ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಚಿಂತನೆಯೇ ಪ್ರೇರಣೆ – ಸಂಜೀವ ಮಠಂದೂರು
ಪುತ್ತೂರು: ಬನ್ನೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಅಂಧ್ರಟ್ಟದಲ್ಲಿ ಜಿಡೆಕಲ್ಲು ರಾಗಿದಕುಮೇರು ಪುರುಷರಕಟ್ಟೆ ಸಂಪರ್ಕಿಸುವ ರಸ್ತೆಗೆ ರೂ. 1.80 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಮಾ.19ರಂದು ಶಾಸಕ ಸಂಜೀವ ಮಠಂದೂರು ಶಿಲಾನ್ಯಾಸ ಮಾಡಿದರು.
ದೇಶ ಸರ್ವತಂತ್ರ ಸ್ವತಂತ್ರರಾದರೂ ಇನ್ನೂ ಕೂಡಾ ನಮ್ಮ ಬೇಡಿಕೆಗಳು ಮುಗಿಯಲಿಲ್ಲ. ನನ್ನ ಮನೆ ಬಾಗಿಲಿಗೆ ರಸ್ತೆ. ಸೇತುವೆ, 24 ವಿದ್ಯುತ್ ಇಲ್ಲ ನೀರು ಬರುತ್ತಿಲ್ಲ. ಆದರೆ ಕಳೆದ ಏಳೆಂಟು ವರ್ಷಗಳಿಂದ ಈ ಎಲ್ಲಾ ಸಮಸ್ಯೆಗಳಿಗೆ ಇತಿಶ್ರೀ ಹಾಕಬೇಕೆಂದು ದೇಶದ ಪ್ರಧಾನಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಜೊತೆಗೆ ಸಬ್ ಕಾ ವಿಶ್ವಾಸ್ ಅನ್ನು ತೆಗೆದುಕೊಳ್ಳುವ ಮೂಲಕ ಜನರ ಬೇಡಿಕೆಗಳನ್ನು ಈಡೇರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಸಂಪರ್ಕ ರಸ್ತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ.
ಇವತ್ತು ಈ ಭಾಗದಲ್ಲಿ ಕಳೆದ ಹಲವು ವರ್ಷಗಳ ಬೇಡಿಕೆಯಂತೆ ಸೇತುವೆ ನಿರ್ಮಾಣ ಅತೀ ಶೀಘ್ರ ಮತ್ತು ಕಾಲಮಿತಿಯಲ್ಲಿ ಆಗಲಿದೆ ಎಂದರು. ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯ, ನಗರಸಭಾ ಸದಸ್ಯೆ ರೋಹಿಣಿ ಕೇಶವಪೂಜಾರಿ, ನರಿಮೊಗರು ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್, ಬನ್ನೂರು ಗ್ರಾ.ಪಂ ಸದಸ್ಯರಾದ ರಾಘವೇಂದ್ರ, ಸ್ಮಿತಕೃಷ್ಣ ನಾಯ್ಕ, ನರಿಮೊಗರು ಗ್ರಾ.ಪಂ ಸದಸ್ಯೆ ಗಣೇಶ್ ಮುಕ್ವೆ, ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಅಶೋಕ್ ರಾಗಿದಕುಮೇರು, ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಜಯಂತಿ ನಾಯಕ್, ಬನ್ನೂರು ಶಕ್ತಿಕೇಂದ್ರದ ಅಧ್ಯಕ್ಷ ನಾಗೇಶ್ ಟಿ.ಎಸ್, 134 ಬೂತ್ ಸಮಿತಿ ಅಧ್ಯಕ್ಷ ಕಾರ್ತಿಕ್ ಅಂದ್ರಟ್ಟ, ಚಿಕ್ಕಮುಡ್ನೂರು ಶಕ್ತಿಕೇಂದ್ರದ ಅಧ್ಯಕ್ಷ ಅಶೋಕ್ ಭಂಡಾರಿ, ಶಾಂತಿಗೋಡು ಶಕ್ತಿಕೇಂದ್ರದ ಅಧ್ಯಕ್ಷ ಶ್ಯಾಮ್ ಭಟ್, ಬೂತ್ ಪ್ರಭಾರಿ ಹರೀಶ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
3 ವರ್ಷದ ಹಿಂದೆ ಮಳೆಗಾಲದ ಸಂದರ್ಭ ಚಿಕ್ಕಮುಡ್ನೂರು ಗ್ರಾಮದ ಅಂದ್ರಟ್ಟ ಬಳಿ ಹಲಗೆ ಇರಿಸಿ ನೀರು ಶೇಖರಣೆ ಮಾಡುವ ಕಿಂಡಿ ಅಣೆಕಟ್ಟುವಿನಲ್ಲಿ ವ್ಯಕ್ತಿಯೊಬ್ಬರು ಕಾಲುಜಾರಿ ನೀರು ಪಾಲಾಗಿದ್ದರು. ಅವರ ಮೃತ ದೇಹ ಬೀರಿಗದ ಬಳಿ ಹೊಳೆಯಲ್ಲಿ ಪತ್ತೆಯಾಗಿತ್ತು. ಅದಾದ ಬಳಿಕ ಆ ಭಾಗದಿಂದ ಜಿಡೆಕಲ್ಲು ಶಾಲೆಗೆ ಬರುವ ವಿದ್ಯಾರ್ಥಿಗಳಿಗೂ ಹೋಗಲು ಮತ್ತು ಇತ್ತಿಂದತ್ತ ಹೋಗಲು ಒಂದು ಸಂಪರ್ಕ ರಸ್ತೆ ಅಗತ್ಯವೆಂದು ಪರಿಸರದಿಂದ ಅನೇಕ ಹೋರಾಟ ಮನವಿಗಳನ್ನು ಸಲ್ಲಿಸಲಾಗಿತ್ತು. ಈ ಕುರಿತು ಪತ್ರಿಕೆಯಲ್ಲಿ ಸಮಗ್ರ ವರದಿಯೂ ಬಂದಿತ್ತು. ಈ ಸಂದರ್ಭ ಶಾಸಕ ಸಂಜೀವ ಮಠಂದೂರು ಸಂಪರ್ಕ ಸೇತುವೆಯ ಭರವಸೆ ನೀಡಿದ್ದರು. ಇದೀಗ ಸಂಪರ್ಕ ಸೇತುವೆಗೆ ಶಿಲಾನ್ಯಾಸ ನಡೆದಿದೆ.