ಪುತ್ತೂರು: ಹಾರಾಡಿ ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆ ಕಾಂಕ್ರಿಟೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಗುಣಮಟ್ಟದ ಕಾಮಗಾರಿಗಾಗಿ ಈಗಾಗಲೇ ಅಳಡಿಸಿದ ಮರದ ಹಲಗೆಯನ್ನು ತೆರವುಗೊಳಿಸಿ ಕಬ್ಬಿಣದ ಹಲಗೆಯನ್ನು ಅಳವಡಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾ.2ರಂದು ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಿಂದ ಬಂದಿರುವ ಕಾರ್ಯಪಾಲಕ ಅಭಿಯಂತರ ಪುರಂದರ, ಸಹಾಯಕ ಕಾರ್ಯಪಾಲಕ ಅಭಿಯಂತರ ಅರುಣ್, ಕೃಷ್ಣಮೂರ್ತಿ ಅವರು ಹಾರಾಡಿಯಿಂದ ರೈಲ್ವೇ ನಿಲ್ದಾಣ ಕಾಮಗಾರಿ ನಡೆಯುತ್ತಿರುವುದನ್ನು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಪೌರಾಯುಕ್ತ ಮಧು ಎಸ್ ಮನೋಹರ್, ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್ ಜೊತೆಯಲ್ಲಿ ಪರಿಶೀಲನೆ ನಡೆಸಿದರು. ಈಗಾಗಲೇ ಭಾರತ್ ಅಟೋ ಕಾರ್ಸ್ ಸಂಸ್ಥೆಯ ಬಳಿಯಿಂದ ನಡೆದ ಕಾಂಕ್ರೀಟಿಕರಣದಲ್ಲಿ ಮರದ ಹಲಗೆಯನ್ನು ಬಳಸಿರುವುದನ್ನು ತೆಗೆದು ಅಲ್ಲಿ ಕಬ್ಬಿಣದ ಹಲಗೆ ಬಳಸುವಂತೆ ಇಂಜಿನಿಯರ್ಗಳು ಗುತ್ತಿಗೆದಾರರಿಗೆ ಸೂಚಿಸಿದರು. ಅದಾದ ಬಳಿಕ ಕಾಮಗಾರಿ ಗುಣಮಟ್ಟದಲ್ಲಿ ನಡೆಯುವಂತೆ ಸೂಚನೆ ನೀಡಿದರು.
ಭತ್ತದ ಕೃಷಿಗೆ ನೀರು ಹರಿಯುವ ಮೋರಿ ಪರಿಶೀಲನೆ:
ರಸ್ತೆ ಕಾಂಕ್ರೀಟಿಕರಣ ನಡೆಯುವ ಸ್ಥಳದಲ್ಲೇ ಪಕ್ಕದಲ್ಲಿರುವ ಭತ್ತದ ಕೃಷಿಗೆ ಸಾಂಪ್ರಾದಾಯಿಕ ನೀರಿನ ಹರಿವಿನ ಮೋರಿಗೆ ಹಾನಿಯಾಗಿರುವ ಕುರಿತು ಪತ್ರಿಕೆಯಲ್ಲಿ ಬಂದಿರುವ ವರದಿಗೆ ಸಂಬಂಧಿಸಿ ಪರಿಶೀಲನೆ ನಡೆಸಿದರು.