ನೆಲ್ಯಾಡಿ: ಬಜತ್ತೂರು ಗ್ರಾ.ಪಂ.ಸಾಮಾನ್ಯ ಸಭೆ ಅಧ್ಯಕ್ಷೆ ಪ್ರೇಮಾ ಬಿ.,ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಬಜತ್ತೂರು ಗ್ರಾಮದ ಕಾಂಚನ ಮತ್ತು ಮೇಲೂರಿನಲ್ಲಿ ಸಂಚಾರಿ ಪಡಿತರ ಸಾಮಾಗ್ರಿ ವಿತರಣೆ ಮಾಡಲಾಗಿತ್ತು. ಈ ಎರಡೂ ಕೇಂದ್ರಗಳು ಪುತ್ತೂರು ತಾಲೂಕಿನೆ ಸೇರಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಕಡಬ ತಾಲೂಕಿಗೆ ಸೇರಿಸಲಾಗಿದೆ. ಇದರಿಂದ ಪಡಿತರ ಚೀಟಿದಾರರಿಗೆ ತೊಂದರೆಯಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಎರಡೂ ಪಡಿತರ ವಿತರಣ ಕೇಂದ್ರಗಳನ್ನು ಈ ಹಿಂದಿನಂತೆ ಪುತ್ತೂರು ತಾಲೂಕಿಗೆ ಪರಿಗಣಿಸಬೇಕೆಂದು ಕೋರಿ ತಹಶೀಲ್ದಾರ್ ಹಾಗೂ ಆಹಾರ ಶಿರಸ್ತೆದಾರರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಗ್ರಾಮದ ಅಭಿವೃದ್ಧಿ ಬಗ್ಗೆ, ಕುಡಿಯುವ ನೀರಿನ ಕುರಿತು ಚರ್ಚೆ ನಡೆಸಲಾಯಿತು.
ಗ್ರಾ.ಪಂ.ಉಪಾಧ್ಯಕ್ಷೆ ಸ್ಮಿತಾ, ಸದಸ್ಯರಾದ ಸಂತೋಷ್ ಕುಮಾರ್ ಪಿ., ಗಂಗಾಧರ ಕೆ.ಎನ್., ಮಾಧವ ಪೂಜಾರಿ, ಉಮೇಶ್ ಓಡ್ರಪಾಲು, ನಝೀರ್ ಬೆದ್ರೋಡಿ, ಮೋನಪ್ಪ ಗೌಡ, ಪ್ರೆಸಿಲ್ಲಾ ಡಿ.ಸೋಜ, ಯಶೋಧಾ, ವಿಮಲ, ಅರ್ಪಿತ ರೈ, ರತ್ನ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್‌ಕುಮಾರ್ ಸ್ವಾಗತಿಸಿ ಸರಕಾರದ ಸುತ್ತೋಲೆ, ಸಾರ್ವಜನಿಕ ಅರ್ಜಿಗಳನ್ನು ಸಭೆಗೆ ಮಂಡಿಸಿದರು. ಕಾರ್ಯದರ್ಶಿ ಗಿರಿಯಪ್ಪ ಗೌಡ ವಂದಿಸಿದರು.
ಸವಲತ್ತು ವಿತರಣೆ:
ಗ್ರಾಮ ಪಂಚಾಯತ್‌ನ ಶೇ.25 ಕಾದಿರಿಸಿದ ಅನುದಾನದಲ್ಲಿ ಪರಿಶಿಷ್ಠ ಜಾತಿಯ ಇಬ್ಬರು ಮಹಿಳಾ ಫಲಾನುಭವಿಗಳಿಗೆ ಸ್ವ ಉದ್ಯೋಗ ನಡೆಸುವ ಬಗ್ಗೆ ಟೈಲರಿಂಗ್ ಮಿಷನ್ ಹಾಗೂ ಶೇ.5 ಕಾದಿರಿಸಿದ ಅನುದಾನದಲ್ಲಿ ಇಬ್ಬರು ದಿವ್ಯಾಂಗ ಚೇತನ ಫಲಾನುಭವಿಗಳಿಗೆ ನೀರಿನ ಟ್ಯಾಂಕ್ ವಿತರಿಸಲಾಯಿತು.