ಮಿತ್ತೂರಿನಲ್ಲಿ ನಡೆದ ಜಾನುವಾರು ಕಳವು ಪ್ರಕರಣ ; ಬಜಪೆ ಠಾಣಾ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ

0

ವಿಟ್ಲ: ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿಂದ ಜಾನುವಾರುಗಳನ್ನು ಕಳವು ಮಾಡಿದ ಪ್ರಕರಣವೊಂದರ ಆರೋಪಿಗಳನ್ನು ಮಂಗಳೂರಿನ ಬಜಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ತಾಲೂಕಿನ ಮೂಡುಪೆರಾರು ಗ್ರಾಮದ ಗಂಜಿಮಠ ಮುಂಡೇವು ನಿವಾಸಿ ಎಂ.ಪಿ. ಇಸ್ಮಾಯಿಲ್ ರವರ ಪುತ್ರ ಇರ್ಷಾದ್ (32 ವ.) ಹಾಗೂ ಮೂಲತಃ ಮಂಜೇಶ್ವರ ತಾಲೂಕು ವರ್ಕಾಡಿ ಗ್ರಾಮದ ಪುರುಸಂಕೋಡಿ ನಿವಾಸಿ ಪ್ರಸ್ತುತ ಪಾವೂರು ಮಲಾರ್ ಬದ್ರಿಯಾ ನಿವಾಸಿ ಅಬ್ದುಲ್ ಸತ್ತಾರ್ ರವರ ಪುತ್ರ ಇರ್ಫಾನ್ ಯಾನೇ ಮಲಾರ್ ಇರ್ಫಾನ್(29 ವ.) ಬಂಧಿತ ಆರೋಪಿಗಳು.

ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಪ್ರಕಾಶ್ ರವರ ಆದೇಶದಂತೆ ಮಾ.6ರಂದು ಬೆಳಗ್ಗಿನ ಜಾವ ಎಸ್.ಐ. ಪೂವಪ್ಪರವರು ಸಿಬ್ಬಂದಿಗಳ ಜೊತೆ ಅಡ್ಡೂರು ಚೆಕ್ ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆ ದಾರಿಯಾಗಿ ಬಂದ ಕಾರೊಂದನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಅವರು ಸಂಶಯಾಸ್ಪದ ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದವರ ಪೈಕಿ ಗಂಜಿಮಠದ ನಿವಾಸಿ ಇರ್ಷಾದ್ ಮತ್ತು ಮಂಜೇಶ್ವರದ ನಿವಾಸಿ ಇರ್ಪಾನ್ ರವರನ್ನು ವಶಕ್ಕೆ ಪಡೆಯಲಾಗಿದ್ದು, ಈ ವೇಳೆ ಮದಡ್ಕ ಫಾರೂಕ್ ರವರು ಪರಾರಿಯಾಗಿದ್ದಾರೆ.

ವಶಕ್ಕೆ ಪಡೆದುಕೊಂಡ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಇತ್ತೀಚೆಗಷ್ಟೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ತೂರು ಎಂಬಲ್ಲಿಂದ 6 ದನಗಳನ್ನು ಕಳವುಗೈದ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಅವರು ಮಾಹಿತಿ ನೀಡಿದ್ದರು. ಅಷ್ಟು ಮಾತ್ರವಲ್ಲದೆ 2021 ನೇ ಇಸವಿಯಲ್ಲಿ ಬಡಗ ಎಡಪದವು ದೊಡ್ಡಿಯಿಂದ 2 ದನಗಳನ್ನು ಕಳವುಗೈದಿರುವುದಾಗಿ ಬಾಯ್ಬಿಟ್ಟಿದ್ದರು. ಬಂಧಿತ ಆರೋಪಿಗಳ ವಿರುದ್ದ ಮಂಗಳೂರು ನಗರದ ಬಜಪೆ, ಕೊಣಾಜೆ, ಕಾವೂರು, ಮೂಡುಬಿದ್ರೆ, ಮಂಗಳೂರು ಉತ್ತರ, ದ.ಕ ಜಿಲ್ಲೆಯ ಪುಂಜಾಲಕಟ್ಟೆ, ಬಂಟ್ವಾಳ ನಗರ ಮತ್ತು ಚಿಕ್ಕಮಂಗಳೂರು ಜಿಲ್ಲೆಯ ಬನಕಲ್, ಬಸವನಹಳ್ಳಿ ಮತ್ತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗಳಲ್ಲಿ ದನ ಕಳವು ಮತ್ತು ದರೋಡೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.

ಬಂಧಿತ ಆರೋಪಿಗಳು ಕಾರುಗಳಲ್ಲಿ ರಾತ್ರಿ ದ.ಕ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ದನಗಳನ್ನು ಕಳವು ಮಾಡುತ್ತಿದ್ದರು ಎಂದು ಮಾಹಿತಿ ಲಭಿಸಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here