ಸಾವರ್ಕರ್, ಆಝಾದ್ ಯುವಪೀಳಿಗೆಗೆ ಮಾದರಿ : ಆದರ್ಶ ಗೋಖಲೆ
ಪುತ್ತೂರು : ಬಾಲ್ಯದಲ್ಲಿರುವಾಗಲೇ ವೀರ ಸಾವರ್ಕರ್ ಅವರು ದೇಶದ ಪರ ಹೋರಾಡಿದ ನಾಯಕ. ಅವರು ಝಾನ್ಸಿ ರಾಣಿಯ ಸಾಹಸದಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು. ಜನರಲ್ಲಿ ದೇಶಪ್ರೇಮ, ದೇಶ ಭಕ್ತಿ ಬಿತ್ತಿದವರು ಸಾವರ್ಕರ್. ಮಹಾರಾಷ್ಟ್ರದಲ್ಲಿ ಪತಿತ ಪಾವನ ಎಂಬ ಮಂದಿರವನ್ನು ಸ್ಥಾಪಿಸಿ ದೇಶದಲ್ಲಿ ಎಲ್ಲರೂ ಒಂದೇ ಎಂಬ ಘೋಷಣೆಯನ್ನು ಸಾರಿದ ದೇಶದ ಹೆಮ್ಮೆಯ ಪುತ್ರ ಎಂದು ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
ಅವರು ಅಂಬಿಕಾ ಸಿಬಿಎಸ್ಇ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ವೀರ ಸಾವರ್ಕರ್ ಹಾಗೂ ಚಂದ್ರಶೇಖರ್ ಆಜಾದ್ ಅವರ ಪುಣ್ಯ ಸ್ಮರಣೆ ಮತ್ತು ಸರ್ಜಿಕಲ್ ಸ್ಟ್ರೈಕ್ ದಿನಾಚರಣೆ ಅಂಗವಾಗಿ ಸೋಮವಾರ ವಿಶೇಷ ಉಪನ್ಯಾಸ ನೀಡಿದರು.
ಈ ದೇಶ ಕಂಡ ಮಹಾನ್ ರಾಷ್ಟ್ರ ಭಕ್ತರಲ್ಲಿ ಚಂದ್ರಶೇಖರ ಆಝಾದರೂ ಒಬ್ಬರು. ಬ್ರಿಟಿಷರ ಛಡಿ ಏಟಿಗೆ ರಕ್ತ ಒಸರುತಿದ್ದರೂ ಒಂದು ಹನಿ ಕಣ್ಣೀರು ಸುರಿಸದೆ ಆಕ್ರೋಶದಲ್ಲಿ ’ಇನ್ನು ಮುಂದೆ ಬ್ರಿಟಿಷರ ಕೈಗೆ ಸಿಗುವುದಿಲ್ಲ’ ಎಂದು ಶಪಥ ಮಾಡಿದ ಶೂರ. ಆದರೆ ಮುಂದೆ ವೀರಭದ್ರ ತಿವಾರಿ ಎಂಬ ದೇಶದ್ರೋಹಿಯಿಂದ ಚಂದ್ರಶೇಖರ್ ಆಜಾದ್ರವರ ವಾಸ್ತವ್ಯ ತಿಳಿದ ಬ್ರಿಟಿಷರು ಅಲ್ಫ್ರೆಡ್ ಪಾರ್ಕ್ನಲ್ಲಿ ಮುತ್ತಿಗೆ ಹಾಕಿದಾಗ, ಆಜಾದರು ತನ್ನ ಬಂದುಕಿನಲ್ಲಿದ್ದ ಗುಂಡುಗಳಿಂದ ಬ್ರಿಟಿಷರನ್ನು ಹತ್ಯೆಗೈಯುತ್ತಾರೆ. ಆದರೆ ಕೊನೆಯದಾಗಿ ತಾನು ಬ್ರಿಟಿಷರ ವಶವಾಗುತ್ತೇನೆ ಎಂದು ತಿಳಿದ ಅಜಾದ್ ತನ್ನಲ್ಲಿದ್ದ ಕೊನೆಯ ಗುಂಡನ್ನು ಹಣೆಗೆ ಗುರಿ ಇಟ್ಟುಕೊಂಡು ವೀರಮರಣವನ್ನು ಹೊಂದಿದರು ಎಂದರು.
ನಾವು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು. ಕ್ರಾಂತಿಕಾರಿಗಳನ್ನು ನೆನಪು ಮಾಡಿಕೊಳ್ಳುವ ಕಾರ್ಯಗಳಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳಬೇಕು. ದೇಶ ನನ್ನದು ಸಮಾಜ ನನ್ನದು ಎಂಬ ಅಸ್ಮಿತೆಯನ್ನು ರೂಪಿಸಿಕೊಳ್ಳಬೇಕು. ನಮ್ಮಲ್ಲಿನ ಅಬದ್ಧಗಳನ್ನು ನಿವಾರಿಸುವುದು ನಮ್ಮ ದೇಶಪ್ರೇಮ ಮಾತ್ರ. ಎಂದರಲ್ಲದೆ ನಮ್ಮ ಸೈನಿಕರಿಗೆ ದೇಶದ ಮೇಲೆ ಇರುವ ಪ್ರೀತಿಗೆ ಕೊನೆ ಎಂಬುದಿಲ್ಲ. ಪ್ರಪಂಚದಲ್ಲಿ ಪ್ರತಿಯೊಬ್ಬನೂ ಬೇಡಿಕೆ ಈಡೇರಿಸಲು ಪ್ರತಿಭಟನೆಯನ್ನು ಮಾಡುತ್ತಾನೆ. ಆದರೆ ಪ್ರತಿಭಟನೆ ದಾರಿಯನ್ನು ಹಿಡಿಯದೆ ಇರುವವರು ಸೈನಿಕರು ಮಾತ್ರ. ಆದ್ದರಿಂದಲೇ ಅವರು ನಮ್ಮ ಹೆಮ್ಮೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಶಾಲಾ ಪ್ರಾಂಶುಪಾಲೆ ಮಾಲತಿ ಡಿ ಭಟ್ ಹಾಗೂ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.