ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 6ನೇ ವಾರ್ಷಿಕ ಸಮಾರಂಭ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು:ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ 6ನೇ ವಾರ್ಷಿಕ ಸಮಾರಂಭವು ಏಪ್ರಿಲ್ 19 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಜರಗಲಿದ್ದು, ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮ ಎ.1 ರಂದು ಬೆಳಿಗ್ಗೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಾಗೂ ಸಂಜೆ ಪ್ರಶಾಂತ್ ಮಹಲ್ ನಲ್ಲಿ ಜರಗಿತು.

ಬೆಳಿಗ್ಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯರವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಪುತ್ತೂರಿನ ಜಾತ್ರೋತ್ಸವ ಸಂದರ್ಭದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುತ್ತಿದ್ದು, ಯಕ್ಷಗಾನ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಗಳಿಸಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಅಪೂರ್ವವಾದ, ವಿಶೇಷವಾದ ನಕ್ಷತ್ರದ ರೀತಿಯಲ್ಲಿ ಯಕ್ಷಗಾನವನ್ನು ಹಮ್ಮಿಕೊಳ್ಳುತ್ತಿದೆ. ಸತೀಶ್ ಪಟ್ಲ ಎಂಬುದೊಂದು ಧ್ರುವ ನಕ್ಷತ್ರ. ತನ್ನ ಗಾಯನದ ಶೈಲಿಯಿಂದ, ಮಾಧುರ್ಯದಿಂದ ಎಲ್ಲರನ್ನೂ ಆಕರ್ಷಿಸುವ ಸತೀಶ್ ಪಟ್ಲರವರ ಯಕ್ಷಗಾನವನ್ನು ಸೇವಾ ರೂಪದಲ್ಲಿ ಜಾತ್ರಾ ಗದ್ದೆಯಲ್ಲಿ ನಡೆಸಲಾಗುತ್ತದೆ. ಯಕ್ಷಗಾನ ಕಲಾಪ್ರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಚಿಗೊಳಿಸುವಂತೆ ಹೇಳಿ ಶುಭ ಹಾರೈಸಿದರು. ಆಮಂತ್ರಣ ಬಿಡುಗಡೆ ಕಾರ್ಯಕ್ರಮದ ಮುನ್ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರಿಂದ ಪೂಜಾ ವಿಧಿವಿಧಾನಗಳು ನಡೆದವು

ಪ್ರಶಾಂತ್ ಮಹಲ್ ನಲ್ಲಿ ಬಿಡುಗಡೆ:

ಸಂಜೆ ಪ್ರಶಾಂತ್ ಮಹಲ್ ನಲ್ಲಿ ನಡೆದ ಆಮಂತ್ರಣ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಹಾಗೂ ಟ್ರಸ್ಟ್ ನ ಅಜೀವ ಸದಸ್ಯೆಯಾಗಿರುವ ಶಕುಂತಳಾ ಟಿ.ಶೆಟ್ಟಿಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಪಟ್ಲ ಫೌಂಡೇಶನ್ ಸಂಸ್ಥೆಯು ಯಕ್ಷಗಾನ ಕಲೆಯನ್ನು ಪೋಷಿಸಿಕೊಂಡು ಮುಂದೆ ಸಾಗುತ್ತಿದೆ. ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ನಟರಾಜನು ಯಕ್ಷಗಾನ ಕಲಾವಿದರನ್ನು ಆಶೀರ್ವದಿಸಲಿ ಎಂದು ಹೇಳಿ ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಗೌರವಾಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿ, ಹಿಂದೆ ಯಕ್ಷಗಾನ ಕಲಾವಿದರಿಗೆ ತಮ್ಮ ವೃತ್ತಿಯಲ್ಲಿ ಅಭದ್ರತೆ ಕಾಡುತ್ತಿತ್ತು. ಪ್ರಸ್ತುತ ಯಕ್ಷಗಾನ ಕಲಾವಿದ ಭದ್ರತೆಯೊಂದಿಗೆ ಅವರನ್ನು ಉಳಿಸಿ ಪೋಷಿಸುವಂತಹ ಕೈಂಕರ್ಯಕ್ಕೆ ಪಟ್ಲ ಫೌಂಡೇಶನ್ ಯೋಜನೆ ಹಾಕಿಕೊಂಡಿರುವುದು ಶ್ಲಾಘನೀಯ ಎಂದರು.

ಬೆಳಿಗ್ಗೆ ಹಾಗೂ ಸಂಜೆ ನಡೆದ ಆಮಂತ್ರಣ ಪತ್ರಿಕೆ ಬಿಡುಗಡೆಯ ಪ್ರತ್ಯೇಕ ಕಾರ್ಯಕ್ರಮದಲ್ಲಿ ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್. ಗೌರಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಶೇಖರ್ ನಾರಾವಿ, ಡಾ.ಸುಧಾ ಎಸ್.ರಾವ್, ರಾಮದಾಸ್ ಗೌಡ, ಐತ್ತಪ್ಪ ನಾಯ್ಕ್, ನಗರಸಭಾ ಸದಸ್ಯ ಪಿ.ಜಿ ಜಗನ್ನೀವಾಸ್ ರಾವ್, ಪ್ರಮುಖರಾದ ನ್ಯಾಯವಾದಿ ಎನ್.ಕೆ ಜಗನ್ನೀವಾಸ್ ರಾವ್, ಚಿದಾನಂದ ಬೈಲಾಡಿ, ಪದ್ಮಶ್ರೀ ಸೋಲಾರ್ ಸಿಸ್ಟಮ್ ನ ಸೀತಾರಾಮ ರೈ ಕೆದಂಬಾಡಿಗುತ್ತು, ಉದ್ಯಮಿ ಶಿವರಾಂ ಆಳ್ವ, ಬೊಳುವಾರು ಮ.ಮ ಪರಿವಾರದ ಸಂಚಾಲಕಿ ಶೋಭಾ ಕೊಳತ್ತಾಯ, ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಟ್ರಸ್ಟಿ ಅರಿಯಡ್ಕ ಚಿಕ್ಕಪ್ಪ ನಾಯ್ಕ್, ಕೋಶಾಧಿಕಾರಿ ಎ.ಜೆ ರೈ, ಸಮಿತಿ ಸದಸ್ಯ ಎಂ.ಆರ್ ಜಯಕುಮಾರ್ ರೈ, ಗೌರವ ಸಲಹೆಗಾರರಾದ ಕೆ.ಎಚ್ ದಾಸಪ್ಪ ರೈ, ಚಂದ್ರಹಾಸ ರೈ ತುಂಬೆಕೋಡಿ, ಟ್ರಸ್ಟ್ ಅಜೀವ ಸದಸ್ಯರಾದ ಗಣೇಶ್ ರೈ ಡಿಂಬ್ರಿಗುತ್ತು, ಪ್ರಮುಖರಾದ ಸಂಕಪ್ಪ ರೈ, ಅಡ್ಯಂತಿಮಾರ್ ಬೈಂಕ್ ರೈ, ಲೋವಲ್ ಮೇವಾಡ, ಸಂತೋಷ್ ರೈ ಕುಂಬ್ರ ಸಹಿತ ಹಲವರು ಉಪಸ್ಥಿತರಿದ್ದರು.

ಯಕ್ಷ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಿ…
ಪಟ್ಲ ಫೌಂಡೇಶನ್ ಸಂಸ್ಥೆಯು ಸುಮಾರು 150 ಅಶಕ್ತ ಯಕ್ಷಗಾನ ಕಲಾವಿದರ ಕುಟುಂಬಕ್ಕೆ ಆಹಾರ ಕಿಟ್ ನೀಡುವುದರ ಮೂಲಕ ಅನೇಕ ಜವಾಬ್ದಾರಿಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಅಲ್ಲದೆ ಯಕ್ಷಧ್ರುವ ಸೊಸೈಟಿ ನಿರ್ಮಾಣ ಮಾಡಿ ಅದರ ಮೂಲಕವೂ ನೆರವನ್ನು ನೀಡುತ್ತಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ನ ಬೃಹತ್ ಕಟ್ಟಡದ ನಿರ್ಮಾಣ ಶೀಘ್ರ ಆಗಲಿದೆ. ಎ.19 ರಂದು ಜರಗುವ ಆರನೇ ವಾರ್ಷಿಕ ಸಮಾರಂಭಕ್ಕೆ ಯಕ್ಷಗಾನ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.
-ನೋಣಾಲು ಜೈರಾಜ್ ಭಂಡಾರಿ, ಅಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್, ಪುತ್ತೂರು ಘಟಕ

LEAVE A REPLY

Please enter your comment!
Please enter your name here