ವಿಟ್ಲ: ಕರೋಪಾಡಿ ಗ್ರಾಮದ ಕೆದುಮೂಲೆಯಲ್ಲಿ ಮೋರಿ ಕಾಮಗಾರಿಗೆ ಆಕ್ಷೇಪಿಸಿದ ಕಾರಣಕ್ಕಾಗಿ ತಂಡವೊಂದು ತಂದೆ ಮಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿ, ಮನೆ ಸಮೀಪವಿದ್ದ ಕಟ್ಟಿಗೆಯಿದ್ದ ಕೊಠಡಿಗೆ ಬೆಂಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವ ಆರೋಪಿಯನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಸೇರಾಜೆ ನಿವಾಸಿ ಮಹಮ್ಮದ್ ರ ಪುತ್ರ ರಝಾಕ್(42 ವ.) ಬಂಧಿತ ಆರೋಪಿಯಾಗಿದ್ದಾರೆ. ಮೂಸೆ ಕಲಿಂ ತಲೆಮರೆಸಿಕೊಂಡಿದ್ದಾರೆ. ರಝಾಕ್ ಹಾಗೂ ಮೂಸೆ ಕಲಿಂ ಎಂಬವರು ಸ್ಥಳೀಯ ನಿವಾಸಿ ಮಹಮ್ಮದ್ ಎಂಬವರ ಮನೆ ಮುಂದೆ ಮೋರಿ ಕಾಮಗಾರಿ ನಡೆಸುತ್ತಿದ್ದುದನ್ನು ಮಹಮ್ಮದ್ ರವರು ಆಕ್ಷೇಪಿಸಿದ್ದರು. ಸಿಟ್ಟಿಗೆದ್ದ ರಝಾಕ್ ಮತ್ತು ಮೂಸೆ ಕಲೀಂ ರವರ ಸೇರಿಕೊಂಡು ಮಹಮ್ಮದ್ ಅವರನ್ನು ದೂಡಿ ಹಾಕಿ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ, ಕಿಟಕಿಯನ್ನು ಒಡೆದು, ಅವಾಚ್ಯ ಶಬ್ದಗಳಿಂದ ಬೈದು, ಮನೆಗೆ ಹೊಂದಿಕೊಂಡಿರುವ ಕಟ್ಟಿಗೆ ಸಂಗ್ರಹಿಸುವ ಕೊಠಡಿಗೆ ಬೆಂಕಿ ಹಚ್ಚಿ ಕೊಲ್ಲುವ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ಆರೋಪಿಸಿ ಮಹಮ್ಮದ್ ಅವರ ಪುತ್ರಿ ಝರಾರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಟ್ಟಿಗೆ ಸಂಗ್ರಹಿಸುವ ಕೊಠಡಿ ಸುಟ್ಟು ಹೋಗಿದ್ದಲ್ಲದೆ ಮನೆಯ ಕಿಟಕಿಯ ಗಾಜು ಪುಡಿಯಾಗಿ ಒಟ್ಟು 25,೦೦೦ ರೂ. ನಷ್ಟವಾಗಿದೆ ಎಂದು ಅವರು ನೀಡಿದ ದೂರಿನಲ್ಲಿ ತಿಳಿಸಿದ್ದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಠಾಣಾ ಪೊಲೀಸರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.