ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಡಗರಕ್ಕೆ ಅಣಿಯಾಗುತ್ತಿದೆ ಮಜಲುಮಾರು ಉಮಾಮಹೇಶ್ವರ ದೇವಸ್ಥಾನ

0

ಪುತ್ತೂರು:ಮಾಂಗಲ್ಯ ಹರಪ್ರದಾಯಕ, ಸಂತಾನಪ್ರದಾಯಕ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿರುವ ನರಿಮೊಗರು ಗ್ರಾಮದ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ಪುಷ್ಪರಥ ಸಮರ್ಪಣೆ ಹಾಗೂ ಜಾತ್ರೋತ್ಸವದ ಸಂಭ್ರಮಕ್ಕೆ ಕ್ಷೇತ್ರವು ಅಣಿಯಾಗುತ್ತಿದೆ.

ಪುತ್ತೂರಿನಿಂದ ದರ್ಬೆ-ಕಾಣಿಯೂರು-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಸುಮಾರು 4 ಕಿ.ಮೀ. ದೂರ ಕ್ರಮಿಸಿದಾಗ ಸಿಗುವ ಮುಕ್ವೆಯಿಂದ ಬಲಕ್ಕೆ ತಿರುಗಿ ದ್ವಾರದ ಮೂಲಕ ಒಳಪ್ರವೇಶಿಸಿದಾಗ ನಮಗೆ ಗೋಚರಿಸುವುದು ಪರಮ ಕಾರಣಿಕ ಪುಣ್ಯಕ್ಷೇತ್ರ ಮಜಲುಮಾರು ಶ್ರೀ ಉಮಾಮಹೇಶ್ವರನ ಸನ್ನಿಧಿ. ನರಿಮೊಗರು ಗ್ರಾಮದ ಏಕೈಕ ದೇವಸ್ಥಾನ ಜೊತೆಗೆ ಗ್ರಾಮ ದೇವಸ್ಥಾನವೂ ಆಗಿರುವ ಈ ಪುಣ್ಯತಾಣವು ಈಗ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಿದ್ದಗೊಳ್ಳುತ್ತಿದೆ.

ಕ್ಷೇತ್ರದ ಇತಿಹಾಸ:
ಮುಕ್ವೆಯ ಶ್ರೀ ಮಜಲುಮಾರು ಕ್ಷೇತ್ರಕ್ಕೆ 800 ವರ್ಷಗಳಿಗೂ ಅಧಿಕ ಪ್ರಾಚೀನ ಇತಿಹಾಸವಿದೆ. ಸ್ಥಳ ಪುರಾಣದಂತೆ ಖರಾಸುರನೆಂಬ ರಾಕ್ಷಸ ಎರಡೂ ಬಾಹುಗಳಲ್ಲಿ ಹಾಗೂ ನಾಲಗೆಯಲ್ಲಿ ಸ್ಥಾಪಿಸಿದ ಮೂರು ಲಿಂಗಗಳಲ್ಲಿ ಶ್ರೀ ಉಮಾಮಹೇಶ್ವರ ಲಿಂಗವೂ ಒಂದೆಂಬ ಐತಿಹ್ಯವಿದ್ದು, ದೇವಾಲಯವು ಉನ್ನತವಾದ ದಿಬ್ಬವೊಂದರ ಮೇಲೆ ಪೂರ್ವಾಭಿಮುಖವಾಗಿ ನಿರ್ಮಿತವಾಗಿದೆ. ಉಮಾಮಹೇಶ್ವರರು ಜತೆಯಾಗಿ ಅನುಗ್ರಹಿಸುವ ಅಪೂರ್ವ ಕ್ಷೇತ್ರ ಇದಾಗಿದೆ. ದೊರಕಿರುವ ಆಧಾರಗಳ ಪ್ರಕಾರ ಈ ದೇವಾಲಯ ಹಲವು ಬಾರಿ ಪುನರ್ ನಿರ್ಮಿತವಾಗಿದೆ. ಶಿವಲಿಂಗ, ಪಾಣಿಪೀಠ, ಧ್ವಜಸ್ತಂಭ ಹಾಗೂ ಆನೆಕಲ್ಲುಗಳು ಬೇರೆ ಬೇರೆ ಕಾಲಘಟ್ಟದ್ದಾಗಿದೆ. ಆನೆಕಲ್ಲಿನಲ್ಲಿ ಕೆತ್ತಿರುವ ವ್ಯಾಲ ಮೃಗದ ಕೆತ್ತನೆ ಅಲಂಕಾರಿತವಾಗಿದ್ದು ಆಭರಣಗಳು ಹೊಯ್ಸಳ ಕಾಲದ ಕೆತ್ತನೆಯಾಗಿರುವುದರಿಂದ ಅಂದಾಜು ದೇವಾಲಯ ನಿರ್ಮಾಣದ ಕಾಲ ಕ್ರಿ.ಶ.13 ಅಥವಾ 14ನೇ ಶತಮಾನ ಎಂದು ಊಹಿಸಲಾಗಿದೆ.

ಮಾಂಗಲ್ಯ ಹರಪ್ರದಾಯಕ ಉಮಾಮಹೇಶ್ವರ:
ಮಜಲುಮಾರು ಕ್ಷೇತ್ರದಲ್ಲಿ ಉಮಾ ಹಾಗೂ ಮಹೇಶ್ವರರು ಜತೆಯಾಗಿ ಅನುಗ್ರಹಿಸುವ ಅಪೂರ್ವ ಕ್ಷೇತ್ರ. ಮಾಂಗಲ್ಯ ಭಾಗ್ಯ ಕರುಣಿಸುವ ಪಾರ್ವತಿ ಸ್ವಯಂವರ ಪೂಜೆಗೆ ಮಜಲುಮಾರು ಕ್ಷೇತ್ರವು ದ.ಕ ಜಿಲ್ಲೆಯಲ್ಲಿಯೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಪಾರ್ವತಿ ಸ್ವಯಂವರ ಪೂಜೆ ದೇವರಿಗೆ ವಿಶೇಷ ಸೇವೆಯಾಗಿದೆ. ಕ್ಷೇತ್ರದಲ್ಲಿ ಸ್ವಯಂವರ ಪೂಜೆ ಮಾಡಿಸಿದ ಭಕ್ತಾದಿಗಳಿಗೆ ಮಾಂಗಲ್ಯ ಭಾಗ್ಯ ಲಭಿಸಿದ ಹಲವು ಸಾಕ್ಷಿಗಳಿವೆ. ಜೊತೆಗೆ ಸಂತಾನವಿಲ್ಲದವರು ಕ್ಷೇತ್ರದಲ್ಲಿ ಬಂದು ಪ್ರಾರ್ಥಿಸಿದರೆ ಸಂತಾನ ಪ್ರಾಪ್ತಿಯಾದ ನಿದರ್ಶನಗಳೂ ಇದೆ. ಕ್ಷೇತ್ರದಲ್ಲಿ ಜಾತ್ರೋತ್ಸವದ ಪ್ರಥಮ ದಿನ ಸಂಜೆ ಪಾರ್ವತಿ ಸ್ವಯಂವರ ಪೂಜೆ ನಡೆಯುತ್ತಿದೆ. ಇದಲ್ಲದೆ ವಸಂತ ಕಟ್ಟೆ ಪೂಜೆ, ರಂಗಪೂಜೆ, ದುರ್ಗಾನಮಸ್ಕಾರ ಪೂಜೆ, ಮೃತ್ಯುಂಜಯ ಹೋಮ, ಏಕಾದಶ ರುದ್ರಾಭಿಷೇಕ ಮೊದಲಾದ ವಿಶೇಷ ಸೇವೆಗಳು ಕ್ಷೇತ್ರದಲ್ಲಿ ನಡೆಯುತ್ತಿದೆ. ಪ್ರತಿ ತಿಂಗಳ ಸಂಕ್ರಮಣ ದಿನ ದುರ್ಗಾ ನಮಸ್ಕಾರ ಪೂಜೆ, ಸತ್ಯನಾರಾಯಣ ಪೂಜೆ ಮಾಡಿಸುವ ವ್ಯವಸ್ಥೆ ಇದೆ. ಕ್ಷೇತ್ರದಲ್ಲಿ ಬೆಳಿಗ್ಗೆ, ಮಧ್ಯಾಹ್ನ ನಿತ್ಯ ಪೂಜೆ ನಡೆಯುತ್ತದೆ. ಪ್ರತೀ ಸಂಕ್ರಮಣದಂದು ಬಲಿವಾಡುಕೂಟವು ನಡೆಯುತ್ತದೆ. ಗರಿಕೆ ಹೋಮ, ಅಪ್ಪ ಸೇವೆ, ಗಣಪತಿ ಹೋಮ, ದುರ್ಗಾ ನಮಸ್ಕಾರ ಪೂಜೆ, ಸ್ವಯಂವರ ಪೂಜೆ, ಮೃತ್ಯುಂಜಯ ಹೋಮ, ರಂಗಪೂಜೆ, ಏಕಾದಶ ರುದ್ರಾಭಿಷೇಕ ಮುಂತಾದ ವಿಶೇಷ ಸೇವೆಗಳನ್ನು ಮಾಡಿಸಲು ಅವಕಾಶವಿದೆ. ಪ್ರತಿ ವರ್ಷ ಪುತ್ತೂರು ಸೀಮೆಯ ಅಧಿಪತಿ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಅವಭೃತ ಸವಾರಿಯ ವೇಳೆಗೆ ಮಜಲುಮಾರು ಕ್ಷೇತ್ರಕ್ಕೆ ಚಿತ್ತೈಸಿ ವಿಶ್ರಾಂತಿ ಪಡೆದು ತೆರಳುತ್ತಿರುವುದು ಈ ಕ್ಷೇತ್ರದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ.

ಪುಷ್ಪರಥ ಸಮರ್ಪಣೆ:
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಎಂಬ ಊರವರ ವಿಶ್ವಸ್ಥ ಮಂಡಳಿಯಿಂದ ನಡೆಸಲ್ಪಡುವ ಶ್ರೀ ದೇವಾಲಯ 2009ರಿಂದ ದೃಢವಾದ ಹೆಜ್ಜೆಗಳನ್ನಿಡುತ್ತಾ ಬೆಳೆದು ಬಂದಿದೆ. ಕ್ಷೇತ್ರದಲ್ಲಿ ಈ ಹಿಂದೆ 2009ರ ಎಪ್ರಿಲ್‌ನಲ್ಲಿ ಬ್ರಹ್ಮಕಲಶೋತ್ಸವ ನಡೆದಿದ್ದು, ಇದೀಗ 14 ವರ್ಷಗಳ ಬಳಿಕ ಮತ್ತೆ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿದೆ. ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಅಂದಾಜು ರೂ.20 ಲಕ್ಷ ಮೊತ್ತದಲ್ಲಿ ನೂತನ ಪುಷ್ಪರಥವೂ ಸಮರ್ಪಣೆಯಾಗುತ್ತಿದೆ. ಇದರ ಜೊತೆಗೆ ದೇವಸ್ಥಾನದ ಒಳಾಂಗಣಕ್ಕೆ ಗ್ರಾನೈಟ್, ಹೊರಾಂಗಣಕ್ಕೆ ಇಂಟರ್‌ಲಾಕ್ ಅಳಡಿಸಿ ಸ್ಟೇಜ್, ಬೆಡಿಕಟ್ಟೆ ಸೇರಿದಂತೆ ಒಟ್ಟು ಅಂದಾಜು ರೂ.2ಕೋಟಿಗೂ ಅಧಿಕ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ.

ಮಾ.25ರಿಂದ ಬ್ರಹ್ಮಕಲಶೋತ್ಸವ:
ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ, ದೇವರಿಗೆ ನೂತನ ಪುಷ್ಪರಥ ಸಮರ್ಪಣೆ ಹಾಗೂ ದೇವರ ವರ್ಷಾವಧಿ ಜಾತ್ರೋತ್ಸವವು ಮಾ.25ರಿಂದ ಪ್ರಾರಂಭಗೊಂಡು ಮಾ.31ರ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ನಡೆಯಲಿದೆ.

ಕ್ಷೇತ್ರದ ಅಭಿವೃದ್ಧಿ ಹಾಗೂ ಬ್ರಹ್ಮಲಕಶೋತ್ಸವದಲ್ಲಿ ನೆರವಿನ ಮೂಲಕ ಸೇವೆಗೈಯಲು ಬಯಸುವ ಭಕ್ತಾದಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನರಿಮೊಗರು ಶಾಖೆಯಲ್ಲಿರುವ ದೇವಸ್ಥಾನ ಖಾತೆ ನಂಬರ್ 37830709166 IFSC: SBIN0041050 ಆಥವಾ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿರುವ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್‌ನ ಉಳಿತಾಯ ಖಾತೆ ಸಂಖ್ಯೆ 5465ಗೆ ತಮ್ಮ ಧನ ಸಹಾಯವನ್ನು ಜಮಾ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ9480264806, 9448624923 ನಂಬರನ್ನು ಸಂಪರ್ಕಿಸಬಹುದು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಟ್ರಸ್ಟ್ ಮೂಲಕ ನಡೆಯುತ್ತಿರುವ ಮಜಲುಮಾರು ಉಮಾಮಹೇಶ್ವರ ಕ್ಷೇತ್ರವು ಗ್ರಾಮಸ್ಥರು, ಊರ ಹಾಗೂ ಪರವೂರ ಭಕ್ತಾದಿಗಳ ಉತ್ತಮ ಸಹಕಾರ, ಪ್ರೋತ್ಸಾಹದಿಂದ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ದೇವಸ್ಥಾನದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳಲ್ಲಿಯೂ ಉತ್ತಮ ಸಹಕಾರ ನೀಡುತ್ತಿರುವ ಗ್ರಾಮಸ್ಥರು ಬ್ರಹ್ಮಕಲಶೋತ್ಸವ ಸಿದ್ದತೆಯಲ್ಲಿ ಗ್ರಾಮದ ಪ್ರತಿಯೊಬ್ಬರೂ ಸಹಕಾರ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ಯಶಸ್ವಿಯಾಗಿ ನೆರವೇರುವಲ್ಲಿ ಪ್ರತಿಯೊಬ್ಬರೂ ಸಹಕರಿಸುವಂತೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ವಿನಂತಿಸಿದ್ದಾರೆ.

2009ರಲ್ಲಿ ಕ್ಷೇತ್ರದ ಬ್ರಹ್ಮಕಲಶ ನಡೆದಿದ್ದು ಇದೀಗ ಎಡನೇ ಬಾರಿಗೆ ಬ್ರಹ್ಮಕಲಶೋತ್ಸವ ಸಿದ್ದತೆಯಲ್ಲಿದ್ದೇವೆ. ಟ್ರಸ್ಟ್‌ನ ಆಡಳಿತದಲ್ಲಿ ನಡೆಯುವ ದೇವಸ್ಥಾನದಲ್ಲಿ ಟ್ರಸ್ಟ್‌ನ ಸದಸ್ಯರು, ಊರ, ಪರವೂರ ಭಕ್ತರ ಸಹಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಈ ವರ್ಷದ ಬ್ರಹ್ಮಕಲಶಕೋತ್ಸವದ ಸಂದರ್ಭದಲ್ಲಿ ದೇವರಿಗೆ ಪುಷ್ಪರಥ ಸಮರ್ಪಣೆಯ ಜೊತೆಗೆ ವರ್ಷಾವಧಿ ಜಾತ್ರೋತ್ಸವ ನಡೆಯುತ್ತಿದೆ. ಬೈಲುವಾರು ಸಮಿತಿಗಳ ಮೂಲಕ ಅಭಿವೃದ್ಧಿ ಕಾರ್ಯ, ಬ್ರಹ್ಮಕಲಶೋತ್ಸವದ ಮಾಹಿತಿ, ಭಜನಾ ಸಂಕೀರ್ತನೆ ಮೂಲಕ ಆಮಂತ್ರಣಗಳನ್ನು ಪ್ರತಿ ಮನೆಗಳಿಗೆ ತಲುಪಿಸಲಾಗಿದೆ. ದೇವರು ಭಕ್ತರ ಮೂಲಕ ಅಭಿವೃದ್ಧಿ ಕೆಲಸ ಮಾಡುತ್ತಿದ್ದು, ಒಳಾಂಗಣಕ್ಕೆ ಗ್ರಾನೈಟ್, ಇಂಟರ್‌ಲಾಕ್, ಸ್ಟೇಜ್ ನಿರ್ಮಿಸಲಾಗಿದೆ. ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಇಂಟರ್‌ಲಾಕ್ ಅಳವಡಿಸಿದ ಜಾಗಕ್ಕೆ ಶಾಶ್ವತ ಶೀಟ್‌ನ ಚಾವಣಿ ಅಳವಡಿಸಲಾಗುವುದು ಎಂದು ಬಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ನವೀನ್ ರೈ ಶಿಬರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here