ಮಂಜುಲಗಿರಿ ಪುರೋಹಿತ ಶಂಕರನಾರಾಯಣ ಪ್ರತಿಷ್ಠಾನದಿಂದ ಸನ್ಮಾನ ಕಾರ್ಯಕ್ರಮ

0

ವೇದದಲ್ಲಿದೆ ರಾಷ್ಟ್ರದ ದೃಷ್ಟಿ – ಸನ್ಮಾನ ಸ್ವೀಕರಿಸಿ ಡಾ.ವಾಗೀಶ್ವರೀ ಶಿವರಾಮ

ಪುತ್ತೂರು: ಕುಟುಂಬ ಸರಿಯಾಗಿದ್ದರೆ ನಾಡು, ದೇಶ ಬಲಿಷ್ಠವಾಗಿರುತ್ತದೆ. ಇದನ್ನು ವೇದದಲ್ಲಿ ಮುನಿಗಳು ಉಲ್ಲೇಖ ಮಾಡಿದ್ದಾರೆ. ಆದ್ದರಿಂದ ರಾಷ್ಟ್ರದ ದೃಷ್ಟಿಕೋನವನ್ನು ನಾವು ವೇದಗಳಲ್ಲಿಯೇ ಕಾಣಲು ಸಾಧ್ಯ  ಎಂದು ಮಂಗಳೂರು ಕೆನರಾ ಪ್ರೌಢಶಾಲೆಯ ನಿವೃತ್ತ ಸಂಸ್ಕೃತ ಶಿಕ್ಷಕ ವಿದ್ಯಾವಾರಿಧಿ ಡಾ. ವಾಗೀಶ್ವರೀ ಶಿವರಾಮ ಹೇಳಿದರು.

ಬೆಟ್ಟಂಪಾಡಿ ಮಂಜುಲಗಿರಿ ಪುರೋಹಿತ ಶಂಕರನಾರಾಯಣ ಪ್ರತಿಷ್ಠಾನದ ವತಿಯಿಂದ ಶಂಕರ ಕೃಪಾದಲ್ಲಿ ಫೆ. 27ರಂದು ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕುಟುಂಬ, ನಾಡು, ರಾಜ್ಯ, ದೇಶ ಒಂದಕ್ಕೊಂದು ಪರಸ್ಪರ ಸಂಬಂಧ ಹೊಂದಿರುವಂತಹದ್ದು. ಆದ್ದರಿಂದ ಯುವಪೀಳಿಗೆಗೆ ಹಿರಿಯರು ಸ್ವಲ್ಪ ಸಮಯ ನೀಡಬೇಕು. ಮಾತ್ರವಲ್ಲ ಅವರಿಗೆ ಎಂ.ಬಿ.ಬಿ.ಎಸ್. ಓದಿಸಬೇಕು. ಎಂ.ಬಿ.ಬಿ.ಎಸ್. ಎಂದರೆ ಮಹಾಭಾರತ, ಭಗವದ್ಗೀತೆ, ಭಾಗವತ, ಶ್ರೀಮದ್ರಾಮಯಣ. ಇವು ಬದುಕಿನ ದಾರಿಯನ್ನು ತಿಳಿಸುವುದರೊಂದಿಗೆ, ಸಂಸ್ಕಾರಯುತ ಬದುಕನ್ನು ಕಟ್ಟಿಕೊಡುತ್ತದೆ ಎಂದರು.

ಇಂದು ಇಂಗ್ಲೆಂಡಿನಲ್ಲಿ ಸಂಸ್ಕೃತ ಕಲಿಸುತ್ತಾರೆ. ಕಾರಣ, ಉಚ್ಚಾರಣೆ ಸರಿಯಾಗಿರುತ್ತದೆ ಎಂದು. ಇಂತಹ ಸಂಸ್ಕೃತ ನಮಗ್ಯಾಕೆ ಬೇಡವಾಗಿದೆ? ಇಂತಹ ಸನ್ನಿವೇಶದಲ್ಲಿ ಸಂಸ್ಕೃತದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿರುವುದು ಉತ್ತಮ ಅಂಶ ಎಂದ ಅವರು, ನಮ್ಮಲ್ಲಿ ದೈವತ್ವ ನೆಲೆಗೂಡಬೇಕು. ದೆವ್ವತ್ವ ತುಂಬಿದ್ದರೆ, ನಾವು ಇತರರಲ್ಲೂ ಅದನ್ನೇ ಕಾಣುತ್ತೇವೆ. ನಾವು ಇತರರಲ್ಲೂ ದೈವತ್ವವನ್ನು ಕಾಣಲು ಮುಂದಾದಾಗ, ಸಮೃದ್ಧಿ ನೆಲೆಯಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ವಿ.ಬಿ. ಅರ್ತಿಕಜೆ ಮಾತನಾಡಿ, ನಾವು ಮಾಡುವ ಕೆಲಸ ಅನುಸರಣೀಯವಾಗಿರಬೇಕು. ಅನುಕರಣೆ ಮಾಡುವುದು ಬೇಡ ಎಂದ ಅವರು, ಧಾರ್ಮಿಕ ವಿಚಾರಗಳ ಮೇಲೆ ಬರೆಯುವ ಪ್ರವೃತ್ತಿ ಹೆಚ್ಚಾಗಬೇಕು. ಅಂತಹ ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದರು.

ವೇದಿಕೆಯಲ್ಲಿ ನಿವೃತ್ತ ಮುಖ್ಯಶಿಕ್ಷಕ ಮಂಜುಲಗಿರಿ ಈಶ್ವರ ಭಟ್ ಉಪಸ್ಥಿತರಿದ್ದರು. ಪುರೋಹಿತ ಶಂಕರನಾರಾಯಣ ಭಟ್ ಅವರ ವಿಂಶತಿ ಕಾರ್ಯಕ್ರಮದ ಅಂಗವಾಗಿ ಡಾ. ವಾಗೀಶ್ವರೀ ಶಿವರಾಮ ದಂಪತಿಯನ್ನು ಸನ್ಮಾನಿಸಲಾಯಿತು. ಪ್ರೊ. ವಿ.ಬಿ. ಅರ್ತಿಕಜೆ ಅವರು ಬರೆದ ನಮನ ಸಪ್ತಕದ ಸನ್ಮಾನ ಪತ್ರವನ್ನು ನೀಡಲಾಯಿತು. ಇದೇ ಸಂದರ್ಭ ಸಂಸ್ಕೃತದಲ್ಲಿ ಉತ್ತಮ ಅಂಕ ಗಳಿಸಿದ ನವೋದಯ ಪ್ರೌಢಶಾಲೆಯ ವೈದೇಹಿ, ಅನುಷಾ ಹಾಗೂ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಅಪರ್ಣಾ ಅಡಿಗ, ಯೋಗ್ಯಾ ಕೆ. ಅವರನ್ನು ಗೌರವಿಸಲಾಯಿತು. ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಶಿಕ್ಷಕ ಶಿವರಾಂ ಭಟ್, ಜ್ಯೋತಿಷಿ ನವನೀತ, ಹೈನುಗಾರಿಕೆಯ ಸಾಧಕ ಪೆರುವಾಜೆ ಈಶ್ವರ ಭಟ್, ಶಾರದಾ, ಸತ್ಯವತಿ, ದೇವಕಿ ಅವರನ್ನು ಗೌರವಿಸಲಾಯಿತು.

ವಶಿನಿ ಅಭಿನಯಗೀತೆ ಪ್ರದರ್ಶಿಸಿದರು. ದೇವಿಶ್ರುತಿ, ದುರ್ಗಾಸ್ವಾತಿ ಪ್ರಾರ್ಥಿಸಿದರು. ಪ್ರತಿಷ್ಠಾನದ ವೆಂಕಟರಮಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ರವಿಶಂಕರ್ ಬೆಟ್ಟಂಪಾಡಿ ಸ್ವಾಗತಿಸಿದರು. ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ. ಪ್ರಮೋದ್ ವಂದಿಸಿದರು. ಸಂಸ್ಕೃತ ಶಿಕ್ಷಕ ಸುಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಷ್ಠಾನದ ಕಾರ್ಯವೈಖರಿ:

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುಜ್ಞಾನ ದೀಪಿಕೆ ಪಠ್ಯಪುಸ್ತಕಗಳ ರಚನೆಗೆ ಮಾರ್ಗದರ್ಶಕರಾಗಿ, ಸಂಪನ್ಮೂಲ ವ್ಯಕ್ತಿಗಳಾಗಿ, ಪಠ್ಯಪುಸ್ತಕ ರಚನೆಯ ಕಾರ್ಯಗಳಲ್ಲೂ ಪ್ರತಿಷ್ಠಾನದ ವೆಂಕಟರಮಣ ಭಟ್ ಅವರು ಸಹಕರಿಸುತ್ತಿದ್ದಾರೆ. ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಟಾನದ ಗ್ರಂಥಸಂಪಾದನೆ, ಮಾರ್ಗದರ್ಶಕ ಸಮಿತಿಯ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಪ್ರತಿವರ್ಷ ಶಂಕರ ಜಯಂತಿ ಉತ್ಸವ ಆಚರಿಸಲಾಗುತ್ತಿದೆ. ಪ್ರತಿಷ್ಠಾನದ ಆಶ್ರಯದಲ್ಲಿ 150ಕ್ಕಿಂತಲೂ ಅಧಿಕ ಮಂದಿ ಸಂಸ್ಕೃತ ಕಲಿತವರಿದ್ದು, ಅವರ ಕಲಿಕೆಗೆ ಪೂರಕವಾಗಿ ಮನೀಷಾ ಎಂಬ ಗ್ರಂಥಾಲಯವನ್ನೂ ನಿರ್ಮಿಸಲಾಗಿದೆ.

LEAVE A REPLY

Please enter your comment!
Please enter your name here