ಪುತ್ತೂರು: ಸಂಸ್ಕಾರ, ಸಂಘಟನೆ, ಸೇವೆ ಧ್ಯೇಯವಾಕ್ಯದಡಿ ರಾಜ್ಯಾದ್ಯಂತ ಕಾರ್ಯಾಚರಿಸುತ್ತಿರುವ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ ಏಪ್ರಿಲ್ 20ರಿಂದ 23ರವರೆಗೆ ಯೋಗ ಜೀವನ ದರ್ಶನ 2023 ಜಿಲ್ಲಾ ಮಟ್ಟದ ಪ್ರಾಥಮಿಕ ಯೋಗ ಪ್ರಶಿಕ್ಷಣ ಶಿಬಿರ ಪುತ್ತೂರು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆ ಹಾಗೂ ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಯೋಗ ಪ್ರಶಿಕ್ಷಣ ವಿಭಾಗಗಳು ಕನ್ನಡ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಾಮಾನ್ಯ ಪ್ರಾಥಮಿಕ ಪ್ರಶಿಕ್ಷಣ ಶಿಬಿರ, ಹಿರಿಯರ ಪ್ರಾಥಮಿಕ ಪ್ರಶಿಕ್ಷಣ ಶಿಬಿರ, ಮಕ್ಕಳ ಪ್ರಾಥಮಿಕ ಪ್ರಶಿಕ್ಷಣ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಏ. 20ರಂದು ಯೋಗ ಶಿಬಿರ ಉದ್ಘಾಟನೆ, ಭಜನೆ, ಸತ್ಸಂಗ, ಏ. 21ರಂದು ಮಾತೃ ವಂದನಾ – ಮಾತೃ ಭೋಜನ, ಏ. 22ರಂದು ಆರೋಗ್ಯದ ಕಡೆಗೆ ಯೋಗ ನಡಿಗೆ ಹಾಗೂ ಏ. 23ರಂದು ಸಮಾರೋಪ ಸಮಾರಂಭ ನಡೆಯಲಿದೆ.
ಯೋಗಾಸನಾಭ್ಯಾಸ ಮಾಡುತ್ತಾ ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಸ್ಥಿರತೆಯನ್ನು ಬೆಳೆಸಿಕೊಂಡು, ಸೇವಾ ಮನೋಭಾವದಿಂದ ಆಧ್ಯಾತ್ಮಿಕ ಸಾಧಕರಾಗಿ, ಯೋಗದ ಪ್ರಚಾರವನ್ನು ಮಾಡುವ ಧ್ಯೇಯವನ್ನು ಬೆಳೆಸಿಕೊಳ್ಳುವ ಇಚ್ಛೆಯುಳ್ಳವರಿಗಾಗಿ ಯೋಗ ಶಿಕ್ಷಕರಾಗಲು ಪ್ರಶಿಕ್ಷಣ ಶಿಬಿರ ಆಯೋಜಿಸಲಾಗಿದೆ. ಶಿಬಿರಕ್ಕೆ ಆಗಮಿಸುವ ಶಿಕ್ಷಣಾರ್ಥಿಗಳು, ಶಿಕ್ಷಕರು, ಪ್ರಬಂಧಕರು, ಹಿತೈಷಿಗಳು ಹಾಗೂ ಬಂಧುಮಿತ್ರರಿಗೆ ಆಹ್ವಾನವಿದೆ ಎಂದು ಎಸ್.ಪಿ.ವೈ.ಎಸ್.ಎಸ್. ಪ್ರಕಟಣೆ ತಿಳಿಸಿದೆ.