ಪೊರಕೆ ಹಿಡಿದು ಕಛೇರಿಯ ಕಸಗುಡಿಸುವ ಕಡಬದ ಉಪತಹಸೀಲ್ದಾರ್ ಗೋಪಾಲ್

0

ಕಡಬ: ಸರಕಾರಿ ಕಛೇರಿಗಳಲ್ಲಿ ಮೇಲಾಧಿಕಾರಿಗಳು ಬೆಲ್ ಹಾಕಿ ಜವಾನರನ್ನು ಕರೆದು ಚಾ ತಿಂಡಿ, ತರುವುದಕ್ಕೋ, ಕಡತ ತರುವುದಕ್ಕೋ ಆದೇಶಿಸುವ ಪ್ರಸಕ್ತ ಕಾಲ ಘಟ್ಟದಲ್ಲಿ ಯಾವುದೇ ಇಗೋ ಇಲ್ಲದೆ ತಾನೇ ಪೊರಕೆ ಹಿಡಿದು ಕಸಗುಡಿಸುವ ಮೂಲಕ ಕಡಬ ತಾಲೂಕು ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಅವರು ಇತರರಿಗೆ ಮಾದರಿಯಾಗಿದ್ದಾರೆ.

ತಾನು ಉಪತಹಸೀಲ್ದಾರ್ ಆದರೂ ಸರಳತೆಯನ್ನು ಮೈಗೂಡಿಸಿಕೊಂಡಿರುವ ಗೋಪಾಲ್ ಅವರು ಕಚೇರಿಗೆ ಸರಿಯಾದ ಸಮಯಕ್ಕೆ ಬರುತ್ತಾರೆ. ಅಲ್ಲಿ ಅವರಿಗಿಂತ ಮುಂಚೆ ಬಂದವರು ಸ್ವಚ್ಚತೆ ಮಾಡದೇ ಹೋಗಿದ್ದರೆ ತಾನೇ ಪೊರೆಕೆ ಹಿಡಿದು ಗುಡಿಸುತ್ತಾರೆ. ಅಷ್ಟಕ್ಕೂ ಇಲ್ಲಿ ಗುಡಿಸುವವರು ಇಂತವರೇ ಎಂದು ಇಲ್ಲ. ಗ್ರಾಮ ಸೇವಕರಾಗಿದ್ದವರು ಇಲ್ಲಿ ಸೇವೆ ಮಾಡುತ್ತಾರೆ. ಅವರು ಆಗಮಿಸುವಾಗ ತಡವಾದರೆ ಕರ್ತವ್ಯ ವಿಚಾರದಲ್ಲಿ ಕಟ್ಟುನಿಟ್ಟಾಗಿರುವ ಗೋಪಾಲ್ ಅವರು ಸಮಯಕ್ಕೆ ಸರಿಯಾಗಿ ಬಂದು, ಕಸಗುಡಿಸುವವರಿಂದ ಕೆಲಸ ಆಗದಿದ್ದರೆ ತಾನೇ ಕಛೇರಿಯನ್ನು ಗುಡಿಸಿ ಸ್ವಚ್ಛ ಮಾಡುತ್ತಾರೆ. ಅವರ ಉದ್ದೇಶ ತಮ್ಮ ಕಚೇರಿ ಸ್ವಚ್ಛವಾಗಿರಬೇಕು ಅನ್ನೋದು. ಸಿಬ್ಬಂದಿಗಳು ಭಾನುವಾರದ ರಜೆಯ ಗುಂಗಿನಿಂದ ಹೊರಬರದೆ ಸೋಮವಾರ ಕಛೇರಿಗೆ ತಡವಾಗಿ ಬಂದಿದ್ದರು. ಆದರೆ ಗೋಪಾಲ್‌ರವರು ಮಾತ್ರ ತನ್ನ ಎಂದಿನ ಶೈಲಿಯಂತೆ ಸರಿಯಾದ ಸಮಯಕ್ಕೆ ಬೆಳಗ್ಗೆ ಕಚೇರಿಗೆ ಆಗಮಿಸಿ ತನ್ನ ಬ್ಯಾಗನ್ನು ತನ್ನ ಟೇಬಲ್ ಮೇಲೆ ಇಟ್ಟು ಪೊರಕೆ ಹಿಡಿದು ಸಂಪೂರ್ಣ ಕಚೇರಿಯನ್ನು ಗುಡಿಸಿ ಸ್ವಚ್ಛ ಮಾಡಿದರು. ಕೊನೆಯಲ್ಲಿ ಇವರ ಸ್ವಚ್ಚತಾ ಕಾರ್ಯಕ್ಕೆ ಕಚೇರಿ ಸಿಬ್ಬಂದಿ ಕೈಜೋಡಿಸಿದರು. ನಂತರ ದೇವರಿಗೆ ಕೈಮುಗಿದು ಆ ದಿನದ ತನ್ನ ಕರ್ತವ್ಯ ಆರಂಭಿಸಿದರು.

ಗೋಪಾಲ್ ಉಪತಹಸೀಲ್ದಾರ್ ಹುದ್ದೆಯಲ್ಲಿದ್ದರೂ ಸಂಸ್ಕಾರವಂತರಾಗಿ ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡವರು. ಇವರಲ್ಲಿ ಒಂದು ದ್ವಿಚಕ್ರವಾಹನವೂ ಇಲ್ಲ. ಆಟೋ ಅಥವಾ ಜೀಪ್ ಹತ್ತಿಕೊಂಡೇ ಕಚೇರಿಗೆ ಕರ್ತವ್ಯಕ್ಕೆ ಆಗಮಿಸುತ್ತಾರೆ. ಕಲ್ಲುಗುಡ್ಡೆಯಿಂದ ಬಂದು ಕಡಬ ಪೇಟೆಯಲ್ಲಿ ಇಳಿದು ನಡೆದುಕೊಂಡೇ ತಹಸೀಲ್ದಾರ್ ಕಛೇರಿಗೆ ಬರುತ್ತಾರೆ. ಯಾರಾದರೂ ಪರಿಚಯಸ್ಥರು ಬೈಕ್ ಅಥವಾ ಕಾರಲ್ಲಿ ಕರೆದುಕೊಂಡು ಬಂದರೆ ಬಂದ್ರು ಇಲ್ಲಾಂದರೆ ಗೋಪಾಲ್ ಅವರದ್ದು ಕಛೇರಿ ತನಕ ನಟರಾಜ್ ಸರ್ವಿಸ್. ಇವರು ಕರ್ತವ್ಯದಲ್ಲಿ ಕೂಡಾ ಅಷ್ಟೆ ಕರಾರುವಕ್, ತಮ್ಮ ಟೇಬಲ್‌ಗೆ ಬಂದ ಆಯಾ ದಿನದ ಕಡತಗಳನ್ನು ಅಂದೇ ವಿಲೇವಾರಿ ಮಾಡಿಯೇ ಅವರು ತೆರಳುತ್ತಾರೆ. ಇದೀಗ ಕಛೇರಿ ಕಸ ಗುಡಿಸಿ ಸುದ್ದಿಯಾಗಿದ್ದಾರೆ.

ಸರಕಾರದ ಕೆಲಸ ದೇವರ ಕೆಲಸ, ಈ ಕಚೇರಿಯೇ ನನಗೆ ನನ್ನ ಕುಟುಂಬಕ್ಕೆ ಅನ್ನ ಹಾಕೋದು, ಇದನ್ನು ಸ್ವಚ್ಛವಾಗಿಡೋದು ನನ್ನ ಕರ್ತವ್ಯ. ಅದರಲ್ಲಿ ನಮಗೆ ಯಾವುದೇ ಮುಜುಗರ ಇಲ್ಲ. ಕಸಗುಡಿಸುವುದರಿಂದ ನನ್ನ ಘನತೆಗೆ ಏನೂ ಕುಂದುಂಟಾಗುವುದಿಲ್ಲ. ಇನ್ನೊಬ್ಬರಿಗೆ ಮಾದರಿಯಾಗುವ ಕೆಲಸ ಮಾಡಿದಾಗ ದೇವರು ಮೆಚ್ಚುತ್ತಾನೆ.
ಗೋಪಾಲ್ ಕಲ್ಲುಗುಡ್ಡೆ, ಉಪತಹಸೀಲ್ದಾರ್ ಕಡಬ ತಾಲೂಕು

LEAVE A REPLY

Please enter your comment!
Please enter your name here