ಉಪ್ಪಿನಂಗಡಿ: ಮಾರ್ಚ್ 1 ರಂದು ನಡೆದ ರಾಜ್ಯ ಸರಕಾರಿ ನೌಕರರ ಮುಷ್ಕರದ ವೇಳೆ ಶಾಲಾ ಶಿಕ್ಷಕರು ಭಾಗಿಯಾಗುತ್ತಿರುವುದರಿಂದ ಶಾಲೆಗೆ ಮಕ್ಕಳನ್ನು ಹಾಜರಾಗಬೇಡಿ ಎಂದು ತಿಳಿಸಿದ್ದರೂ ಕೂಡಾ ಕೆಲ ಮಕ್ಕಳನ್ನು ಶಾಲೆಗೆ ಕರೆಯಿಸಿ ಬೇರೆ ಶಾಲಾ ಮಕ್ಕಳನ್ನೂ ಸೇರಿಸಿ ಮಕ್ಕಳ ಪೊಟೋವನ್ನು ಅಕ್ರಮವಾಗಿ ತೆಗೆದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಶಾಲಾ ಶಿಕ್ಷಕ ವೃಂದದ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ಉಪ್ಪಿನಂಗಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಹಿತ ಶಿಕ್ಷಕರು ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಮಾರ್ಚ್ 1 ರಂದು ರಾಜ್ಯ ಸರಕಾರಿ ನೌಕರರ ಸಂಘದ ಸೂಚನೆಯಂತೆ ಮುಷ್ಕರದಲ್ಲಿ ಭಾಗವಹಿಸುವ ಸಲುವಾಗಿ ಮುನ್ನೆಚ್ಚರಿಕಾ ನಿಯಮ ಪಾಲಿಸಿ ಮಕ್ಕಳಿಗೆ ಶಾಲೆಗೆ ಹಾಜರಾಗದಂತೆ ಮೌಖಿಕ ಸಂದೇಶವನ್ನು ಹಾಗೂ ತರಗತಿಗಳು ನಡೆಯದಿರುವ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು.
ಆದರೆ ಶಾಲಾ ಪೋಷಕರಾದ ಮೊಯ್ದಿನ್ ಕುಟ್ಟಿ, ಉಮ್ಮರ್, ಫಾರೂಕ್ ಜಿಂದಗಿಯವರು ಕೆಲವೊಂದು ಪೋಷಕರ ಮನವೊಲಿಸಿ ಅವರ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡಿರುವುದಲ್ಲದೆ, ಆ ಮಕ್ಕಳ ಜೊತೆ ಬೇರೆ ಶಾಲಾ ಮಕ್ಕಳನ್ನು ನಿಲ್ಲಿಸಿ ಅಕ್ರಮವಾಗಿ ಮಕ್ಕಳ ಪೊಟೋ ವಿಡಿಯೋ ತೆಗೆದಿರುತ್ತಾರೆ.
ಅಲ್ಲದೇ, ಸದ್ರಿ ವಿಡಿಯೋ- ಪೊಟೋಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದಲ್ಲಿ ಗೌರವಾನ್ವಿತ ಶಿಕ್ಷಕರ ವಿರುದ್ಧ ನಿಂದನಾತ್ಮಕ ಸಂದೇಶವನ್ನು ಪ್ರಕಟೀಕರಿಸಿದ್ದಾರೆ ಶಾಲಾ ಮಕ್ಕಳ ಪೊಟೋ ಹಾಗೂ ವಿಡಿಯೋವನ್ನು ಅನುಮತಿ ಇಲ್ಲದೆ ತೆಗೆದಿರುವುದಲ್ಲದೆ, ಸದ್ರಿ ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮುಖ್ಯ ಶಿಕ್ಷಕರನ್ನು ನಿಂದಿಸಿ ಅವಮಾನಿಸಿರುವ ಕೃತ್ಯವನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಅಗ್ರಹಿಸಿ ಶಾಲಾ ಮುಖ್ಯ ಶಿಕ್ಷಕ ಹನುಮಂತಯ್ಯ ಮತ್ತು ಐವರು ಸಹ ಶಿಕ್ಷಕರು ಮತ್ತು ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು ಸಹಿ ಹಾಕಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.