





ಪಶ್ಚಿಮವಾಹಿನಿಗೆ ಯೋಜನೆ ಅನುದಾನ ನೀಡಿ, ಕಾಮಗಾರಿ ಪೂರ್ಣಗೊಂಡ ಬಳಿಕ ಮಾಡಲಿ


ಪುತ್ತೂರು: ಎತ್ತಿನಹೊಳೆ ಯೋಜನೆಯ ನೀರನ್ನು ಬೆಂಗಳೂರಿನ ಕೈಗಾರಿಕೆಗಳಿಗೆ ಬಳಕೆಗೆ ರಾಜ್ಯ ಸರಕಾರದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಪಶ್ಚಿಮವಾಹಿನಿಗೆ ಯೋಜನೆಯಲ್ಲಿ ಅನುದಾನ ನೀಡಿ, ಕಾಮಗಾರಿ ಪೂರ್ಣಗೊಂಡು, ಇಲ್ಲಿ ಸಾಕಷ್ಟು ನೀರು ಶೇಖರಣೆಗೆ ವ್ಯವಸ್ಥೆಯಾದ ಬಳಿಕ ಯೋಚನೆ ಮಾಡಲಿ ಎಂದು ಆಗ್ರಹಿಸಿದ್ದಾರೆ.





ಶಾಸಕರ ಕಚೇರಿಯಲ್ಲಿ ನ.10ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಕುಡಿಯುವ ನೀರಿಗೆ ಸಮಸ್ಯೆ ಎದುರಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಫೆಬ್ರವರಿ, ಮಾರ್ಚ್ ತಿಂಗಳಿನಲ್ಲೇ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಇಲ್ಲಿಯೇ ಅಂತರ್ಜಲ ಕಡಿಮೆಯಾಗುತ್ತಿದೆ. ಕೃಷಿಗೆ ಬೇಕಾದಷ್ಟು ನೀರಿಲ್ಲ. ಕೊಳವೆಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಹಾಗಿರುವಾಗ ಕೈಗಾರಿಕೆಗಳಿಗೆ ಎತ್ತಿನ ಹೊಳೆಯ ನೀರನ್ನು ಕೊಂಡು ಹೋಗುವ ಯೋಜನೆಗೆ ನಮ್ಮ ವಿರೋಧವಿದೆ.
ಎತ್ತಿನಹೊಳೆ ಯೋಜನೆಯ ನೀರನ್ನು ಕೈಗಾರಿಕೆಗಳಿಗೆ ಪೂರೈಸುವ ಮೊದಲು ಪಶ್ಚಿಮವಾಹಿನಿ ಯೋಜನೆಗೆ ಬೇಕಾದ ಅನುದಾನ ಬಿಡುಗಡೆ ಮಾಡಬೇಕು. ಉಪ್ಪಿನಂಗಡಿ, ಕುಮಾಧಾರ ನದಿಗಳಿಗೆ ಆಣೆಕಟ್ಟು ನಿರ್ಮಾಣ ಮಾಡಿ, ನೀರು ಶೇಖರಣೆಗೆ ಹೆಚ್ಚಿನ ಅನುದಾನ ನೀಡಬೇಕು. ನಮ್ಮಲ್ಲಿ ನದಿಯ ನೀರನ್ನು ಸಾಕಷ್ಟು ಶೇಖರಣೆ ಮಾಡಿದ ಬಳಿಕ ಬೆಂಗಳೂರಿನ ಕೈಗಾರಿಕೆಗಳಿಗೆ ನೀರು ನೀಡುವ ಬಗ್ಗೆ ಚಿಂತನೆ ಮಾಡಬೇಕು. ಇಲ್ಲದಿದ್ದಲ್ಲಿ ನಾನು ವಿರೋಧ ವ್ಯಕ್ತಪಡಿಸಲಿದ್ದೇನೆ. ನಮಗೆ ಕುಡಿಯುವ ನೀರಿನ ಆವಶ್ಯಕತೆಯಿದೆ. ಸರಕಾರ ಎತ್ತಿನ ಹೊಳೆಗೆ ಅನುದಾನ ನೀಡುತ್ತದೆ. ಅದೇ ರೀತಿ ಪಶ್ಚಿಮ ವಾಹಿನಿಗೂ ಅನುದಾನ ನೀಡಬೇಕು. ರಾಜದಾನಿ ಬೆಂಗಳೂರಿಗೆ ಕೈಗಾರಿಕೆಗೆ ನೀರು ಕೊಂಡು ಹೋಗುವ ಯೋಜನೆಯಿದ್ದರೆ ಪಶ್ಚಿಮವಾಹಿನಿಯ ಕಾಮಗಾರಿ ಮುಗಿಸಿದ ಬಳಿಕ ಮಾಡಬೇಕು.
ಸರಕಾರ ಎತ್ತಿನಹೊಳೆ ಯೋಜನೆಗೆ ಎಷ್ಟು ಅನುದಾನ ಕೊಡುತ್ತಿದೆಯೋ ಅಷ್ಟೇ ಅನುದಾನವನ್ನು ಪಶ್ಚಿಮವಾಹಿನಿ ಯೋಜನೆಗೂ ಕೊಡಿ, ನಮಗೆ ಕುಡಿಯುವ ನೀರಿನ ಅವಶ್ಯಕತೆ. ಇಲ್ಲಿನ ಅಂತರ್ಜಲ ಮಟ್ಟ ವೃದ್ಧಿ, ಕುಡಿಯುವ ನೀರಿಗೆ ಬೇಕಾದಷ್ಟು ವ್ಯವಸ್ಥೆಗಳಾದ ಬಳಿಕ ಮಾಡಲಿ. ಅದಕ್ಕೆ ಮೊದಲೇ ಮಾಡುವುದು ಸರಿಯಲ್ಲ. ಕುಡಿಯಲು ನೀರು ಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ಕುಡಿಯಲು ನೀರು ಕೊಡುವುದು ನಮ್ಮ ಧರ್ಮ. ಕೈಗಾರಿಕೆಗೆ ನೀರು ಕೊಡುವುದಕ್ಕೆ ಮಾತ್ರ ನಮ್ಮ ವಿರೋಧ. ನಮ್ಮ ವ್ಯವಸ್ಥೆಗಳು ಆದ ಬಳಿಕ ಇಲ್ಲಿ ನೀರು ನಿಂತ ಬಳಿಕ ದೊಡ್ಡ ಆಣೆಕಟ್ಟುಗಳು ನಿರ್ಮಾಣವಾಗಿ ನೀರು ನಿಂತ ಬಳಿಕ ಯೋಚನೆ ಮಾಡಲಿ. ಉಪ್ಪಿನಂಗಡಿ, ಕಟಾರದಲ್ಲಿ ಆಣೆಕಟ್ಟು ನಿರ್ಮಾಣವಾದರೆ 9 ಕಿ.ಮೀ ನೀರು ನಿಂತ ಅಂತರ್ಜಲ ಮಟ್ಟ ಏರಿಕೆಯಾಗಲಿದೆ. ಸರಕಾರ ಈಗಾಗಲೇ ಪ್ರಸ್ತಾಪಿಸಿರುವ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೈಗಾರಿಕಾ ಸಚಿವ, ಕೃಷಿ ಸಚಿವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು. ನಮ್ಮ ಬೇಡಿಕೆ ಪರಿಗಣಿಸಿ ನಂತರ ಹೆಚ್ಚುವರಿ ನೀರಿದ್ದರೆ ಬೆಂಗಳೂರು ಕೈಗಾರಿಕೆ ನೀಡುವ ಯೋಚನೆ ಮಾಡಲಿ. ನಮ್ಮ ಬೇಡಿಕೆ ಪರಿಗಣನೆಗೆ ತೆಗೆದುಕೊಳ್ಳದೇ ಬೇರೆ ಯೋಜನೆ ಮಾಡಿದರೆ ನಮ್ಮ ವಿರೋಧವಿದೆ ಎಂದು ಹೇಳಿದರು.
ಎತ್ತಿನಹೊಳೆಯ ಯೋಜನೆ ಬಗ್ಗೆ ಈ ಹಿಂದೆ ನಡೆದ ಪ್ರತಿಭಟನೆಗಳು ನಡೆದಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಅದು ನಾಟಕದ ಪ್ರತಿಭಟನೆ. ಹಿಂದೆ ಬಿಜೆಪಿ ಅವಧಿಯಲ್ಲಿ ಡಿ.ವಿ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಯೋಜನೆ ಜಾರಿಯಾಗಿದೆ. ಆಗ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು ಇಲ್ಲಿ ಪ್ರತಿಭಟನೆ ಮಾಡಿದ್ದರು. ಮತ್ತೆ ಬಿಜೆಪಿ ಸರಕಾರ ಬಂದ ಬಳಿಕ ಎತ್ತಿನಹೊಳಗೆ ಯೋಜನೆಗೆ ರೂ. 13,000 ಕೋಟಿ ಅನುದಾನ ನೀಡಿದ್ದಾರೆ. ಅದು ರಾಜಕೀಯದ ತಂತ್ರ. ಪ್ಲೆಕ್ಸ್ ಹಾಕಿ ಜನರನ್ನು ಮಂಗ ಮಾಡಿದ್ದು ಮಾತ್ರ. ಹೋರಾಟ ನೋಡಲು ಮಾತ್ರ. ಜನರು ಬೇಗ ಮರೆತು ಬಿಡುತ್ತಾರೆ ಎಂದು ಶಾಸಕರು ಹೇಳಿದರು.
ರಬ್ಬರ್ ಆಮದಿಗೆ ಕಡಿವಾಣ ಹಾಕಲಿ
ರಬ್ಬರ್ ವಾಣಿಜ್ಯ ಬೆಲೆಯಾಗಿದೆ. ಅಡಿಕೆ, ತೆಂಗು, ರಬ್ಬರ್ ಸೇರಿದಂತೆ 28 ವಾಣಿಜ್ಯ ಬೆಲೆಗಳನ್ನು ವಾಣಿಜ್ಯ ಬೆಳೆಯಿಂದ ಕೃಷಿ ಬೆಳೆಗೆ ಸೇರಿಸುವಂತೆ ರಾಜ್ಯದಿಂದ ಕೇಂದ್ರಕ್ಕೆ ಮನವಿ ಕಳುಹಿಸಲಾಗಿದೆ. ಅವರು ಪರಿಗಣನೆಗೆ ತೆಗೆದುಕೊಂಡಿಲ್ಲ. ಕೇಂದ್ರ ಕೃಷಿ ಬೆಳೆಯಾಗಿ ಮಾಡಿದರೆ ಬಳಿಕ ಪರಿಹಾರ ದೊರೆಯಲಿದೆ. ಹೊರ ದೇಶದಲ್ಲಿ ರಬ್ಬರ್ ಕಾಡುತ್ಪತ್ತಿಯಾಗಿದ್ದ ಹೊರದೇಶದಿಂದ ಸಾಕಷ್ಟು ಬರುತ್ತಿದೆ. ಹೊರದೇಶದಿಂದ ಬರುವುದಕ್ಕೆ ಕಡಿವಾಣ ಹಾಕಿದಾಗ ನಮ್ಮ ಬೆಳೆಗೆ ಬೇಡಿಕೆ ಬರಲಿದೆ. ನಮ್ಮಲ್ಲಿ ಅತೀ ಹೆಚ್ಚು ರಬ್ಬರ್ ಬಳಕೆಯಾಗುತ್ತಿದೆ. ಆಮದಿಗೆ ಕಡಿವಾಣ ಹಾಕಿದರೆ ರಬ್ಬರ್‌ಗೆ ರೂ.300ರ ತನಕ ಬರಲಿದೆ.
ಅಡಿಕೆ ಹಾನಿಕಾರಕ ಎಂದು ಡಬ್ಲ್ಯುಎಚ್‌ಓ ವರದಿ ನೀಡಿದೆ. ನಾವು ಅವರಿಗೆ ಮಾಹಿತಿ ನೀಡುವಲ್ಲಿ ಹಿಂದುಳಿದಿದ್ದೇವೆ. ಡಬ್ಲ್ಯುಎಚ್‌ಓ ಅಡಿಕೆ ಮತ್ತು ತಂಬಾಕನ್ನು ಮಿಕ್ಸ್ ಮಾಡುತ್ತದೆ. ಆಗ ಹಾನಿಕಾರಕವಾಗಲಿದೆ. ಅದಕ್ಕೆ ಫೀಡ್ ಬ್ಯಾಕ್ ಕೊಡುವ ಕೆಲಸವಾಗಬೇಕು. ಕ್ಯಾಂಪ್ಕೋ ಮಾರ್ಗದರ್ಶನ ನೀಡಬೇಕು. ಜನಪ್ರತಿನಿಧಿಗಳು ಅಪಿದಾವಿತ್ ನೀಡಬೇಕು. ಈ ಹಿಂದೆ ಕಂಬಳಕ್ಕೆ ನಿಷೇಧವಾದಾಗ ವಕೀಲರಿಗೆ ಗೊತ್ತೇ ಇರಲಿಲ್ಲ. ಇದಕ್ಕೆ ವಕೀಲರನ್ನು ನೇಮಕ ಮಾಡಿ ಅದಕ್ಕೆ ಬೇಕಾದ ದಾಖಲೆ ನೀಡಿದೆ. ಕೋಟ್, ಸರಕಾರದ ಆದೇಶವಾಗಿದೆ. ನಾವು ಸರಿಯಾದ ಮಾಹಿತಿ ನೀಡುವಲ್ಲಿ ಹಿಂದುಳಿದಿದ್ದೇವೆ. ಅಡಿಕೆ ಕೃಷಿ ಬೆಳೆ ಎಂದು ಡಬ್ಲ್ಯೂಎಚ್‌ಓಗೆ ಗೊತ್ತೇ ಇಲ್ಲ. ಕೇಂದ್ರ ಆರೋಗ್ಯ ಇಲಾಖೆಯ ಮೂಲಕ ತಿಳಿಸುವ ಕಾರ್ಯವಾಗಬೇಕು ಎಂದು ಅಶೋಕ್ ರೈ ಹೇಳಿದರು.
ಗುಂಡಿ ಮುಚ್ಚುವ ಕಾರ್ಯ ಮೂರು ದಿನದಲ್ಲಿ ಪ್ರಾರಂಭ
ರಸ್ತೆ ಹೊಂಡ ಬಿದ್ದಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಇಂದಿನಿಂದ ಮೂರು ದಿನದಲ್ಲಿ ಎಲ್ಲಾ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಪ್ರಾರಂಭವಾಗಲಿ ಎಂದು ಹೇಳಿದರು.
ಸಹಿ ಸಂಗ್ರಹದಲ್ಲಿ ಪುತ್ತೂರು ಪ್ರಥಮ
ಮತಗಳ್ಳತನದ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ನಡೆದ ಸಹಿ ಸಂಗ್ರಹ ಅಭಿಯಾನದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ 42,200 ಸಹಿಸಂಗ್ರಹವಾಗಿದ್ದು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಉಪ್ಪಿನಂಗಡಿ 11,000 ಹಾಗೂ ವಿಟ್ಲದಲ್ಲಿ 8,000 ಸಹಿ ಸಂಗ್ರಹವಾಗಿದೆ.









