ಮಾಲ್, ಸಭಾಭವನ, ಚಿತ್ರಮಂದಿರ ಮಾಲಕರ ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಸೂಚನೆ-`ನೀತಿ ಸಂಹಿತೆ ಉಲ್ಲಂಘನೆಗೆ ಆಸ್ಪದವಾಗದಂತೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ’

0

ಮಂಗಳೂರು:ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜಿಲ್ಲೆಯ ಮಾಲ್‌ಗಳು, ಮದುವೆ ಮಂಟಪಗಳು, ಸಭಾಭವನಗಳು, ಚಲನಚಿತ್ರ ಮಂದಿರಗಳ ಮಾಲಕರು ಜಿಲ್ಲಾಡಳಿತದೊಂದಿಗೆ ಕೈಜೋಡಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಸೂಚನೆ ನೀಡಿದರು.


ಚುನಾವಣೆಗೆ ಸಂಬಂಧಿಸಿದಂತೆ ಮಾಲ್‌ಗಳು, ಸಭಾಭವನಗಳು, ಮದುವೆ ಮಂಟಪಗಳು, ಚಲನಚಿತ್ರ ಮಂದಿರಗಳ ಮಾಲಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾಲ್‌ಗಳು, ಮದುವೆ ಮಂಟಪಗಳು, ಸಭಾಭವನಗಳು, ಚಲನಚಿತ್ರ ಮಂದಿರಗಳ ಮಾಲಕರನ್ನು ಬಳಸಿಕೊಂಡು ರಾಜಕೀಯ ಪಕ್ಷಗಳ ಮುಖಂಡರು, ಅಭ್ಯರ್ಥಿಗಳು ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಲು ಅವಕಾಶ ನೀಡಬಾರದು.ಒಂದು ವೇಳೆ ಉಲ್ಲಂಘನೆ ಮಾಡಿದ್ದು ಕಂಡು ಬಂದಲ್ಲಿ ಆಯಾ ಪ್ರದೇಶದ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಬೇಕು.ಮದುವೆ ಮಂಟಪಗಳು, ಸಭಾಭವನಗಳು ಮಾಲ್‌ಗಳಲ್ಲಿ ರಾಜಕೀಯ ಪಕ್ಷಗಳು ಕಾರ್ಯಕ್ರಮ ನಡೆಸಬೇಕಿದ್ದರೆ ಸಂಬಂಧಿಸಿದ ಚುನಾವಣಾ ಅಧಿಕಾರಿಗಳ ಮೂಲಕ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಗೆ ಏಕಗವಾಕ್ಷಿ ಪದ್ಧತಿ ಮೂಲಕ ಅನುಮತಿ ಪಡೆಯಬೇಕು.ಕೆಲವೊಮ್ಮೆ ಅರಿವಿಲ್ಲದೆ ಆದಲ್ಲಿ ಅಥವಾ ಅಧಿಕೃತ ಕಾರ್ಯಕ್ರಮ ಹಮ್ಮಿಕೊಂಡು ಅಲ್ಲಿ ಮತದಾರರಿಗೆ ಆಮಿಷವೊಡ್ಡಿದಲ್ಲಿ ಅಥವಾ ಅಲ್ಲಿ ಅಕ್ರಮ ಹಣ, ಮದ್ಯ, ಕುಕ್ಕರ್, ಸೀರೆ, ಡ್ರಗ್ಸ್ ಇತ್ಯಾದಿ ಉಡುಗೊರೆಗಳನ್ನು ಶೇಖರಣೆ ಮಾಡಲು ಅವಕಾಶ ನೀಡಿದಲ್ಲಿ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.


ಧರ್ಮ, ಜಾತಿಯ ಅವಹೇಳನ ಮಾಡುವಂತಿಲ್ಲ:
ಸಮಾರಂಭದ ಚಟುವಟಿಕೆಗಳನ್ನು ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ವೀವಿಂಗ್ ತಂಡದವರು ಚಿತ್ರೀಕರಿಸಿಕೊಳ್ಳುವರು, ನೀತಿ ಸಂಹಿತೆ ಉಲ್ಲಂಘನೆಯಾದರೆ ಪ್ರಕರಣ ದಾಖಲಿಸಲಾಗುವುದು ಎಂದ ಅವರು, ಯಾವುದೇ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದ ಸಂದರ್ಭ ಅದನ್ನು ರಾಜಕೀಯ ಪಕ್ಷಗಳು ವೇದಿಕೆ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.ಯಾವುದೇ ಧರ್ಮ, ಜಾತಿಯ ಬಗ್ಗೆ ಅವಹೇಳನ ಮಾಡುವಂತಿಲ್ಲ. ಬ್ಯಾನರ್, ಬಂಟಿಂಗ್ಸ್, ಕಟೌಟ್‌ಗಳನ್ನು ಹಾಕಲು ಅವಕಾಶವಿರುವುದಿಲ್ಲ.ಈ ಹಿಂದೆಯೇ ಪೂರ್ವ ನಿಗದಿಯಾಗಿದ್ದ ಮದುವೆಗೆ ಯಾವುದೇ ರೀತಿಯ ನಿರ್ಬಂಧವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.


ಬೆಳಿಗ್ಗೆ 6ರಿಂದ ರಾತ್ರಿ 10ರವರೆಗೆ ಧ್ವನಿವರ್ಧಕ ಬಳಕೆಗೆ ಅವಕಾಶ-ಡಾ.ಕುಮಾರ್: ದ.ಕ.ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿಯೂ ಆಗಿರುವ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್ ಮಾತನಾಡಿ ಚುನಾವಣಾ ಆಯೋಗ ಹೊರಡಿಸಿರುವ ನೀತಿ ಸಂಹಿತೆಯನ್ನು ಪ್ರತಿಯೊಬ್ಬರು ಕಟ್ಟುನಿಟ್ಟಾಗಿ ಪಾಲಿಸಬೇಕು, ಮತದಾನಕ್ಕೆ 48 ಗಂಟೆಗಳು ಇರುವಾಗ ಯಾವುದೇ ಮದುವೆ ಮಂಟಪಗಳು, ಸಭಾಭವನದಲ್ಲಿ ಹೊರ ಜಿಲ್ಲೆಯವರು ಇರುವಂತಿಲ್ಲ,ಧಾರ್ಮಿಕ ಸ್ಥಳವನ್ನು ಪ್ರಚಾರಕ್ಕೆ ಬಳಸುವಂತಿಲ್ಲ, ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಸಲು ಅವಕಾಶವಿದೆ.ಜಾಹೀರಾತು ಪ್ರಕಟಿಸಲು ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ದೃಢೀಕರಣ ಸಮಿತಿಯಿಂದ ಅನುಮತಿ ಪಡೆದು ಪ್ರಕಟಿಸಬೇಕು ಎಂದು ಹೇಳಿದರು.


ನಿಯಮ ಮೀರಿ ವರ್ತಿಸಿದರೆ ಅಗತ್ಯ ಕ್ರಮ-ಪೊಲೀಸ್ ಕಮಿಷನರ್: ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಮಾತನಾಡಿ ಮಾದರಿ ನೀತಿ ಸಂಹಿತೆ ಜಾರಿಗೊಂಡ ಬಳಿಕ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಬೇಕು.ನಿಯಮಗಳನ್ನು ಮೀರಿ ವರ್ತಿಸಿದ್ದಲ್ಲಿ ಅಗತ್ಯ ಕ್ರಮ ಜರುಗಿಸಲಾಗುವುದು ಎಂದರು.ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ., ಜಿಲ್ಲೆಯ ವಿವಿಧ ಮಾಲ್‌ಗಳ, ಮದುವೆ ಮಂಟಪಗಳ, ಚಲನಚಿತ್ರ ಮಂದಿರಗಳ, ಸಭಾಭವನಗಳ ಮಾಲಕರು ಸಭೆಯಲ್ಲಿದ್ದರು.

LEAVE A REPLY

Please enter your comment!
Please enter your name here