ಮುರ ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯದಿಂದ ಸಮಾಜಕ್ಕೆ ಅತ್ಯುತ್ತಮ ಕೊಡುಗೆ-ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ
- ಮುಂದಿನ ಬಾರಿ ದೊಡ್ಡ ಮೊತ್ತ ನೀಡುತ್ತೇನೆ-ಸಂಜೀವ ಮಠಂದೂರು
- ಊರ ಗೌಡರನ್ನು ಗೌರವಿಸಿ-ಮನೋಹರ್ ಡಿ.ವಿ.
- ಸಭಾಂಗಣದಿಂದ ಇನ್ನಷ್ಟು ಉತ್ತಮ ಕಾರ್ಯಕ್ರಮ ಮೂಡಲಿ-ಪ್ರಮೋದ್
- ತಾಲೂಕು ಗೌಡ ಸಂಘಕ್ಕೆ ಮುರ ಗೌಡ ಸಂಘ ಪ್ರೇರಣೆ-ವಿಶ್ವನಾಥ ಗೌಡ ಕೆಯ್ಯೂರು
- ಮುಂದೆ ಪಾಕಶಾಲೆ, ಅತಿಥಿಗೃಹ ನಿರ್ಮಾಣ-ಬಾಬು ಗೌಡ ಕಲ್ಲೇಗ
ಪುತ್ತೂರು: ಸ್ವಾರ್ಥದಿಂದ ಹೋದಾಗ ಸಮುದಾಯ ಬೆಳೆಯಲು ಸಾಧ್ಯವಿಲ್ಲ. ಸಾಮಾಜಿಕ ಗುರಿಯಿಟ್ಟುಕೊಂಡು ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಮುರ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘದಿಂದ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿರುವುದು ಮಾದರಿ ಕಾರ್ಯಕ್ರಮ ಎಂದು ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ|ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಮುರ ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘದ ವತಿಯಿಂದ ನಿರ್ಮಾಣಗೊಂಡ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡವನ್ನು ಮಾ.27ರಂದು ಅವರು ಉದ್ಘಾಟಿಸಿ ಬಳಿಕ ಕಲ್ಲೇಗ ಮುತ್ತಣ್ಣ ಗೌಡ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. 2002ನೇ ಇಸವಿಯಲ್ಲಿ ಇದೇ ಕಟ್ಟಡದ ಕೆಳ ಅಂತಸ್ತಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದಿದ್ದೆ. ಇವತ್ತು ಮೇಲಂತಸ್ತಿನ ಉದ್ಘಾಟನೆಯೂ ನಡೆದಿದೆ. ಆಗ ಸಮುದಾಯದ ಸಂಖ್ಯೆ ಹೆಚ್ಚಿತ್ತು. ಇವತ್ತು ಅದು ದುಪ್ಪಟ್ಟು ಆಗಬೇಕಾಗಿತ್ತು. ಉದ್ದೇಶಿಸಿದ ಗುರಿ ಸಾಧನೆ ನಮ್ಮಲ್ಲಿ ಇರಬೇಕೆಂದು ಹೇಳಿದ ಸ್ವಾಮೀಜಿ, ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂದರು.
ತಲೆ ಕೆಡಿಸುವುದು ಬೇಡ: ಇವತ್ತು ಸಮಾಜದಲ್ಲಿ ಎಲ್ಲಾ ರೀತಿಯ ಜನರು ಇರುತ್ತಾರೆ. ಅದಕ್ಕೆ ನಾವು ತಲೆ ಕೆಡಿಸಿಕೊಳ್ಳಬಾರದು. ಏನು ಮಾಡುವುದಿದ್ದರೂ ಅದು ಆತ್ಮಕ್ಕೆ ಮನಸ್ಸಿಗೆ ಮೆಚ್ಚುವಂತಿರಬೇಕು. ಚಿಂತನೆಗಳು ಸಮಾಜಮುಖಿಯಾಗಿರಬೇಕು. ಕಣ್ಣಿಂದ ನೋಡಿದ್ದು, ಕಿವಿಯಿಂದ ಕೇಳಿದ್ದು ಸತ್ಯವಾಗುವುದಿಲ್ಲ. ಸಂಶಯ ದೂರ ಆದಾಗ ಬದುಕು ಚೆನ್ನಾಗಿರುತ್ತದೆ. ಆರೋಗ್ಯಕರ ಪರಿಹಾರ ಕಂಡು ಕೊಳ್ಳಲು ಚಿಂತನೆ ಮಾಡಬೇಕು ಎಂದು ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಮುಂದಿನ ಬಾರಿ ದೊಡ್ಡ ಮೊತ್ತ ನೀಡುತ್ತೇನೆ: ಮುರ ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘದ ಸಮುದಾಯ ಭವನದಲ್ಲಿ ನೂತನ ಕಚೇರಿ ಕೊಠಡಿಯನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ನಮ್ಮ ಸಮಾಜ ಸಜ್ಜನ ಸಮಾಜ. ಕೆಂಪೇ ಗೌಡ, ಕೆದಂಬಾಡಿ ರಾಮಯ್ಯ ಗೌಡ ಸಹಿತ ಸಮಾಜದ ಹಲವು ವೀರರಿಗೆ ಸ್ಥಾನ-ಮಾನ ಕೊಡಿಸಿದ ನಮ್ಮ ಸರಕಾರ ಒಕ್ಕಲಿಗರ ಪರವಾಗಿದೆ. ಆದರೆ ನಮ್ಮ ಯುವಕ ಯುವತಿಯರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬಾರದೆ ಇದ್ದರೆ ಅಸ್ತಿತ್ವ ತೋರಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲರೂ ಮುಂದೆ ಬರಬೇಕು. ಇವತ್ತು ಮುರ ಗೌಡ ಸಮುದಾಯ ಭವನಕ್ಕೆ ಶಾಸಕರ ಅನುದಾನಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ ಇಲ್ಲಿಗೆ ಕೊಡುವಾಗ ದೊಡ್ಡ ಮೊತ್ತ ನೀಡಬೇಕು. ಅದನ್ನು ಮುಂದಿನ ಬಾರಿ ನೀಡುವ ಕೆಲಸ ಮಾಡುತ್ತೇನೆ. ಈಗಾಗಲೇ ವಿಶ್ವಕರ್ಮ ಸಮಾಜ, ಮರಾಠಿ, ಮುಗೇರ, ಆದಿದ್ರಾವಿಡ ಸಹಿತ ಬೇರೆ ಬೇರೆ ಸಮುದಾಯಕ್ಕೆ ಅನುದಾನ ಕೊಡಲಾಗಿದೆ. ಮುರ ಸಮುದಾಯ ಭವನಕ್ಕೆ ದೊಡ್ಡ ಮೊತ್ತ ನೀಡುತ್ತೇನೆ. ಈಗ ನಾನು ವೈಯುಕ್ತಿಕ ದೇಣಿಗೆ ಸಮರ್ಪಣೆ ಮಾಡುತ್ತೇನೆ ಎಂದರು. ಸಂಘದಲ್ಲಿ ಏನೇ ವ್ಯತ್ಯಾಸ ಬಂದರೂ ಅದನ್ನು ಮಾತುಕತೆಯಲ್ಲಿ ಮುಗಿಸುವಂತೆ ಶಾಸಕರು ಸಲಹೆ ನೀಡಿದರು.
ಊರ ಗೌಡರನ್ನು ಗೌರವಿಸಿ: ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಮನೋಹರ್ ಡಿ.ವಿ.ಅವರು ಮಾತನಾಡಿ ಕೃಷಿ ಹಿನ್ನೆಲೆಯಲ್ಲಿ ಬಂದಿರುವ ಒಕ್ಕಲಿಗರು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಏರಲು ಆದಿಚುಂಚನಗಿರಿ ಮಠ ಕಾರಣ. ಇವತ್ತು ಸಮುದಾಯ ಇನ್ನಷ್ಟು ಬಲಿಷ್ಠಗೊಳ್ಳಬೇಕು. ಸಮಾಜದಲ್ಲಿರುವ ಅನೇಕ ಸಂಪ್ರದಾಯಗಳಿಗೆ ಸಂಬಂಧಿಸಿ ಊರ ಗೌಡರುಗಳಿಗೆ ಪ್ರಾಮುಖ್ಯತೆ ಇದೆ. ಈ ನಿಟ್ಟಿನಲ್ಲಿ ಅವರನ್ನು ಗೌರವಿಸಬೇಕು ಎಂದರು.
ಸಭಾಂಗಣದಿಂದ ಇನ್ನಷ್ಟು ಉತ್ತಮ ಕಾರ್ಯಕ್ರಮ ಮೂಡಲಿ: ಸುಬ್ರಹ್ಮಣ್ಯ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ ಅವರು ಮಾತನಾಡಿ ಅಲ್ಲಲ್ಲಿ ಸಮುದಾಯ ಭವನ ನಿರ್ಮಾಣ ಆಗುವ ಮೂಲಕ ಸಮಾಜದ ಜನರಿಗೆ ಪ್ರಯೋಜನವಾಗಲಿ. ಇದರ ಜೊತೆಗೆ ಸಭಾಂಗಣದಿಂದ ಇನ್ನಷ್ಟು ಉತ್ತಮ ಕಾರ್ಯಕ್ರಮ ಮೂಡಲಿ ಎಂದರು.
ತಾಲೂಕು ಗೌಡ ಸಂಘಕ್ಕೆ ಮುರ ಗೌಡ ಸಂಘ ಪ್ರೇರಣೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ಅವರು ಮಾತನಾಡಿ ಗ್ರಾಮೀಣ ಗೌಡ ಸಮುದಾಯ ಭವನ ಸಂಘ ತಾಲೂಕು ಸಂಘಕ್ಕೆ ಪ್ರತಿಷ್ಠೆಯ ಗರಿ ಇದ್ದಂತೆ. ಯಾಕೆಂದರೆ ತಾಲೂಕು ಗೌಡ ಸಂಘ ಆಗಬೇಕಾದರೆ ಪ್ರೇರಣೆ ನೀಡಿದವರು ಮುರ ಗೌಡ ಸಂಘದವರು. ಇವತ್ತು ಮುರ ಗೌಡ ಸಮುದಾಯ ಭವನದಲ್ಲಿ ಮೇಲಂತಸ್ತಿನ ಕಟ್ಟಡವೂ ಉದ್ಘಾಟನೆಗೊಂಡಿದೆ. ಈ ರೀತಿಯಲ್ಲಿ ಪ್ರತಿ ಗ್ರಾಮದಲ್ಲೂ ಸಮುದಾಯ ಭವನ ನಿರ್ಮಾಣವಾಗಲಿ. ಇವತ್ತಿನ ಸ್ಮರ್ಧಾತ್ಮಕ ಯಗದಲ್ಲಿ ಸಮುದಾಯದ ಕಾರ್ಯಕ್ರಮದಲ್ಲಿ ವ್ಯತ್ಯಾಸಗಳಾಗಿವೆ. ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಬಿಡಬಾರದು. ಈ ನಿಟ್ಟಿನಲ್ಲಿ ಊರ ಗೌಡರ ಮಾರ್ಗದರ್ಶನದಲ್ಲೇ ಕಾರ್ಯಕ್ರಮ ನಡೆಸಬೇಕು. ನಮ್ಮ ಸಂಸ್ಕೃತಿಯ ಸಂಪ್ರದಾಯವನ್ನು ತಿಳಿಸುವ ನಿಟ್ಟಿನಲ್ಲಿ ಸಂಘದ ಮೂಲಕ ಕೈಪಿಡಿ ಮಾಡಲಾಗಿದೆ. ಅದನ್ನು ಎಲ್ಲರು ಪಡೆದು ಹುಟ್ಟಿನಿಂದ ಸಾವಿನ ತನಕದ ಸಂಪ್ರದಾಯವನ್ನು ಅರಿತುಕೊಳ್ಳಿ. ಯಾಕೆಂದರೆ ನಮ್ಮ ಅಚಾರ ವಿಚಾರಗಳಿಗೆ ಇದೊಂದು ಗ್ರಂಥವಿದ್ದಂತೆ ಎಂದರು.
ಮುಂದೆ ಪಾಕಶಾಲೆ, ಅತಿಥಿಗೃಹ ನಿರ್ಮಾಣ: ಸಮುದಾಯ ಭವನದ ಅಧ್ಯಕ್ಷ ಬಾಬು ಗೌಡ ಕಲ್ಲೇಗ ಅವರು ಮಾತನಾಡಿ ಹಿಂದೆ ಸಂಘ ಆರಂಭಗೊಂಡ ವೇಳೆ ಸಂಘದ ಕಾರ್ಯಚಟುವಟಿಕೆ, ಸಮಾಜ ಸೇವೆಗೆ ಒಂದು ಸಮುದಾಯ ಭವನ ನಿರ್ಮಾಣದ ಚಿಂತನೆ ತಂದೆಯವರಲ್ಲಿ ಇತ್ತು. ಸಹೋದರ ನಾರಾಯಣ ಗೌಡರು ನಮ್ಮೆಲ್ಲರ ಸಹಕಾರದೊಂದಿಗೆ ಸ್ಥಳ ನೀಡುವ ಕೆಲಸ ಮಾಡಿದರು. ಅದಾದ ಬಳಿಕ ಅಲ್ಲಿ ಸಮುದಾಯ ಭವನ ನಿರ್ಮಾಣಗೊಂಡಿತ್ತು. ಈಗಾಗಲೇ ನಮ್ಮ ಸಮುದಾಯದ ಮೂಲಕವೇ ನೂತನ ಮೇಲಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಮುಂದೆ ಪಾಕ ಶಾಲೆ ಮತ್ತು ಅತಿಥಿ ಗೃಹ ನಿರ್ಮಾಣದ ಉದ್ದೇಶವಿದೆ. ಒಟ್ಟು ಎಲ್ಲಾ ರೀತಿಯಲ್ಲಿ ಸಭಾ ಭವನದಲ್ಲಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
30 ವರ್ಷಗಳ ಹಿಂದೆಯೇ ಸಂಘ ಹುಟ್ಟಿಕೊಂಡಿತ್ತು: ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘದ ಆಡಳಿತ ಮಂಡಳಿ ಸದಸ್ಯ ಯಶವಂತ್ ಮತಾವು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಕಲ್ಲೇಗ ಯುವ ಗೌಡ ಸಂಘ 30 ವರ್ಷಗಳ ಹಿಂದೆ ಹುಟ್ಡು ಹಾಕಲಾಯುತು. ರಾಜಿಪಂಚಾತಿಕೆ, ಸಮಾವೇಶ, ಆರ್ಥಿಕ ನೆರವು ಕಾರ್ಯಕ್ರಮ ಸಂಘದ ಮೂಲಕ ನಡೆಯುತ್ತಿದ್ದಾಗ ಸಮುದಾಯ ಭವನದ ಚಿಂತನೆ ಬಂತು. ಸಮುದಾಯ ಭವನಕ್ಕೆ ಕಲ್ಲೇಗ ನಾರಾಯಣ ಗೌಡ ಸ್ಥಳ ದಾನ ಮಾಡಿದರು. ಪಡ್ನೂರು, ಕಬಕ, ಕೊಡಿಪ್ಪಾಡಿ ಮೂರು ಗ್ರಾಮಗಳಿಗೆ ಸಂಬಂಧಿಸಿ ಸಮುದಾಯ ಭವನ ನಿರ್ಮಾಣ ಮಾಡಲಾಯಿತು. 2002ರಲ್ಲಿ ಸಮುದಾಯ ಭವನ ಉದ್ಘಾಟನೆಗೊಂಡಿತ್ತು. ಇದೀಗ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡವೂ ಉದ್ಘಾಟನೆಯಾಗಿದೆ.ಸಮಾಜ ಸುಧಾರಣೆ ಇದರ ಮೂಲ ಉದ್ದೇಶವಾಗಿದೆ ಎಂದರು.
ಡಾ.ರೇಣುಕಾ ಪ್ರಸಾದ್ ಅವರಿಂದ ದೇಣಿಗೆ: ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಪರವಾಗಿ ಕೆವಿಜಿ ಸಂಸ್ಥೆಯ ಸಿಬ್ಬಂದಿ ಅರುಣ್ ಕುರುಂಜಿ ಮತ್ತು ಪ್ರಸನ್ನ ಕಲ್ಲಾಜೆ ಅವರು ಕಾರ್ಯಕ್ರಮಕ್ಕೆ ಆಗಮಿಸಿ ಡಾ. ರೇಣುಕಾ ಪ್ರಸಾದ್ ಸಂಘಕ್ಕೆ ನೀಡಿದ ದೇಣಿಗೆಯನ್ನು ಸ್ವಾಮೀಜಿಯವರ ಮೂಲಕ ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.ಇದೇ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರವೀಣ್ ಕುಂಟ್ಯಾನ ಅವರು ಕೂಡಾ ದೇಣಿಗೆ ನೀಡಿದರು.
ದೇಣಿಗೆ, ಸಹಕಾರ ನೀಡಿದವರಿಗೆ ಗೌರವ: ಸಮುದಾಯ ಭವನಕ್ಕೆ ದೇಣಿಗೆ ನೀಡಿದ ಗೋವರ್ಧನ ಕಲ್ಲೇಗ ದಂಪತಿ, ಬಾಬು ಗೌಡ ಕಲ್ಲೇಗ, ಲಕ್ಷಾಂತರ ರೂ.ಬೆಲೆ ಬಾಳುವ ಭೂಮಿಯನ್ನು ದೇಣಿಗೆಯಾಗಿ ನೀಡಿದ ನಾರಾಯಣ ಗೌಡ ಕಲ್ಲೇಗ, ವಿಮಲ ನಾರಾಯಣ ಗೌಡ, ಕಬಕ ಗ್ರಾ.ಪಂ ಅಧ್ಯಕ್ಷ ವಿನಯ ಕಲ್ಲೇಗ, ರಾಜೇಶ್ ಗೌಡ ಪೋಳ್ಯ, ರಾಮಕೃಷ್ಣ ಗೌಡ ಕರ್ಮಲ, ವಸಂತ ನೆಕ್ಕರೆ, ವೆಂಕಟ್ರಮಣ ಗೌಡ ಕೊಡಿಪ್ಪಾಡಿ, ವಸಂತ ಗೌಡ ಪಲ್ಲ, ಪುರುಷೋತ್ತಮ ಗೌಡ ಮುಂಗ್ಲಿಮನೆ, ಪದ್ಮಯ್ಯ ಗೌಡ ನಡುಬೈಲು ಕಲ್ಲೇಗ, ಜತ್ತಪ್ಪ ಗೌಡ, ಪೋಳ್ಯ ಕೊರಗಪ್ಪ ಗೌಡ, ನೆಕ್ಕರೆ ಪುಷ್ಪಪ್ಪ ಗೌಡ, ರವಿ ಮುಂಗ್ಲಿಮನೆ, ಧರ್ಣಪ್ಪ ಗೌಡ, ಶಿವರಾಮ ಮತಾವು, ಮೆದು ಶಿವರಾಮ ಗೌಡ, ರಾಜೇಶ್ ಗೌಡ ಪೋಳ್ಯ, ಧರ್ಮಪಾಲ ಗೌಡ, ಗ್ರಾ.ಪಂ ಉಪಾಧ್ಯಕ್ಷ ರುಕ್ಮಯ್ಯ ಸಹಿತ ಹಲವಾರು ಮಂದಿಯನ್ನು ಗೌರವಿಸಲಾಯಿತು.
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘದ ಆಡಳಿತ ಸಮಿತಿ ಗೌರವಾಧ್ಯಕ್ಷ ಕಲ್ಲೇಗ ಜಿನ್ನಪ್ಪ ಗೌಡ, ಕಟ್ಟಡ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಮುಂಗ್ಲಿಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನವಾಗಿ ಆರಂಭಗೊಳ್ಳಲಿರುವ ಎವಿಜಿ ಇಂಗ್ಲೀಷ್ ಮೀಡಿಯಾಂ ಶಾಲೆಯ ಕುರಿತು ಗುಡ್ಡಪ್ಪ ಗೌಡ ಬಲ್ಯ ಸಭೆಯಲ್ಲಿ ಮಾಹಿತಿ ನೀಡಿದರು. ಆಡಳಿತ ಸಮಿತಿ ಗೌರವಾಧ್ಯಕ್ಷ ಜಿನ್ನಪ್ಪ ಗೌಡ ದಂಪತಿ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರಿಗೆ ಫಲಪುಷ್ಪ ನೀಡಿ ಗೌರವಿಸಿದರು. ಆಡಳಿತ ಸಮಿತಿ ಉಪಾಧ್ಯಕ್ಷ ಸುಬ್ರಹ್ಮಣ್ಯ ಗೌಡ ಹಣಿಯೂರು, ಕಬಕ ಗ್ರಾ.ಪಂ ಅಧ್ಯಕ್ಷರಾಗಿರುವ ಕಟ್ಟಡ ನಿರ್ಮಾಣ ಸಮಿತಿ ಉಪಾಧ್ಯಕ್ಷ ವಿನಯ ಕುಮಾರ್ ಕಲ್ಲೇಗ, ಆಡಳಿತ ಸಮಿತಿ ಸದಸ್ಯ ಶಿವರಾಮ ಮತಾವು, ಕಾರ್ಯದರ್ಶಿ ವೆಂಕಟ್ರಮಣ ಗೌಡ, ರಾಮಕೃಷ್ಣ ಗೌಡ ಅತಿಥಿಗಳನ್ನು ಗೌರವಿಸಿದರು. ಶಮಿತಾ ಗೋಮುಖ ಪ್ರಾರ್ಥಿಸಿದರು. ಆಡಳಿತ ಸಮಿತಿ ಕಾರ್ಯದರ್ಶಿ ವೆಂಕಟ್ರಮಣ ಗೌಡ ಕೋಡಿಮೂಲೆ ವಂದಿಸಿದರು. ಪರಮೇಶ್ವರ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಗಣಪತಿ ಹೋಮ, ಸತ್ಯನಾರಾಯಣ ಪೂಜೆ ನಡೆಯಿತು. ಶ್ರೀಗಳು ಆಗಮಿಸಿದ ಬಳಿಕ ಮಂಗಳಾರತಿ ನಡೆಯಿತು. ಗ್ರಾಮೀಣ ಒಕ್ಕಲಿಗ ಗೌಡ ಸಮುದಾಯ ಭವನ ಸೇವಾ ಸಂಘದ ಆಡಳಿತ ಸಮಿತಿ ಖಜಾಂಜಿ ರಾಜೇಶ್ ಗೌಡ ಪೋಳ್ಯ, ಸದಸ್ಯರಾದ ರಾಮಕೃಷ್ಣ ಗೌಡ ಕರ್ಮಲ, ವಸಂತ ಗೌಡ ಪಳ್ಳ ಪಡ್ನೂರು, ಸಂಕಪ್ಪ ಗೌಡ, ಕಲ್ಲೇಗ ವಿಮಲಾ ಯನ್ ಗೌಡ, ಕಟ್ಟಡ ಸಮಿತಿ ಖಜಾಂಜಿ ಕಲ್ಲೇಗ ನಾರಾಯಣ ಗೌಡ ಮುರ, ವಸಂತ ಗೌಡ ನೆಕ್ಕರೆ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಅವರು ಶ್ರೀಗಳನ್ನು ಗೌರವಿಸಿದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಅಮರನಾಥ ಗೌಡ, ತಾಲೂಕು ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಜಿಲ್ಲಾ ಸಂಘದ ಗೌರವಾಧ್ಯಕ್ಷೆ ಗೌರಿ ಬನ್ನೂರು, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಧರ್ ಗೌಡ ಪಾಣತ್ತಿಲ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ್, ಲಿಂಗಪ್ಪ ಗೌಡ ತೆಂಕಿಲ, ರವಿ ಮುಂಗ್ಲಿಮನೆ ಸಹಿತ ಹಲವಾರು ಮಂದಿ ಸಭಾಭವನದ ಉದ್ಘಾಟನೆ ಸಂದರ್ಭ ಉಪಸ್ಥಿತರಿದ್ದರು.