ಜ್ಞಾನದ ಬೆಳಕನ್ನು ಕೊಡುವ ಕೆಲಸ ಶ್ರೀಕೃಷ್ಣ ಗುರೂಜಿಯಿಂದ ಆಗುತ್ತಿದೆ: ಕೊಂಡೆವೂರು ಶ್ರೀ
ಭಜನೆಯ ಶಕ್ತಿ ಅಪಾರ: ಶ್ರೀ ವಿಖ್ಯಾತಾನಂದ ಸ್ವಾಮೀಜಿ
ಪ್ರಕೃತಿ ಚಿಂತನೆ ನಮ್ಮಲ್ಲಿರಬೇಕು: ಶ್ರೀ ಅರುಣಾನಂದ ಸ್ವಾಮೀಜಿ
ವಿಟ್ಲ: ಬ್ರಹ್ಮಕಲಶದೊಂದಿಗೆ ಭಕ್ತರ ಮನಸ್ಸು ಶುದ್ಧವಾಗುತ್ತದೆ. ನಮ್ಮ ಅಂತರಂಗವನ್ನು ಶುದ್ಧೀಕರಿಸುವ ಕೆಲಸ ಕ್ಷೇತ್ರದಿಂದ ಆಗುತ್ತದೆ. ಜ್ಞಾನದ ಬೆಳಕನ್ನು ನೀಡುವ ಕೆಲಸ ಶ್ರೀಕೃಷ್ಣ ಗುರೂಜಿಯವರಿಂದ ಆಗುತ್ತಿದೆ ಎಂದು ಉಪ್ಪಳ ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಶ್ರೀ ಕ್ಷೇತ್ರ ಕುಕ್ಕಾಜೆಯಲ್ಲಿ ಮಾ.9ರ ವರೆಗೆ ನಡೆಯಲಿರುವ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಎರಡನೇ ದಿನವಾದ ಮಾ.6ರಂದು ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ರಾಮನಗರ ಸೋಲೂರು ಆರ್ಯ ಈಡಿಗ ಸಂಸ್ಥಾನದ ಶ್ರೀ ವಿಖ್ಯಾತಾನಂದ ಸ್ವಾಮೀಜಿರವರು ಆಶೀರ್ವಚನ ನೀಡಿ ಭಜನೆಯ ಶಕ್ತಿ ಅಪಾರ. ಪುಣ್ಯ ಕ್ಷೇತ್ರಗಳ ಬಗ್ಗೆ ಭಕ್ತಿ ಅಗತ್ಯ. ಧೈರ್ಯದಿಂದ ಬದುಕುವ ಮನಸ್ಸು ನಮ್ಮದಾಗಬೇಕು. ವೈದ್ಧಿಕ ಪರಂಪರೆಯ ಪಾಲನೆ ಅಗತ್ಯ ಎಂದರು.
ನಿಪ್ಪಾಣಿಯ ಶ್ರೀ ಅರುಣಾನಂದ ಸ್ವಾಮೀಜಿರವರು ಆಶೀರ್ವಚನ ನೀಡಿ ಮನುಷತ್ವ ನಮ್ಮಲ್ಲಿರಬೇಕು. ದೈವಾನುಗ್ರಹವಿದ್ದರೆ ಎಲ್ಲವೂ ಪ್ರಾಪ್ತಿಯಾಗಲು ಸಾಧ್ಯ. ಭಕ್ತಿಯ ಪಾರಕಾಷ್ಟೆ ನಮ್ಮಲ್ಲಿರಬೇಕು. ನಮ್ಮೊಳಗಿನ ಜ್ಞಾನ ವೃದ್ಧಿಯಾಗಬೇಕು. ಭಕ್ತಿಯ ಮೂಲಕ ಸಂಚರಿಸಿದರೆ ಎಲ್ಲವನ್ನು ಗೆಲ್ಲಬಹುದು ಎಂದರು.
ವಾಂತಿಚಾಲ್ ಶ್ರೀ ಮಂತ್ರಗುಳಿಗ ದೈವಸನ್ನಿಧಿಯ ಪ್ರಧಾನ ಕರ್ಮಿ ಶ್ರೀ ಗೋಪಾಲಕೃಷ್ಣ ವಾಂತಿಚಾಲ್ ರವರು ಧಾರ್ಮಿಕ ಉಪನ್ಯಾಸ ನೀಡಿದರು.
ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಶ್ರೀಕೃಷ್ಣ ಗುರೂಜಿ, ವಿಟ್ಲ ಬಿಲ್ಲವ ಸಂಘದ ಅಧ್ಯಕ್ಷರಾದ ಹರೀಶ್ ಸಿ.ಹೆಚ್. , ಬಾಲಕೃಷ್ಣ ಕಾರಂತ ಎರುಂಬು, ಉದ್ಯಮಿ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ಯಶೋಧರ ಬಂಗೇರ ಅಳಿಕೆ, ಭಜನಾ ಕ್ಷೇತ್ರದ ಸಾಧನೆಗೆ ನಾರಾಯಣ ಶೆಟ್ಟಿ ಉಕ್ಕುಡ, ಖ್ಯಾತ ಯಕ್ಷಗಾನ ಕಲಾವಿದ ಗುಡ್ಡಪ್ಪ ಸುವರ್ಣ, ಕಲಾಕ್ಷೇತ್ರದ ಸಾಧನೆಗಾಗಿ ಗಣೇಶ್ ಆಚಾರ್ಯ ಕೊಂದಲಕೋಡಿ ಹಾಗೂ ಚಂದ್ರಶೇಖರ ಕುಕ್ಕಾಜೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದ್ವಾನ್ ಶ್ರಾವಣ್ ಉಳ್ಳಾಲ ಹಾಗೂ ಭರತನಾಟ್ಯ ಗುರು ಕಿರಣ್ ಉಳ್ಳಾಲ್ ರವರನ್ನು ಸನ್ಮಾನಿಸಲಾಯಿತು. ಪೆರುವಾಯಿ ಹಾಗೂ ಮಾಣಿಲ ಗ್ರಾಮದ ಆಶಾಕರ್ತೆಯರಾದ ರೇವತಿ ಪೆರುವಾಯಿ, ಸುರೇಖ ಎಸ್., ವನಮಾಲ ಓಣಿಬಾಗಿಲು, ಬೇಬಿ ಪೆರುವಾಯಿ, ರತ್ನಾವತಿ ತಾರಿದಳ, ಜಾನಕಿ ಕಕ್ವೆ ರವರನ್ನು ಗೌರವಿಸಲಾಯಿತು. ಸುಶ್ಮಿತಾ ಕೆ., ಸ್ವಾತಿ, ಸುಖನ್ಯ, ಕಾವ್ಯ ಶ್ರೀ, ದೀಕ್ಷ, ಶ್ರೀಜರವರು ಸನ್ಮಾನ ಪತ್ರ ವಾಚಿಸಿದರು.
ಸುಖನ್ಯ, ಕಾವ್ಯಶ್ರೀ ಪ್ರಾರ್ಥಿಸಿದರು. ಕ್ಷೇತ್ರದ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾದ ಡಾ| ಗೀತಪ್ರಕಾಶ್ ಸ್ವಾಗತಿಸಿದರು. ಕುಕ್ಕಾಜೆ ಕಾಳಿಕಾ ಮಹಿಳಾ ಸಮಿತಿಯ ಅಧ್ಯಕ್ಷರಾದ ಅನುರಾಧ ಪಳನೀರು ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.
ಶ್ರೀ ದೇವಿಯ ವಿಗ್ರಹ ಪ್ರತಿಷ್ಠೆ :
ಬೆಳಗ್ಗೆ ಗಣಪತಿ ಹೋಮ, ವಿವಿಧ ತಂಡಗಳಿಂದ ಭಜನೆ ಆರಂಭಗೊಂಡಿತು. 7.45 ರಿಂದ 8.30ರ ವರೆಗಿನ ಮಘ ನಕ್ಷತ್ರದ 2ನೇ ಪಾದದ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ದೇವಿಯ ವಿಗ್ರಹ ಪ್ರತಿಷ್ಠೆ ನಡೆಯಿತು. ಬಳಿಕ ಜೀವಕಲಶ, ಅಭಿಷೇಕ, ಮಹಾಮಂಗಳಾರತಿ, ಕವಟ ಬಂಧನ ನಡೆಯಿತು.
ಬಳಿಕ ನಿತ್ಯಪೂಜೆ, ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಶ್ರೀ ದೇವಿಗೆ ಮಹಾಪೂಜೆ, ಪ್ರಸಾದವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ದೀಪಾರಾಧನೆ, ಭಜನೆ ಮಂಗಳಂ ನಡೆಯಿತು. ರಾತ್ರಿ ಶ್ರೀ ದೇವಿಯ ಮಹಾಪೂಜೆ ಬಳಿಕ ಪ್ರಸಾಧ ವಿತರಣೆ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮ:
ಅರವಿಂದ ಆಚಾರ್ಯ ಮಾಣಿಲ ಹಾಗೂ ಬಳಗದವರಿಂದ ಭಕ್ತಿಭಾವ ಯಾನ ನಡೆಯಿತು. ಸಾಯಂಕಾಲ ಮಂತ್ರ ನಾಟ್ಯಕಲಾ ಗುರುಕುಲ ಉಳ್ಳಾಲ ಹಾಗೂ ಕುಕ್ಕಾಜೆ ಶಾಖೆಯ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ರಾತ್ರಿ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಭಗವತಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.
ಇಂದು ಕ್ಷೇತ್ರದಲ್ಲಿ
ಬೆಳಗ್ಗೆ ಗಣಪತಿಹೋಮ, ಭಜನೆ, ನಿತ್ಯಪೂಜೆ, ಪ್ರಸಾದ ವಿತರಣೆ, ಬಳಿಕ ಚಂಡಿಕಾ ಹೋಮ ಆರಂಭಗೊಳ್ಳಲಿದೆ. ಮಧ್ಯಾಹ್ನ ಮಹಾಪೂಜೆ, ಚಂಡಿಕಾಯಾಗದ ಪೂರ್ಣಾಹುತಿ ಪ್ರಸಾದ ವಿತರಣೆ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ ದೀಪಾರಾಧನೆ, ಭಜನೆ ಮಂಗಳ ನಡೆಯಲಿದೆ.
ಸಾಯಂಕಾಲ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಕಣಿಯೂರು ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಬಾಯಾರು ಚಿತ್ರಮೂಲ ಮಠದ ಶ್ರೀ ಉಮೇಶ್ವರ ಕಾಳೀ ತೀರ್ಥ ಸ್ವಾಮೀಜಿ, ಮೂಡಬಿದಿರೆ ಕರಿಂಜೆ ಓಂ ಶಕ್ತಿ ಗುರು ಮಠದ ಶ್ರೀ ಮುಕ್ತಾನಂದ ಸ್ವಾಮೀಜಿರವರು ಆಶೀರ್ವಚನ ನೀಡಲಿದ್ದಾರೆ. ಪುತ್ತೂರಿನ ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ ನಡುಬೈಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ವಿವಿಧ ಕ್ಷೇತ್ರದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಬೆಳಗ್ಗೆ 11ರಿಂದ ಶ್ರೀ ಭದ್ರಗಿರಿ ಅಚ್ಯುತದಾಸರ ಶಿಷ್ಯರಾದ ರವೀಶ್ ರವರಿಂದ ಹರಿಕಥಾಕಲಾಕ್ಷೇಪ ನಡೆಯಲಿದೆ. ಸಾಯಂಕಾಲ 4ಗಂಟೆಯಿಂದ ವಿವಿಧ ನೃತ್ಯ ವೈವಿಧ್ಯ ನಡೆಯಲಿದೆ. ಸಾಯಂಕಾಲ ೮ಗಂಟೆಯಿಂದ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ -2023 ನಡೆಯಲಿದೆ. ರಾತ್ರಿ ಶ್ರೀ ದುರ್ಗಾ ಕಲಾತಂಡದ ಪುಗರ್ತೆದ ಕಲಾವಿದೆರ್ ಮೈರ ಕೇಪು ಇವರಿಂದ ಕಲ್ಜಿಗದ ಕಾಳಿ ಮಂತ್ರದೇವತೆ ಭಕ್ತಿ ಪ್ರಧಾನ ನಾಟಕ ನಡೆಯಲಿದೆ.