ಯಾರೋ ವಾಮಾಚಾರ ಮಾಡಿದ್ದಾರೆಂದು ಸಂಬಂಧಿಕರಿಗೆ ಕರೆ ಮಾಡಿದ್ದರು
ಮಾತನಾಡಲೆಂದು ಹೋಗಿದ್ದ ಸಂದರ್ಭದಲ್ಲೇ ಕೃತ್ಯವೆಸಗಿಕೊಂಡ ಹರೀಶ್
ವಿಟ್ಲ: ಕನ್ಯಾನದ ಯುವಕನೋರ್ವ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮುಚ್ಚಿಲಕೋಡಿ ಎಂಬಲ್ಲಿ ತನ್ನ ಪತ್ನಿಯ ಸಂಬಂಧಿಕರ ಮನೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಾ.19ರಂದು ಸಂಭವಿಸಿದೆ.
ಬಂಟ್ವಾಳ ತಾಲೂಕು ಕನ್ಯಾನ ನಿವಾಸಿ ಬಾಬು ಶೆಟ್ಟಿಗಾರ್ ಎಂಬವರ ಪುತ್ರ ಹರೀಶ್ (33 ವ.) ಆತ್ಮಹತ್ಯೆ ಮಾಡಿಕೊಂಡವರು. ಹಲವು ವರ್ಷಗಳಿಂದ ಮುಡಿಪುವಿನ ಇನ್ಫೋಸಿಸ್ ಸಂಸ್ಥೆಯ ಗಾರ್ಡನ್ ಕೆಲಸ ನಿರ್ವಹಿಸುತ್ತಿದ್ದ ಹರೀಶ್‌ರವರು ಸಿದ್ದಕಟ್ಟೆ ಸಂಗಬೆಟ್ಟು ನಿವಾಸಿ ಯುವತಿಯನ್ನು ವಿವಾಹವಾಗಿದ್ದರು. ಇದೀಗ ಪತ್ನಿ 7 ತಿಂಗಳ ಗರ್ಭಿಣಿಯಾಗಿದ್ದಾರೆ. ಮಾ.12ರಂದು ಹರೀಶ್ ತನ್ನ ತಾಯಿಯ ಅಕ್ಕನ ಮಗನಾಗಿರುವ ಕೊಣಾಜೆ ಮುಚ್ಚಿಲಕೋಡಿ ನಿವಾಸಿ ರಮೇಶ್ ಶೆಟ್ಟಿಗಾರ್ ಎಂಬವರ ಮೊಬೈಲ್‌ಗೆ ಕರೆ ಮಾಡಿ ತನಗೆ ಯಾರೋವಾಮಾಚಾರ ಮಾಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಅದಕ್ಕೆ ರಮೇಶ್‌ರವರು ಮಾ19ರಂದು ಮನೆಗೆ ಬಂದು ಮಾತನಾಡುವ ಎಂದು ತಿಳಿಸಿರುವಂತೆ ಹರೀಶ್ ಅವರು ಮಾತುಕತೆಗೆಂದು ಬಂದಿದ್ದರು. ಆದರೆ ಬರುವಾಗಲೇ ಪೆಟ್ರೋಲ್ ತುಂಬಿದ್ದ ಕ್ಯಾನ್ ಹಿಡಿದುಕೊಂಡು ಬಂದಿದ್ದ ಅವರು ಮಾತುಕತೆ ಆರಂಭವಾಗುವ ಮುನ್ನವೇ ಅಂಗಳದಲ್ಲಿ ಮೈಪೂರ್ತಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮನೆಮಂದಿ ಗಾಬರಿಗೊಂಡು ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊಣಾಜೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಹರೀಶ್ ಸಾವನ್ನಪ್ಪಿದ್ದಾರೆ. ಕೃತ್ಯ ವೆಸಗಿಕೊಂಡ ಬಳಿಕ ಅರೆಬೆಂದ ಸ್ಥಿತಿಯಲ್ಲಿದ್ದ ಹರೀಶ್‌ರವರೇ ಸ್ವತಃ ಆಂಬ್ಯುಲೆನ್ಸ್ ಹತ್ತಿದ್ದರು ಎಂದು ತಿಳಿದುಬಂದಿದೆ. ಘಟನೆ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.