ಮಾ.26 ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಲೋಕಾರ್ಪಣೆ-ವಿವೇಕಾನಂದ ಕಾಲೇಜು ಸಂಪರ್ಕದ ಮೇಲ್ಸೇತುವೆ ಅಗಲೀಕರಣಕ್ಕೆ ಶಿಲಾನ್ಯಾಸ

0

ಪುತ್ತೂರಿನಲ್ಲಿ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಕಾಮಗಾರಿ ಪರಿಶೀಲಿಸಿದ ಶಾಸಕ ಸಂಜೀವ ಮಠಂದೂರು

ಪುತ್ತೂರು: ರೂ.13 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆಯ ಮೂಲಕ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಉಪ್ಪಿನಂಗಡಿಯನ್ನು ಸಂಪರ್ಕಿಸುವ ರಸ್ತೆಗೆ ರೈಲ್ವೆ ಅಂಡರ್ ಬ್ರಿಡ್ಜ್‌ಗೆ 10 ತಿಂಗಳ ಬಳಿಕ ಲೋಕಾರ್ಪಣೆಗೆ ಸಿದ್ದಗೊಂಡಿದೆ.

ಮಾ.18ರಂದು ಬ್ರಿಡ್ಜ್‌ನ ಅಂತಿಮ ಬಾಕ್ಸ್ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಶಾಸಕ ಸಂಜೀವ ಮಠಂದೂರು ಕಾಮಗಾರಿ ಪರಿಶೀಲಿಸಿ ಮಾ.26ಕ್ಕೆ ಎಪಿಎಂಸಿ ಅಂಡರ್ ಪಾಸ್ ಯೋಜನೆ ಲೋಕಾರ್ಪಣೆ ಮಾಡಲಾಗುವುದು ಎಂದು ಹೇಳಿದರು.


ಪುತ್ತೂರಿನಲ್ಲಿ ಎಪಿಎಂಸಿ ರೈಲ್ವೇ ಗೇಟ್ ಪ್ರತಿನಿತ್ಯ ಸಾರ್ವಜನಿಕರಿಗೆ ಸಮಸ್ಯೆ ಆಗಿತ್ತು. ಪುತ್ತೂರು ಆದರ್ಶ ರೈಲು ನಿಲ್ದಾಣದ ಮೂಲಕ ಹಾದು ಹೋಗುವ ಈ ರಸ್ತೆಗೆ ಎಪಿಎಂಸಿ ಬಳಿ ರೈಲ್ವೇ ಗೇಟ್ ನಿರ್ಮಿಸಲಾಗಿದ್ದು, ರೈಲು ಮಾರ್ಗದಲ್ಲಿ ನಿರಂತರವಾಗಿ ರೈಲುಗಳು ಹಾದುಹೋಗುತ್ತಿದೆ. ಮಂಗಳೂರು-ಬೆಂಗಳೂರು ಹಗಲು ಮತ್ತು ರಾತ್ರಿ ರೈಲು, ಸುಬ್ರಹ್ಮಣ್ಯ-ಪುತ್ತೂರು ರೈಲು ಸೇರಿದಂತೆ ಹಲವು ಗೂಡ್ಸ್ ರೈಲುಗಳು ದಿನಂಪ್ರತಿ ಈ ರೈಲು ಮಾರ್ಗದಲ್ಲಿ ಸಂಚರಿಸುತ್ತವೆ. ಈ ಕಾರಣಕ್ಕಾಗಿ ಎ.ಪಿ.ಎಂ.ಸಿ ಮೂಲಕ ಉಪ್ಪಿನಂಗಡಿ ಸಂಪರ್ಕಿಸುವ ಈ ರಸ್ತೆ ಹೆಚ್ಚಿನ ಸಮಯ ಬಂದ್ ಆಗಿರುತ್ತಿದ್ದು, ಈ ಸಮಸ್ಯೆಗೆ ಪರಿಹಾರವಾಗಿ ರೈಲ್ವೇ ಅಂಡರ್ ಪಾಸ್ ಮಾಡುವ ನಿರ್ಧಾರ ಕೈಗೊಂಡು ಯೋಜನಾ ಮೊತ್ತದ 13 ಕೋಟಿ ರೂ.ಗಳಲ್ಲಿ ಅರ್ಧದಷ್ಟನ್ನು ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಭರಿಸಿದ್ದು, ಉಳಿದರ್ಧವನ್ನು ರೈಲ್ವೆ ಭರಿಸಿದೆ. 50 ಶೇ. ಮೊತ್ತವನ್ನು ರಾಜ್ಯ ಸರಕಾರ ರೈಲ್ವೆಗೆ ಪಾವತಿಸುವ ಷರತ್ತಿನೊಂದಿಗೆ ರೈಲ್ವೆ ಕಾಮಗಾರಿ ನಡೆಸಿದೆ. ರೈಲ್ವೆಯು ಯೋಜನೆ ಮಂಜೂರು ಮಾಡುವಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು ಶ್ರಮಿಸಿದ್ದು, ದಿನೇಶ್ ಮೆದು ಎಪಿಎಂಸಿ ಅಧ್ಯಕ್ಷರಾಗಿದ್ದಾಗ ನಿರಂತರ ಬೆನ್ನುಹತ್ತಿ ಅಂಗೀಕಾರ ಮಾಡಿಸಿಕೊಂಡಿದ್ದರು. ರಾಜ್ಯ ಸರಕಾರ 50 ಶೇ. ಮೊತ್ತ ನೀಡುವಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ ಶ್ರಮಿಸಿದ್ದರು.


ಆರಂಭದ ವಿಳಂಬ
2022ರ ಮೇ 21ರಂದು ಶಿಲಾನ್ಯಾಸ ಮಾಡಿದ್ದು, ತಾಂತ್ರಿಕ ಕಾರಣದಿಂದ ಕಾಮಗಾರಿ ವಿಳಂಬಗೊಂಡು ಮಳೆಗಾಲದ ಬಳಿಕ ಆರಂಭಗೊಂಡಿತು. ಇದೀಗ ಮುಕ್ತಾಯದ ಹಂತದಲ್ಲಿದೆ. 2 ಬಾರಿ ರೈಲು ಸಂಚಾರ ಸ್ಥಗಿತಗೊಳಿಸಿ ಹಳಿ ತೆಗೆದು ಕೆಲಸ ಮಾಡಲಾಗಿತ್ತು. ಮಾ.18ರಂದು ಕೊನೆಯ ಬಾಕ್ಸ್ ಕೂತುಕೊಳಿಸುವ ಕಾಮಗಾರಿ ಎರಡು ಬೃಹತ್ ಕ್ರೈನ್ ಮೂಲಕ ನಡೆದಿದೆ.


ರೈಲ್ವೇ ಮೇಲ್ಸೇತುವೆ ಅಗಲೀಕರಣಕ್ಕೆ ಶಿಲಾನ್ಯಾಸ:
ವಿವೇಕಾನಂದ ಕಾಲೇಜು ಸಂಪರ್ಕಿಸುವ ರಸ್ತೆಯಲ್ಲಿರುವ ರೈಲ್ವೇ ಮೇಲ್ಸೇತುವೆ ಅಗಲೀಕರಣಕ್ಕೆ ಮಾ.26ರಂದು ಶಿಲಾನ್ಯಾಸ ನೆರವೇರಿಸಲಾಗುವುದು. ಈ ಕಾಮಗಾರಿ ರೈಲ್ವೇ ಇಲಾಖೆಯ ಅನುದಾನದಲ್ಲಿ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು. ಈ ಸಂದರ್ಭ ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here