ಪುತ್ತೂರು ಯಂಗ್ ಬ್ರಿಗೇಡ್ ಸೇವಾದಳದಿಂದ ರಕ್ತದಾನ ಶಿಬಿರ

0

ದೇಶದ ಸ್ವಾಸ್ಥ್ಯ ಕಾಪಾಡಲು ಯಂಗ್‌ ಬ್ರಿಗೇಡ್‌ನಂತಹ ಬಿಸಿರಕ್ತದ ಯುವಕರ ಅಗತ್ಯವಿದೆ-ದಿವ್ಯಪ್ರಭಾ

ಪುತ್ತೂರು: ಯಂಗ್‌ ಬ್ರಿಗೇಡ್ ಸೇವಾದಳ ಪುತ್ತೂರು ಇದರ ಆಶ್ರಯದಲ್ಲಿ ಮಾ.10ರಿಂದ 12ರವರೆಗೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ಮೂರು ದಿನಗಳ ಕಾಲ ರಾಜೀವಗಾಂಧಿ ಟ್ರೊಫಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಜರಗಲಿದ್ದು ಇದರ ಅಂಗವಾಗಿ ಮಾ.9ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಜರಗಿತು.

ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಇದರ ಸಹಭಾಗಿತ್ವದಲ್ಲಿ ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಹಾಗೂ ಆಶಾಭಾರತಿ ರಕ್ತಕೇಂದ್ರ ಶಿವಮೊಗ್ಗ ಇದರ ಸಹಕಾರದಿಂದ ಬೆಳಿಗ್ಗೆಯಿಂದ ಮಧ್ಯಾಹ್ನ ತನಕ ಜರಗಿದ ಬೃಹತ್ ರಕ್ತದಾನ ಶಿಬಿರದಲ್ಲಿ 200 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಹಲವು ಯುವಕರು ರಕ್ತದಾನದಲ್ಲಿ ಭಾಗವಹಿಸಿದರು.


ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ರಾಜ್ಯ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಮಾತನಾಡಿ ಈ ದೇಶದ ಸಮಗ್ರ ಅಭಿವೃದ್ಧಿಗೆ ಹಾಗೂ ದೇಶದ ಸ್ವಾಸ್ಥ್ಯ ಕಾಪಾಡಲು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯಂಗ್‌ಬ್ರಿಗೇಡ್ ಸೇವಾದಳದಂತಹ ಬಿಸಿ ರಕ್ತದ ಯುವಕರ ಅಗತ್ಯವಿದೆ ಎಂದು ಅವರು ಹೇಳಿದರು. ಇಂತಹ ಯುವಕರು ಮನಸ್ಸು ಮಾಡಿದರೆ ಈ ದೇಶದ ಸಮಗ್ರ ಅಭಿವೃದ್ಧಿ ಹಾಗೂ ಭವಿಷ್ಯ ರೂಪಿಸಲು ಸಹಕಾರಿಯಾಗಲಿದೆ ನೀವು ಇಟ್ಟ ಸೇವಾಮುಖಿ ಹೆಚ್ಚೆಚ್ಚಾಗಿ ಪ್ರತಿಯೊಬ್ಬರಿಗೂ ಪ್ರಯೋಜನ ಸಿಗುವಂತಾಗಲಿ ಎಂದು ಹೇಳಿದರು.

ರಕ್ತದಾನ ಅರ್ಹ ರೋಗಿಗಳಿಗೆ ಸಿಗಲಿ-ಎಂ.ಬಿ.ವಿಶ್ವನಾಥ ರೈ:
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂಬಿ ವಿಶ್ವನಾಥ ರೈ ಮಾತನಾಡಿ ಯಂಗ್‌ಬ್ರಿಗೇಡ್ ಸೇವಾದಳವು ಆಯೋಜಿಸಿದ ರಕ್ತದಾನ ಕಾರ್ಯಕ್ರಮದ ಪ್ರಯೋಜನವು ಅರ್ಹರಿಗೆ ಸಿಗುವಂತಾಗಲಿ. ಇದರ ಪ್ರಯೋಜನ ಎಲ್ಲರೂ ಪಡೆಯುವಂತಾಗಲಿ ಎಂದು ಹೇಳಿದರು.

ಯಂಗ್ ಬ್ರಿಗೇಡ್ ಜನಪ್ರಿಯ ಸಂಘಟನೆಯಾಗಿದೆ-ಮಹಮ್ಮದ್ ಆಲಿ:
ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ ಯಂಗ್‌ಬ್ರಿಗೇಡ್ ಸೇವಾದಳವು ವಿವಿಧ ಜನೋಪಯೋಗಿ ಕೆಲಸಗಳನ್ನು ಮಾಡುವ ಮೂಲಕ ಜನಪ್ರಿಯ ಸಂಘಟನೆಯಾಗಿ ಮೂಡಿಬಂದಿದೆ. ಕೊರೊನಾದಂತಹ ಸಂದರ್ಭದಲ್ಲಿ ರೋಗಿಗಳ ಸಮೀಪ ಯಾರೂ ಬಾರದಿರುವ ಸಂದರ್ಭದಲ್ಲಿ ರೋಗಿಗಳನ್ನು ಉಚಿತವಾಗಿ ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್ ಸೇವೆ ಒದಗಿಸುವ ಮೂಲಕ ಎಲ್ಲರಿಂದಲೂ ಪ್ರಚಲಿತವಾದ ಸಂಘಟನೆಯಾಗಿದೆ ಎಂದು ಹೇಳಿದರು. ಯಂಗ್‌ಬ್ರಿಗೇಡ್ ಸಂಘಟನೆಯವರು ಕಳೆದ ಹಲವಾರು ವರ್ಷಗಳಿಂದ ವಿವಿಧ ಕಾರ್ಯಕ್ರಮ ನೀಡುತ್ತಾ ಬಂದಿದ್ದು ರಕ್ತದಾನ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ಲರೂ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.

ದಾನದಲ್ಲಿ ಅತ್ಯಂತ ಶ್ರೇಷ್ಟದಾನ ರಕ್ತದಾನ-ಎಂ.ಎಸ್.ಮಹಮ್ಮದ್ :
ಕೆಪಿಸಿಸಿ ಸಂಯೋಜಕ ಎಂಎಸ್ ಮಹಮ್ಮದ್ ಮಾತನಾಡಿ ಬೇರೆ ಬೇರೆ ಸಂದರ್ಭದಲ್ಲಿ ಅಗತ್ಯವಾಗಿ ರಕ್ತಬೇಕಾದಂತಹ ಸಂದರ್ಭದಲ್ಲಿ ಯಾರೂ ರಕ್ತ ನೀಡಲು ಮುಂದೆ ಬರುತ್ತಾರೊ ಅದಕ್ಕಿಂತ ದೊಡ್ಡ ದಾನ ಮತ್ತೊಂದಿಲ್ಲ. ತುರ್ತಾಗಿ ರಕ್ತ ನೀಡುವ ಹಾಗೂ ಪಡೆದುಕೊಳ್ಳುವ ವ್ಯಕ್ತಿ ಇದು ಯಾವಜಾತಿಗೆ ಸೇರಿದ ರಕ್ತವೆಂದೂ ಕೇಳದೆ ಜೀವನ ಉಳಿದರೆ ಸಾಕು ಎಂಬ ಅರ್ಪಣಾ ಮನೋಭಾದಿಂದ ನೀಡುವ ದಾನ ಉತ್ತಮ ಎಂದು ಹೇಳಿದರು.


ಯಂಗ್ ಬ್ರಿಗೇಡ್ ಮಾದರಿ ಸೇವಾ ಸಂಸ್ಥೆ-ಶಕೂರ್ ಹಾಜಿ:
ಪುತ್ತೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ ಮಾತನಾಡಿ ಕಾಂಗ್ರೆಸ್ ಯಂಗ್‌ಬ್ರಿಗೇಡ್ ಸೇವಾದಳದ ಯುವಕರು ಕಳೆದ ಹಲವಾರು ವರ್ಷಗಳಿಂದ ಮುಂಚೂಣಿಯ ಕೆಲಸಕಾರ್ಯಗಳನ್ನು ಮಾಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇಂತಹ ಮಾದರಿ ಸೇವೆ ಇನ್ನೊಂದು ಸಂಸ್ಥೆಯಿಂದ ಇಲ್ಲ ಎಂದು ಹೇಳಿದರು.

ಎಲ್ಲಾ ಸವಾಲನ್ನು ಎದುರಿಸಿ ಯಶಸ್ವಿಯಾಗಲಿ-ಪ್ರಸಾದ್ ಪಾಣಾಜೆ:
ಪುತ್ತೂರು ಯುವಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ ಮಾತನಾಡಿ ಯಂಗ್‌ಬ್ರಿಗೇಡ್ ಸೇವಾದಳವು ಹಲವು ಉಪಯೋಗಿ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದು ಇದೀಗ ರಕ್ತದಾನದಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಎಲ್ಲ ಸವಾಲನ್ನು ಎದುರಿಸಿ ಕಾರ್ಯಕ್ರಮ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹೇಳಿದರು.

ನಾವೆಲ್ಲರೂ ಮನುಷ್ಯಜಾತಿ-ಪಂಜಿಗುಡ್ಡೆ ಈಶ್ವರಭಟ್:
ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ನಾವೆಲ್ಲರೂ ಜಾತಿಮತ ಭೇದ ನೋಡದೆ ಎಲ್ಲಾ ವರ್ಗದ ಜನರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡಾಗ ದೇಶ ಅಭಿವೃದ್ಧಿ ಹೋಂದಲು ಸಾಧ್ಯವಿದೆ. ನಮ್ಮಲ್ಲಿರುವುದು ಮನುಷ್ಯ ಜಾತಿ ಮಾತ್ರ. ಈ ನಿಟ್ಟಿನಲ್ಲಿ ಪರಸ್ಪರ ಹೊಂದಾಣಿಕೆಯಿಂದ ಸಾಗುವಂತಾಗಬೇಕು ಎಂದರು.

ಯಂಗ್‌ಬ್ರಿಗೇಡ್ ಬಡವರ ಪಾಲಿನ ಆಶಾಕಿರಣ-ಮುರಳೀದರ ರೈ ಮಠಂತಬೆಟ್ಟು:
ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ ಯಂಗ್‌ಬ್ರಿಗೇಡ್ ಸೇವಾದಳ ಸಂಘಟನೆಯು ವಿವಿಧ ಜನೋಪಯೋಗಿ ಕಾರ್ಯಕ್ರಮ ಹಮ್ಮಿಕೊಂಡು ಬರುವ ಮೂಲಕ ಬಡವರ ಪಾಲಿನ ಆಶಾಕಿರಣವಾಗಿದೆ. ಇಂತಹ ಸಂಘಟನೆಯಿಂದ ಇನ್ನು ಹೆಚ್ಚು ಪ್ರಯೋಜನ ಸಿಗುವಂತಾಗಲಿ ಎಂದರು.

ವೇದಿಕೆಯಲ್ಲಿ ಪುತ್ತೂರು ಕಾಂಗ್ರೆಸ್ ಎಸ್‌ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ನ್ಯಾಯವಾದಿ ಸಾಯಿರಾ ಜುಬೈರ್, ಅಸ್ಮಾ ಗಟ್ಟಮನೆ, ಸೀತಾ ಭಟ್, ನಗರ ಯುವಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ ಉಪಸ್ಥಿತರಿದ್ದರು. ಕಾಂಗ್ರಸ್ ವಿವಿಧ ಪದಾಧಿಕಾರಿಗಳಾದ ಶಿವರಾಮ ಆಳ್ವ ಕುರಿಯ, ಶ್ರೀರಾಂ ಪಕಳ, ಅಬ್ದುಲ್ ರಝಾಕ್ ಆರ್.ಪಿ., ರೊಶನ್ ರೈ ಬನ್ನೂರು, ಮೊದಲಾದವರು ಭಾಗವಹಿಸಿದ್ದರು. ಯಂಗ್‌ಬ್ರಿಗೇಡ್ ಪದಾಧಿಕಾರಿ ಹಾಗೂ ಪುತ್ತೂರು ನಗರಸಭಾ ಸದಸ್ಯ ಮುಹಮ್ಮದ್ ರಿಯಾಝ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಸಿದ್ದಿಕ್ ಸುಲ್ತಾನಿ ಕಾರ್ಯಕ್ರಮ ನಿರೂಪಿಸಿದರು. ಯಂಗ್‌ಬ್ರಿಗೇಡ್ ಸೇವಾದಳದ ಅಧ್ಯಕ್ಷ ರಂಜಿತ್ ಬಂಗೇರ, ಪ್ರಧಾನ ಕಾರ್ಯದರ್ಶಿ ಸನತ್ ರೈ ಒಳತ್ತಡ್ಕ, ಕೋಶಾಧಿಕಾರಿ ಶರೀಫ್ ಬಲ್ನಾಡು, ಶರತ್ ಕೇಪುಳು, ಸಿನಾನ್ ಪರ್ಲಡ್ಕ, ಉನೈಸ್ ಗಡಿಯಾರ, ಪ್ರಕಾಶ್ ಪುರುಷರಕಟ್ಟೆ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಯಂಗ್‌ಬ್ರಿಗೇಡ್ ಸೇವಾದಳದ ಅಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ ಹಾಗೂ ಪ್ರಹ್ಲಾದ್ ಬೆಳ್ಳಿಪ್ಪಾಡಿ, ರಝಾಕ್ ಬೆಳ್ಳಿಪ್ಪಾಡಿ ಸಹಕರಿಸಿದರು.

200 ಮಂದಿಯಿಂದ ರಕ್ತದಾನ
ರಕ್ತದಾನ ಕಾರ್ಯಕ್ರಮದಲ್ಲಿ 200 ಮಂದಿ ಯುವಕರು 200 ಯುನಿಟ್ ರಕ್ತದಾನ ಮಾಡಿದರು. ಇದು ದಾಖಲೆಯ ರಕ್ತಸಂಗ್ರಹವಾಗಿದೆ. ರಕ್ತ ನೀಡಿ ಸಹಕರಿಸಿದ ಎಲ್ಲರಿಗೂ ಪುತ್ತೂರು ಯಂಗ್‌ಬ್ರಿಗೇಡ್ ಸೇವಾದಳದ ಅಧ್ಯಕ್ಷ ರಂಜಿತ್ ಬಂಗೇರ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here