್ರತಿಯೊಬ್ಬನಿಗೆ ಸ್ವಂತಿಕೆ ಎನ್ನುವುದು ಬಹಳ ಮುಖ್ಯ. ನಮ್ಮನ್ನು ನಾವು ಅರಿಯುವುದೇ ಶಿಕ್ಷಣ. ಆನಂದ, ನೆಮ್ಮದಿ ಇಲ್ಲದಿದ್ದರೆ ಶಿಕ್ಷಣ ಫಲಿಸಿಲ್ಲ ಎಂದರ್ಥ ಎಂದು ಸಂವಾದ ಚಾನೆಲ್ ಇದರ ಸಂಪಾದಕರಾದ ವೃಷಾಂಕ್ ಭಟ್ ನಿವಣೆ ಹೇಳಿದರು.ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ 60ನೇ ವರ್ಷಾಚರನೆಯ ಪ್ರಯುಕ್ತ ವೀರರಾಣಿ ಅಬ್ಬಕ್ಕ ಸಭಾಂಗಣದಲ್ಲಿ ನಡೆದ ಷಷ್ಟ್ಯಬ್ದ ಆಚರಣಂ ಕಾರ್ಯಕ್ರಮದಲ್ಲಿ ಪ್ರಧಾನ ವಕ್ತಾರರಾಗಿ ಭಾಗವಹಿಸಿ ಮಾತನಾಡಿದರು.






ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ ಬೋಳಾರ್ ಮಾತನಾಡುತ್ತಾ, ವಿದ್ಯಾರ್ಥಿ ಜೀವನದಲ್ಲಿ ವಿದ್ಯೆಯ ಜೊತೆಗೆ ವಿನೋದವಿರಬೇಕು, ಉತ್ಸಾಹವಿರಬೇಕು. ಒಂದು ವಿದ್ಯಾಸಂಸ್ಥೆಯು ಎಷ್ಟು ಅಭಿವೃದ್ಧಿಯಾಗುತ್ತದೋ ವಿದ್ಯಾರ್ಥಿಗಳಿಗೆ ಅದು ಅಷ್ಟು ಪೂರಕವಾಗಬಲ್ಲದು. ಹಿರಿಯ ವಿದ್ಯಾರ್ಥಿಗಳ ಸಾಧನೆಗಳು ಇಂದು ಅರವತ್ತು ವರ್ಷಗಳ ಆಚರಣೆಗೆ ಸಾರ್ಥಕತೆಯನ್ನು ನೀಡಿದೆ. ನಾವು ಇತರರ ಸಾಧನೆಗೆ ಉತ್ತೇಜನ ನೀಡಿದಾಗ ಮಾತ್ರ ಬೇರೆಯವರೂ ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ನಾವು ಎಂದಿಗೂ ನಡೆದು ಬಂದ ಹಾದಿಯನ್ನು ಮರೆಯಬಾರದು. ವಿದ್ಯಾರ್ಥಿ ಜೀವನದಲ್ಲಿ ಏಕಲವ್ಯನಂತಹವರು ನಮಗೆ ಪ್ರೇರಣೆಯಾಗಬೇಕು. ಆಂಗ್ಲ ಶಿಕ್ಷಣದ ಅಗತ್ಯತೆ ಇಂದಿನ ಕಾಲಕ್ಕೆ ಇದೆ. ಹಾಗೆಂದು ಮಾತೃಭಾಷೆಯನ್ನು ನಾವು ಎಂದಿಗೂ ಮರೆಯಬಾರದು ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜು ಆಡಳಿತಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ ಮಾತನಾಡುತ್ತಾ , ಆಧುನಿಕತೆಯಿಂದ ನಾವು ಸಾಕಷ್ಟು ಸಂಗತಿಗಳನ್ನು ಪಡೆದುಕೊಂಡಿದ್ದೇವೆ. ಆದರೆ ಅದಕ್ಕಿಂತ ಹೆಚ್ಚಿನದನ್ನು ನಾವು ಏನನ್ನು ಕಳೆದುಕೊಂಡಿದ್ದೇವೆ ಎನ್ನುವುದರ ಅರಿವು ನಮಗಾಗಬೇಕಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಬುದ್ಧಿವಂತಿಕೆಯ ಕೊರತೆ ಇಲ್ಲ , ಬದಲಾಗಿ ವಿವೇಕದ ಕೊರತೆ ಇದೆ. ಶಿಕ್ಷಣವೆನ್ನುವುದು ಕೇವಲ ಹೊಟ್ಟೆಪಾಡಿಗಾಗಿ ಅಲ್ಲ. ವಿವೇಕವನ್ನು ಜಾಗೃತಗೊಳಿಸುವುದೇ ಶಿಕ್ಷಣದ ನಿಜವಾದ ಗುರಿ. ಈ ರೀತಿಯ ಪ್ರಜ್ಞೆಯನ್ನು ಬೆಳೆಸುವಲ್ಲಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ದೇವಿಚರಣ್ ರೈ ಎಂ ವಾರ್ಷಿಕ ವರದಿಯನ್ನು ಮಂಡಿಸಿದರು. ಬಳಿಕ ಸಿಎ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಮಹೇಂದ್ರ ಗೋಪಾಲ ವಿಭಾಸ್ ಹಾಗೂ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಸಂಸ್ಕೃತಿ ಜೈನ್, ಸಂಜನಾ ಭಟ್, ಅಪರ್ಣ ಅಡಿಗ, ಅನುಶ್ರೀ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿವಿಧ ದತ್ತಿನಿಧಿ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಆಡಳಿತಮಂಡಳಿ ನಿರ್ದೇಶಕರಾದ ಇಂದಿರಾ ಬಿ.ಕೆ ಹಾಗೂ ಕಾಲೇಜು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾಲೇಜಿನ ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಎನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕಿಯರಾದ ಹರ್ಷಿತಾ ಪಿ ವಂದಿಸಿ, ಮಮತಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.









