ಪುತ್ತೂರು: ಮಾಂಗಲ್ಯ ವರ ಪ್ರದಾಯಕನಾಗಿರುವ ಮುಕ್ವೆ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಹಲವು ವಿಶೇಷತೆಗಳೊಂದಿಗೆ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಲಕಶೋತ್ಸವದಿಂದಾಗಿ ಭಕ್ತರಲ್ಲಿ ಸಡಗರ, ಸಂಭ್ರಮ ಮುಗಿಲುಮುಟ್ಟುವಂತಿದೆ.
ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳು ನೆರವೇರುತ್ತಿದೆ. ಬ್ರಹ್ಮಕಲಶೋತ್ಸವದಲ್ಲಿ ಪ್ರತಿದಿನ ಕ್ಷೇತ್ರದಲ್ಲಿ ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳು, ವಿವಿಧ ಭಜನಾ ತಂಡಗಳಿಂದ ಭಜನೆ ಕಾರ್ಯಕ್ರಮಗಳು ನಡೆಯುತ್ತಿದೆ. ಉಮಾಮಹೇಶ್ವರ ಸಭಾಂಗಣದ ಶಿವಪಾರ್ವತಿ ವೇದಿಕೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮಗಳು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ಮೇಳೈಸುತ್ತಿದೆ. ನಳಪಾಕ ಪಾಕ ಶಾಲೆಯಲ್ಲಿ ಶುಚಿ ರುಚಿಯಾದ ಭಕ್ಷ್ಯ, ಭೋಜನಗಳು ಸಿದ್ದಗೊಳ್ಳುತ್ತಿದೆ. ಅನ್ನಪೂರ್ಣ ಭೋಜನ ಶಾಲೆಯಲ್ಲಿ ಶಿಸ್ತು ಬದ್ದವಾಗಿ ಭೋಜನ, ಉಪಹಾರಗಳು ನೆರವೇರುತ್ತಿದೆ. ಸುಮಾರು 300ಕ್ಕೂ ಅಧಿಕ ಮಂದಿ ಉತ್ಸಾಹಿ ಯುವಕರ ತಂಡವು ಬ್ರಹ್ಮಕಲಶೋತ್ಸವದಲ್ಲಿ ಸಮರ್ಪಣಾ ಭಾವದಿಂದ ಕರಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಾಟಿ ಎಂಬಂತೆ ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯ ಬೆದ್ರಾಳದಿಂದ ಮುಕ್ವೆ- ಪುರುಷರಕಟ್ಟೆಯ ತನಕ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾನರ್, ಬಂಟಿಂಗ್ಸ್, ಭಗವಧ್ವಜಗಳು ರಾರಾಜಿಸುತ್ತಿದೆ. ಆಕರ್ಷಕ ದ್ವಾರಗಳು, ರಸ್ತೆ ಬದಿಯಲ್ಲಿನ ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡು ಭಕ್ತರನ್ನು ಕ್ಷೇತ್ರಕ್ಕೆ ಕೈಬೀಸಿ ಕರೆಯುವಂತಿದೆ.
ಆಕರ್ಷಕ ಕಲಶ ಮಂಟಪ:
ಬ್ರಹ್ಮಕಲಶೋತ್ಸವದಲ್ಲಿ ಕಲಶ ಪೂಜೆ ಕ್ಷೇತ್ರದಲ್ಲಿ ಆಕರ್ಷಕವಾದ ರೀತಿಯಲ್ಲಿ ವಿಶಾಲವಾದ ಕಲಶ ಮಂಟಪವು ನಿರ್ಮಾಣಗೊಂಡಿದೆ. ಊರಿನ ಯುವಕರ ನೇತೃತ್ವದ ಕರಸೇವಕ ತಂಡದಲ್ಲಿ ಆಕರ್ಷಕ ಮಂಟಪದ ನಿರ್ಮಾಣಗೊಂಡಿದೆ. ಮಂಟಪ ನಾಲ್ಕು ದ್ವಾರಗಳನ್ನು ಹೊಂದಿದ್ದು ಅರ್ತಿ, ಗೋಲಿ, ಕಿನ್ನಿಗೋಲಿ ಹಾಗೂ ಅಶ್ವತ್ಥ ಎಂಬ ನಾಲ್ಕು ಮರಗಳ ಕೊಂಬೆಗಳಿಂದ ನಿರ್ಮಿಸಲಾಗಿದೆ. 81 ಬಗೆಯ ಕರ್ಪೂರಾದಿ ದ್ರವ್ಯಗಳೊಂದಿಗೆ ದೇವರಿಗೆ 500 ಕಲಶಗಳಲ್ಲಿ ಅಭಿಷೇಕ ನಡೆಯಲಿದೆ.
ಪ್ರತಿದಿನ 4000 ಅಧಿಕ ಮಂದಿಗೆ ಅನ್ನದಾನ:
ಬ್ರಹ್ಮಕಲಶೋತ್ಸವದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಸೇರಿದಂತೆ ಪ್ರತಿದಿನ ಸುಮಾರು ೪೦೦೦ಕ್ಕೂ ಅಧಿಕ ಮಂದಿ ಭಕ್ತರು ಆಗಮಿಸಿ ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ. ಜೊತೆಗೆ ಬೆಳಿಗ್ಗೆ ಹಾಗೂ ಸಂಜೆ ಉಪಹಾರ, ತಂಪು ಪಾನೀಯಗಳನ್ನು ಭಕ್ತರಿಗೆ ಒದಗಿಸಲಾಗುತ್ತಿದೆ. ತುಳಸಿ ಕ್ಯಾಟರರ್‍ಸ್‌ನ ಹರೀಶ್ ಭಟ್ ನೇತೃತ್ವದ ಪಾಕ ತಜ್ಞರ ತಂಡದವರಿಂದ ಶುಚಿ, ರುಚಿಯಾದ ಊಟ, ಉಪಹಾರದ ವ್ಯವಸ್ಥೆ ಏರ್ಪಡಿಸಲಾಗಿದೆ.
ಹರಿದು ಬರುತ್ತಿರುವ ಜನ ಸಾಗರ:
ಬ್ರಹ್ಮಕಲಶೋತ್ಸವದಲ್ಲಿ ಪ್ರತಿದಿನ ತಂಡೋಪ ತಂಡವಾಗಿ ಊರ, ಪರವೂರ ಭಕ್ತಾದಿಗಳ ಸಾಗರವೇ ಹರಿದು ಬರುತ್ತಿದ್ದು ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ.
ಅಚ್ಚುಕಟ್ಟಾದ ವ್ಯವಸ್ಥೆಗಳು:
ಕ್ಷೇತ್ರದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ವಾಹನ ಪಾರ್ಕಿಂಗ್, ಊಟ, ಉಪಾಹಾರ, ಪ್ರಸಾದ ವಿತರಣೆ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳು ವ್ಯವಸ್ಥಿತ ಹಾಗೂ ಶಿಸ್ತು ಬದ್ದವಾಗಿ ನಡೆಯುತ್ತಿದೆ. ಅಲ್ಲದೆ ಕ್ಷೇತ್ರದ ಶುಚಿತ್ವಕ್ಕೆ ಬಹಳಷ್ಟು ಪ್ರಾಮುಖ್ಯತೆ ನೀಡುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇಂದು ಕ್ಷೇತ್ರದಲ್ಲಿ!:
ಕ್ಷೇತ್ರದಲ್ಲಿ ಮಾ.29ರಂದು ಮಹಾಗಣಪತಿಹೋಮ, ತತ್ವಕಲಶಪೂಜೆ, ತತ್ವಕಲಶಾಭಿಷೇಕ, ಮಂಟಪ ನಮಸ್ಕಾರ, ಬ್ರಹ್ಮಕಲಶಪೂಜೆ, ಪರಿಕಲಶಪೂಜೆ, ಸಂಜೆ ದೀಪಾರಾಧನೆ, ಅಧಿವಾಸ ಹೋಮ, ಕಲಶಾಧಿವಾಸ, ಅಧಿವಾಸ ಬಲಿ, ಮಹಾಪೂಜೆ, ಸಂಜೆ ಪುರುಷರಕಟ್ಟೆ ಶ್ರೀದೇವಿ ಭಜನಾ ಮಂಡಳಿ ಹಾಗೂ ಪುರುಷರಕಟ್ಟೆ ದಾಬೋಲಿ ಶ್ರೀಪೂರ್ಣಾನಂದ ಭಜನಾ ಮಂಡಳಿಯವರಿಂದ ಭಜನೆ, ಧಾರ್ಮಿಕ ಸಭೆ, ಪಂಚಮಿ ಸ್ವರಾಂಜಲಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ನಾಳೆ ಬ್ರಹ್ಮಕಲಶ, ಪುಷ್ಪರಥ ಸಮರ್ಪಣೆ, ನಾಡಿದ್ದು ದರ್ಶನ ಬಲಿ
ಮಾ.30ರಂದು ಪೂರ್ವಾಹ್ನ 108 ಕಾಯಿ ಮಹಾಗಣಪತಿಹೋಮ, ಮೀನ ಲಗ್ನ ಶುಭಮುಹೂರ್ತದಲ್ಲಿ ದೇವರಿಗೆ ಅಷ್ಟಬಂಧಕ್ರಿಯೆ ಬ್ರಹ್ಮಕಲಶಾಭಿಷೇಕ, ಪುಷ್ಪ ರಥ ಸಮರ್ಪಣೆ, ಸಂಜೆ ಭಜನೆ, ಧಾರ್ಮಿಕ ಸಭಾ ಕಾರ್ಯಕ್ರಮ, ಸಂಜೆ ಪಿ.ಕೆ ಗಣೇಶ್ ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಮಹಾಪೂಜೆ, ಶ್ರೀದೇವರ ಬಲಿ ಹೊರಟು ಶ್ರೀಭೂತ ಬಲಿ ಉತ್ಸವ, ದೇವರಿಗೆ ಪ್ರಥಮ ಪುಷ್ಪರಥೋತ್ಸವ ವಸಂತಕಟ್ಟೆ ಪೂಜೆ ನಡೆಯಲಿದೆ.
ಮಾ.31ರಂದು ಬೆಳಿಗ್ಗೆ ಶ್ರೀದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆದು ವಾರಹಿ, ರಕ್ತೇಶ್ವರಿ, ಗುಳಿಗ ದೈವಗಳಿಗೆ ನೇಮೋತ್ಸವಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.