ಕಾಣಿಯೂರು: ಶ್ರೀ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನಮ್ ಉಡುಪಿ, ಶ್ರೀ ಕಾಣಿಯೂರು ರಾಮತೀರ್ಥ ಮಠದ ಶ್ರೀ ಲಕ್ಷ್ಮೀನರಸಿಂಹ ದೇವರ ಮತ್ತು ಮುಖ್ಯಪ್ರಾಣ ದೇವರ ಪ್ರತಿಷ್ಠಾ ವಾರ್ಷಿಕೋತ್ಸವವು ಕಾಣಿಯೂರು ಶ್ರೀ ಮಠದಲ್ಲಿ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಶ್ರೀ ಕಾಣಿಯೂರು ರಾಮತೀರ್ಥ ಮಠ ಇವರ ಆದೇಶದಂತೆ ಮಾ 17ರಂದು ನಡೆಯಿತು.
ಮಾ 15ರಂದು ಕಾಣಿಯೂರು ಮಠದಲ್ಲಿ ಗೊನೆ ಮೂಹೂರ್ತ ನಡೆದು, ಮಾ16ರಂದು ತೋರಣ ಮುಹೂರ್ತ, ಹಸಿರು ಕಾಣಿಕೆ ಸಮರ್ಪಿಸಲಾಯಿತು. ಮಾ 17ರಂದು ಬೆಳಿಗ್ಗೆ ನರಸಿಂಹ ಹೋಮ ಸಹಿತ ವಾಯುಸ್ತುತಿ ಹೋಮ, ಪವಮಾನ ಪಾರಾಯಣ, ನವಕ ಕಲಶಾಭಿಷೇಕ, ಕಾಣಿಯೂರು ಮಠದ ಪರಿವಾರ ದೈವ- ದೇವರಿಗೆ ಕಲಶಾಭಿಷೇಕ, ತಂಬಿಲ, 12 ತೆಂಗಿನಕಾಯಿ ಗಣಹೋಮ, ಆಶ್ಲೇಷಾ ಬಲಿ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಇವರಿಂದ ಭಜನಾ ಕಾರ್ಯಕ್ರಮ ನಡೆದು, ಬಳಿಕ ಸದಾನಂದ ಆಚಾರ್ಯರವರ ತರಬೇತಿಯಲ್ಲಿ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಮಹಿಳಾ ಭಜನಾ ಮಂಡಳಿಯ ಸದಸ್ಯೆಯರಿಂದ ಕುಣಿತ ಭಜನೆ, ಬೆಳಂದೂರು ವಲಯ ಶಿವಳ್ಳಿ ಮಹಿಳಾ ಸಂಪದದ ಸದಸ್ಯೆಯರಿಂದ ಸಮುದ್ರ ಮಥನ/ ಲಕ್ಷ್ಮೀ ಸ್ವಯಂವರ ಯಕ್ಷಗಾನ ತಾಳಮದ್ದಳೆ ನಡೆಯಿತು.
ಬಳಿಕ ಕಾಣಿಯೂರು ಮಠದ ಸಂಸ್ಥಾನ ದೇವರ ಪೂಜೆ ಹಾಗೂ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ ನಡೆಯಿತು. ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕರಾದ ನಿರಂಜನ್ ಆಚಾರ್ ಸೇರಿದಂತೆ ಹಲವಾರು ಮಂದಿ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.