ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಶಿಕ್ಷಣ ಕೇಂದ್ರಗಳ ಬೋಧಕ ವೃಂದಕ್ಕೆ ಅಭಿನಂದನೆ – ರಸಪ್ರಶ್ನಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ನಡೆಸಲ್ಪಡುವ ಧಾರ್ಮಿಕ ಶಿಕ್ಷಣದ ಕೇಂದ್ರಗಳ ಬೋಧಕ ವೃಂದಕ್ಕೆ ಅಭಿವಂದನೆ, ವಿದ್ಯಾರ್ಥಿಗಳಿಗೆ ಏರ್ಪಡಿಸಿದ ರಸಪ್ರಶ್ನಾ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ದೇವಳದ ಆಡಳಿತ ಕಛೇರಿ ಸಭಾಂಗಣದಲ್ಲಿ ಜರುಗಿತು.

ಪೋಷಕರು, ಬಂಧ ಬಳಗದ ಮಾರ್ಗದರ್ಶನ ಮಕ್ಕಳಿಗೆ ಸೂಕ್ತ:
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ ರಘುನಾಥ ರೈ ನುಳಿಯಾಲು ಅವರು ಮಾತನಾಡಿ ಮನೆಯಲ್ಲಿ ತಾಯಿ-ತಂದೆ, ಬಂಧು-ಬಳಗದವರು ಧಾರ್ಮಿಕ ನಂಬಿಕೆಗಳನ್ನು ಮೈಗೂಡಿಸಿಕೊಂಡು ಮಕ್ಕಳಿಗೆ ಆದರ್ಶ ಪ್ರಾಯರಾದಾಗ ಮಕ್ಕಳು ಕೂಡ ಧರ್ಮ, ದೈವಭಕ್ತಿ ಆಚಾರ-ವಿಚಾರಗಳನ್ನು ಕಲಿತುಕೊಳ್ಳುತ್ತಾರೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಟ್ಟು ನಮ್ಮ ನಾಡಿನ ಆಚಾರ-ವಿಚಾರ ಹಾಗೂ ನಂಬಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಆದುದರಿಂದ ಮಕ್ಕಳನ್ನು ಎಳೆಯ ಪ್ರಾಯದಲ್ಲಿಯೇ ತಿದ್ದಿ ತೀಡುವ ಕೆಲಸ ಮನೆಯಿಂದಲೇ ಪ್ರಾರಂಭ ಆಗಿ ಸಮಾಜದಲ್ಲಿ ಅಳವಡಿಸಿಕೊಂಡು ಮಾತ್ರದೇವೊಭವ, ಪಿತ್ರದೇವೊಭವ ಮತ್ತು ಆಚಾರ್ಯ ದೇವೊಭವವೆಂದು ಅನುಸರಿಸಿಕೊಂಡು ಬಂದಾಗ ಧರ್ಮದ ಮೂಲ ಶಿಕ್ಷಣವು ಮಗುವಿನಲ್ಲಿ ರಕ್ತಗತವಾಗುತ್ತದೆ ಎಂದರು.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮದ್ವಾಧೀಶವಿಠಲದಾಸನಾಮಂಕಿತ ರಾಮಕೃಷ್ಣ ಕಾಟುಕುಕ್ಕೆ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಅತಿಥಿಗಳಾಗಿ ಭಾಗವಹಿಸಿದ್ದರು.

60 ಮಂದಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ:
ಪೌರಾಣಿಕ ಕಥೆಗಳನ್ನು ಆಧರಿಸಿ 15 ಧಾರ್ಮಿಕ ಶಿಕ್ಷಣ ಕೇಂದ್ರಗಳಲ್ಲಿ ಏರ್ಪಡಿಸಿದ ರಸಪ್ರಶ್ನಾ ಕಾರ್ಯಕ್ರಮಗಳಲ್ಲಿ ಹಿರಿಯ ಮತ್ತು ಕಿರಿಯ ಎರಡು ವಿಭಾಗಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಥಮ ದ್ವಿತೀಯ ಮತ್ತು ತ್ರತೀಯ ಬಹುಮಾನಗಳನ್ನು ನೀಡಲಾಯಿತು. ಒಟ್ಟು 60 ಮಕ್ಕಳಿಗೆ ಪ್ರಶಸ್ತಿ ಪತ್ರ, ಪುಸ್ತಕ ಹಾಗೂ ಶ್ರೀ ಮಹಾಲಿಂಗೇಶ್ವರ ದೇವರ ಫೋಟೋ ನೀಡಲಾಯಿತು. ಬೋಧಕ ವೃಂದದಲ್ಲಿ 25 ಜನ ಮಾತೆಯರನ್ನು ಹಾಗೂ 15 ಜನ ಗುರುಗಳನ್ನು ಒಟ್ಟು 40 ಮಂದಿಯನ್ನು ಅಭಿನಂದಿಸಲಾಯಿತು.

ವ್ಯವಸ್ಥಾಪನಾ ಸಮಿತಿಯ ಸದಸ್ಯೆ ವೀಣಾ ಬಿ ಕೆ ಸ್ವಾಗತಿಸಿದರು. ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ಶೇಖರ್ ನಾರಾವಿಯವರು ಅತಿಥಿಗಳನ್ನು ಗೌರವಿಸಿದರು. ಧಾರ್ಮಿಕ ಶಿಕ್ಷಣದ ಸಂಯೋಜಕ ಸತೀಶ್ ಭಟ್ ರವರು ವಿಜೇತರ ಮತ್ತು ಅಭಿವಂದನೆ ಸ್ವೀಕರಿಸುವವರ ಪಟ್ಟಿಯನ್ನು ವಾಚಿಸಿದರು. ವ್ಯವಸ್ಥಾಪನಾ ಸಮಿತಿಯ ಸದಸ್ಯ ಬಿ ಐತ್ತಪ್ಪ ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here