ಸರಕಾರಿ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ನಿರ್ಲಕ್ಷ್ಯ ಆರೋಪ – ಬೀದಿಗಿಳಿದು ಪ್ರತಿಭಟಿಸುವ ಎಚ್ಚರಿಕೆ

0

ಉಪ್ಪಿನಂಗಡಿ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಕಾಡುತ್ತಿದ್ದು, ಭಾರೀ ಸಂಖ್ಯೆಯ ರೋಗಿಗಳು ಈ ಆಸ್ಪತ್ರೆಯನ್ನು ಆಶ್ರಯಿಸುತ್ತಿದ್ದರೂ ವೈದ್ಯರ ನೇಮಕಕ್ಕೆ ಸರಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಖೇದಕರ. ಹದಿನೈದು ದಿನಗಳ ಒಳಗಾಗಿ ಅಗತ್ಯ ವೈದ್ಯರುಗಳನ್ನು ನೇಮಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದೆಂದು 34 ನೆಕ್ಕಿಲಾಡಿ ನಾಗರಿಕ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಯೂನಿಕ್ ಎಚ್ಚರಿಸಿದ್ದಾರೆ.

ಉಪ್ಪಿನಂಗಡಿಯಲ್ಲಿ ಕರೆಯಲಾದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಮುದಾಯ ಆಸ್ಪತ್ರೆಗೆ ಸರಕಾರ ಸುಸಜ್ಜಿತ ಕಟ್ಟಡವನ್ನು ಒದಗಿಸಿದೆ. ಅಗತ್ಯ ಪರಿಕರಗಳನ್ನು ಒದಗಿಸಿದೆ. ಆದರೆ ಅದೆಲ್ಲವನ್ನೂ ಸಮರ್ಪಕವಾಗಿ ಬಳಸಬೇಕಾದ ವೈದ್ಯರುಗಳೇ ಇಲ್ಲದಿದ್ದರೆ ಎಲ್ಲವೂ ಇದ್ದು ಏನೂ ಇಲ್ಲದಿರುವ ಸ್ಥಿತಿಯಂತಾಗಿದೆ. ಕಳೆದ ಜನವರಿ ತಿಂಗಳಲ್ಲಿ ಡೇಟಾ ಪ್ರಕಾರ 5017 ಹೊರ ರೋಗಿಗಳು, 192 ಒಳ ರೋಗಿಗಳು, 169 ನಾಯಿ ಕಡಿತ, ತುರ್ತು ಹಾಗೂ ಅಪಘಾತದ 80 ಪ್ರಕರಣಗಳು ನೊಂದಾವಣೆಯಾಗಿದ್ದು, ಕನಿಷ್ಟ ನಾಲ್ವರು ವೈದ್ಯರುಗಳು ಇರಬೇಕಾದ ಈ ಆಸ್ಪತ್ರೆಯಲ್ಲಿ ಕೇವಲ ಒಬ್ಬ ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವೈದ್ಯರೇ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಇಲಾಖಾ ಸಭೆಗಳಿಗೆ ಹಾಜರಾಗಬೇಕು, ತರಬೇತಿ, ಕ್ಷೇತ್ರ ಭೇಟಿ, ಅಂಗನವಾಡಿ ಭೇಟಿ, ಬನ್ನೂರಿನಲ್ಲಿನ ನಮ್ಮ ಕ್ಲಿನಿಕ್ ಗಳಲ್ಲಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ಎಲ್ಲಾ ಕಾರ್ಯದೊತ್ತಡಗಳಿಂದಾಗಿ ಇರುವ ಒರ್ವ ವೈದ್ಯರೂ ಸರ್ವಕಾಲಿಕ ಸೇವೆಗೆ ಲಭಿಸದ ಸ್ಥಿತಿಯನ್ನು ಇಲ್ಲಿದೆ.

ಆದ್ದರಿಂದ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ಖಾಯಂ ಆಡಳಿತಾಧಿಕಾರಿ, ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರು, ಅರಿವಳಿಕೆ ತಜ್ಞರು, ಕ್ಷ ಕಿರಣ ತಜ್ಞರು, ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗಳನ್ನು ವಿಳಂಬಿಸದೆ ಸರಕಾರ ಭರ್ತಿಗೊಳಿಸಬೇಕು. ಸರಕಾರ ನಿರ್ಲಕ್ಷ ನೀತಿಯನ್ನು ಮುಂದುವರೆಸಿದರೆ ಬೀದಿಗಿಳಿದು ಹೋರಾಡುವುದು ಅನಿವಾರ್ಯವಾದೀತೆಂದು ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಅಬ್ದುಲ್ ಖಾದರ್ ನೆಕ್ಕಿಲಾಡಿ, ಕಲಂದರ್ ಶಾಫಿ, ಮಜೀದ್ ರಾಮನಗರ, ಅಬ್ದುಲ್ ಜಲೀಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here