ವರದಿ: ಸುಧಾಕರ ಆಚಾರ್ಯ ಕಾಣಿಯೂರು
ಕಾಣಿಯೂರು: ಖಾಯಂ ವೈದ್ಯರ ಮತ್ತು ಸಿಬ್ಬಂದಿಗಳ ಕೊರತೆಯಿಂದ ಸಾರ್ವಜನಿಕರಿಗೆ ಪೂರ್ಣ ಸೌಲಭ್ಯ ಸಿಗದಂತಾಗದ ಪರಿಸ್ಥಿತಿ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರ್ಮಾಣವಾಗಿದೆ. ಸುಸಜ್ಜಿತ ಆಸ್ಪತ್ರೆಯನ್ನು ಹೊಂದಿರುವ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ಖಾಯಂ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಇನ್ನೂ ನಿಯೋಜಿಸಿಲ್ಲ. ಸುಸಜ್ಜಿತ ಕಟ್ಟಡ ಹೊಂದಿರುವ ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಟ್ಟು 12 ಹುದ್ದೆಗಳು ಮಂಜೂರಾಗಿದೆ. ಇಲ್ಲಿನ ವೈದ್ಯಾಧಿಕಾರಿಗಳು ವರ್ಗಾವಣೆಗೊಂಡ ಬಳಿಕ ಖಾಯಂ ವೈದ್ಯರ ಹುದ್ದೆಯೂ ಖಾಲಿ ಇದೆ. ಬಳಿಕ ಗುತ್ತಿಗೆ ಆಧಾರದಲ್ಲಿ ವೈದ್ಯಾಧಿಕಾರಿಯವರು ನೇಮಕಾತಿ ಹೊಂದುತ್ತಿದ್ದರು. ಪ್ರಸ್ತುತ ಇದೀಗ ಕಾರ್ಯನಿರ್ವಹಿಸುತ್ತಿದ್ದ ವೈದ್ಯಾಧಿಕಾರಿ ಡಾ| ಸಾಜಿದಾ ಅವರ ಅವಧಿ ಮುಗಿದ ಹಿನ್ನಲೆಯಲ್ಲಿ ಇದೀಗ ವೈದ್ಯಾಧಿಕಾರಿ ಹುದ್ದೆಯೂ ಖಾಲಿಯಾಗಿ ಜನರಿಗೆ ಆಸ್ಪತ್ರೆ ಇದ್ದೂ ಪ್ರಯೋಜನಕ್ಕೆ ಬಾರದಂತಾಗಿದೆ ಎನ್ನುವ ದೂರು ವ್ಯಕ್ತವಾಗಿದೆ.
ಇಲ್ಲಿ ಒಟ್ಟು ಇರುವ 12 ಹುದ್ದೆಗಳ ಪೈಕಿ 10 ಹುದ್ದೆಗಳೂ ಖಾಲಿಯಾಗಿರುವುದು ಆರೋಗ್ಯ ಸೇವೆಯಲ್ಲಿ ಮತ್ತಷ್ಟೂ ಹಿನ್ನಡೆಯಾಗಿ ಪರಿಣಮಿಸಿದೆ. ಇಲ್ಲಿ ಕೇವಲ 2 ಮಂದಿ ಆರೋಗ್ಯ ಸುರಕ್ಷಾ ಅಧಿಕಾರಿಗಳ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೋಳ್ಪಾಡಿ, ಚಾರ್ವಾಕ, ಬರೆಪ್ಪಾಡಿಯಲ್ಲಿ ಉಪಕೇಂದ್ರಗಳನ್ನು ಹೊಂದಿದೆ. ಸರಕಾರಿ ಆಸ್ಪತ್ರೆಯಿದ್ದರೂ ಜನರ ಅನುಕೂಲಕ್ಕೆ ಬರುತ್ತಿಲ್ಲ. ಕಾಣಿಯೂರು, ಬೆಳಂದೂರು ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಹತ್ತು ಹಲವು ಗ್ರಾಮಗಳಿಗೆ ಈ ಆಸ್ಪತ್ರೆ ಅನಿವಾರ್ಯವಾಗಿದ್ದರೂ ಖಾಯಂ ವೈದ್ಯರಿಲ್ಲ, ಜತೆಗೆ ಸಿಬ್ಬಂದಿ ಕೊರತೆಯೂ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಠಿಸಿದೆ. ಸರಕಾರಿ ಆಸ್ಪತ್ರೆಗಳ ಕಡೆ ಜನರು ಒಲವು ತೋರುತ್ತಿಲ್ಲ ಎಂಬುದು ಎಲ್ಲೆಡೆ ಕೇಳಿಬರುತ್ತಿದ್ದ ಮಾತು. ಆದರೆ ಈಗ ಸರಕಾರಿ ಆಸ್ಪತ್ರೆಗೂ ಸಾಕಷ್ಟು ಸಂಖ್ಯೆಯಲ್ಲಿ ರೋಗಿಗಳು ಹೋಗುತ್ತಿದ್ದರೂ ಇಲ್ಲಿ ವೈದ್ಯರೇ ಇಲ್ಲದಿದ್ದರೆ ಹೋಗುವುದಾದರೂ ಯಾಕೆ ಎಂದು ಜನ ಪ್ರಶ್ನೆ ಮಾಡುವಂತಾಗಿದೆ.
ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ವರ್ಗಾವಣೆ ಮತ್ತು ಇತರ ಸಿಬ್ಬಂದಿಗಳ ಕೊರತೆಯಿಂದಾಗಿ ಜನರಿಗೆ ಸಮಸ್ಯೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ತಕ್ಷಣ ಈ ಸಮಸ್ಯೆಯನ್ನು ಪರಿಹರಿಸುವ ವ್ಯವಸ್ಥೆ ಮಾಡಿದಲ್ಲಿ ಬಡರೋಗಿಗಳಿಗೂ ಅನುಕೂಲವಾದೀತು, ಮಾತ್ರವಲ್ಲ ಸರಕಾರಿ ಆಸ್ಪತ್ರೆಯ ಬಗೆಗಿನ ವಿಶ್ವಾಸ ಉಳಿದೀತು. ಸರಕಾರಿ ಆಸ್ಪತ್ರೆಗೆ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿಗೊಳಿಸಬೇಕು ಜೊತೆಗೆ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಮತ್ತು 108ರ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ನಾಗರಿಕರ ಆಗ್ರಹ.
ಕಾಣಿಯೂರು ಮತ್ತು ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಗಳಿಗೆ ಅಲ್ಲದೇ ಹತ್ತು ಹಲವು ಗ್ರಾಮಗಳಿಗೆ ಅಗತ್ಯವಾಗಿರುವ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ವೈದ್ಯರ ಸಹಿತ ಎಲ್ಲಾ ಹುದ್ದೆಗಳೂ ಭರ್ತಿಯಾಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ಧರ್ಜೆಗೇರಿಸಬೇಕು, ಜೊತೆಗೆ ಆರೋಗ್ಯ ಕವಚ – 108ರ ವ್ಯವಸ್ಥೆಯನ್ನೂ ಅಗತ್ಯವಾಗಿ ಕಲ್ಪಿಸಿಕೊಡಬೇಕೆಂಬ ಸಾರ್ವಜನಿಕರ ಕೂಗು ಬಲವಾಗಿ ಕೇಳಿ ಬರುತ್ತಿದೆ.
ಕಾಣಿಯೂರು ಮತ್ತು ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಗಳಿಗೆ ಅಲ್ಲದೇ ಹತ್ತು ಹಲವು ಗ್ರಾಮಗಳಿಗೆ ಅಗತ್ಯವಾಗಿರುವ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿಯಿರುವ ವೈದ್ಯರ ಸಹಿತ ಎಲ್ಲಾ ಹುದ್ದೆಗಳೂ ಭರ್ತಿಯಾಗಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ಧರ್ಜೆಗೇರಿಸಬೇಕು, ಜೊತೆಗೆ ಆರೋಗ್ಯ ಕವಚ – 108 ರ ವ್ಯವಸ್ಥೆಯನ್ನೂ ಅಗತ್ಯವಾಗಿ ಕಲ್ಪಿಸಿಕೊಡಬೇಕೆಂಬ ಸಾರ್ವಜನಿಕರ ಕೂಗು ಬಲವಾಗಿ ಕೇಳಿ ಬರುತ್ತಿದೆ.
ವೈದ್ಯಾಧಿಕಾರಿ ಇದ್ದಾರೆ: ಎಎನ್ಎಂ ನೇಮಕ ಸರಕಾರದ ಮಟ್ಟದಲ್ಲಿ ಆಗಬೇಕಿದೆ-ಡಿಎಚ್ಒ
ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಸಾಜಿದಾ ಅವರು ಈ ತಿಂಗಳ ಅಂತ್ಯದವರೆಗೂ ಕರ್ತವ್ಯ ನಿರ್ವಹಿಸುವುದು ಕಡ್ಡಾಯವಾಗಿದೆ. ಅದಾದ ಬಳಿಕ ಬೇರೊಬ್ಬರನ್ನು ಅಲ್ಲಿಗೆ ನಿಯೋಜಿಸಲಾಗುವುದು. ಉಳಿದಂತೆ ಎಎನ್ಎಂಗಳ ನೇಮಕಾತಿ ಸರಕಾರದ ಮಟ್ಟದಲ್ಲಿ ಆಗಬೇಕಾಗಿದ್ದು ಗುತ್ತಿಗೆ ಆಧಾರದಲ್ಲಿ ನಮಗೆ ತೆಗೆದುಕೊಳ್ಳಲು ಅವಕಾಶವಿಲ್ಲ. ಕೊರೋನಾ ಸಂದರ್ಭದಲ್ಲಿ ಗುತ್ತಿಗೆ ನೆಲೆಯಲ್ಲಿ ಎಎನ್ಎಂಗಳನ್ನೂ ನಿಯೋಜಿಸಲು ಅವಕಾಶವಿತ್ತು. 2022 ಮಾರ್ಚ್ ತನಕ ಈ ವ್ಯವಸ್ಥೆಯಿತ್ತು.ಇದೀಗ ಎಎನ್ಎಂ ಬದಲಿಗೆ ಸಿಎಚ್ಒಗಳನ್ನು ಕಳುಹಿಸಲಾಗುತ್ತಿದೆ.ಏನಿದ್ದರೂ ಜನರಿಗೆ ತೊಂದರೆಯಾಗದ ರೀತಿಯಲ್ಲಿ ಅಗತ್ಯ ಕ್ರಮಕೈಗೊಳ್ಳಲು ಪ್ರಯತ್ನಿಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಪ್ರತಿಕ್ರಿಯಿಸಿದ್ದಾರೆ.
ಡಾ. ಸಾಜಿದಾ ಅವರನ್ನೇ ಮುಂದುವರಿಸಲು ಮೇಲಧಿಕಾರಿಯವರಿಗೆ ತಿಳಿಸಲಾಗಿದೆ
ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಸಮಸ್ಯೆ ಇಲ್ಲಿ ಮಾತ್ರವಲ್ಲ. ಹೆಚ್ಚಿನ ಆರೋಗ್ಯ ಕೇಂದ್ರದಲ್ಲಿಯೂ ಇದೆ. ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯಾಧಿಕಾರಿ ಡಾ| ಸಾಜಿದಾ ಅವರನ್ನೇ ಗುತ್ತಿಗೆ ಆಧಾರದಲ್ಲಿ ಮತ್ತೆ ಮುಂದುವರಿಸಬೇಕು ಎಂದು ಶಿಫಾರಸ್ಸು ಮಾಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ತಿಳಿಸಿದ್ದೇನೆ. ಅಲ್ಲದೇ ಖಾಲಿಯಿರುವ ಸಿಬ್ಬಂದಿಗಳ ಹುದ್ದೆಯನ್ನೂ ಭರ್ತಿ ಮಾಡುವಂತೆ ಸರಕಾರಕ್ಕೆ ಈಗಾಗಲೇ ಬರೆಯಲಾಗಿದೆ.
ಡಾ. ದೀಪಕ್ ರೈ, ತಾಲೂಕು ಆರೋಗ್ಯಾಧಿಕಾರಿ ಪುತ್ತೂರು