ಪುತ್ತೂರು : ಯಾವುದೇ ಸಂಘಟನೆಯಾಗಿರಲಿ ಐಕ್ಯತೆ ,ಏಕತೆಯಿಂದ ಕೆಲಸ ಮಾಡಬೇಕು. ಸಂಘವೊಂದು ಬಲಗೊಳ್ಳಲು ಕತ್ತರಿಯಂತೆ ಬೇರ್ಪಡಿಸೋ ಕಾರ್ಯ ಮಾಡದೇ, ಸೂಜಿಯ ತರಹ ಬೆಸೆಯೋ ಕಾರ್ಯ ನಡೆಯಬೇಕು. ಕಾರ್ಮಿಕ ವರ್ಗದವರ ಮಕ್ಕಳೂ ಶ್ರೇಷ್ಠ ವ್ಯಕ್ತಿಗಳಾಗಬೇಕೆಂದರೆ ಅವರಿಗೆ ಅಕ್ಷರ ಜ್ಞಾನ ,ಸಂಸ್ಕಾರ ನೀಡಬೇಕು ಎಂದು ವಾಗ್ಮಿ ಹಾಗೂ ಚಿಂತಕ ರಫೀಕ್ ಮಾಸ್ಟರ್ ಮಂಗಳೂರು ಅಭಿಪ್ರಾಯಪಟ್ಟರು.
ಮಾ. 6 ರಂದು ಲಯನ್ಸ್ ಸೇವಾ ಮಂದಿರ ಇಲ್ಲಿ ನಡೆದ ,ಭಾರತ್ ಕಟ್ಟಡ ಕಾರ್ಮಿಕರ ಸಂಘ ಇದರ 5ನೆಯ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಶಿಕ್ಷಣವೆಂಬುದು ಹುಲಿಯ ಹಾಲಿನಂತೆ, ಕುಡಿದರೆ ಘರ್ಜಿಸಲೇಬೇಕು ಜೊತೆಗೆ ಐಎಎಸ್ ,ಐಪಿಎಸ್ ಹಾಗೂ ಐಎಫ್ಎಸ್ ಎಂಬಂತಹ ಪವರ್ಫುಲ್ ಅಕ್ಷರಗಳ ಹುದ್ದೆ ಅಲಂಕರಿಸುವ ಮೂಲಕ ಶ್ರಮಿಕರ ಮಕ್ಕಳೂ ಕೂಡ ಭವ್ಯ ಭಾರತದ ಮುತ್ತುಗಳಾಗಿ ಮಿಂಚಬೇಕೆಂದು ಅವರು ಹೇಳಿದರು.
ಪುತ್ತೂರು ಕಾರ್ಮಿಕ ಇಲಾಖೆಯ ಅಧಿಕಾರಿ ಗಣಪತಿ ಹೆಗ್ಡೆ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿ , ಮಾತನಾಡಿ , ಕಾರ್ಮಿಕ ಇಲಾಖೆಯಲ್ಲಿ ನಿಜವಾದ ಕಾರ್ಮಿಕರು ಪೂರ್ಣ ಪ್ರಮಾಣದಲ್ಲಿ ನೋಂದಾವಣೆ ಆಗುತ್ತಿಲ್ಲ, ಕಾರ್ಮಿಕರಿಗೆ ಎಲ್ಲಾ ಸೌಲಭ್ಯಗಳೂ ಸಿಗಬೇಕೆಂಬುದು ನಮ್ಮ ನಿಲುವು ಕಾರ್ಮಿಕರಿಗೆ ಎಂದರು. ಅವರ ಕುಟುಂಬಕ್ಕೆ ಇಲಾಖಾ ವತಿಯಿಂದ ಹೆರಿಗೆ ಸಹಾಯಧನ 50 ಸಾವಿರ, ಆ ಬಳಿಕ ಕೆಲ ತಿಂಗಳ ತನಕ ತಾಯಿ, ಮಗುವಿಗೆ 6 ಸಾವಿರ ರೂಪೈಗಳ ಸಹಾಯಧನ, ಮದುವೆಗೆ 60 ಸಾವಿರ, ಶೈಕ್ಷಣಿಕ ಸಹಾಯ 5 ರಿಂದ 75 ಸಾವಿರ, 60 ವಯಸ್ಸಿನ ಬಳಿಕ ಪಿಂಚಣಿ ವ್ಯವಸ್ಥೆ ಸಹಿತ ಹಲವೂ ಮಾಹಿತಿಗಳನ್ನು ನೀಡಿ ಅವರು ಶುಭಹಾರೈಸಿದರು.
ನಿವೃತ್ತ ಯೋಧ ಗೋಪಾಲ್ ಬನ್ನೂರು, ಎ.ವಿ.ಜಿ.ಅಸೋಸಿಯೆಟ್ಸ್ನ ಎ.ವಿ. ನಾರಯಣ್, ಕಾನೂನು ಸಲಹೆಗಾರ ದೀಪಕ್ ಬೊಳುವಾರು ಶುಭಹಾರೈಸಿದರು.
ಗೌರವಾಧ್ಯಕ್ಷರಾದ ಲೋಕೇಶ್ ಹೆಗ್ಡೆ, ಗೌರವ ಸಲಹೆಗಾರ ಕೇಶವ ಪೂಜಾರಿ ಬೆದ್ರಾಳ, ಅಧ್ಯಕ್ಷ ಇನಾಸ್ ವೇಗಸ್ ಬನ್ನೂರು, ಕಾರ್ಯಾಧ್ಯಕ್ಷ ಪೌಲ್ ಡಿ ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ : ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ,ನಿವೃತ್ತರಾದ ಬನ್ನೂರು ,ನೆಕ್ಕಿಲು ನಿವಾಸಿ ಗೋಪಾಲ್ ಹಾಗೂ ಭುವನಾ ಗೋಪಾಲ್ ದಂಪತಿ ಹಾಗೂ ಜಿಲ್ಲಾ ಯುವಜನ ಮೇಳ ಪ್ರಶಸ್ತಿ ವಿಜೇತರಾಗಿರುವ ಸಂಘದ ಸದಸ್ಯಅರಿಯಡ್ಕ ಗೋಳ್ತಿಲ ನಿವಾಸಿ ರಾಜೇಶ್ ಕೆ ಮಯೂರ ಮತ್ತು ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಬನ್ನೂರು ಕೆಳಗಿನ ಆನೆಮಜಲು ನಿವಾಸಿ , ಕು.ಸೌಮ್ಯ ಕೆ. ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಪ್ರ.ಕಾರ್ಯದರ್ಶಿ ಮಹಮ್ಮದ್ ಅಶ್ರಫ್ ಪಡ್ಡಾಯೂರು ಪ್ರಾಸ್ತಾವಿಕ ಮಾತನಾಡಿ, ಮಹಮ್ಮದ್ ವರದಿ ವಾಚಿಸಿ, ಬಶೀರ್ ಅಹಮ್ಮದ್ ಲೆಕ್ಕ ಪತ್ರ ಮಂಡಿಸಿದರು. ಇದಕ್ಕೂ ಮೊದಲು ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ದರ್ಬೆ ವೃತ್ತದಿಂದ ,ಮುಖ್ಯರಸ್ತೆ ಮೂಲಕ ,ಚೆಂಡೆ ಹಾಗೂ ಘೋಷಣೆ ಮೂಲಕ ಕಾರ್ಯಕ್ರಮದ ಸಭಾಭವನ ತನಕ ಕಾಲ್ನಡಿಗೆ ಜಾಥಾ ನಡೆಸಿದರು.ಅಧ್ಯಕ್ಷ ಇನಾಸ್ ವೇಗಸ್ ಜಾಥಕ್ಕೆ ಚಾಲನೆ ನೀಡಿದರು.
ನೂತನ ಪದಾಧಿಕಾರಿಗಳ ಆಯ್ಕೆ : ನೂತನ ಸಾಲಿಗೆ ನೂತನ ಪದಾಧಿಕಾರಿಗಳನ್ನು ಮಹಾಸಭೆಯಲ್ಲಿ ಗೌರವಾಧ್ಯಕ್ಷ ಲೋಕೇಶ್ ಹೆಗ್ಡೆ ಘೋಷಣೆ ಮಾಡಿದರು.
ವಸಂತ್ ಬೆದ್ರಾಳ ಪ್ರಾರ್ಥನೆ ನೆರವೇರಿಸಿ, ಸೂರ್ಯ ನಾರಾಯಣ ಹೆಗ್ಡೆ ನಿರೂಪಿಸಿ, ಸಂಘದ ನೂತನ ಅಧ್ಯಕ್ಷ ರುಕ್ಮಯ್ಯ ಗೌಡ ಬನಾರಿ ವಂದಿಸಿದರು. ಎಲ್ಲಾ ವರ್ಗದ ಕಟ್ಟಡ ಕಾರ್ಮಿಕರು ಹಾಜರಿದ್ದರು.
ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಾರ್ಮಿಕರ ಮಕ್ಕಳಿಗೆ ಪೈಲೆಟ್, ಐಎಎಸ್, ಐಪಿಎಸ್ ಮೊದಲಾದ ತರಬೇತಿ ಗೆ ಆಸಕ್ತಿ ಇರುವವರಿಗೆ ಮಂಡಳಿಯ ವತಿಯಿಂದ ಖರ್ಚು ವೆಚ್ಚಗಳನ್ನು ಭರಿಸುವ ಬಗ್ಗೆ ವಿಚಾರವಾಗುತ್ತಿದೆ. ಈ ಸೌಲಭ್ಯ ಜಾರಿಯಾದಲ್ಲಿ ಇದರ ಉಪಯೋಗ ಪಡೆದುಕೊಳ್ಳಿ.
ಲೋಕೇಶ್ ಹೆಗ್ಡೆ, ಗೌರವಾಧ್ಯಕ್ಷರು ,ಭಾರತ್ ಕಟ್ಟಡ ಕಾರ್ಮಿಕರ ಸಂಘ.