ಉಪ್ಪಿನಂಗಡಿ: ಶ್ರೀ ಮಹಾಕಾಳಿ ಮೆಚ್ಚಿ ಸಂಪನ್ನ

0

ಉಪ್ಪಿನಂಗಡಿ: ಇಲ್ಲಿನ ಕಾರಣಿಕ ಕ್ಷೇತ್ರ ಎಂದೇ ಪ್ರಖ್ಯಾತವಾಗಿರುವ ಮಹಾಕಾಳಿ ದೇವಾಲಯದಲ್ಲಿ ಮಂಗಳವಾರ ರಾತ್ರಿ ಮಹಾಕಾಳಿ ಅಮ್ಮನವರ ಮೆಚ್ಚಿಯು ಭಾರೀ ಸಂಖ್ಯೆಯ ಭಕ್ತಾದಿಗಳ ಭಾಗೀಧಾರಿಕೆಯಲ್ಲಿ ಭಕ್ತಿ ಸಡಗರದೊಂದಿಗೆ ನೆರವೇರಿತು.

ಮಹಿಳಾ ಭಕ್ತಾದಿಗಳ ತಂಡದ ನೇತೃತ್ವದಲ್ಲಿ ಶ್ರೀ ದೇವರಿಗೆ ಹಾಗೂ ದೇವಾಲಯಕ್ಕೆ ಹೂವಿನ ಅಲಂಕಾರ ಅತ್ಯಾಕರ್ಷಕವಾಗಿ ಮೂಡಿ ಬಂದಿತ್ತು. ರಾತ್ರಿ ಶ್ರೀ ದೇವಿಯ ಮೆಚ್ಚಿಯ ವಿಧಿ- ವಿಧಾನಗಳು ನಡೆದು ಪರವ ಮನೆತನದವರಿಂದ ನಿರ್ವಹಿಸಲ್ಪಟ್ಟ ನೇಮೋತ್ಸವವು ಭಕ್ತ ಜನತೆಯನ್ನು ಭಾವಪರವಶರನ್ನಾಗಿಸಿತು.
ಮೆಚ್ಚಿಯ ಅಂಗವಾಗಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಶ್ರೀ ದೇವಿಯ ಮುಡಿಗೆ ಮಲ್ಲಿಗೆ ಹೂವನ್ನು ಸಮರ್ಪಿಸಿ ದೇವಾಲಯದಲ್ಲಿ ಕುಂಕುಮಾರ್ಚನೆ ಸೇವೆಯನ್ನು ನಡೆಸಿದರು. ಮೆಚ್ಚಿಯ ಅಂಗವಾಗಿ ನೇತ್ರಾವತಿ ನದಿ ಕಿನಾರೆಯಲ್ಲಿ ಇರಾ ಹಂದೆಯವರ ಭೂ ಕೈಲಾಸ ಎಂಬ ಹರಿ ಕಥಾ ಕಾರ್ಯಕ್ರಮ ಹಾಗೂ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆಯು ನಡೆಯಿತು.

ಶ್ರೀ ದೇವಿಗೆ ಚಿನ್ನದ ಮಲ್ಲಿಗೆ ಹಾರ: ಕಳೆದ ಮೂರು ವರ್ಷಗಳಿಂದ ಮಹಿಳಾ ತಂಡಗಳು ಮೆಚ್ಚಿಯ ದಿನದಂದು ಶ್ರೀ ದೇವರಿಗೆ ಹಾಗೂ ದೇವಾಲಯಕ್ಕೆ ಹೂವಿನ ಅಲಂಕಾರ ನಡೆಸಲು ಭಕ್ತ ಜನತೆಯ ಸಹಕಾರವನ್ನು ಪಡೆಯುತ್ತಿದ್ದು, ಹೀಗೆ ಸಂಗ್ರಹವಾದ ಹಣದಲ್ಲಿ ಒಂದಷ್ಟು ಉಳಿಕೆಯಾಗಿದೆ. ಸದ್ರಿ ಉಳಿಕೆ ಮೊತ್ತಕ್ಕೆ ಮತ್ತಷ್ಟು ಭಕ್ತಾದಿಗಳ ಸಹಕಾರವನ್ನು ಪಡೆದು ಮಹಾಕಾಳಿ ಅಮ್ಮನವರಿಗೆ ಅಂದಾಜು ಸುಮಾರು 200 ಗ್ರಾಂ ತೂಕದ ಚಿನ್ನದ ಮಲ್ಲಿಗೆ ಹಾರವನ್ನು ಹಾಗೂ ಶ್ರೀ ಸಹಸ್ರಲಿಂಗೇಶ್ವರ ದೇವರಿಗೆ ಚಿನ್ನದ ತ್ರಿನೇತ್ರವನ್ನು ಸಮರ್ಪಿಸಲು ಸಂಕಲ್ಪಿಸಲಾಗಿದ್ದು, ಮುಂಬರುವ ನವರಾತ್ರಿ ಉತ್ಸವದ ವೇಳೆ ಇದರ ಸಮರ್ಪಣೆಯನ್ನು ಮಾಡಲಾಗುವುದೆಂದು ತಿಳಿಸಲಾಗಿದೆ.

ಮೆಚ್ಚಿ ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ರಾಮದಾಸ್ ಗೌಡ, ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರೀಶ ಉಪಾಧ್ಯಾಯ, ಹರಿರಾಮಚಂದ್ರ, ಹರಿಣಿ ಕೆ., ಸುನೀಲ್ ಎ., ಪ್ರೇಮಲತಾ, ರಾಮ ನಾಯ್ಕ, ಜಯಂತ ಪೊರೋಳಿ, ಮಹೇಶ್ ಜಿ., ಪ್ರಮುಖರಾದ ಮಹೇಶ್ ಕಜೆ, ಸಂತೋಷ್ ಶೆಟ್ಟಿ, ರಾಮಚಂದ್ರ ಮಣಿಯಾಣಿ, ಚಂದಪ್ಪ ಮೂಲ್ಯ, ಸುರೇಶ್ ಅತ್ರಮಜಲು, ಎನ್. ಉಮೇಶ್ ಶೆಣೈ, ಹರೀಶ್ ನಾಯಕ್ ನಟ್ಟಿಬೈಲ್, ಸುಂದರ ಶೆಟ್ಟಿ, ಚಂದಪ್ಪ ಮೂಲ್ಯ, ಸುಜಾತ ಕೃಷ್ಣ ಆಚಾರ್ಯ, ಸುಮನ್ ಲದ್ವಾ, ಪುಷ್ಪಲತಾ, ಶ್ಯಾಮಲಾ ಶೆಣೈ ಹಾಗೂ ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿಗಳಾದ ಕೃಷ್ಣಪ್ರಸಾದ್, ದಿವಾಕರ, ಪದ್ಮನಾಭ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here