ಪುತ್ತೂರು: ಮುಸಲ್ಮಾನ ಬಾಂಧವರು ಪವಿತ್ರ ರಂಝಾನ್ ನಲ್ಲಿ ಆಚರಿಸಿಕೊಂಡು ಬರುವ ಉಪವಾಸವು ದೇವಭಕ್ತಿ ಹಾಗೂ ಬದುಕಲು ಶಕ್ತಿಯನ್ನು ಹೆಚ್ಚಿಸಲು ಮತ್ತು ಸಹಜೀವಿಗಳೊಡನೆ ಅನುಕಂಪ ತೋರಲು ಸಹಕಾರಿಯಾಗುತ್ತದೆ ಎಂದು ಧರ್ಮಗುರುಗಳಾದ ಸಿರಾಜುದ್ದೀನ್ ಫೈಝಿಯವರು ಹೇಳಿದರು.
ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಆಶ್ರಯದಲ್ಲಿ ಬಪ್ಪಳಿಗೆ-ಬೈಪಾಸ್ ನಲ್ಲಿನ ಅಶ್ಮಿ ಕಂಫರ್ಟ್ ಸಭಾಂಗಣದಲ್ಲಿ ನಡೆದ ಇಫ್ತಾರ್ ಸಂಗಮದಲ್ಲಿ ಅವರು ಮುಖ್ಯ ಪ್ರವಚನಕಾರರಾಗಿ ಮಾತನಾಡಿದರು. ಉಪವಾಸ ವೆಂದರೆ ಕೇವಲ ಅನ್ನಾಹಾರಗಳನ್ನು ತ್ಯಜಿಸುವುದು ಮಾತ್ರವಲ್ಲದೆ ಶರೀರರದ ಅಂಗಾಂಗಗಳನ್ನು ಸರ್ವ ಕೆಡುಕಿನಿಂದ ಕಾಪಾಡಿ ಒಳಿತಿನೆಡೆಗೆ ಸಾಗುವ ದಾರಿಯಲ್ಲಿ ಮುನ್ನಡೆಯಲು ತರಬೇತಿಯನ್ನು ಪಡೆಯುವುದಾಗಿದ್ದು, ಹಸಿವು ವ್ಯಕ್ತಿಯನ್ನು ದುರ್ಬಲ ಗೊಳಿಸುವುದೆಂಬ ಸಾಮಾನ್ಯ ನಿಯಮ ಮೀರಿ ಉಪವಾಸದ ಹಸಿವು ಮನುಷ್ಯನನ್ನು ಹೆಚ್ಚು ಪ್ರಬಲಗೊಳಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷರಾದ ಮುಹಮ್ಮದ್ ರಫೀಕ್ ದರ್ಬೆ ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯದರ್ಶಿ ಚಂದ್ರಹಾಸ ರೈ ಬಿ ವಂದಿಸಿದರು. ಕೋಶಾಧಿಕಾರಿ ಡಾ| ರಾಮಚಂದ್ರರವರು ಅತಿಥಿಗಳ ಪರಿಚಯ ಮಾಡಿದರು.
ಹಫ಼ೀಝ್ ರಹಿಮಾನ್ ಪ್ರಾರ್ಥಿಸಿ, ಕ್ಲಬ್ ಸದಸ್ಯ ಅಶ್ರಫ಼್ ಮುಕ್ವೆ, ನ್ಯಾಯವಾದಿ ಶಾಹಿರಾ ಝಬೈರ್, ನವಾಜ಼್ ಕುಂಜೂರು ಕಾರ್ಯಕ್ರಮದ ವ್ಯವಸ್ಥೆಯನ್ನು ಮಾಡಿದ್ದರು. ವಲಯಸೇನಾನಿ ಹರ್ಷಕುಮಾರ್ ರೈ ಮಾಡಾವು, ರೋಟರಿ ಕ್ಲಬ್ ಸೆಂಟ್ರಲ್ ನ ಎಲ್ಲಾ ಪಧಾದಿಕಾರಿಗಳು ಬಾಗವಹಿಸಿದರು.