ಮಾ.13: ಡಾ.ಯು.ಪಿ.ಶಿವಾನಂದರಿಗೆ ಪ್ರತಿಷ್ಠಿತ ಮೊಹರೆ ಹನುಮಂತರಾಯ ಪ್ರಶಸ್ತಿ ಪ್ರದಾನ

0

ಪುತ್ತೂರು: ರಾಜ್ಯ ಸರಕಾರದ 2018ನೇ ಸಾಲಿನ, ಪ್ರತಿಷ್ಠಿತ ಮೊಹರೆ ಹನುಮಂತರಾಯ ಪ್ರಶಸ್ತಿಗೆ ಆಯ್ಕೆಯಾಗಿರುವ ಸುದ್ದಿ ಬಿಡುಗಡೆ ಪ್ರಧಾನ ಸಂಪಾದಕ, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರಿಗೆ ಮಾ.13 ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಪುತ್ತೂರು, ಸುಳ್ಯ, ಬೆಳ್ತಂಗಡಿಗಳಲ್ಲಿ ಸುದ್ದಿ ಬಿಡುಗಡೆ ಪತ್ರಿಕೆ ಮಾತ್ರವಲ್ಲದೆ ಮಾಹಿತಿ, ಸುದ್ದಿ ವೆಬ್‌ಸೈಟ್, ಸುದ್ದಿ ನ್ಯೂಸ್ ಚಾನೆಲ್ ಜೊತೆಗೆ ಬಲಾತ್ಕಾರದ ಬಂದ್, ಸಾಮಾಜಿಕ ಜಾಲತಾಣಗಳ ದುರುಪಯೋಗ, ಲಂಚ-ಭ್ರಷ್ಟಾಚಾರದ ವಿರುದ್ಧ ಜನಾಂದೋಲನಗಳ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿರುವ ಡಾ. ಶಿವಾನಂದರು ಶುದ್ಧ ಕುಡಿಯುವ ನೀರಿಗಾಗಿ ಅಭಿಯಾನ, ಕೊರೋನಾ ಸಂದರ್ಭದ ವಾರಾಂತ್ಯ ಕರ್ಫ್ಯೂ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿ ರಾಜ್ಯ ಮಟ್ಟದಲ್ಲಿ ಶ್ಲಾಘನೆಗೆ ಪಾತ್ರರಾಗಿದ್ದಾರೆ.ಇತ್ತೀಚೆಗಷ್ಟೆ ಪುತ್ತೂರುನಲ್ಲಿ ಸಸ್ಯ ಜಾತ್ರೆಯನ್ನು ಯಶಸ್ವಿಯಾಗಿ ಸಂಘಟಿಸಿದ್ದರು.ಶಿಕ್ಷಣ,ಉದ್ಯೋಗ ಮತ್ತು ಕೃಷಿ ಮಾಹಿತಿ ಕೇಂದ್ರವನ್ನು ಆರಂಭಿಸಿರುವುದು ಸೇರಿದಂತೆ ಹಲವು ಪ್ರಥಮಗಳಿಗೆ ನಾಂದಿ ಹಾಡಿರುವ ಡಾ.ಯು.ಪಿ.ಶಿವಾನಂದರವರು ಮಾಧ್ಯಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಈ ಪ್ರಶಸ್ತಿಗೆಆಯ್ಕೆಯಾಗಿದ್ದಾರೆ.


ಮೊಹರೆ ಹನುಮಂತರಾಯ ಪತ್ರಿಕಾ ಜಗತ್ತಿಗೊಂದು ಬೆಳಕು:

ಮೊಹರೆ ಹನುಮಂತರಾಯರು 1892ರ ನವೆಂಬರ 12 ರಂದು ವಿಜಾಪುರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಜನಿಸಿದರು.ವಿಜಾಪುರದಲ್ಲಿಯೇ ಶಿಕ್ಷಣ ಪೂರೈಸಿದ್ದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದರು.ವಿಜಾಪುರದಲ್ಲಿ ಪ್ರಕಟವಾಗುತ್ತಿದ್ದ ಕರ್ನಾಟಕ ವೈಭವ ವಾರಪತ್ರಿಕೆಯ ಉಪಸಂಪಾದಕ ಹಾಗು ಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಬಳಿಕ, 1934ರಲ್ಲಿ ಆಗ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿ ಹಾಗು ವ್ಯವಸ್ಥಾಪಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.ಕರ್ನಾಟಕ ಸರ್ಕಾರವು ಮೊಹರೆ ಹನುಮಂತರಾಯ ಪ್ರಶಸ್ತಿಯನ್ನು 2012-2013 ಸಾಲಿನಲ್ಲಿ ಘೋಷಿಸಿದರು.ಕೆಲ ಕಾಲಾನಂತರ ಕರ್ಮವೀರ ವಾರಪತ್ರಿಕೆಯೂ ಸಹ ಪ್ರಾರಂಭವಾಯಿತು.

1956ರ ಸಪ್ಟಂಬರದಲ್ಲಿ ಕನ್ನಡದ ಪ್ರಥಮ ಡೈಜೆಸ್ಟ್ ಕಸ್ತೂರಿ ಮಾಸಿಕವನ್ನು ಲೋಕಶಿಕ್ಷಣ ಟ್ರಸ್ಟ ಪರವಾಗಿ ಪ್ರಾರಂಭಿಸಿದರು.1958 ರಲ್ಲಿ ಮೊಹರೆ ಹನುಮಂತರಾಯರು ನಿವೃತ್ತರಾದರು.ಮೊಹರೆ ಹನುಮಂತರಾಯರು 1960 ಜುಲೈ 27 ರಂದು ನಿಧನರಾದರು.


ಮೊಹರೆ ಅವರು ಅಸ್ಪಶ್ಯತೆಯನ್ನು ವಿರೋಧಿಸಿದರು ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆಗೆ ಶ್ರಮಿಸಿದವರು, ದೇಶ ಸೇವಕರಾದ ಮೊಹರೆ ಹನುಮಂತರಾಯರು ಪತ್ರಿಕಾ ಜಗತ್ತಿಗೊಂದು ಬೆಳಕು.ಕನ್ನಡನಾಡಿನ ಶ್ರೇಷ್ಠ ಪತ್ರಿಕೋದ್ಯಮಿಗಳಲ್ಲಿ ಒಬ್ಬರು.ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು, ಸೆರೆಮನೆ ಸೇರಿದರು.ಸ್ವಾತಂತ್ರ್ಯವಿಲ್ಲದ ಭಾರತದಲ್ಲಿ ಪತ್ರಿಕೆಗಳನ್ನು ನಡೆಸುವುದು ಬಹು ಕಷ್ಟವಾಗಿದ್ದಾಗ ಸಂಯುಕ್ತ ಕರ್ನಾಟಕವನ್ನು ಪ್ರಭಾವಶಾಲಿಯಾದ ಉತ್ತಮ ಪತ್ರಿಕೆಯನ್ನಾಗಿ ಮಾಡಿದರು.ಕಸ್ತೂರಿಯ ಸ್ಥಾಪಕರು.

LEAVE A REPLY

Please enter your comment!
Please enter your name here