ಇಂದು (ಫೆ.25) ಆರ್ಯಾಪು, ಕುಟ್ರುಪ್ಪಾಡಿ, ಅನಂತಾಡಿ, ನೆಟ್ಲಮುಡ್ನೂರು ಗ್ರಾ.ಪಂ.ಉಪಚುನಾವಣೆ
4 ಸ್ಥಾನಗಳಿಗೆ 9 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

0

ಆರ್ಯಾಪು, ಅನಂತಾಡಿ, ನೆಟ್ಲಮುಡ್ನೂರುನಲ್ಲಿ ನೇರ, ಕುಟ್ರುಪ್ಪಾಡಿಯಲ್ಲಿ ತ್ರಿಕೋನ ಸ್ಪರ್ಧೆ

ಪುತ್ತೂರು:ಪುತ್ತೂರು ತಾಲೂಕಿನ ಆರ್ಯಾಪು,ಕಡಬ ತಾಲೂಕಿನ ಕುಟ್ರುಪ್ಪಾಡಿ ಹಾಗೂ ಬಂಟ್ವಾಳದ ಅನಂತಾಡಿ, ನೆಟ್ಲಮುಡ್ನೂರು ಗ್ರಾ.ಪಂ.ಗಳಲ್ಲಿ ತೆರವಾಗಿರುವ ತಲಾ ಒಂದು ಸ್ಥಾನಗಳಿಗೆ ಫೆ.25ರಂದು ಉಪ ಚುನಾವಣೆ ನಡೆಯಲಿದೆ.ನಾಲ್ಕು ಸ್ಥಾನಗಳಿಗೆ ಒಟ್ಟು 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಆರ್ಯಾಪು ಗ್ರಾ.ಪಂ.ನಲ್ಲಿ ಆರ್ಯಾಪು ವಾರ್ಡ್ 1ರ ಸಾಮಾನ್ಯ ಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಯತೀಶ್ ಡಿ.ಬಿ ಸಂಟ್ಯಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪ್ರಜ್ವಲ್ ರೈ ತೊಟ್ಲ ಕಣದಲ್ಲಿದ್ದಾರೆ. ಕಡಬದ ಕುಟ್ರುಪ್ಪಾಡಿಯ ಬಲ್ಯ ವಾರ್ಡ್ 1ರ ಹಿಂದುಳಿದ ವರ್ಗ ‘ಎ’ಗೆ ಮೀಸಲಾದ 1 ಸ್ಥಾನಕ್ಕೆ ಮೂರು ಮಂದಿ ಕಣದಲ್ಲಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕರುಣಾಕರ ಮತ್ರಾಡಿ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸುದೇಶ್ ಬೀರುಕ್ಕು ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸುಧಾಕರ ಬಿ. ಬಾರಿಕೆ ಕಣದಲ್ಲಿದ್ದಾರೆ.

ಬಂಟ್ವಾಳ ತಾಲೂಕಿನ ಅನಂತನಾಡಿ ಗ್ರಾ.ಪಂನ ಹಿಂದುಳಿದ ವರ್ಗ ‘ಎ’ ಮಹಿಳಾ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗೀತಾ ಚಂದ್ರಶೇಖರ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಶಶಿಕಲಾ ಹರಿಣಾಕ್ಷ ಪೂಜಾರಿ ಹಾಗೂ ನೆಟ್ಲ ಮುಡ್ನೂರು ಗ್ರಾ.ಪಂ.ನ ಹಿಂದುಳಿದ ವರ್ಗ ‘ಎ’ ಮಹಿಳಾ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸುಜಾತ ಜಗದೀಶ್ ಪೂಜಾರಿ ಮಿತ್ತಕೋಡಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹರಿಣಾಕ್ಷಿ ಹರೀಶ್ ಪೂಜಾರಿ ಅಂತಿಮ ಕಣದಲ್ಲಿದ್ದಾರೆ.

ಚುನಾವಣೆಗೆ ಸಂಬಂಧಿಸಿದಂತೆ ಮಸ್ಟರಿಂಗ್ ಕಾರ್ಯಗಳು ಫೆ.24ರಂದು ಪೂರ್ಣಗೊಂಡಿವೆ. ಫೆ.25ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ಪ್ರಕ್ರಿಯೆ ನಡೆಯಲಿದೆ. ಆರ್ಯಾಪು ಗ್ರಾ.ಪಂನ ವಾರ್ಡ್ 1ಕ್ಕೆ ಹಂಟ್ಯಾರ್ ಹಿ.ಪ್ರಾ ಶಾಲೆ, ಕುಟ್ರುಪ್ಪಾಡಿಯ ವಾರ್ಡ್ 1ಕ್ಕೆ ಬಲ್ಯ ಹಿ.ಪ್ರಾ ಶಾಲೆಯಲ್ಲಿ ಮತದಾನ ನಡೆಯಲಿದೆ.ಅನಂತಾಡಿ ಗ್ರಾ.ಪಂನ ವಾರ್ಡ್ 2ರ ತೆರವಾದ ಸ್ಥಾನಕ್ಕೆ ಬಾಬನಕಟ್ಟೆ ಹಿ.ಪ್ರಾ ಶಾಲೆ, ನೆಟ್ಲಮುಡ್ನೂರು ಗ್ರಾ.ಪಂನ ವಾರ್ಡ್ 2ರ ತೆರವಾದ ಸ್ಥಾನಕ್ಕೆ ನೇರಳಕಟ್ಟೆ ಹಿ.ಪ್ರಾ ಶಾಲೆಯಲ್ಲಿ ಮತದಾನ ನಡೆಯಲಿದೆ. ಆರ್ಯಾಪು ವಾರ್ಡ್ 1ರಲ್ಲಿ 1090, ಅನಂತಾಡಿಯ ವಾರ್ಡ್ 2ರಲ್ಲಿ 664, ನೆಟ್ಲ ಮುಡ್ನೂರು ವಾರ್ಡ್ 2ರಲ್ಲಿ 816 ಹಾಗೂ ಕುಟ್ರುಪ್ಪಾಡಿ ವಾರ್ಡ್ 1ರಲ್ಲಿ 1055 ಮಂದಿ ಮತದಾರರು ಮತ ಚಲಾಯಿಸಲಿದ್ದಾರೆ.ಅವಶ್ಯವಿದ್ದರೆ ಫೆ.27ರಂದು ಮರು ಮತದಾನ ನಡೆಯಲಿದೆ. ಫೆ.28ರಂದು ಮತ ಎಣಿಕೆ ನಡೆಯಲಿದೆ.

LEAVE A REPLY

Please enter your comment!
Please enter your name here