ಪುತ್ತೂರು ಜಾತ್ರೆ ಭಕ್ತಿ ಭಾವದಿಂದ ಯಶಸ್ವಿಯಾಗಿ ನಡೆಯಲು ಇಲಾಖೆಗಳ ಸಹಕಾರ ಅಗತ್ಯ – ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮನವಿ

0

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚು ಭಕ್ತರು ಸೇರುತ್ತಾರೆ. ಈ ಬಾರಿ ಕಳೆದ ವರ್ಷಕ್ಕಿಂತ ಅತೀ ಹೆಚ್ಚು ಭಕ್ತರು ಬರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಉತ್ತಮ ರೀತಿಯಲ್ಲಿ ಜಾತ್ರೆ ನಡೆಸಲು ವಿವಿಧ ಇಲಾಖೆಗಳು ಪೂರ್ಣ ಸಹಕಾರ ನೀಡುವಂತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ವಿನಂತಿಸಿದರು. ದೇವಳದ ಕಾರ್ಯ ನಿರ್ವಹಣಾಧಿಕಾರಿಯಾಗಿರುವ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿಯವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು.

ಪುತ್ತೂರು ಜಾತ್ರೆಗೆ ಸಂಬಂಧಿಸಿ ಎ.5ರಂದು ಸಂಜೆ ದೇವಳದ ಆಡಳಿತ ಕಚೇರಿ ಸಭಾಂಗಣದಲ್ಲಿ, ಜಾತ್ರೆಯ ವಿವಿಧ ಜವಾಬ್ದಾರಿಗೆ ಸಂಬಂಧಿಸಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರ ಮಾತನಾಡಿದರು. ಭಕ್ತರಿಗೆ ಏನು ವ್ಯವಸ್ಥೆಗಳಾಗಬೇಕು ಎಂದು ನೋಡಿಕೊಂಡು ನಾವು ಕಾರ್ಯಪ್ರವೃತ್ತರಾಗಬೇಕು. ಜಾತ್ರೆಗೆ ಬರುವ ಜನಸಂಖ್ಯೆ, ವಾಹನಗಳ ಲೆಕ್ಕಾಚಾರ ಮತ್ತು ಪೇಟೆ ಸವಾರಿ ಸಂದರ್ಭ ವಾಹನ ಸಂಚಾರದಿಂದ ಅಡಚಣೆ ಅಗದಂತೆ ಮತ್ತು ನಿರಂತರ ವಿದ್ಯುತ್ ಸರಬರಾಜು, ಆರೋಗ್ಯ ಸೇವೆ, ನೀರಿನ ಸೌಲಭ್ಯ, ಭದ್ರತೆಯ ಕುರಿತು ಅವರು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸ್ವಚ್ಛತೆಗೆ ಆದ್ಯತೆ : ಸ್ವಚ್ಛತೆಗೆ ಸಂಬಂಧಿಸಿ ನಗರಸಭೆ ವತಿಯಿಂದ ಏನೆಲ್ಲಾ ಅಗತ್ಯ ವಿಚಾರಗಳು ಬೇಕಾಗಿದೆಯೋ ಅದನ್ನು ಮಾಡಲಾಗುವುದು. ದಾರಿ ದೀಪಗಳ ನಿರ್ವಹಣೆ ಮಾಡಲಾಗುತ್ತಿದೆ ಎಂದು ಪೌರಾಯುಕ್ತ ಮಧು ಎಸ್ ಮನೋಹರ್ ಅವರು ತಿಳಿಸಿದರು.

ಬ್ರಹ್ಮರಥೋತ್ಸವದ ರಾತ್ರಿ ವಿಶೇಷ ಬಸ್ ಸೌಲಭ್ಯ: ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಮತ್ತು ಭಂಡಾರ ಬರುವ ದಿನ ಊರಿನ, ಪರವೂರಿನ ಲಕ್ಷಾಂತರ ಭಕ್ತರು, ಸಾರ್ವಜನಿಕರು ಗದ್ದೆಯಲ್ಲಿ ಇರುತ್ತಾರೆ.ಅವರೆಲ್ಲಾ ರಥೋತ್ಸವ ಮುಗಿದ ಬಳಿಕವೇ ಗದ್ದೆ ಬಿಟ್ಟು ಹೋಗುವುದು. ಈ ವೇಳೆ ರಾತ್ರಿ ಹೊತ್ತು ಬಸ್ ಸೌಲಭ್ಯ ಬೇಕು. ಅದಕ್ಕಾಗಿ ರಾತ್ರಿ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ತಿಳಿಸಿದರು. ಕೆಎಸ್‌ಆರ್‌ಟಿಸಿ ಅಧಿಕಾರಿ ಮುರಳೀಧರ್ ಅವರು ಮಾತನಾಡಿ ಎ.16 ಮತ್ತು 17ಕ್ಕೆ ಸುಮಾರು 60 ಬಸ್ ಹೆಚ್ಚುರಿಯಾಗಿ ಓಡಿಸಲಾಗುವುದು ಎಂದರು.

ಅರೋಗ್ಯ ಸೇವೆ: ಜಾತ್ರೆಯ ಸಂದರ್ಭ ಎ.16 ಮತ್ತು 17ರಂದು ಆರೋಗ್ಯ ಇಲಾಖೆ ಪ್ರತ್ಯೇಕ ಕೌಂಟರ್ ವ್ಯವಸ್ಥೆಯ ಅಡಿಯಲ್ಲಿ ಆರೋಗ್ಯ ಸೇವೆಗೆ ಎರಡು ದಿನ ಒಂದು ಆಂಬುಲೆನ್ಸ್ ಕೂಡಾ ಇರಲಿದೆ. ಉಳಿದ ದಿನ ನಮ್ಮ ಆರೋಗ್ಯ ಸಹಾಯಕಿ ಮತ್ತು ಆಶಾ ಕಾರ್ಯಕರ್ತೆ ಇರುತ್ತಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ತಿಳಿಸಿದರು.

ವಿದ್ಯುತ್ ಸರಬರಾಜು ನಿರಂತರವಿರಲಿ: ಜಾತ್ರಾ ಸಂದರ್ಭದಲ್ಲಿ ದೇವರ ಪೇಟೆ ಸವಾರಿ ಸಮಯದಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ನೋಡಲು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಪ್ರಸ್ತಾಪಿಸಿದರು. ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಅವರು ಮಾತನಾಡಿ ದೇವಳದ ಗದ್ದೆಯಲಿ ಹೆಚ್ಚುವರಿ ವಿದ್ಯುತ್ ಪಡೆಯುವವರು ಮುಂಚೆಯೇ ತಿಳಿಸಬೇಕು. ಕೊನೆಯ ಕ್ಷಣದಲ್ಲಿ ಹೇಳಿದರೆ ಅಲ್ಲಿ ಪರಿಶೀಲನೆ ಮಾಡಲು ಕಷ್ಟ. ಬ್ರಹ್ಮರಥೋತ್ಸವ ಸಂದರ್ಭ ಜನಸಂಖೆಯು ಅಧಿಕವಾಗಿರುವಾಗ ಮೊಬೈಲ್ ಸಂಪರ್ಕ ಸಿಗುವುದಿಲ್ಲ. ಈ ಸಂದರ್ಭ ವಿದ್ಯುತ್ ಸಮಸ್ಯೆ ಎದುರಾದರೆ ನಮ್ಮ ಪವರ್‌ಮೆನ್‌ಗಳನ್ನು ಸಂಪಕಿಸಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಅಂದು ತಾತ್ಕಾಲಿಕ ಮೊಬೈಲ್ ಟವರ್ ಅಳವಡಿಸುವುದು ಉತ್ತಮ ಎಂದರು.

ವಾಹನ ಪಾರ್ಕಿಂಗ್: ಜಾತ್ರೆಗೆ ವಿಶೇಷ ಜನಸಾಗರ ಸೇರುತ್ತದೆ. ಈ ನಿಟ್ಟಿನಲ್ಲಿ ಎ.16 ಮತ್ತು 17ರಂದು ವಾಹನ ದಟ್ಟಣೆ ಜಾಸ್ತಿ. ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ವಾಹನ ಪಾರ್ಕಿಂಗ್‌ಗೆ ಕಳೆದ ವರ್ಷ ನಿಗದಿಪಡಿಸಲಾದ ಸ್ಥಳಗಳನ್ನು ಈ ವರ್ಷವೂ ಬಳಸಿಕೊಳ್ಳಬೇಕು. ಎಲ್ಲರೂ ಜಾತ್ರೆಗೆ ಬರುವ ನಿಟ್ಟಿನಲ್ಲಿ ಅವರ ವಾಹನಗಳನ್ನು ನಿಗದಿ ಪಡಿಸಿದ ಸ್ಥಳದಲ್ಲೇ ಪಾರ್ಕ್ ಮಾಡಬೇಕು. ಈ ಕುರಿತು ಈಗಾಗಲೇ ಕೊಂಬೆಟ್ಟು ಕ್ರೀಡಾಂಗಣ, ಎಪಿಎಂಸಿ, ಕೆಲವೊಂದು ಶಾಲಾ ಮೈದಾನಗಳನ್ನು ಮತ್ತು ಖಾಸಗಿ ಭೂಮಿಗಳನ್ನು ಪಾರ್ಕಿಂಗ್‌ಗೆ ಗುರುತಿಸಿಕೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆಯಿಂದ ಮಾಹಿತಿ ನೀಡಲಾಯಿತು.

ಅಗ್ನಿಶಾಮಕದಳದ ಒಂದು ವಾಹನ ನಿರಂತರ ಇರಲಿ: ಪುತ್ತೂರು ಜಾತ್ರೆಯಲ್ಲಿ ಸುಡುಮದ್ದು ಪ್ರದರ್ಶನ ವಿಶೇಷ. ಪುತ್ತೂರು ಬೆಡಿ ಸುತ್ತ ಅಗ್ನಿಶಾಮಕದಳದ ಒಂದು ವಾಹನ ಅಲ್ಲಿಯೇ ಇರಲಿದೆ. ಈ ವಾಹನ ಜಾತ್ರೆಯ ಎಲ್ಲಾ ದಿನದಲ್ಲೂ ಇರುವಂತೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಪ್ರಸ್ತಾಪಿಸಿದರು. ಅಗ್ನಿ ಶಾಮಕದಳದ ಅಧಿಕಾರಿ ಮಾತನಾಡಿ ನಮ್ಮಲ್ಲಿ ಸಣ್ಣ ವಾಹನ ಇಲ್ಲ.ದೊಡ್ಡ ವಾಹನ ಪ್ರತಿ ದಿನ ಇಡುವ ವ್ಯವಸ್ಥೆ ಇಲ್ಲ. ಮೇಲಾಧಿಕಾರಿಗಳಲ್ಲಿ ಈ ಕುರಿತು ಪ್ರಸ್ತಾಪಿಸುತ್ತೇನೆ ಎಂದರು.

ವೇದಿಕೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಲೋಕೇಶ್, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು, ರಾಮದಾಸ್ ಗೌಡ, ರಾಮಚಂದ್ರ ಕಾಮತ್, ವೀಣಾ ಬಿ.ಕೆ, ಶೇಖರ್ ನಾರಾವಿ, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್ ಉಪಸ್ಥಿತರಿದ್ದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ, ಅಭಿಯಂತರ ರಾಜೇಶ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಾಜಾರಾಮ್, ಇಂಜಿನಿಯರ್ ಕನಿಷ್ಕಾ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಅಗ್ನಿಶಾಮಕ ದಳದ ಅಧಿಕಾರಿ ಸುಂದರ, ಕೆಎಸ್‌ಆರ್‌ಟಿಸಿ ಡಿಟಿಒ ಮುರಳೀಧರ್ ಆಚಾರ್ಯ, ನಗರ ಪೊಲೀಸ್ ಠಾಣೆ ಎಸ್.ಐ ಶ್ರೀಕಾಂತ್ ರಾಥೋಡ್, ಸಂಚಾರ ಪೊಲೀಸ್ ಠಾಣೆ ಎಸ್.ಐ ರಾಘವೇಂದ್ರ, ನಗರ ಪೊಲೀಸ್ ಠಾಣೆ ಎ.ಎಸ್.ಐ ಕೃಷ್ಣಪ್ಪ, ಹೆಡ್ ಕಾನ್ ಸ್ಟೇಬಲ್‌ಗಳಾದ ಸ್ಕರೀಯ, ಉದಯ, ಶಿವಪ್ರಸಾದ್, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಾಧವ ಗೌಡ ಕಾಂತಿಲ, ಸದಸ್ಯರಾದ ಕಿರಣ್, ಅಶೋಕ್, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

ಚುನಾವಣಾ ನೀತಿ ಸಂಹಿತೆಗೆ ಅಡ್ಡಿಯಾಗದಂತೆ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಯಶಸ್ವಿಯಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ದೇವರ ಸವಾರಿಯ ಸಂದರ್ಭ 152 ಕಟ್ಟಿಗಳಲ್ಲಿ ಬಂಟಿಂಗ್ಸ್, ಶೃಂಗಾರ ಮಾಡುವ ವಿಚಾರದಲ್ಲಿ ಪ್ರತಿ ಕಟ್ಟೆಯವರು ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ. ಅದರ ಬದಲು 152 ಕಟ್ಟೆಗಳಿಗೂ ದೇವಳದ ಕಡೆಯಿಂದಲೇ ಇಲಾಖೆಯ ಅನುಮತಿ ಪಡೆಯಲು ವ್ಯವಸ್ಥೆ ಮಾಡುವ ಕುರಿತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಪ್ರಸ್ತಾಪಿಸಿದರು. ಆನ್‌ಲೈನ್ ಮೂಲಕ ಅನುಮತಿ ಅರ್ಜಿ ಸಲ್ಲಿಸಬೇಕು. ಅದಕ್ಕೆ ನಮ್ಮ ಕಡೆಯಿಂದ ಶುಲ್ಕ ಪಡೆದು ಅನುಮತಿಯನ್ನು ಚುನಾವಣಾಧಿಕಾರಿ ನೀಡುತ್ತಾರೆ. ನಗರಸಭೆ ವ್ಯಾಪ್ತಿಯಲ್ಲಿರುವ ಕಟ್ಟೆಗಳ ಶೃಂಗಾರಕ್ಕೆ ನಗರಸಭೆಯಿಂದ ಅನುಮತಿಗೆ ಅರ್ಜಿ ಸಲ್ಲಿಸಬಹುದು ಎಂದು ಪೌರಾಯುಕ್ತ ಮಧು ಎಸ್ ಮನೋಃಹರ್ ತಿಳಿಸಿದರು.

LEAVE A REPLY

Please enter your comment!
Please enter your name here