`ಸ್ವಪಕ್ಷದ ವಿರುದ್ಧವೇ ಹೋರಾಟವಾದೀತೆನ್ನುವ ಭಾವನೆಯಿಂದ ಮೆಡಿಕಲ್ ಕಾಲೇಜು ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಿಲ್ಲ’: ಎಂ.ಬಿ.ವಿಶ್ವನಾಥ ರೈ

0

ಪುತ್ತೂರು: ಪುತ್ತೂರು ಮೆಡಿಕಲ್ ಕಾಲೇಜು ಹೋರಾಟ ಸಮಿತಿಯನ್ನು ಪಕ್ಷಾತೀತ, ಜಾತ್ಯಾತೀತವಾಗಿ, ಎಲ್ಲಾ ಜನರ ಸಹಕಾರದಿಂದ ರಚಿಸಿಕೊಂಡಿವೆ. ಸಮಿತಿ ರಚನೆಯ ಸಂದರ್ಭದಲ್ಲಿ ಎಲ್ಲಾ ಪಕ್ಷದವರನ್ನು ಕೂಡ ನಾವು ಆಹ್ವಾನಿಸಿದ್ದೆವು. ಆದರೆ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದವರು ಹೋರಾಟ ಎಂದಾಗ ಇದರಲ್ಲಿ ತೊಡಗಿಸಿಕೊಳ್ಳಲು ಹಿಂಜರಿಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಡಿಕಲ್ ಹೋರಾಟ ಸಮಿತಿಯ ಅಧ್ಯಕ್ಷರೂ ಆಗಿರುವ ಎಂ.ಬಿ. ವಿಶ್ವನಾಥ ರೈ ಹೇಳಿದ್ದಾರೆ.


ಎ.1ರಂದು ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪುತ್ತೂರು ಮೆಡಿಕಲ್ ಕಾಲೇಜು ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿ ಮಾಜಿ ಎಂಎಲ್‌ಸಿ ಅಣ್ಣಾ ವಿನಯಚಂದ್ರರಿದ್ದಾರೆ. ಎಲ್ಲ ಸಂಘಸಂಸ್ಥೆಗಳ ಪ್ರಮುಖರನ್ನು ಸೇರಿಸಿಕೊಂಡು ಈ ಸಮಿತಿಯನ್ನು ರಚನೆ ಮಾಡಿದ್ದೇವೆ. ಇದರಲ್ಲಿ ಯಾವುದೇ ಪಕ್ಷ ಬರಬೇಕೆನ್ನುವ ಉದ್ದೇಶ ಖಂಡಿತಾ ಇಲ್ಲ. ನಾನು ಒಂದು ಪಕ್ಷದ ಬ್ಲಾಕ್ ಅಧ್ಯಕ್ಷನಾಗಿದ್ದರೂ ಸಾಮಾಜಿಕ ಮಿಡಿತ ಇದ್ದ ಹಿನ್ನೆಲೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಸ್ಥಾನವನ್ನು ಖುಷಿಯಿಂದ ಒಪ್ಪಿಕೊಂಡಿದ್ದೇನೆ.

ಎಲ್ಲ ಸಂಘಸಂಸ್ಥೆಗಳು, ವಿದ್ಯಾಸಂಸ್ಥೆಗಳನ್ನು ನಾವು ಭೇಟಿಯಾದಾಗ ನಮಗೆ ಅಭೂತಪೂರ್ವವಾದ ಬೆಂಬಲ ದೊರಕಿದೆ. ಅಭಿಯಾನ ಕೂಡ ಆರಂಭ ಮಾಡಿದ್ದೇವೆ ಎಂದು ಹೇಳಿದರು.
ಶಕುಂತಳಾ ಶೆಟ್ಟಿಯವರು ಶಾಸಕರಾಗಿದ್ದಾಗ ೪೦ ಎಕರೆ ಜಾಗವನ್ನು ಮೆಡಿಕಲ್ ಕಾಲೇಜಿಗಾಗಿ ಮೀಸಲಿರಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಹಾಲಿ ಶಾಸಕರು ಆ ಜಾಗದಲ್ಲಿ ಸೀಫುಡ್ ಪಾರ್ಕ್ ಮಾಡುವ ಉದ್ದೇಶಕ್ಕೆ ಕೈಹಾಕಿದರು. ಇದರ ಅರ್ಥ ಏನೆಂದರೆ ಅಲ್ಲಿ ಮೆಡಿಕಲ್ ಕಾಲೇಜು ಮಾಡುವುದು ಬೇಡ, ಬೇರೇನಾದರೂ ಮಾಡಬೇಕು ಎನ್ನುವುದು ಇತ್ತು ಎಂದು ಕಾಣುತ್ತದೆ. ಆದರೆ ನಮ್ಮ ಪ್ರಬಲ ಹೋರಾಟದಿಂದ ಸೀಫುಡ್ ಪಾರ್ಕ್ ಅಲ್ಲಿಂದ ತೆರವಾಗಿದೆ. ಮುಂದಕ್ಕೂ ನಮ್ಮ ಹೋರಾಟವನ್ನು ನಾವು ಮುಂದುವರೆಸುತ್ತೇವೆ. ಈ ಹೋರಾಟ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊರತು ಬೇರೇನಕ್ಕೂ ಅಲ್ಲ. ಅಧಿಕಾರಕ್ಕೆ ಯಾವ ಪಕ್ಷ ಬಂದರೂ ನಮ್ಮ ಹಕ್ಕೊತ್ತಾಯ ಖಂಡಿತಾ ಇದೆ. ನಮ್ಮ ಪ್ರಣಾಳಿಕೆಯಲ್ಲಿ ಕೂಡ ಈ ವಿಚಾರವನ್ನು ಉಲ್ಲೇಖಿಸಲಿದ್ದೇವೆ ಎಂದು ಎಂ.ಬಿ.. ವಿಶ್ವನಾಥ ರೈ ಹೇಳಿದರು.


ಮೆಡಿಕಲ್ ಕಾಲೇಜಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಹಿಂದೆ ಕಾಂಗ್ರೆಸ್‌ನ ಟೂಲ್‌ಕಿಟ್ ಇದೆ ಎಂದು ಬಿಜೆಪಿ ಮಾಡಿರುವ ಆರೋಪದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಎಂ.ಬಿ.ವಿಶ್ವನಾಥ ರೈಯವರು, ಇಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಿದ್ದಾರೆ ಎನ್ನುವ ಕಾರಣಕ್ಕೆ ಟೂಲ್‌ಕಿಟ್ ಆಗುತ್ತದೆಯೇ? ಇಲ್ಲಿ ಎಲ್ಲಾ ಪಕ್ಷದವರೂ ಇದ್ದಾರೆ. ಬಿಜೆಪಿಯವರನ್ನು ಕರೆದಿದ್ದರೂ ಅವರು ಇನ್‌ವಾಲ್ವ್ ಆಗಿಲ್ಲ. ಮೆಡಿಕಲ್ ಕಾಲೇಜು ಹೋರಾಟ ಎಂದರೆ ಅದು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತದಲ್ಲಿರುವ ಅವರದೇ ಪಕ್ಷದ ವಿರುದ್ಧದ ಹೋರಾಟ ಆಗುತ್ತದೆ ಎನ್ನುವ ಭಾವನೆ ಅವರಿಗೆ ಬಂದಿದೆ ಆದರೆ ಇದು ನಿಜವಾಗಿ ಅದಲ್ಲ. ನಾಡಿದ್ದು ನಮ್ಮ ಸರಕಾರ ಆಡಳಿತಕ್ಕೆ ಬಂದರೂ ಈ ಹೋರಾಟ ಸಮಿತಿ ಇz ಇರುತ್ತದೆ. ಇದರಲ್ಲಿ ರಾಜಕೀಯವೇ ಇಲ್ಲ. ನಮ್ಮ ಬೇಡಿಕೆ ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕು ಎನ್ನುವುದು ಅಷ್ಟೇ ಎಂದು ಎಂ.ಬಿ. ಹೇಳಿದರು.

ಮೆಡಿಕಲ್ ಕಾಲೇಜು ಹೋರಾಟ ಕನಸಿಗೂ-ಬಿಜೆಪಿಗೂ ಸಂಬಂಧವಿಲ್ಲ:

ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಅವರು ಮಾತನಾಡಿ, ಮೆಡಿಕಲ್ ಕಾಲೇಜಿನ ಕನಸು ಕಂಡವರೇ ನಾವು ಎಂದು ಬಿಜೆಪಿಯವರು ಹೇಳಿಕೆ ನೀಡಿದ್ದಾರೆ. ಅವರು ಕನಸು ಕಂಡಿದ್ದು ಹೌದು ಎಂದಾದರೆ, ಶಾಸಕ ಸಂಜೀವ ಮಠಂದೂರು ಅವರು ಸೀಫುಡ್ ಪಾರ್ಕ್ ಬರುವ ಸಂದರ್ಭದಲ್ಲಿ ಸೀಫುಡ್ ಪಾರ್ಕ್ ಪರವಾಗಿ ಸಮರ್ಥನೆಯಲ್ಲಿಪುತ್ತೂರಿಗೆ ಮೆಡಿಕಲ್ ಕಾಲೇಜು ಬರುವ ಕ್ರೈಟೀರಿಯಾ ಇಲ್ಲ’ ಎಂದು ಹೇಳುತ್ತಾರೆ. ಹಾಗಿದ್ದಾಗ ಅವರು ಕನಸು ಕಂಡಿದ್ದು ಹೇಗೆ? ಅವರು ಯಾಕೆ ಹಾಗೆ ಹೇಳಿದರು ಎಂದರೆ, ಹೋರಾಟ ಸಮಿತಿ ರಚನೆಯಾದ ಬಳಿಕ ಇಡೀ ಕ್ಷೇತ್ರದ ಪ್ರತೀ ಭಾಗಕ್ಕೂ ಈ ವಿಚಾರ ಹಬ್ಬಿದೆ, ಜನರನ್ನು ಮುಟ್ಟಿದೆ. ಜನರ ಬೆಂಬಲ ಕೂಡ ಪರಿಣಾಮಕಾರಿಯಾಗಿ ಸಿಕ್ಕಿದೆ. ಈಗ ಇದರ ಪರವಾಗಿ ಮಾತನಾಡದೆ ಉಪಾಯವಿಲ್ಲ ಎನ್ನುವ ಸ್ಥಿತಿಗೆ ಬಂದಿದ್ದಾರೆ. ಒಂದು ಉದ್ದೇಶಕ್ಕೋಸ್ಕರ ಒಂದು ಜಾಗವನ್ನು ಕಾದಿರಿಸಿದ ಮೇಲೆ ಇನ್ನೊಂದು ವಿಚಾರಕ್ಕೆ ಬೇರೆ ಜಾಗ ಹುಡುಕಬೇಕಿತ್ತು. ಮೆಡಿಕಲ್ ಕಾಲೇಜಿನ ಹೋರಾಟ, ಕನಸಿಗೂ, ಪುತ್ತೂರು ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ. ಇದು ಪುತ್ತೂರಿನ ಜನರ ಬೇಡಿಕೆ. ಇದಕ್ಕೆ ಅವರು ಸಹಕಾರ ನೀಡಬೇಕಾಗುತ್ತದೆ. ಪುತ್ತೂರು ಕಾಂಗ್ರೆಸ್‌ನ ನಂಬರ್ ೧ ಆದ್ಯತೆಯೇ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಆರಂಭ ಮಾಡುವುದು. ಬಿಜೆಪಿಯವರು ಕೂಡ ಇದಕ್ಕೆ ಬೆಂಬಲ ನೀಡಲಿ ಎಂದು ಹೇಳಿದರು.


ಬಿಜೆಪಿಯವರೂ ಹೋರಾಟದಲ್ಲಿ ಸೇರಿಕೊಳ್ಳಲಿ:
ಯಾವಾಗ ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ರಚನೆಯಾಯ್ತೋ, ಆವತ್ತಿನಿಂದ ೧೨ನೇ ದಿನಕ್ಕೆ ಶಾಸಕರನ್ನು ಅಣ್ಣಾ ವಿನಯಚಂದ್ರ ಅವರು ಭೇಟಿಯಾಗುತ್ತಾರೆ. ಸಮಿತಿಗೆ ಬೆಂಬಲ ಯಾಚಿಸುತ್ತಾರೆ. ಆಮೇಲೆ ಪುತ್ತೂರಿನಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿಯ ಮೀಟಿಂಗ್‌ಗೆ ಅಣ್ಣಾ ವಿನಯಚಂದ್ರ ಅವರನ್ನು ಸಂಜೀವ ಮಠಂದೂರು ಅವರು ಕರೆದೊಯ್ದಿದ್ದರು. ಹೀಗಿದ್ದಾಗ ಬಿಜೆಪಿಯವರನ್ನು ಸಮಿತಿಗೆ ಆಹ್ವಾನಿಸಿಲ್ಲ ಎನ್ನುವುದು ಸುಳ್ಳಲ್ಲವೇ? ಅವರು ಹೋರಾಟದಲ್ಲಿ ಇದ್ದೇವೆ ಎನ್ನುವುದನ್ನು ತೋರಿಸಿಕೊಳ್ಳುವುದು ಬೇಡ, ನಿಜವಾಗಿಯೂ ಬರಲಿ. ಅವರ ೨೦೧೮ರ ಪ್ರಣಾಳಿಕೆಯಲ್ಲಿ ಈ ವಿಚಾರ ಇತ್ತು ಎನ್ನುತ್ತಿದ್ದಾರೆ. ಈ ಬಾರಿಯೂ ಇರಲಿದೆ, ಮುಂದಕ್ಕೂ ಇರಲಿದೆ. ಪ್ರಣಾಳಿಕೆಯಲ್ಲಿ ಇದ್ದ ಕೂಡಲೇ ಮೆಡಿಕಲ್ ಕಾಲೇಜು ಆಗುತ್ತದೆಯೇ? ಅದನ್ನು ತರುವ ಸಂಕಲ್ಪವನ್ನು ಅವರು ಮಾಡಬೇಕು ಎಂದು ಅಮಳ ರಾಮಚಂದ್ರ ಆಗ್ರಹಿಸಿದರು.

ಟೂಲ್‌ಕಿಟ್ ಎನ್ನುವವರೂ ಟೂಲ್‌ಕಿಟ್ ಮಾಡಲಿ:
ಸರಕಾರಿ ಮೆಡಿಕಲ್ ಕಾಲೇಜು ಹೋರಾಟ ಸಮಿತಿಗೆ ಕೆಲವರು ಯಾಕೆ ಬರಲಿಲ್ಲ ಎಂದರೆ ಹಿಂದೊಮ್ಮೆ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ರಚನೆಯಾದಾಗ ಡಾ.ರಾಘವೇಂದ್ರ ಪ್ರಸಾದ್‌ರವರು ಭಾಗವಹಿಸಿದ್ದರು. ಅವರು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿದ್ದರು. ಅವರಿಗೆ ಬೆಸ್ಟ್ ಜೆನರಿಕ್ ಮೆಡಿಸಿನ್ ಪ್ರಮೋಟರ್ ಎನ್ನುವ ಪ್ರಶಸ್ತಿಯೂ ಬಂದಿತ್ತು. ಅವರು ಮೆಡಿಕಲ್ ಕಾಲೇಜು ಹೋರಾಟ ಸಮಿತಿಯಲ್ಲಿ ಭಾಗವಹಿಸಿದ್ದರು ಎನ್ನುವ ಕಾರಣಕ್ಕೆ ಆರೋಗ್ಯ ರಕ್ಷಾ ಸಮಿತಿಯಿಂದ ಕಿತ್ತು ಹಾಕುತ್ತಾರೆ. ಅವರಿಗೆ ಆದ ಅನುಭವ ಉಳಿದ ಬಿಜೆಪಿಗರಿಗೂ ಕಾಣುತ್ತದೆಯಲ್ವಾ? ಅದರ ಪರವಾಗಿ ಮಾತನಾಡಿದ್ರೆ ನಮ್ಮನ್ನೂ ಕಿತ್ತು ಬಿಸಾಡಿದ್ರೆ ಎನ್ನುವ ಭಯದಿಂದ ಹಿಂದೆ ಉಳಿದಿದ್ದಾರೆ. ಟೂಲ್‌ಕಿಟ್' ಎಂದು ಈಗ ಆರೋಪ ಮಾಡುವ ಬದಲು ಸಮಿತಿ ರಚನೆಯಾದಾಗಲೇ ಸುದ್ದಿಗೋಷ್ಠಿ ನಡೆಸಬೇಕಿತ್ತು.ಟೂಲ್‌ಕಿಟ್’ ಎನ್ನುವವರು ಅವರು ಕೂಡ ಟೂಲ್‌ಕಿಟ್ ಮಾಡಲಿ. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆಗಬೇಕೆನ್ನುವುದು ನಮ್ಮ ಮೊದಲ ಆದ್ಯತೆ. ಸಿದ್ದರಾಮಯ್ಯರ ಅವಧಿಯಲ್ಲಿ ಕರ್ನಾಟಕದಲ್ಲಿ ಕೊಡಗು, ಕೊಪ್ಪಳ, ಕಲಬುರಗಿ, ಚಾಮರಾಜನಗರ, ಗದಗ, ಉತ್ತರಕನ್ನಡ ಸೇರಿ ೬ ಮೆಡಿಕಲ್ ಕಾಲೇಜು ಆಗಿದೆ. ಹೀಗಾಗಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದು ಕಾಂಗ್ರೆಸ್‌ಗೆ ದೊಡ್ಡ ವಿಷಯವೇ ಅಲ್ಲ ಎಂದು ಅಮಳ ರಾಮಚಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಎಸ್ಟಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here