ನೆಲ್ಯಾಡಿ: ಇಂಟರ್ ನ್ಯಾಷನಲ್ ಯೋಗದಲ್ಲಿ ’ದಿ ಬೆಸ್ಟ್ ಅವಾರ್ಡ್’ ಪ್ರಶಸ್ತಿ ಪಡೆದ ನೆಲ್ಯಾಡಿ ಬೆಥನಿ ಆಂಗ್ಲ ಮಾಧ್ಯಮ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿ ಆರಾಧ್ಯ ಎ ರೈ ಯವರನ್ನು ನೆಲ್ಯಾಡಿ ದುರ್ಗಾಶ್ರೀ ಕಾಂಪ್ಲೆಕ್ಸ್ನಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್ರವರು ಮಾತನಾಡಿ, ಈ ದಿನದ ಸನ್ಮಾನವು ಆರಾಧ್ಯಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಲು ಪ್ರೇರಣೆಯಾಗಲಿ. ಪ್ರತಿ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದೆ, ಅದನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯದಲ್ಲಿ ಉಪಯೋಗಿಸಿಕೊಳ್ಳಬೇಕು. ಉತ್ತಮ ಗುರುವಿನ ತರಬೇತಿ ಸಿಕ್ಕಿದ್ದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ನೆಲ್ಯಾಡಿ ವರ್ತಕ ಸಂಘದ ಉಪಾಧ್ಯಕ್ಷ ಗಣೇಶ್ ರಶ್ಮಿ, ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಶ್ವನಾಥ್ ಕೆ ಶೆಟ್ಟಿ, ಗೋಳಿತ್ತೊಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಪೂವಪ್ಪ ಕರ್ಕೇರ, ದುರ್ಗಾಶ್ರೀ ಕಾಂಪ್ಲೆಕ್ಸ್ನ ಮಾಲಕ ಸತೀಶ್ ಭಟ್, ಕೆಪಿಸಿಸಿ ಸದಸ್ಯ ಕೃಷ್ಣಪ್ಪರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯದ ನಿರಂತರ ಯೋಗ ಕಲಿಕಾ ಕೇಂದ್ರದ ಯೋಗ ಗುರು ಶರತ್ ಮರ್ಗಿಲಡ್ಕ, ಗೋಳಿತೊಟ್ಟು ಗ್ರಾ.ಪಂ. ಮಾಜಿ ಸದಸ್ಯ ಅಜೀಜ್, ಆರಾಧ್ಯ ಎ ರೈ ಅವರ ಅವಿನಾಶ್ ರೈ, ತಾಯಿ ಸಂಧ್ಯಾ ರೈ, ಯಶೋಧ ಮತ್ತಿತರರು ಉಪಸ್ಥಿತರಿದ್ದರು. ಪೂವಪ್ಪ ಕರ್ಕೇರ ಸನ್ಮಾನ ಪತ್ರ ವಾಚಿಸಿದರು. ಸನ್ಮಾನ ಕಾರ್ಯಕ್ರಮದ ಸಂಘಟಕರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗಂಗಾಧರ ಶೆಟ್ಟಿ ಹೊಸಮನೆ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ವಂದಿಸಿದರು.