ಇಂದಿನಿಂದ ನೇಮೋತ್ಸವ; ನಾಳೆ ಉಳ್ಳಾಲ್ತಿ ಅಮ್ಮನವರ ನೇಮ
ಕಡಬ: ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಅಂಗವಾಗಿ ಬುಧವಾರ ಬೆಳಗ್ಗೆ ಧ್ವಜಾರೋಹಣ ನೆರವೇರಿಸಲಾಯಿತು.
ಧ್ವಜಾರೋಹಣ, ಉಗ್ರಾಣ ಮುಹೂರ್ತ ಬಳಿಕ ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ್ ತಂತ್ರಿಯವರಿಗೆ ಮತ್ತು ಕ್ಷೇತ್ರದ ದೈವಜ್ಞರಾದ ಬಾಲಕೃಷ್ಣ ನಾಯರ್ ಹಾಗೂ ಕ್ಷೇತ್ರದ ಶಿಲ್ಪಿಗಳಾದ ರಮೇಶ್ ಕಾರಂತ ಬೆದ್ರಡ್ಕರವರಿಗೆ ಗೌರವಾರ್ಪಣೆ ನಡೆಯಿತು. ಮಧ್ಯಾಹ್ನ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ವಿಶೇಷ ಪೂಜೆ ಹಾಗೂ ರಾತ್ರಿ ರಂಗಪೂಜೆ ಜರುಗಿತು. ಆಡಳಿತ ಸಮಿತಿ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಮ್, ಉತ್ಸವ ಸಮಿತಿ ಅಧ್ಯಕ್ಷ ರಮೇಶ್ ಎಳುವಾಳೆ ಸೇರಿದಂತೆ ವಿವಿಧ ಸಮಿತಿ, ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ಅರ್ಚಕರು, ಪರಿಚಾರಕರು, ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇಂದಿನಿಂದ ನೇಮೋತ್ಸವ; ಎ.6ರಂದು ಸಂಜೆ ನೂಜಿಗುತ್ತು ಮನೆಯಿಂದ ದೈವಗಳ ಆಭರಣವನ್ನು ಹಾಗೂ ಇಚಿಲಂಪಾಡಿ ಬೀಡಿನ ಶುಭಕರ ಹೆಗ್ಗಡೆಯವರನ್ನು ಮೆರವಣಿಗೆಯಲ್ಲಿ ಸಂಪ್ರದಾಯದಂತೆ ಕರೆತರುವುದು. ರಾತ್ರಿ ಸುಬ್ರಹ್ಮಣ್ಯ ಮಾಗನೆ ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್ ಅವರನ್ನು ಸ್ವಾಗತಿಸುವುದು. ರಾತ್ರಿ ಸಾಮೂಹಿಕ ರಂಗಪೂಜೆ ಮತ್ತು ಪ್ರಸಾದ ವಿತರಣೆ, ಬಳಿಕ ಹಲ್ಲತ್ತಾಯ ಮತ್ತು ಪಂಜುರ್ಲಿ ದೈವಗಳ ಭಂಡಾರ ತೆಗೆದು ನೇಮ ನಡೆದು ಅನ್ನಸಂತರ್ಪಣೆ ನಡೆಯಲಿದೆ.
ಎ.7ರಂದು ಬೆಳಿಗ್ಗೆ ಶ್ರೀ ಉಳ್ಳಾಲ್ತಿ ಅಮ್ಮನವರ ಭಂಡಾರ ತೆಗೆದು ನೇಮೋತ್ಸವ, ಮಧ್ಯಾಹ್ನ ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ, ಅಪರಾಹ್ನ ಧ್ವಜಾವರೋಹಣ ನಡೆಯಲಿದೆ. ರಾತ್ರಿ ಗುಳಿಗ ದೈವದ ಭಂಡಾರ ತೆಗೆದು ನೇಮೋತ್ಸವ ನಡೆಯಲಿದೆ. ಏ.8ರಂದು ಬೆಳಿಗ್ಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರ ಹಾಗೂ ಪರಿವಾರ ದೈವಗಳ ಶುದ್ಧಿ ಕಲಶ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ. ರಾತ್ರಿ ನೂಜಿ ಗುತ್ತು ಅಂಕದ ಮಜಲು ಶಿರಾಡಿ ದೈವ ಹಾಗೂ ಪರಿವಾರ ದೈವಗಳ ಭಂಡಾರ ತೆಗೆದು ನೇಮೋತ್ಸವ ನಡೆಯಲಿದೆ.