ಕಾಣಿಯೂರು: ಶಾಂತಿಮೊಗರುವಿನಲ್ಲಿ ಕುಮಾರಧಾರ ನದಿಗೆ ಅತೀ ದೊಡ್ಡ ಕಿಂಡಿ ಅಣೆಕಟ್ಟು ನಿರ್ಮಾಣವಾದ ಒಂದು ವರ್ಷದ ಬಳಿಕ ಹಲಗೆ ಜೋಡಣೆ ಕಾರ್ಯ ಪ್ರಾರಂಭಗೊಳ್ಳುವುದರ ಮೂಲಕ ಕೊನೆಗೂ ಗ್ರಾಮಸ್ಥರ ಬೇಡಿಕೆಗೆ ಸ್ಪಂದನೆ ಸಿಕ್ಕಿದಂತಾಗಿದೆ.
ಅಣೆಕಟ್ಟಿಗೆ ಹಲಗೆ ಜೋಡಣೆ ಮಾಡೆದೆ ವೆಂಟೆಡ್ ಡ್ಯಾಂ ಜನರಿಗೆ ಪ್ರಯೋಜನಕ್ಕೆ ಬಾರದೇ ಇದ್ದ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಬೆಳಂದೂರು ಗ್ರಾಮ ಸಭೆಯಲ್ಲಿಯೂ ಈ ವಿಚಾರ ಪ್ರತಿ ಧ್ವನಿಸಿತ್ತು.
ಸಮಸ್ಯೆ ಏನು: ಬಿರು ಬೇಸಿಗೆಗೆ ನೀರಿನ ಸಮಸ್ಯೆ ವೆಂಟೆಡ್ ಡ್ಯಾಂನಿಂದಾಗಿ ದೂರವಾಗಬಹುದೆಂಬ ನಿರೀಕ್ಷೆಯಲ್ಲಿ ಜನರಿದ್ದರೂ ಕಿಂಡಿ ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡು ವರ್ಷ ಕಳೆದರೂ ಅಣೆಕಟ್ಟಿಗೆ ಹಲಗೆ ಅಳವಡಿಸದೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿತ್ತು.
ಕುಡಿಯುವ ನೀರಿನ ಭವಣೆ ನೀಗಿಸಬೇಕೆನ್ನುವ ಉದ್ದೇಶದಿಂದ ಸುಳ್ಯ ಶಾಸಕ ಪ್ರಸ್ತುತ ಸಚಿವರೂ ಆಗಿರುವ ಎಸ್.ಅಂಗಾರ ಅವರ ಶಿಪಾರಸ್ಸಿನಂತೆ ಶಾಂತಿಮೊಗರು ಕುಮಾರಧರ ನದಿಗೆ ಕಿಂಡಿ ಅಣೆಕಟ್ಟು ಯೋಜನೆಗೆ 7.5 ಕೋಟಿ ರೂ ಮಂಜೂರುಗೊಂಡು ಕಾಮಗಾರಿ ಪೂರ್ಣಗೊಂಡಿತ್ತು. ಆದರೆ ಕಾಮಗಾರಿ ಪೂರ್ಣಗೊಂಡರೂ ಹಲಗೆ ಜೋಡಣೆ ಮಾಡದೇ ಇರುವುದರಿಂದ ಜನತೆಗೆ ಪ್ರಯೋಜನಕ್ಕೆ ಬರದೇ ರೂ ೭.೫ಕೋಟಿ ವ್ಯರ್ಥವಾಗುತ್ತಿದೆಯಾ ಎನ್ನುವ ಇಲ್ಲಿ ಕೂಗು ಕೇಳಿಬರುತ್ತಿತ್ತು.
ಸುದ್ದಿಯಲ್ಲಿ ವರದಿ ಪ್ರಸಾರ
ಶಾಂತಿಮೊಗರುವಿನಲ್ಲಿ ಕುಮಾರಧಾರ ನದಿಗೆ ಅತೀ ದೊಡ್ಡ ಕಿಂಡಿ ಅಣೆಕಟ್ಟು ನಿರ್ಮಾಣವಾಗಿ ಒಂದು ವರ್ಷ ಪೂರ್ಣಗೊಂಡರೂ ಹಲಗೆ ಜೋಡಣೆ ಕಾರ್ಯ ಪ್ರಾರಂಭಗೊಳ್ಳದ ಬಗ್ಗೆ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು.