ನಮ್ಮ ಶಾಸಕರು ಬಂದಲ್ಲಿ ಮೂರೇ ತಿಂಗಳಲ್ಲಿ ಕಾಮಗಾರಿ : ಅಶೋಕ್ ರೈ
ಪುತ್ತೂರು; ಕಳೆದ 15 ವರ್ಷಗಳಿಂದ ರಸ್ತೆ ಕಾಂಕ್ರಿಟೀಕರಣಕ್ಕೆ ಮನವಿ ಮಾಡುತ್ತಿದ್ದರೂ ರಸ್ತೆಗೆ ಅನುದಾನ ಬಿಡುಗಡೆ ಮಾಡದೇ ಇರುವುದನ್ನು ಖಂಡಿಸಿ ಕೆದಂಬಾಡಿ ಗ್ರಾಮದ ಕಟ್ಟತ್ತಾರು- ನಿಡ್ಯಾಣ ನಿವಾಸಿಗಳು ಮತದಾನ ಬಹಿಷ್ಕಾರ ಮಾಡುವುದಾಗಿ ಬ್ಯಾನರ್ ಹಾಕಿದ್ದು, ಈ ಪ್ರದೇಶಕ್ಕೆ ಕಾಂಗ್ರೆಸ್ ಮುಖಂಡ ಕೋಡಿಂಬಾಡಿ ಅಶೋಕ್ ರೈಯವರು ಮಾ. 1 ರಂದು ಸಂಜೆ ಭೇಟಿ ನೀಡಿ ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಅಶೋಕ್ ರೈಯವರ ಜೊತೆ ಅಹವಾಲು ಹೇಳಿಕೊಂಡ ಗ್ರಾಮಸ್ಥರು “ ನಮ್ಮ ರಸ್ತೆ ಕಟ್ಟತ್ತಾರಿನಿಂದ ನಿಡ್ಯಾಣಕ್ಕೆ ಸುಮಾರು 800 ಮೀ ಇದ್ದು ನಾವು ಕಳೆದ 15 ವರ್ಷಗಳಿಂದ ಜನಪ್ರತಿನಿಧಿಗಳಿಗೆ ಶಾಸಕರಿಗೆ ಮನವಿ ಮಾಡುತ್ತಲೇ ಇದ್ದೇವೆ ಆದರೆ ನಮ್ಮ ರಸ್ತೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಭಾಗದಲ್ಲಿ ನೂರಕ್ಕೂ ಮಿಕ್ಕಿ ಮನೆಗಳಿದೆ, 400 ಕ್ಕೂ ಮಿಕ್ಕಿ ಮತದಾರರಿದ್ದಾರೆ ಆದರೂ ನಮ್ಮ ಮನವಿಗೆ ಬೆಲೆಯೇ ಕೊಡುತ್ತಿಲ್ಲ. ನಮ್ಮ ಬೇಡಿಕೆಯನ್ನು ಈಡೇರಿಸದ ಕಾರಣ ನಾವು ಈ ಬಾರಿಯ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ನೆರೆದಿದ್ದ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಅಶೋಕ್ ರೈ ಮುಂದಿನ ಬಾರಿ ನಮ್ಮನ್ನು ಬೆಂಬಲಿಸಿ, ಕಾಂಗ್ರೆಸ್ ಶಾಸಕರು ಆಯ್ಕೆಯಾಗುವಲ್ಲಿ ನಿಮ್ಮ ಸಹಕಾರ ಇರಲಿ. ನಮ್ಮ ಶಾಸಕರು ಆಯ್ಕೆಯಾದರೆ ಮೂರೇ ತಿಂಗಳೊಳಗೆ ನಿಮ್ಮ ರಸ್ತೆಯನ್ನು ಕಾಂಕ್ರೀಟ್ ಮಾಡಿಕೊಡುವ ಕೆಲಸವನ್ನು ಮಾಡುತ್ತೇವೆ. ಕಾಂಗ್ರೆಸ್ ನಲ್ಲಿ ಯಾರೇ ಅಭ್ಯರ್ಥಿಯಾಗಿ ಶಾಸಕರಾದರೂ ನಾನೇ ಮುಂದೆ ನಿಂತು ನಿಮ್ಮ ಬೇಡಿಕೆಯನ್ನು ಈಡೇರಿಸುತ್ತೇನೆ. ಈಗ ಸಮಯ ಮೀರಿದೆ ಮುಂದಿನ ಕೆಲವೇ ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಹೇಳಿದ ಅಶೋಕ್ ರೈ ನೀವು ಚುನಾವಣೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯೋರ್ವರು ನಮ್ಮ ಜಾಗಕ್ಕೆ 94 ಸಿ ಅರ್ಜಿ ಹಾಕಿ ವರ್ಷಗಳೇ ಕಳೆದಿದೆ ಅದನ್ನು ಮಾಡಿಕೊಟ್ಟಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್ ರೈ ಎಲ್ಲಾ ಕಡೆಗಳಲ್ಲಿ ಇದೇ ಸಮಸ್ಯೆ ಇದೆ. 94 ಸಿ ಮಾಡಿಲ್ಲ, ಅಕ್ರಮ ಸಕ್ರಮದ ಅರ್ಜಿ ಪೆಂಡಿಂಗ್ ಇದೆ, ಬಡವರಿಗೆ ನ್ಯಾಯ ದೊರಕುತ್ತಿಲ್ಲ ಎಂಬ ಕೂಗು ಕೇಳುತ್ತಿದೆ ಇದು ತುಂಬಾ ನೋವಿನ ಸಂಗತಿ ಮುಂದಿನ ಬಾರಿಗೆ ಕಾಂಗ್ರೆಸ್ ಸರಕಾರ ಬರುತ್ತದೆ, ಕಾಂಗ್ರೆಸ್ ಶಾಸಕರೂ ಬರುತ್ತಾರೆ ಆವಾಗ ಬಡವರಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪುರಂದರ್ ರೈ ಕೋರಿಕ್ಕಾರ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಪೂಜಾರಿ ಬೊಳ್ಳಾಡಿ, ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಮೆಲ್ವಿನ್ ಮೊಂತೆರೋ, ಇಸ್ಮಾಯಿಲ್ ಗಟ್ಟಮನೆ, ನವೀದ್ ನಿಡ್ಯಾಣ, ಬಶೀರ್ ನಿಡ್ಯಾಣ, ಹಬೀಬ್ ತಿಂಗಳಾಡಿ, ರಾಕೇಶ್ ಬಡಗನ್ನೂರು, ರಫೀಕ್ ದರ್ಖಾಸ್, ಮಹಮ್ಮದ್ ಬೊಳ್ಳಾಡಿ ಸೇರಿದಂತೆ ಸ್ಥಳೀಯ ಸುಮಾರು 70 ಮಿಕ್ಕಿ ನಾಗರಿಕರು ಉಪಸ್ಥಿತರಿದ್ದರು.