ಪುತ್ತೂರು: ಗಡಿನಾಡ ಶ್ರೇಯೋಭಿವೃದ್ಧಿ ಟ್ರಸ್ಟ್ ಆಶ್ರಯದಲ್ಲಿ 6ನೇ ಕರ್ನಾಟಕ ಗಡಿನಾಡ ಸಮ್ಮೇಳನ-2023 ಅಂಗವಾಗಿ ನೀಡಲಾಗುವ ಗಡಿನಾಡ ಧ್ವನಿ ‘ಸಮಾಜ ಸೇವಾ ಭೂಷಣ’ ಪ್ರಶಸ್ತಿಗೆ ಗಡಿನಾಡಿನ ಪತ್ರಕರ್ತ ಅಜಿತ್ ಸ್ವರ್ಗ ಆಯ್ಕೆಯಾಗಿದ್ದಾರೆ.
ಹಿರಿಯ ಪತ್ರಕರ್ತ, ತುಳು ಸಾಹಿತಿ ಮಾಲಾರ್ ಜಯರಾಮ ರೈ ಸಮ್ಮೇಳನಾಧ್ಯಕ್ಷತೆ ಹಾಗೂ ಪ್ರಥಮ ಗಡಿನಾಡ ಸಮ್ಮೇಳನಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಧ್ಯಕ್ಷತೆಯಲ್ಲಿ ಫೆ.25ರಂದು ಒಡ್ಯ ಶಾಲೆಯ ಕೆದಂಬಾಡಿ ಜತ್ತಪ್ಪ ರೈ ವೇದಿಕೆಯಲ್ಲಿ ನಡೆಯಲಿರುವ 6ನೇ ಮಹಾ ಸಮ್ಮೇಳನದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅಜಿತ್ ಸ್ವರ್ಗ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಒಡ್ಯ ಸಹಕಾರದೊಂದಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರಾವಳಿ ಪ್ರಾಧಿಕಾರ ಸಹಯೋಗದಲ್ಲಿ 6ನೇ ಕರ್ನಾಟಕ ಗಡಿನಾಡ ಸಮ್ಮೇಳನ-2023 ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕ ಡಾ.ಹಾಜಿ ಎಸ್.ಅಬೂಬಕ್ಕರ್ ಆರ್ಲಪದವು ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲೆ, ಮಂಜೇಶ್ವರ ತಾಲೂಕು ಎಣ್ಮಕಜೆ ಗ್ರಾ.ಪಂ.ನ ಎಂಡೋಸಲ್ಫಾನ್ ಸಂತ್ರಸ್ತರೂ ಒಳಗೊಂಡ 4ನೇ ವಾರ್ಡ್ ಕಾಟುಕುಕ್ಕೆಯ ಪಿಲಿಂಗಲ್ಲು-ನೀರ್ಚಾಲು ರಸ್ತೆ ಹಾಗೂ 6ನೇ ವಾರ್ಡ್ ಪಡ್ರೆ ಗ್ರಾಮದ ಸ್ವರ್ಗ-ಮಲೆತ್ತಡ್ಕ ರಸ್ತೆ ನಿರ್ಮಾಣಕ್ಕೆ ಅಜಿತ್ ಸ್ವರ್ಗ ಕಾರಣರಾಗಿದ್ದರು.ಈ ರಸ್ತೆಯನ್ನು 2017, ಮೇ 6ರಂದು ಕಾಸರಗೋಡು ಜಿಲ್ಲಾಧಿಕಾರಿಯಾಗಿದ್ದ ಜೀವನ್ ಬಾಬು ಲೋಕಾರ್ಪಣೆಗೊಳಿಸಿದ್ದರು.
ಕಳೆದ ಹಲವು ವರ್ಷಗಳಿಂದ ಸ್ವತಂತ್ರ ವರದಿಗಾರರಾಗಿ ಸಾಮಾಜದ ಧ್ವನಿಯಾಗಿ ಸಾಮಾಜಿಕ ಸಮಸ್ಯೆ, ಜನಪರ ಕಾಳಜಿಯ ವರದಿಗಾರಿಕೆ ನಡೆಸುತ್ತಾ ಬಂದಿರುವ ಅಜಿತ್, ಪ್ರಸ್ತುತ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪೆರ್ಲ ಮತ್ತು ಬೆಳ್ಳೂರು ಮತ್ತು ಪಾಣಾಜೆ ಗಡಿ ಗ್ರಾ.ಪಂ ವ್ಯಾಪ್ತಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಗಡಿ ನಾಡಿನ ವಿಶೇಷ ವರದಿ ಮೂಲಕ ಸಾಮಾಜಿಕ ಸಮಸ್ಯೆಗಳ ಧ್ವನಿಯಾಗಿದ್ದಾರೆ.