ನಾಗರಹಾವಿನ ವಿಷವನ್ನೇ ಬಾಯಲ್ಲಿ ಹೀರಿ ತೆಗೆದು ಹೆತ್ತಮ್ಮನ ಪ್ರಾಣ ಉಳಿಸಿದ ಧೈರ್ಯಶಾಲಿ ಮಗಳು!

0

ಕೆಯ್ಯೂರಿನಲ್ಲಿ ನಡೆಯಿತೊಂದು ಮೈಜುಮ್ಮೆನಿಸುವ ಘಟನೆ

ವರದಿ: ಸಿಶೇ ಕಜೆಮಾರ್

ಪುತ್ತೂರು: ಹಾವು ಎಂದರೆ ಎಲ್ಲರಿಗೂ ಭಯ ಅದರಲ್ಲೂ ವಿಷಭರಿತ ನಾಗರಹಾವನ್ನು ಕಂಡರೆ ಓಡುವವರೇ ಹೆಚ್ಚು ಇಂತಹ ಸಮಯದಲ್ಲಿ ಇಲ್ಲೊಬ್ಬಳು ವಿದ್ಯಾರ್ಥಿನಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ತನ್ನ ತಾಯಿಯನ್ನು ಹಾವಿನ ವಿಷದಿಂದ ಕಾಪಾಡಿದ ಮೈಜುಮ್ಮೆನಿಸುವ ಘಟನೆ ಕೆಯ್ಯೂರು ಗ್ರಾಮದಿಂದ ವರದಿಯಾಗಿದೆ. ಕೆಯ್ಯೂರು ಗ್ರಾಪಂ ಸದಸ್ಯೆ ಮಮತಾ ರೈ ಹಾವಿನ ಕಡಿತಕ್ಕೆ ಒಳಗಾದವರು. ಮಮತಾ ರೈಯವರ ಪುತ್ರಿ ಶ್ರಮ್ಯ ರೈಯವರೇ ತಾಯಿಯನ್ನು ಕಾಪಾಡಿದ ಧೈರ್ಯಶಾಲಿ ವಿದ್ಯಾರ್ಥಿನಿಯಾಗಿದ್ದಾರೆ.

ಕೆಯ್ಯೂರು ಸತೀಶ್ ರೈಯವರ ಪತ್ನಿ ಮಮತಾ ರೈಯವರು ತನ್ನ ಮನೆಯಿಂದ ಕೂಗಳತೆ ದೂರದಲ್ಲಿರುವ ತನ್ನ ಮಾವನ ತೋಟಕ್ಕೆ ನೀರು ಬಿಡಲೆಂದು ಸಂಜೆ ವೇಳೆ ವಿದ್ಯುತ್ ಪಂಪು ಸ್ವಿಚ್ ಹಾಕಲು ತೆರಳಿದ್ದರು. ತುಂಬಾ ಹಳೆಯದಾದ ಪಂಪು ಶೆಡ್‌ನ ಒಳಕ್ಕೆ ಹೋಗಿ ಸ್ವಿಚ್ ಹಾಕಿದಾಗ ಇವರಿಗೆ ಹಾವು ಹರಿದಾಡಿದ ಶಬ್ದ ಕೇಳಿಬಂದಿತ್ತು ತಕ್ಷಣ ಇವರು ಹಿಂದೆ ಹಿಂದೆ ಬಂದರು, ಈ ಸಂದರ್ಭದಲ್ಲಿ ಅಚಾನಕ್ ಆಗಿ ಹಾವಿನ ಮೇಲೆ ಕಾಲಿಟ್ಟಿದ್ದರು. ಈ ವೇಳೆ ಹಾವು ಅವರ ಎಡ ಕಾಲಿನ ಮೊಣಗಂಟಿನ ಭಾಗಕ್ಕೆ ಕಚ್ಚಿದೆ. ಹಾವಿನ ಒಂದು ಹಲ್ಲು ಇವರ ಕಾಲಿಗೆ ತಾಗಿದ್ದು ರಕ್ತ ಬರಲು ಆರಂಭಿಸಿದೆ. ಈ ವೇಳೆ ಹಾವು ಎಡೆ ಎತ್ತಿ ಮುಂದೆ ಚಲಿಸಿತು ಎನ್ನುತ್ತಾರೆ ಮಮತಾ ರೈಯವರು. ತಕ್ಷಣವೇ ಇವರಿಗೆ ಏನು ಮಾಡುವುದು ಎಂದು ತೋಚಲಿಲ್ಲ. ಸೀದಾ ತನ್ನ ಮಾವನ ಮನೆಗೆ ಹೋಗಿ ತನಗೆ ಹಾವು ಕಚ್ಚಿದ ವಿಷಯವನ್ನು ತಿಳಿಸುತ್ತಾರೆ. ತನ್ನ ಮಗಳಿಗೂ ವಿಷಯವನ್ನು ತಿಳಿಸುತ್ತಾರೆ. ತಕ್ಷಣವೇ ಮನೆಯಲ್ಲಿದ್ದ ಕೆಲಸದವರು ಮಮತಾ ರೈಯವರ ಕಾಲಿಗೆ ಬೈಹುಲ್ಲಿನಿಂದ ವಿಷ ಮೇಲಕ್ಕೆ ಹೋಗದ ಹಾಗೆ ಗಟ್ಟಿಯಾಗಿ ಕಟ್ಟುತ್ತಾರೆ. ಓಡೋಡಿ ಬಂದ ಮಗಳು ಶ್ರಮ್ಯ ರೈಯವರು, ತನ್ನ ತಾಯಿಗೆ ಧೈರ್ಯ ತುಂಬುತ್ತಾರೆ, ಅಮ್ಮ ನೀನು ಯಾವುದೇ ಕಾರಣಕ್ಕೂ ಹೆದರಬೇಡ, ಏನೂ ಆಗಲ್ಲ ಎಂದ ಶ್ರಮ್ಯ, ಹಿಂದೆ ಮುಂದೆ ನೋಡದೆ ಹಾವು ಕಚ್ಚಿದ ಭಾಗಕ್ಕೆ ಬಾಯಿ ಇಟ್ಟು ರಕ್ತವನ್ನು ಹೀರಿ ತೆಗೆಯುತ್ತಾರೆ. ಒಂದೆರಡು ಸಲ ರಕ್ತವನ್ನು ಹೀರಿ ತೆಗೆದ ಬಳಿಕ ಮಮತಾ ರೈವರ ಪತಿ ಸತೀಶ್ ರೈಯವರು ಸ್ಥಳೀಯ ವೈದ್ಯರಾದ ಶಿವಪ್ರಸಾದ್ ಶೆಟ್ಟಿಯವರ ಸಹಾಯವನ್ನು ಕೇಳಿ ಅವರ ಸೂಚನೆಯಂತೆ ಪಂಚಾಯತ್ ಸದಸ್ಯ ಶರತ್ ಕುಮಾರ್ ಮಾಡಾವುರವರ ಕಾರಿನಲ್ಲಿ ಕುಳ್ಳಿರಿಸಿಕೊಂಡು ಪುತ್ತೂರು ಧನ್ವಂತರಿ ಆಸ್ಪತ್ರೆಗೆ ದಾಖಲು ಮಾಡುತ್ತಾರೆ. ಚಿಕಿತ್ಸೆ ಕೊಡಿಸಿದ ವೈದ್ಯರು ನೀವು ನಿಮ್ಮ ಮಗಳು ಮಾಡಿದ ತುರ್ತು ಚಿಕಿತ್ಸೆಯಿಂದ ಅಪಾಯದಿಂದ ಪಾರಾಗಿದ್ದೀರಿ ಜೀವಕ್ಕೆ ಯಾವುದೇ ತೊಂದರೆ ಇಲ್ಲ ಎಂದ್ಹೇಳುತ್ತಾರೆ. ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮಮತಾ ರೈಯವರು ಮನೆಗೆ ಮರಳುತ್ತಾರೆ. ಮಗಳ ಸಮಯಪ್ರಜ್ಞೆ, ಧೈರ್ಯ ಮಮತಾ ರೈಯವರ ಜೀವವನ್ನು ಉಳಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಇದೆಲ್ಲಾ ಹೇಗೆ ಸಾಧ್ಯವಾಯಿತು?: ನಾವು ಸಿನಿಮಾಗಳಲ್ಲಿ ಇಂತಹ ದೃಶ್ಯಗಳನ್ನು ಅದೆಷ್ಟೋ ಬಾರಿ ನೋಡಿದ್ದೇವೆ. ಸಿನಿಮಾ ಹೀರೋಯಿನ್‌ಗೆ ಹಾವು ಕಚ್ಚಿದೆ ಎಂದು ಗೊತ್ತಾದ ತಕ್ಷಣ ಹೀರೋ ಬಂದು ಹಾವು ಕಚ್ಚಿದ ಜಾಗಕ್ಕೆ ಕಚ್ಚಿ ರಕ್ತವನ್ನು ಹೀರಿ ಪ್ರಾಣ ಉಳಿಸುವ ದೃಶ್ಯಗಳು ಆದರೆ ಅದೆಲ್ಲಾ ಕಾಲ್ಪನಿಕ ದೃಶ್ಯಗಳು. ಆದರೆ ಕೆಯ್ಯೂರಿನಲ್ಲಿ ನಡೆದದ್ದು ಮಾತ್ರ ವಾಸ್ತವ ದೃಶ್ಯ. ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ವ್ಯಾಸಂಗ ಮಾಡುತ್ತಿರುವ ಶ್ರಮ್ಯ ರೈಯವರು ತನ್ನ ತಾಯಿಯ ಪ್ರಾಣ ಉಳಿಸಿದ್ದಾರೆ. ಶ್ರಮ್ಯ ರೈ ಚಿಕ್ಕಂದಿನಲ್ಲಿಯೇ ಧೈರ್ಯವಂತೆ ಎನ್ನುತ್ತಾರೆ ಮಮತಾ ರೈ, ನನಗೆ ಇಬ್ಬರು ಹೆಣ್ಣು ಮಕ್ಕಳು ಅದರಲ್ಲಿ ಶ್ರಮ್ಯ ರೈ ನನಗೆ ಗಂಡು ಮಗ ಇದ್ದ ಹಾಗೆ ಅನ್ನುತ್ತಾರೆ. ಶ್ರಮ್ಯ ರೈಯವರು, ತನ್ನ ತಾಯಿಗೆ ನಾಗರಹಾವೊಂದು ಕಚ್ಚಿದೆ ಎಂಬುದನ್ನೇ ಮರೆತು ತಾನು ಎಲ್ಲೋ ಸಿನಿಮಾಗಳಲ್ಲಿ ನೋಡಿದ ಕಾಲ್ಪನಿಕ ದೃಶ್ಯವನ್ನೇ ಮನಸಲ್ಲಿಟ್ಟುಕೊಂಡು ಅದೇ ರೀತಿಯಲ್ಲಿ ತಾಯಿಯ ದೇಹದಿಂದ ವಿಷವನ್ನು ಬಾಯಲ್ಲಿ ಹೀರಿ ತೆಗೆದಿದ್ದಾರೆ. ನಿಮಗೆ ಈ ಧೈರ್ಯ ಎಲ್ಲಿಂದ ಬಂತು ಎಂಬ ಪ್ರಶ್ನೆಗೆ ಶ್ರಮ್ಯ ರೈ ನೀಡುವ ಉತ್ತರ, ತಾಯಿ ಎಂದರೆ ನನ್ನ ಜೀವ. ತಾಯಿಗೆ ಏನಾದರೂ ಅಪಾಯ ಆಗುತ್ತದೆ ಎಂದು ಗೊತ್ತಾದರೆ ನಾನು ಸುಮ್ಮನೆ ಕೂರಲ್ಲ. ಅದು ಹಾವೇ ಆಗಲಿ ಯಾವುದೇ ಆಗಲಿ, ತಾಯಿಯನ್ನು ಕಾಪಾಡುವುದೇ ನನ್ನ ಉದ್ದೇಶವಾಗಿತ್ತು. ನಾನು ಸಿನಿಮಾಗಳಲ್ಲಿ ಇಂತಹ ದೃಶ್ಯವನ್ನು ನೋಡಿದ್ದೇನೆ. ತಾಯಿಗೆ ಹಾವು ಕಚ್ಚಿದೆ ಎಂದು ಗೊತ್ತಾದ ತಕ್ಷಣ ನನಗೆ ತೋಚಿದ್ದು ಬಾಯಿಯಿಂದ ರಕ್ತವನ್ನು ಹೀರಿ ತೆಗೆಯಬೇಕು ಎಂದು ಅದರಂತೆ ವಿಷವನ್ನು ಹೀರಿ ತೆಗೆದಿದ್ದೇನೆ. ಆ ಸಂದರ್ಭದಲ್ಲಿ ನನಗೆ ನನ್ನ ಜೀವಕ್ಕಿಂತಲೂ ತಾಯಿಯ ಜೀವವೇ ನನಗೆ ಮುಖ್ಯವಾಗಿತ್ತು ಎನ್ನುತ್ತಾರೆ ಶ್ರಮ್ಯ ರೈಯವರು.

ಧೈರ್ಯಶಾಲಿ ಹುಡುಗಿ: ಶ್ರಮ್ಯ ರೈಯವರು ಚಿಕ್ಕಂದಿನಲ್ಲಿಯೇ ತುಂಬಾ ಧೈರ್ಯಶಾಲಿ ಹುಡುಗಿಯಾಗಿದ್ದಳು, ಶ್ರಮ್ಯ ಮತ್ತು ಶ್ರವ್ಯ ನನ್ನ ಇಬ್ಬರು ಹೆಣ್ಣು ಮಕ್ಕಳಲ್ಲಿ ಶ್ರಮ್ಯ ನನಗೆ ಗಂಡು ಮಗ ಇದ್ದ ಹಾಗೆ ಎನ್ನುವ ಮಮತಾ ರೈಯವರು, ಇಬ್ಬರು ಮಕ್ಕಳ ಮೇಲೆಯೂ ಅಪಾರ ಪ್ರೀತಿ ಇಟ್ಟುಕೊಂಡಿದ್ದಾರೆ. ಶ್ರಮ್ಯ ರೈಯವರು ಓದಿನೊಂದಿಗೆ ಇತರ ಸಾಂಸ್ಕೃತಿಕ ಚಟುವಟಿಕೆಯಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದು ಮಕ್ಕಳಿಗೆ ಡ್ಯಾನ್ಸ್, ಟ್ಯೂಷನ್ ಹೇಳಿಕೊಡುವ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್‌ನ ರೋವರ್ಸ್ ಆಂಡ್ ರೇಂಜರ್ ವಿದ್ಯಾರ್ಥಿ ಕೂಡ ಆಗಿದ್ದಾರೆ. ಶ್ರಮ್ಯ ರೈಯವರ ಈ ಧೈರ್ಯ ಮತ್ತು ಸಮಯಪ್ರeಗೆ ಪ್ರತಿಯೊಬ್ಬರು ಹ್ಯಾಟ್ಸ್‌ಅ- ಹೇಳುತ್ತಿದ್ದಾರೆ.

ವಿದ್ಯಾರ್ಥಿಯ ಧೈರ್ಯಕ್ಕೆ ಊರೇ ಶಹಬ್ಬಾಸ್ ಎನ್ನುತ್ತಿದೆ: ಹೌದುತನ್ನ ಪ್ರಾಣವನ್ನು ಲೆಕ್ಕಿಸದೆ ತಾಯಿಯ ಪ್ರಾಣ ಉಳಿಸಿದ ಹುಡುಗಿಯ ಸಾಹಸಗಾಥೆಯನ್ನು ಊರಿಗೆ ಊರೇ ಕೊಂಡಾಡುತ್ತಿದೆ. ಶ್ರಮ್ಯ ರೈಯವರ ಈ ಧೈರ್ಯ ಮತ್ತು ಸಮಯಪ್ರಜ್ಞೆಗೆ ಊರಿನ ಜನತೆ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಶಾಸಕ ಸಂಜೀವ ಮಠಂದೂರು ಸಹಿತ ಹಲವು ಗಣ್ಯರು ಮಮತಾ ರೈಯವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ಶ್ರಮ್ಯ ರೈಯವರ ಸಾಹಸವನ್ನು ಕೊಂಡಾಡಿದ್ದಾರೆ. ಅವರ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ಮಿತ್ರರು ಇವರ ಧೈರ್ಯಕ್ಕೆ ಮೆಚ್ಚಿ ಶಹಬ್ಬಾಸ್ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಊರಿಗೆ ಊರೇ ಶ್ರಮ್ಯ ರೈಯವರ ಸಾಹಸಗಾಥೆಯನ್ನು ಕೊಂಡಾಡುತ್ತಿದೆ.

ಅಮ್ಮನಿಗಿಂತ ದೊಡ್ಡ ದೇವರು ಇಲ್ಲ. ನನಗೆ ಅಮ್ಮ ಮುಖ್ಯವಾಗಿತ್ತು. ಅಲ್ಲಿ ನನಗೆ ನಾಗರಹಾವು ಆಗಲಿ ವಿಷ ಆಗಲಿ ಯಾವುದೂ ಕಾಣಲಿಲ್ಲ ನನಗೆ ಕಂಡಿದ್ದು ನನ್ನ ಅಮ್ಮನ ಮುಖ. ನನಗಿಂತ ಮುಖ್ಯವಾಗಿ ಅವರನ್ನು ಬದುಕಿಸುವುದೇ ನನಗೆ ಮುಖ್ಯವಾಗಿತ್ತು. ನಾನು ಕೆಲವು ಸಿನಿಮಾಗಳಲ್ಲಿ ಈ ರೀತಿಯ ಚಿತ್ರಣ ನೋಡಿದ್ದೆ ಅದರಂತೆ ಹಾವು ಕಚ್ಚಿದ ಜಾಗಕ್ಕೆ ಬಾಯಿ ಇಟ್ಟು ರಕ್ತವನ್ನು ಹೀರಿ ತೆಗೆದಿದ್ದೇನೆ. ದೇವರು ನಮ್ಮನ್ನು ಕಾಪಾಡಿದ್ದಾನೆ. ಐ.ಲವ್.ಯೂ ಅಮ್ಮ ಶ್ರಮ್ಯ ರೈ, ಮಮತಾ ರೈಯವರ ಮಗಳು (ವಿದ್ಯಾರ್ಥಿನಿ)

ಶೌರ್ಯ ಪ್ರಶಸ್ತಿಗೆ ಅರ್ಹಳು

ವಿಷಪೂರಿತ ನಾಗರಹಾವು ಕಚ್ಚಿ ವಿಷ ದೇಹಕ್ಕೆ ಹತ್ತುವುದನ್ನು ತಡೆಯಲು ತನ್ನ ಬಾಯಿಯಿಂದಲೇ ವಿಷವನ್ನು ಹೀರಿ ತೆಗೆದು ಪ್ರಾಣ ಉಳಿಸಿದ ಘಟನೆ ಬಹಳ ಅಪರೂಪ. ಒಬ್ಬಳು ವಿದ್ಯಾರ್ಥಿನಿಯಾಗಿ ಎಲ್ಲೋ ನೋಡಿದ ಕೇಳಿದ ವಿಷಯವನ್ನು ಆಧಾರವಾಗಿಟ್ಟುಕೊಂಡು ಅದರಂತೆ ತನ್ನ ತಾಯಿಯ ದೇಹಕ್ಕೆ ವಿಷ ಹತ್ತುವುದನ್ನು ತಡೆಯಲು ತನ್ನ ಪ್ರಾಣವನ್ನೇ ಒತ್ತೆ ಇಟ್ಟು ತಾಯಿಯನ್ನು ಕಾಪಾಡಿದ ಧೀರೆ ಶ್ರಮ್ಯ ರೈಯವರು ಶೌರ್ಯ ಪ್ರಶಸ್ತಿಗೆ ಅರ್ಹಳಾಗಿದ್ದಾರೆ. ಶ್ರಮ್ಯ ರೈಯವರ ಈ ಸಾಧನೆಯನ್ನು ತಾಲೂಕು ಮಟ್ಟದ ಅಧಿಕಾರಿಗಳು ಗುರುತಿಸಿ ರಾಜ್ಯ ಮಟ್ಟಕ್ಕೆ ತಿಳಿಸಬೇಕಾದ ಅಗತ್ಯತೆ ಇದೆ. ಈ ವಿದ್ಯಾರ್ಥಿಯ ಸಾಹಸಕ್ಕೆ ಶೌರ್ಯ ಪ್ರಶಸ್ತಿ ನೀಡಿ ಪುರಸ್ಕರಿಸಬೇಕಾದ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಅಽಕಾರಿಗಳು, ಜನಪ್ರತಿನಿಽಗಳು ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ.

ನನ್ನ ಮಾವ ಹುಷಾರು ಇಲ್ಲದೇ ಇರುವುದರಿಂದ ಅವರ ತೋಟಕ್ಕೆ ನೀರು ಬಿಡಲು ನಾನು ಪಂಪು ಸ್ವಿಚ್ ಹಾಕಲು ಪಂಪು ಶೆಡ್‌ಗೆ ತೆರಳಿದ್ದೆ ಈ ಸಂದರ್ಭದಲ್ಲಿ ನನಗೆ ನಾಗರಹಾವೊಂದು ಕಾಲಿಗೆ ಕಚ್ಚಿದೆ. ನಾನು ಹಾವನ್ನು ನೋಡಿದ್ದೇನೆ. ತಕ್ಷಣವೇ ಮಾವನ ಮನೆಗೆ ಹೋದೆ. ಅಲ್ಲಿಗೆ ನನ್ನ ಮಗಳು, ಗಂಡ ಎಲ್ಲರೂ ಬಂದರು. ಮಗಳು ನನಗೆ ಧೈರ್ಯ ತುಂಬಿದಳು, ನೀವು ಹೆದರಬೇಡಿ ಏನೂ ಆಗಲ್ಲ ಎಂದವಳು ತಕ್ಷಣವೇ ಹಾವು ಕಚ್ಚಿದ ಗಾಯದಿಂದ ಮೇಲ್ಭಾಗಕ್ಕೆ ಬೈಹುಲ್ಲಿನಿಂದ ಕಟ್ಟಿ, ಗಾಯವಾಗಿದ್ದ ಜಾಗಕ್ಕೆ ತನ್ನ ಬಾಯಿ ಇಟ್ಟು ವಿಷವನ್ನು ಹೀರಿ ತೆಗೆದಳು. ತನ್ನ ಪ್ರಾಣವನ್ನು ಲೆಕ್ಕಿಸದೆ ನನ್ನನ್ನು ಬದುಕಿಸಿದ್ದಾಳೆ. ನನ್ನ ಮಗಳ ಬಗ್ಗೆ ನನಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಅವಳನ್ನು ಪಡೆದ ನಾವು ಪುಣ್ಯವಂತರು.
ಮಮತಾ ರೈ ಕೆಯ್ಯೂರು,
ಹಾವು ಕಡಿತಕ್ಕೆ ಒಳಗಾದವರು, (ಪಂಚಾಯತ್ ಸದಸ್ಯೆ)

ಮಮತಾ ರೈಯವರು ನಮ್ಮ ಕೆಯ್ಯೂರು ಗ್ರಾಪಂ ಸದಸ್ಯೆ. ಅವರಿಗೆ ಹಾವು ಕಚ್ಚಿದ ವಿಷಯವನ್ನು ನನಗೆ ಅವರ ಗಂಡ ಸತೀಶ್ ರೈಯವರು ತಿಳಿಸಿದರು. ತಕ್ಷಣವೇ ನಾನು ಸ್ಥಳಕ್ಕೆ ಬಂದು ನನ್ನದೇ ಕಾರಿನಲ್ಲಿ ಅವರನ್ನು ಕರೆದುಕೊಂಡು ಪುತ್ತೂರು ಧನ್ವಂತರಿ ಆಸ್ಪತ್ರೆಗೆ ಬಂದೆ. ಅವರ ಮಗಳ ಸಾಹಸಕ್ಕೆ ಯಾವ ರೀತಿಯಲ್ಲಿ ಅಭಿನಂದನೆ ಹೇಳಬೇಕು ಗೊತ್ತಾಗುತ್ತಿಲ್ಲ. ಇವತ್ತು ಮಮತಾ ರೈಯವರಿಗೆ ಯಾವುದೇ ತೊಂದರೆ ಆಗದಿರಲು ಅವರ ಮಗಳೇ ಕಾರಣರಾಗಿದ್ದಾರೆ.
ಶರತ್ ಕುಮಾರ್ ಮಾಡಾವು, ಕೆಯ್ಯೂರು ಗ್ರಾಪಂ ಸದಸ್ಯ

LEAVE A REPLY

Please enter your comment!
Please enter your name here