ವಿಟ್ಲ: ಜಠಾಧಾರಿಯ ಸಾನಿಧ್ಯ ಜೀರ್ಣೋದ್ಧಾರದ ಬಳಿಕ ನಡೆದ ಪ್ರಶ್ನಾ ಚಿಂತನೆಯ ಸಂದರ್ಭದಲ್ಲಿ ದುರ್ಗೆಗೆ ನಡೆಯುತ್ತಿದ್ದ ತ್ರಿಕಾಲ ಪೂಜೆ ನಿಂತಿದ್ದು, ಅರಮನೆಗೂ, ಅರಮನೆಯ ಭೂಮಿ ಅನುಭವಿಸುವ ಜನಕ್ಕೂ ಮತ್ತು ಆಡಳಿತಕ್ಕೊಳಪಟ್ಟ ಸಮಾಜಕ್ಕೂ ಕಷ್ಟ ನಷ್ಟಗಳು ಕಂಡು ಬಂದಿದೆ. ಇದರ ಪರಿಹಾರಾರ್ಥವಾಗಿ ತ್ರಿಕಾಲ ಪೂಜೆಯನ್ನು ನಡೆಸಿ ಶ್ರೀ ದೇವಿಯನ್ನು ಸಂತೃಪ್ತಿ ಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ವಿಟ್ಲ ಅರಮನೆಯಲ್ಲಿ ಎ.11ರಂದು ತ್ರಿಕಾಲ ಪೂಜೆ ನಡೆಯಲಿದ್ದು, 10ರಿಂದ 12ಸಾವಿರ ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ಈಡಲಾಗಿದೆ ಎಂದು ತ್ರಿಕಾಲ ಪೂಜಾ ಸಮಿತಿ ಸಂಚಾಲಕ ಬಾಬು ಕೆ.ವಿ. ಹೇಳಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು, ತ್ರಿಕಾಲ ಪೂಜೆಯು ಗೇಣಿ ಮೊತ್ತದಲ್ಲಿ ಹಿಂದೆ ನಡೆದು ಕೊಂಡು ಇದ್ದಿರಬಹುದೆಂದು ಹೇಳಲಾಗುತ್ತಿದ್ದು, ಅರಮನೆಯ ನೇರ ಭೂಮಿದಾರರ ಸಹಕಾರದಲ್ಲಿ ಈಗ ಕಾರ್ಯಕ್ರಮ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಎ.10ರಂದು ಶ್ರೀ ಜಠಾಧಾರಿ ದೇವಸ್ಥಾನದಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮೂಲಕ ವಿಟ್ಲ ಅರಮನೆಗೆ ಹೊರೆಕಾಣಿಯನ್ನು ತೆಗೆದಿಕೊಂಡು ಹೋಗುವ ಕಾರ್ಯವನ್ನು ಹಾಕಿಕೊಳ್ಳಲಾಗಿದೆ. ಎ.11ರಂದು ಬೆಳಗ್ಗೆ 6ಕ್ಕೆ ದೀಪಾರಾಧನೆಯ ಮೂಲಕ ತ್ರಿಕಾಲ ಪೂಜೆ ಆರಂಭವಾಗಲಿದ್ದು, ಗಣಪತಿ ಹವನ, ಬೆಳಗ್ಗೆ 8ಕ್ಕೆ, ಮಧ್ಯಾಹ್ನ 12ಕ್ಕೆ, ರಾತ್ರಿ 7.30ಕ್ಕೆ ಮಹಾಮಂಗಳಾರತಿ ತಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಾದ್ಯಗೋಷ್ಠಿ ಹಾಗೂ ಭಜನೆ ನಡೆಯಲಿದ್ದು, ಸಾಯಂಕಾಲ 6ಕ್ಕೆ ವಿಟ್ಲ ಸೀಮೆಯ ಚರಿತ್ರೆಯ ವಿಶೇಷ ಅಧ್ಯಯನ ನಡೆಸಿದ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಉಪನ್ಯಾಸ ನೀಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತ್ರಿಕಾಲ ಪೂಜಾ ಸಮಿತಿ ಸದಸ್ಯರಾದ ಕೃಷ್ಣಯ್ಯ ಕೆ., ಕೇಶವ ವಿ.ಕೆ., ರಾಮದಾಸ ಶೆಣೈ, ಶೈಲೇಶ್ ಹೇರಳ, ಮನೋಜ್ ಕಾಶಿಮಠ, ಹರೀಶ್ ಪೂಜಾರಿ ಕಾಶಿಮಠ ಉಪಸ್ಥಿತರಿದ್ದರು.