ಪುತ್ತೂರು: ಜಾತ್ರೋತ್ಸವದ ಸಮಯದಲ್ಲಿ ದೇವಸ್ಥಾನದ ಜಾಗದಲ್ಲಿ ವ್ಯಾಪಾರ ಮಾಡುವವರಿಗೆ ದುಬಾರಿ ಸುಂಕ ವಿಧಿಸದಂತೆ ಕೋಡಿಂಬಾಡಿ ಗ್ರಾಮದ ಕೈಪ ನಿವಾಸಿಯಾಗಿರುವ ದ.ಕ. ಜಿಲ್ಲಾ ಜೆ.ಡಿ.ಎಸ್. ಹಿಂದುಳಿದ ವರ್ಗದ ಅಧ್ಯಕ್ಷ ಕೆ. ಪ್ರಭಾಕರ್ ಸಾಲ್ಯಾನ್ ಬಾಕಿಲಗುತ್ತುರವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಮತ್ತು ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಪುರಾತನ ಕಾಲದಿಂದಲೂ ಬಹಳ ಪ್ರಸಿದ್ಧಿ ಪಡೆದಿದೆ. ಅದಲ್ಲದೆ ತುಂಬಾ ದೇಣಿಗೆ ಸಹ ಬರುತ್ತಿದೆ. ಜಾತ್ರೋತ್ಸವದ ಸಮಯದಲ್ಲಿ ಅಂಗಡಿ ಮಾಡುವವರು ಬಡವರಾಗಿರುತ್ತಾರೆ ಹೊರತು ಶ್ರೀಮಂತರಾಗಿರುವುದಿಲ್ಲ. ಆದರೂ ದೇವಸ್ಥಾನದ ವತಿಯಿಂದ ಅವರಿಗೆ ಅಂಗಡಿ ಹಾಕಲು ದುಬಾರಿ ಹಣಕ್ಕೆ ಸ್ಥಳ ಹರಾಜು ಮಾಡಲಾಗುತ್ತಿದೆ. ಅದಲ್ಲದೆ ಕೆಲವು ಏಜೆಂಟ್ಗಳು ದೇವಸ್ಥಾನದಿಂದ ಕಡಿಮೆ ಬೆಲೆಗೆ ತೆಗೆದುಕೊಂಡು ದುಬಾರಿ ಬೆಲೆಗೆ ಮಾರಾಟ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ದುಬಾರಿ ಹಣ ಕೊಟ್ಟು ಅಂಗಡಿ ಪಡೆದುಕೊಂಡವರು ಸಾಮಾನುಗಳನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುವುದರಿಂದ ದೇವಸ್ಥಾನದ ಜಾತ್ರೋತ್ಸವಕ್ಕೆ ಬಂದ ಭಕ್ತರಿಗೆ ಮತ್ತು ಯಾತ್ರಾರ್ಥಿಗಳಿಗೆ ಪುತ್ತೂರು ಜಾತ್ರೆ ದುಬಾರಿ ಜಾತ್ರೆಯಾಗಿ ಪರಿಣಮಿಸುತ್ತಿದೆ. ಆದ್ದರಿಂದ ಅಂಗಡಿ ಮಾಡುವವರಿಗೆ ಜಾಗ ಏಲಂ ಮಾಡುವಾಗ ಯಾವುದೇ ಏಜೆಂಟ್ಗಳಿಗೆ ಕೊಡಬಾರದು ಮತ್ತು ದುಬಾರಿ ಬೆಲೆಗೆ ಏಲಂ ಮಾಡಬಾರದು.
ದೇವಸ್ಥಾನದ ಜಾತ್ರೋತ್ಸವಕ್ಕೆ ಬೇಕಾದ ಆದಾಯ ಹುಂಡಿಯಿಂದಲೇ ಬರುವುದರಿಂದ ಅಂಗಡಿ ಮಾಡುವವರಿಗೆ ಕಡಿಮೆ ಬೆಲೆಗೆ ಜಾಗ ಕೊಟ್ಟು ವ್ಯಾಪಾರಿಗಳು ದುಬಾರಿ ಬೆಲೆಗೆ ಮಾರಾಟ ಮಾಡದ ಹಾಗೆ ಆಡಳಿತ ಸಮಿತಿ ಮತ್ತು ಕಾರ್ಯ ನಿರ್ವಹಣಾಧಿಕಾರಿ ಸೂಕ್ತ ಕ್ರಮ ಕೈಗೊಂಡು ಜಾತ್ರೋತ್ಸವಕ್ಕೆ ಬರುವ ಭಕ್ತರಿಗೆ ತೃಪ್ತಿಯಾಗುವ ಹಾಗೆ ಕ್ರಮ ಕೈಗೊಳ್ಳಬೇಕೆಂದು ಪ್ರಭಾಕರ ಸಾಲ್ಯಾನ್ ಮನವಿಯಲ್ಲಿ ಒತ್ತಾಯಿಸಿದ್ದಾರೆ.