ಆಂತರಿಕ ಸಮೀಕ್ಷೆಯಲ್ಲಿ ಮಠಂದೂರು ಪರ ಒಲವು ವ್ಯಕ್ತವಾಗಿದ್ದರೂ ಬಿಜೆಪಿಯಿಂದ ಹೊಸ ಅಭ್ಯರ್ಥಿಯ ಹುಡುಕಾಟ-ಮಠಂದೂರಿಗೆ ಕೈ ತಪ್ಪಲಿದೆಯೇ ಅವಕಾಶ?

0

ಕಾರಣವೇನು?-ಮಠಂದೂರು ಮಾಡಿರುವ ತಪ್ಪುಗಳೇನು-ಕಾರ್ಯಕರ್ತರ ಪ್ರಶ್ನೆ

ಹಿಂದೂ ಕಾರ್ಯಕರ್ತರ ಆಕ್ರೋಶ ಕಾರಣವೇ? ಮಹಿಳೆಯೊಂದಿಗಿನ ಫೊಟೋ ವೈರಲ್ ಸೀಟು ನಿರಾಕರಣೆಗೆ ಕಾರಣವೆಂಬ ಮಾತು ನಿಜವೇ? ಷಡ್ಯಂತ್ರವೇ?

ಪುತ್ತೂರು: ಮೇ 10ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏ.13ರಂದು ಆರಂಭಗೊಳ್ಳಲಿದೆಯಾದರೂ ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿ ಬಿಜೆಪಿ,ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಇನ್ನೂ ಘೋಷಣೆಯಾಗಿಲ್ಲ.ಅಭ್ಯರ್ಥಿ ಆಯ್ಕೆ ಪಕ್ಷದ ಆಂತರಿಕ ಜವಾಬ್ದಾರಿಯಾಗಿದ್ದು ಪ್ರತಿಯೊಂದು ಪಕ್ಷದವರೂ ಗೆಲ್ಲುವ ಅಭ್ಯರ್ಥಿಗೇ ಮಣೆ ಹಾಕುತ್ತಾರೆ.ಪುತ್ತೂರು ಕ್ಷೇತ್ರಕ್ಕೆ ಸಂಬಂಧಿಸಿ ಬಿಜೆಪಿಯಿಂದ ಶಾಸಕ ಸಂಜೀವ ಮಠಂದೂರು ಅವರೇ ಈ ಬಾರಿಯೂ ಅಭ್ಯರ್ಥಿಯಾಗಲಿದ್ದಾರೆ ಎಂಬ ಅಭಿಪ್ರಾಯ ಆರಂಭದಲ್ಲಿ ಕೇಳಿ ಬಂದಿತ್ತಾದರೂ ಇದೀಗ ಪಕ್ಷ ಅವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಮಾಡಿಕೊಡಲಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.ಇದು ನಿಜವೇ ಆಗಿದ್ದರೆ ಇದಕ್ಕೆ ಕಾರಣವೇನಿರಬಹುದು ಎನ್ನುವ ಸಹಜ ಕುತೂಹಲ ಪಕ್ಷದ ಕಾರ್ಯಕರ್ತರಲ್ಲಿದೆ.


ಪುತ್ತೂರಿಗೆ ಬಿಜೆಪಿಯ ಅಭ್ಯರ್ಥಿ ಆಯ್ಕೆ ಪಕ್ಷದ ವಿಚಾರವೇ ಸರಿ.ಸಂಜೀವ ಮಠಂದೂರು ಅವರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದ್ದು, 2008ರಲ್ಲಿ ಶಕುಂತಳಾ ಶೆಟ್ಟಿಯವರ ಎದುರು ಮಲ್ಲಿಕಾ ಪ್ರಸಾದ್ ಚುನಾವಣೆಗೆ ನಿಂತಾಗ ಅವರ ಪರವಾಗಿ ಕೆಲಸ ಮಾಡಿದ್ದಲ್ಲದೆ ಅವರು ಶಾಸಕರಾಗಿ ಆಯ್ಕೆಯಾದಾಗ ಅವರ ಹಿಂದೆ ನಿಂತು ಕೆಲಸ ಮಾಡಿದ್ದಾರೆ.2013ರಲ್ಲಿ ಅದರ ಫಲವಾಗಿ ಶಕುಂತಳಾ ಶೆಟ್ಟಿಯವರು ಕಾಂಗ್ರೆಸ್‌ನಿಂದ ಸ್ಪರ್ಧಿಯಾದಾಗ ಮಠಂದೂರು ಬಿಜೆಪಿಯಿಂದ ಸೀಟು ಪಡೆದು ಸ್ಪರ್ಧಿಸಿ ಸೋತಿದ್ದಾರೆ.ಅನಂತರದ 5 ವರ್ಷ ಪಕ್ಷದ ನೆಲೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಚಟುವಟಿಕೆ ನಡೆಸುತ್ತಾ, 2018ರಲ್ಲಿ ಸೀಟು ದೊರಕಿ ಗೆಲುವನ್ನು ಸಾಧಿಸಿದ್ದಾರೆ.


ಶಾಸಕರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ:
ಸಂಜೀವ ಮಠಂದೂರು ಶಾಸಕರಾದ ಬಳಿಕ 2018ರಿಂದ 2023ರವರೆಗೆ ಈ ಅವಧಿಯಲ್ಲಿ ಪುತ್ತೂರಿನಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಕೊರೋನಾದ ಸಂದರ್ಭದಲ್ಲಂತೂ ಶಾಸಕರ ವಾರ್‌ರೂಮ್ ಬೆಳಿಗ್ಗೆಯಿಂದ ರಾತ್ರಿಯವರೆಗೆ ಉತ್ತಮ ಕೆಲಸ ಮಾಡಿ ಸಾವು ನೋವುಗಳನ್ನು ಕಡಿಮೆ ಮಾಡಿದೆ.ಕಿಟ್‌ಗಳನ್ನು ಒದಗಿಸಿದೆ.ತಾಲೂಕಿನಲ್ಲಿ ಸೈಲೆಂಟ್ ಸಂಜೀವಣ್ಣ’ ಎಂದು ಹೇಳಿ ಅವರನ್ನು ಜನರು ಗುರುತಿಸಿದ್ದಾರೆ. ಗಾಂಧಿ ಜಯಂತಿ ಆಚರಣೆ ಸಂದರ್ಭದಲ್ಲಿ ನಡೆದಗಾಂಧಿ ನಡಿಗೆ’ ಕಾರ್ಯಕ್ರಮದ ಮೂಲಕ ಕ್ಷೇತ್ರದಾದ್ಯಂತ ಅವರು ನಡೆದಾಡಿದ್ದರಲ್ಲದೆ ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ನಡಿಗೆಯಾಗಿರುವ ಕ್ಷೇತ್ರ ಪುತ್ತೂರು ಎಂಬ ದಾಖಲೆಯೂ ನಿರ್ಮಾಣವಾಗಿತ್ತು. ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂಬ ಅಭಿಪ್ರಾಯ ಜನರಲ್ಲಿದೆ.ತುಂಬಾ ಆಡಂಬರವಿಲ್ಲದ, ಬ್ಯಾನರ್‌ಗಳ ಶೋಕಿ ಇಲ್ಲದ,ಎಲ್ಲ ಪಕ್ಷದವರೊಂದಿಗೆ, ಜಾತಿಯವರೊಂದಿಗೆ ಬೆರೆಯುವ ತನ್ನ ಹಿಂದೆ ಗುಂಪು ಕಟ್ಟಿಕೊಂಡು ಇಲ್ಲದ, ಅಹಂ ಇಲ್ಲದ ವ್ಯಕ್ತಿ ಸಂಜೀವ ಮಠಂದೂರು ಎಂಬ ಅಭಿಪ್ರಾಯವೂ ಇದೆ.ವಿವಿಧ ಕಾಮಗಾರಿಗಳ ಕೆಲಸದಲ್ಲಿ ಕಾಂಟ್ರಾಕ್ಟರ್‌ಗಳನ್ನು ವಿಚಾರಿಸಿದಾಗ, ಉಳಿದ ಕ್ಷೇತ್ರಗಳ ಮಟ್ಟಿಗೆ ನೋಡಿದಾಗ, ಬೆಳ್ತಂಗಡಿಯ ಪರಿಸ್ಥಿತಿ ನೋಡಿದಾಗ ಸಂಜೀವ ಮಠಂದೂರು ತೊಂದರೆ ಕೊಡುವವರಲ್ಲ.ಅವರ ಕ್ಷೇತ್ರದಲ್ಲಿ ಕೆಲಸ ಮಾಡಬಹುದು ಎಂಬ ಅಭಿಪ್ರಾಯ ನೀಡಿದ್ದಾರೆ. ಪ್ರಬಲ ಗೌಡ ಸಮುದಾಯದ ಬೆಂಬಲ ಅವರಿಗಿದ್ದುದರಿಂದ ಕಳೆದ ಬಾರಿ ಅವರಿಗೆ ಬಿಜೆಪಿಯಿಂದ ಟಿಕೆಟ್ ಲಭಿಸಿ ಗೆಲುವಿಗೂ ಕಾರಣವಾಗಿತ್ತು.


ಹಿಂದೂ ಕಾರ್ಯಕರ್ತರು ಕೇಸಿಗೊಳಗಾದರೆ ಕಡೆಗಣನೆ ಆರೋಪ:
ಆದರೆ ಸಂಜೀವ ಮಠಂದೂರು ಹಿಂದೂ ಕಾರ್ಯಕರ್ತರು ಕೇಸಿಗೆ ಒಳಗಾದಾಗ ಕಡೆಗಣಿಸುತ್ತಾರೆ, ಬಿಡಿಸಲು ಬರುವುದಿಲ್ಲ ಎಂಬ ಗಂಭೀರ ಆಪಾದನೆ ಅವರ ಮೇಲಿದೆ.ಉಪ್ಪಿನಂಗಡಿನಲ್ಲಿಯೂ, ಪುತ್ತೂರಿನಲ್ಲಿಯೂ ಕಾರ್ಯಕರ್ತರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಆದರೆ ಸಂಜೀವ ಮಠಂದೂರು ಯಾವುದೇ ಗಂಭೀರ ಪ್ರಕರಣಗಳಿಗೆ ಕಾರಣರಾಗಿಲ್ಲ, ಎಲ್ಲಾ ಪ್ರಕರಣಗಳನ್ನು ಕಾನೂನು ಚೌಕಟ್ಟಲ್ಲಿ ಪರಿಹರಿಸಲು ಪ್ರಯತ್ನಿಸಿ ಅದು ಬೆಳೆಯದಂತೆ ನೋಡಿಕೊಂಡಿದ್ದಾರೆ.ಕೋಮು ಗಲಭೆಗಳಿಂದ ಬೆಂದು ಹೋಗಿರುವ ಪುತ್ತೂರಿಗೆ ಅವರ ಕ್ರಮವೇ ಸರಿಯೆಂಬ ಅಭಿಪ್ರಾಯವೂ ಹಲವರಲ್ಲಿದೆ.


ಅಣಬೆಗಳು ಹುಟ್ಟಿಕೊಂಡಂತೆ ಹೇಳಿಕೆ ಸರಿಯಲ್ಲ:
ಅಮಿತ್ ಶಾ ಬಂದಾಗ ಮಠಂದೂರುರವರ ಬ್ಯಾನರ್‌ಗಿಂತ ದೊಡ್ಡ ಬ್ಯಾನರ್‌ಗಳು ಅಲ್ಲಲ್ಲಿ ಬಿದ್ದಾಗ ಅವರು ಮಳೆಗಾಲದಲ್ಲಿ ಅಣಬೆಗಳು ಹುಟ್ಟಿಕೊಂಡಂತೆ’ ಎಂದು ಹೇಳಿರುವುದು ಸರಿಯಲ್ಲ ಎಂಬ ಸಾರ್ವತ್ರಿಕ ಅಭಿಪ್ರಾಯವಿದೆ.ಅರುಣ್ ಪುತ್ತಿಲರವರ ಕಡೆಯವರು ಈ ವಿಚಾರದಲ್ಲಿ ಶಾಸಕರನ್ನು ತರಾಟೆಗೆ ತೆಗೆದುಕೊಂಡಾಗ ಪಕ್ಷದ ನಾಯಕರು ಅವರನ್ನು ಸಮಾಧಾನಿಸಿದ್ದಾರೆ.ಪ್ರವೀಣ್ ನೆಟ್ಟಾರು ಹತ್ಯೆಯ ಪ್ರಕರಣದಲ್ಲಿತಡವಾಗಿ ಬಂದಿದ್ದಾರೆ’ ಎಂಬುದೂ ಕೆಲವು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದರೂ ಇವರಿಗಿಂತ ಹೆಚ್ಚು ಜಿಲ್ಲೆಯ ಮತ್ತು ರಾಜ್ಯದ ನಾಯಕರುಗಳ ಮೇಲೆ ವಿಶೇಷವಾಗಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ರ ಮೇಲೆ ಕಾರ್ಯಕರ್ತರ ಆಕ್ರೋಶ ವ್ಯಕ್ತವಾಗಿತ್ತು.ಅದನ್ನು ಸರಿಪಡಿಸಲಿಕ್ಕಾಗಿ ಎನ್‌ಐಎ ತನಿಖೆ, ಪ್ರವೀಣ್ ನೆಟ್ಟಾರು ಪತ್ನಿಗೆ ಉದ್ಯೋಗ ಅಲ್ಲದೆ ಅವರಿಗೆ ಮನೆ ಕಟ್ಟಿಕೊಡುವುದನ್ನು, ಅದರ ಉದ್ಘಾಟನೆಯನ್ನು ಸಮಾರಂಭವನ್ನಾಗಿ ಮಾಡಿ ಅದನ್ನು ಸರಿ ಪಡಿಸುವ ಪ್ರಯತ್ನ ನಡೆದಿದೆ.


ಮಹಿಳೆಯೊಂದಿಗಿದ್ದ ಫೊಟೋ ವೈರಲ್ ಸೀಟು ನಿರಾಕರಣೆಗೆ ಕಾರಣವಾಯಿತೆ?:
ಸಂಜೀವ ಮಠಂದೂರು ಅವರು ಮಹಿಳೆಯೊಂದಿಗಿದ್ದ ಫೊಟೋ ವ್ಯಾಪಕವಾಗಿ ಪ್ರಚಾರವಾಗಿದ್ದು ಆ ಬಗ್ಗೆ ಇನ್ನೂ ಫೊಟೋಗಳು, ಸಿಡಿಗಳು ಬಿಡುಗಡೆಯಾಗುತ್ತವೆ ಎಂಬ ಬೆದರಿಕೆ ಮಠಂದೂರಿಗೆ ಸೀಟು ನಿರಾಕರಣೆಗೆ ಕಾರಣವಿರಬಹುದೆನ್ನುವ ಮಾತು ಕೇಳಿ ಬರುತ್ತಿದೆಯಾದರೂ, ಅಂತಹ ವಿಷಯಗಳನ್ನು ರಾಜಕೀಯ ಪಕ್ಷಗಳು ವೈಯಕ್ತಿಕ ಎಂದು ಪರಿಗಣಿಸುತ್ತವೆಯೇ ಹೊರತು ಸೀಟು ನಿರಾಕರಣೆಗೆ ಕಾರಣವನ್ನಾಗಿ ಮಾಡುವುದಿಲ್ಲ.ಬಿಜೆಪಿ ಪಕ್ಷದಲ್ಲಿ ಮಂತ್ರಿಯಾಗಿದ್ದ ರಮೇಶ್ ಜಾರಕಿಹೊಳಿಯ ರಾಸಲೀಲೆಯ ವೀಡಿಯೋ ಪ್ರಚಾರವಾಗಿ, ಕೇಸ್‌ಗೆ ಒಳಗಾದ ಕಾರಣಕ್ಕೆ ಅವರು ರಾಜೀನಾಮೆ ಕೊಡಬೇಕಾಗಿ ಬಂದಿದ್ದರೂ, ಇಂದೂ ಅವರು ತನ್ನ ಕ್ಷೇತ್ರದ ಅಭ್ಯರ್ಥಿಯಾಗಿರುವುದು ಮಾತ್ರವಲ್ಲ, ಇತರರಿಗೆ ಸೀಟು ದೊರಕಿಸಿಕೊಡುವಷ್ಟು ಶಕ್ತಿಯನ್ನು ಉಳಿಸಿಕೊಂಡಿದ್ದಾರೆ.ಕಾಂಗ್ರೆಸ್, ಬಿಜೆಪಿ, ದಳ ಎಲ್ಲಾ ಪಕ್ಷಗಳ ಹೆಚ್ಚಿನ ನಾಯಕರುಗಳ ಹೆಸರು ಈ ರೀತಿಯ ಪ್ರಕರಣಗಳಲ್ಲಿ ಕೇಳಿ ಬರುತ್ತಿದೆ. ಆ ಕಾರಣಕ್ಕೆ ಕಳೆದ ಬಾರಿ ಏಳು ಜನ ಮಂತ್ರಿಗಳು,ತಮ್ಮ ಬಗ್ಗೆ ಯಾವುದೇ ಸಿಡಿ ಪ್ರಸಾರವಾಗದಂತೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವುದು ಎಲ್ಲರಿಗೂ ತಿಳಿದಿದೆ.ಮಹಿಳೆಯೊಂದಿಗಿರುವ ಫೊಟೋದ ವಿಚಾರದಲ್ಲಿ ಮಠಂದೂರು ಮತ್ತು ಫೊಟೋದಲ್ಲಿರುವ ಮಹಿಳೆ ಇಬ್ಬರೂ ಪ್ರಕರಣವನ್ನು ಅಲ್ಲಗಳೆದಿದ್ದಾರೆ.ಒಂದು ವೇಳೆ ಪ್ರಕರಣ ನಡೆದಿರುವುದು ಹೌದಾಗಿದ್ದರೆಸುದ್ದಿ’ ಅದನ್ನು ಸಮರ್ಥಿಸುವುದಿಲ್ಲ. ಎಂದೋ ನಡೆದಿರಬಹುದಾದ ಈ ಪ್ರಕರಣವನ್ನು ಇದೀಗ ಚುನಾವಣೆ ಸಂದರ್ಭದಲ್ಲಿ ಈ ರೀತಿ ವೈರಲ್ ಮಾಡಿರುವುದು ಮಠಂದೂರು ಅವರಿಗೆ ಟಿಕೆಟ್ ದೊರೆಯದಂತೆ ಮಾಡುವ ಷಡ್ಯಂತರವೆಂದೇ ಹೇಳಲಾಗುತ್ತಿದೆ. ಪ್ರಕರಣದ ಕುರಿತು ಮಠಂದೂರು ಕೋರ್ಟ್‌ಗೆ ಹೋಗಿ, ಮಾಧ್ಯಮಗಳಲ್ಲಿ ಅದರ ಪ್ರಸಾರಕ್ಕೆ ತಡೆಯಾಜ್ಞೆ ತಂದಿದ್ದಾರೆ.ಆದರೂ, ಮಹಿಳೆಯೊಂದಿಗಿರುವ ಫೊಟೋ ವೈರಲ್ ಆದ ಕಾರಣಕ್ಕೇ ಅವರಿಗೆ ಸೀಟು ನಿರಾಕರಣೆಯಾಗಿದೆ ಎಂದಾದರೆ ಅದನ್ನು ಜನರಿಗೆ ತಿಳಿಯಪಡಿಸುವುದು ಒಳಿತು ಎಂಬ ಆಗ್ರಹಗಳು ಕೇಳಿ ಬರುತ್ತಿವೆ.

ಆಂತರಿಕ ಸಮೀಕ್ಷೆ ಮಠಂದೂರು ಪರವಾಗಿದ್ದರೂ ಬೇರೆ ಅಭ್ಯರ್ಥಿಯ ಹುಡುಕಾಟವೇಕೆ?:
ಇದೀಗ ಪ್ರಥಮ ಬಾರಿ ಶಾಸಕರಾಗಿ ಕ್ಷೇತ್ರದಾದ್ಯಂತ ಜನಸಂಪರ್ಕವಿದ್ದರೂ, ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಎಂಬ ಹೆಸರಿದ್ದರೂ, ಪ್ರಬಲ ಗೌಡ ಸಮುದಾಯದ ಬೆಂಬಲ ಅವರಿಗೆ ಇದ್ದರೂ ಪುತ್ತೂರಿನಲ್ಲಿ ಅವರ ಸ್ಥಾನಕ್ಕೆ, ಪರಿಚಯಕ್ಕೆ ಸ್ಪರ್ಧಿಗಳು ಇಲ್ಲದಿದ್ದರೂ,ಮಠಂದೂರು ಅವರಿಗೆ ಸೀಟು ದೊರಕುವುದಿಲ್ಲ ಎಂಬ ಅಭಿಪ್ರಾಯ ಹರಡಿದೆ.ಆಂತರಿಕ ಸಮೀಕ್ಷೆಯೂ ಮಠಂದೂರು ಪರವಾಗಿ ಬಂದಿದೆ ಎಂದಿರುವಾಗ ಸುಳ್ಯ, ಪುತ್ತೂರಿನಲ್ಲಿಯ, ಇಲ್ಲಿಗೆ ಹೆಚ್ಚು ಪರಿಚಯವಿಲ್ಲದ ಇತರ ಅಭ್ಯರ್ಥಿಗಳನ್ನು ಹುಡುಕುತ್ತಿರುವುದು ಯಾಕೆ? ಬಿಜೆಪಿಗೆ ಎಂತಹ ಅಭ್ಯರ್ಥಿ ಬೇಕೆಂದು ಗೊತ್ತಾಗಬೇಕಲ್ಲವೇ?ಎಂಬ ಪ್ರಶ್ನೆಗಳೂ ವ್ಯಕ್ತವಾಗುತ್ತಿವೆ. ಅಧಿಕಾರದ ಗದ್ದುಗೆಗೇರಲು ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ: ಹೇಗಾದರೂ ಮಾಡಿ ಅಧಿಕಾರದ ಗದ್ದುಗೆಗೆ ಏರಬೇಕೆಂಬ ಮಹದಾಸೆಯೊಂದಿಗೆ ಎಲ್ಲ ರಾಜಕೀಯ ಪಕ್ಷಗಳೂ ಅಳೆದು,ತೂಗಿ ಗೆಲ್ಲುವ ಅಭ್ಯರ್ಥಿಗೇ ಅವಕಾಶ ಮಾಡಿಕೊಡುತ್ತವೆ.ಇದಕ್ಕಾಗಿ ಬೇರೆ ಪಕ್ಷದಲ್ಲಿದ್ದರೂ ಅಲ್ಲಿ ಉತ್ತಮ ಸೇವೆ ಮಾಡಿ ಜನಪ್ರೀತಿ ಗಳಿಸಿದವರನ್ನು ತಮ್ಮ ಕಡೆಗೆ ಸೆಳೆದು, ಸೀಟು ನೀಡುತ್ತಾರೆ.ಕೆಲವು ಕಡೆಗಳಲ್ಲಿ ಹೊಂಚು ಹಾಕುತ್ತಾ ಇದ್ದು, ಕೊನೇಯ ಕ್ಷಣದವರೆಗೆ ವಿರೋಧ ಪಕ್ಷದಲ್ಲಿ ಇದ್ದವರನ್ನು, ಜೀವಮಾನವಿಡೀ ತಮ್ಮನ್ನು ವಿರೋಧಿಸಿದವರನ್ನೂ ಆತ್ಮೀಯತೆಯಿಂದ ಪಕ್ಷಕ್ಕೆ ಸೇರಿಸಿಕೊಂಡು ಸೀಟು ಕೊಡುತ್ತಾರೆ, ಗೆಲ್ಲಿಸುತ್ತಾರೆ, ಮಂತ್ರಿಯೂ ಮಾಡುತ್ತಾರೆ.ಇದಕ್ಕಾಗಿ ಗೆಲ್ಲುವುದೇ ಮಾನದಂಡ ಆಗಿರುತ್ತದೆ. ಯಾವ ಊರಿನಲ್ಲಿ ಪಕ್ಷ ಭದ್ರವಾಗಿದೆಯೋ, ಮೋದಿಜಿಯವರ ಹೆಸರಿನಲ್ಲಿ, ರಾಹುಲ್ ಗಾಂಧಿಯವರ ಹೆಸರಿನಲ್ಲಿ, ದೇವೇಗೌಡರ ಹೆಸರಿನಲ್ಲಿ ಅಭ್ಯರ್ಥಿ ಗೆಲ್ಲುವುದು ಖಚಿತವಾದರೆ ತಮಗೆ ಬೇಕಾದವರನ್ನು, ತಮ್ಮ ಸೇವೆ ಮಾಡುವವರನ್ನು, ತಮ್ಮ ಕುಟುಂಬದವರನ್ನು, ತಮ್ಮ ಸುತ್ತ ತಿರುಗುತ್ತಾ ತಾವು ಹೇಳಿದನ್ನು ಪ್ರಶ್ನಿಸದೆ ಶಿರಸಾ ಪಾಲಿಸುವವರನ್ನು ನಿಲ್ಲಿಸಿ ಗೆಲ್ಲಿಸುತ್ತಾರೆ.ಈಗ ಅಭ್ಯರ್ಥಿಗಳಲ್ಲಿರುವ ಹಣವೂ, ಮಸಲ್ ಪವರ್, ಜಾತಿಯ ಬಲವೂ, ಸೀಟು ನೀಡುವಲ್ಲಿ ಮಾನದಂಡವಾಗಲು ಆರಂಭಿಸಿದೆ.ಅದೇನಿದ್ದರೂ ಗೆಲುವು ಇಲ್ಲದ ಕಡೆಯಲ್ಲಿ ಉತ್ತಮ ಅಭ್ಯರ್ಥಿಗೆ ಮಣೆ ಹಾಕುತ್ತಾರೆ ಎಂಬುದಂತು ಸತ್ಯ. ಇಂದಿರಾಗಾಂಧಿ ಮತ್ತು ಕಾಂಗ್ರೆಸ್‌ನ ಇತರ ಪ್ರಮುಖರ ಕಾಲದಲ್ಲಿ ರಾಜ್ಯ ಮತ್ತು ದೇಶದ ಕಾಂಗ್ರೆಸ್ ನಾಯಕರ ಹಿಂದೆ ಮುಂದೆ ಇದ್ದು ಅವರ ಸೇವೆ ಮಾಡುತ್ತಿರುವವರಿಗೆ ಸೀಟು ಗ್ಯಾರಂಟಿಯಿತ್ತು.ಅವರಿಗೆ ಬೇರೆ ಯಾವ ಅರ್ಹತೆಯೂ ಬೇಕಿರಲಿಲ್ಲ.ಅವರು ಕೆಲಸವೇ ಮಾಡಿರಬೇಕೆಂದಿರಲಿಲ್ಲ,ಕ್ಷೇತ್ರದಲ್ಲಿ ಅವರ ಪರಿಚಯವೇ ಯಾರಿಗೂ ಇರದೇ ಇದ್ದರೂ ಅವರು ಪಕ್ಷದ ಮತ್ತು ನಾಯಕರ ಹೆಸರಿನಲ್ಲಿ ಆಯ್ಕೆಯಾಗುತ್ತಿದ್ದರು.ಜನಾರ್ದನ ಪೂಜಾರಿ ಪ್ರಥಮ ಬಾರಿಗೆ ಎಂಪಿ ಸೀಟಿಗೆ ಕಾಂಗ್ರೆಸ್ ಅಭ್ಯರ್ಥಿಯಾದಾಗ ಅವರು ಯಾರೆಂದು ಯಾರಿಗೂ ಗೊತ್ತಿರಲಿಲ್ಲ. ಪುತ್ತೂರು ಕ್ಷೇತ್ರದಲ್ಲಿ ಸಂಕಪ್ಪ ರೈ, ಸಿ.ಪಿ.ಜಯರಾಮ್ ಮತ್ತಿತರರು ಸೀಟಿಗೆ ಪ್ರಯತ್ನಿಸುತ್ತಿದ್ದಾಗ ಎನ್‌ಎಸ್‌ಐಯು ರಾಜ್ಯಾಧ್ಯಕ್ಷರಾಗಿದ್ದ ಯುವಕ ವಿನಯಕುಮಾರ್ ಸೊರಕೆ ಪಕ್ಷದ ಬಿ ಫಾರ್ಮ್ ಹಿಡಿದುಕೊಂಡು ಬಂದು ಅರ್ಜಿ ಸಲ್ಲಿಸಿದ್ದರು.ಕಾಂಗ್ರೆಸ್ ಪಕ್ಷ ವಿಭಜನೆಯಾದಾಗನಿಜಲಿಂಗಪ್ಪ ಕಾಂಗ್ರೆಸ್’ನಿಂದ ಉಡುಪಿಗೆ ಪ್ರಸಿದ್ಧ ಉದ್ಯಮಿ ಟಿ.ಎ.ಪೈ ಅಭ್ಯರ್ಥಿಯಾಗಿದ್ದರು.ಇಂದಿರಾ ಗಾಂಧಿಯವರು ಅಲ್ಲಿಗೆ ತನ್ನ ಅಭ್ಯರ್ಥಿಯಾಗಿ ಡೆಲ್ಲಿಯ ತನ್ನ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದ, ಆಗ ಉಡುಪಿಗೆ ಪರಿಚಯವೇ ಇಲ್ಲದಿದ್ದ ಆಸ್ಕರ್ ಫರ್ನಾಂಡೀಸ್‌ರನ್ನು ಅವರ ಎದುರು ಸ್ಪರ್ಧೆಗೆ ನಿಲ್ಲಿಸಿ ಗೆಲ್ಲಿಸಿ ಟಿ.ಎ.ಪೈಗೆ ಮುಖಭಂಗ ಮಾಡಿದ್ದಲ್ಲದೆ, ತನ್ನ ಹೆಸರಿನ ಎದುರು ಯಾರೂ ಗೆಲ್ಲರಾರರು, ತನ್ನ ಹೆಸರಿನಲ್ಲಿ ಲೈಟ್ ಕಂಬ ನಿಂತರೂ, ಕತ್ತೆ ನಿಂತರೂ ಗೆಲ್ಲುತ್ತದೆ ಎಂಬ ಅಭಿಪ್ರಾಯ ಜನರಲ್ಲಿ ಹರಡಲು ಕಾರಣರಾಗಿದ್ದರು.ಅಂತಹ ಭಾವನೆಯಿಂದಾಗಿ ಹೆಚ್ಚಿನವರು ನಿಜಲಿಂಗಪ್ಪ ಕಾಂಗ್ರೆಸನ್ನು ತೊರೆದು ಇಂದಿರಾ ಗಾಂಧಿ ಕಾಂಗ್ರೆಸ್ ಸೇರಲು ಕಾರಣವಾಗಿತ್ತು.ಇಂದು ಪ್ರಧಾನಿ ಮೋದಿಯವರ ಹೆಸರಿಗೆ ಅಂತಹ ಪ್ರಭಾವ ಇರುವುದರಿಂದ ಬಿಜೆಪಿಗೆ ಸೇರಲು ಜನರು ತುದಿಗಾಲಲ್ಲಿ ನಿಂತಿದ್ದಾರೆ ಎಂದರೂ ತಪ್ಪಾಗಲಾರದು.ಕಾಂಗ್ರೆಸ್‌ನಲ್ಲಿ ಅದೇ ಸಂಪ್ರದಾಯ ಮುಂದುವರಿದ್ದದರಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ನಾಯಕರ ಹಿತಾಸಕ್ತಿ ಸ್ಥಳೀಯ ಕ್ಷೇತ್ರದ ಹಿತಾಸಕ್ತಿಯನ್ನು ಮೀರಿ ನಿಲ್ಲಲು ಪ್ರಾರಂಭವಾಯಿತು.ಅದು ಕಾಂಗ್ರೆಸ್‌ನಲ್ಲಿ ಇಂದಿಗೂ ಮುಂದುವರಿದುಕೊಂಡು ಬಂದಿದೆ.ಆ ಕಾರಣದಿಂದ ಸ್ಥಳೀಯ ನಾಯಕರು ವಿರೋಧ ಪಕ್ಷಗಳಲ್ಲಿ ಬೆಳೆಯಲು ಪ್ರಾರಂಭಿಸಿದರು.


ಬಿಜೆಪಿಯಿಂದ ಸ್ಥಳೀಯ ಕಾರ್ಯಕರ್ತರ ಮೂಲಕ ಅಭ್ಯರ್ಥಿ ಆಯ್ಕೆ:
ಕಾಂಗ್ರೆಸ್ ವರಿಷ್ಠರು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೀಡುತ್ತಿದ್ದರೆ ಬಿಜೆಪಿಯು ಪಕ್ಷದ ಸ್ಥಳೀಯ ಕಾರ್ಯಕರ್ತರ ಆಯ್ಕೆಯ ಮೂಲಕ ಸ್ಥಳೀಯವಾಗಿ ಜನಪ್ರಿಯವಾಗಿರುವವರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾರಂಭಿಸಿದ್ದರಿಂದ ಪಕ್ಷವೂ ಬೆಳೆಯಲಾರಂಭಿಸಿತು.ಆದರೆ ಪಕ್ಷ ಬೆಳೆದಂತೆ, ಅಧಿಕಾರ ಸಿಕ್ಕಿದಂತೆ ಇಲ್ಲಿಯೂ ಅಂತರಿಕ ಪ್ರಜಾಪ್ರಭುತ್ವ ಕಡಿಮೆಯಾಗಲಾರಂಭಿಸಿತು. 2008ರಿಂದ 2013ರವರೆಗೆ ಶಾಸಕಿಯಾಗಿದ್ದ ಶಕುಂತಳಾ ಶೆಟ್ಟಿಯವರು ಸ್ಥಳೀಯವಾಗಿ ಬಹುಮತದ ಆಯ್ಕೆಯ ಅಭ್ಯರ್ಥಿಯಾಗಿದ್ದರೂ ಅವರಿಗೆ ಸೀಟು ನಿರಾಕರಣೆ ಮಾಡಲಾಯಿತು.ಅದರ ಪರಿಣಾಮವಾಗಿ ರಾಮ್ ಭಟ್‌ರಂತಹ ರಾಜ್ಯ ಮಟ್ಟದ ಬಿಜೆಪಿ ನಾಯಕರೇ ಪಕ್ಷ ತೊರೆದು ಶಕುಂತಳಾ ಶೆಟ್ಟಿಗೆ ಬೆಂಬಲ ನೀಡಲು ಕಾರಣವಾಗಿದ್ದರು.ಆ ಬಾರಿಗೆ ಪಕ್ಷೇತರರಾಗಿ ಕಡಿಮೆ ಅಂತರದಲ್ಲಿ ಸೋತ ಶಕುಂತಳಾ ಶೆಟ್ಟಿಯವರು ನಂತರ ಕಾಂಗ್ರೆಸ್ ಸೇರಿ ಅವರ ಸ್ಪರ್ಧಿಯಾಗಿದ್ದ ಬಿಜೆಪಿಯ ಸಂಜೀವ ಮಠಂದೂರುರವರನ್ನು ಸೋಲಿಸಿ ಗೆಲುವನ್ನು ಸಾಧಿಸಿದರು.2018ರಲ್ಲಿ ಬಿಜೆಪಿಯ ಸಂಜೀವ ಮಠಂದೂರುರವರು ಕಾಂಗ್ರೆಸ್‌ನ ಶಕುಂತಳಾ ಶೆಟ್ಟಿಯವರನ್ನು ಸೋಲಿಸಿ ಸೇಡು ತೀರಿಸಿಕೊಂಡರು.ಆದರೆ ಶಕುಂತಳಾ ಶೆಟ್ಟಿಯವರಿಗೆ ಆದಂತೆ, ಪ್ರಥಮ ಅವಧಿಯ ಶಾಸಕತ್ವದ ನಂತರ ಸಂಜೀವ ಮಠಂದೂರುರವರಿಗೆ ಎರಡನೇ ಅವಧಿಗೆ ಇದೀಗ ಸೀಟು ಇಲ್ಲ ಎಂಬ ಸುದ್ದಿ ವ್ಯಾಪಕವಾಗಿ ಹರಡಿದೆ.


ಡೆಲ್ಲಿಯಿಂದಲೇ ಅಭ್ಯರ್ಥಿಗಳ ಆಯ್ಕೆ:
ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಯು ಡೆಲ್ಲಿಯಿಂದಲೇ ಆಗಲಾರಂಭಿಸಿದ್ದು,ಈಸಲದ ವಿಶೇಷವಾಗಿದೆ.ಕಾಂಗ್ರೆಸ್‌ನಲ್ಲಿ ಹಿಂದೆ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಇದ್ದಾಗ ವೀರಪ್ಪ ಮೊಯಿಲಿ ರಾಜ್ಯದ ಮುಖ್ಯಮಂತ್ರಿಯಾದದ್ದು ಡೆಲ್ಲಿಯಿಂದ ಬಂದ ಲಕೋಟೆಯಿಂದ ಎಂದು ಎಲ್ಲರಿಗೂ ಗೊತ್ತಿದೆ.ಬೊಮ್ಮಾಯಿ ಮುಖ್ಯಮಂತ್ರಿಯಾದದ್ದು ಅದೇ ರೀತಿಯಾಗಿದೆ.ಅವರ ಮಂತ್ರಿ ಮಂಡಲದ ವಿಸ್ತರಣೆಗೆ, ನಿಗಮದ ನೇಮಕಾತಿಗೆ ಅವರು ಎಷ್ಟು ಬಾರಿ ಡೆಲ್ಲಿಗೆ ಹೋಗಿ ಮೋದಿಜೀ ಮತ್ತು ಅಮಿತ್ ಶಾ ಭೇಟಿಗೆ ಅವಕಾಶ ಸಿಗದೆ ಹಿಂತಿರುಗಿ ಬಂದಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ.ಕಾಂಗ್ರೆಸ್, ಬಿಜೆಪಿಯಿಂದ ಅಭ್ಯರ್ಥಿಗಳಾಗಲು ಹಲವು ಆಕಾಂಕ್ಷಿಗಳ ಹೆಸರು ಕೇಳಿ ಬರುತ್ತಿತ್ತಾದರೂ ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಸೀಟಿಗೆ ಇಬ್ಬರ ಹೆಸರು ಡೆಲ್ಲಿಗೆ ಹೋಗಿದ್ದರೆ, ಬಿಜೆಪಿಯಿಂದ ಮೂವರ ಹೆಸರು ಡೆಲ್ಲಿಗೆ ಹೋಗಿದೆ.ಅಂತಿಮವಾಗಿ ಯಾರ ಹೆಸರು ಬರುತ್ತದೆಯೋ ದೇವರೇ ಬಲ್ಲ.ಆದರೆ ಆ ಹೆಸರು ಡೆಲ್ಲಿಯ, ರಾಜ್ಯದ ಗುಲಾಮರಾಗಿ, ಹೆಸರಿಗೆ ಮಾತ್ರ ನಮ್ಮೂರಿನ ಪ್ರತಿನಿಧಿಯಾಗಿ ಕೆಲಸ ಮಾಡುವ ಲೈಟ್ ಕಂಬ ಅಥವಾ ಬೆರ್ಚಪ್ಪನೇ ಆಗಿರಬಹುದು.ಉತ್ತಮ ಅಭ್ಯರ್ಥಿ ಪ್ರತಿನಿಧಿಯಾಗಿ ಬಂದರೆ ನಮ್ಮ ಪುಣ್ಯವೇ ಸರಿ.ಈಗಿನ ವ್ಯವಸ್ಥೆಯಲ್ಲಿ ಡೆಲ್ಲಿಯಿಂದ ಹಳ್ಳಿಗೆ ಆಡಳಿತವೇ ನಡೆಯುತ್ತದೆ, ಅದು ಸರಿಯಲ್ಲ.ಮಹಾತ್ಮಗಾಂಧಿಯವರ ಆಶಯದಂತೆ ಹಳ್ಳಿಯಿಂದ ಡೆಲ್ಲಿಗೆ ಆಡಳಿತವಾಗಬೇಕು.ನಮ್ಮ ಪ್ರತಿನಿಧಿ ನಮಗಾಗಿ ಹೋರಾಟ ಮಾಡುವವ, ಕೆಲಸ ಮಾಡುವವನಾಗಬೇಕು.ಅಂದರೆ ಗ್ರಾಮ ಸ್ವರಾಜ್ಯವಿರಬೇಕು ಎಂಬುದು ಮತದಾರರ ಆಶಯ.


ಕಾರ್ಯಕರ್ತರ ಆಯ್ಕೆಯ ಪ್ರತಿನಿಧಿಯಾದರೆ ಮತದಾರರು ರಾಜರು:
ಮಠಂದೂರು ಅವರ ಸೀಟಿನ ನಿರಾಕರಣೆಗೆ ಸರಿಯಾದ ಉತ್ತರ ಸಿಗದೇ ಇದ್ದರೆ ಅದು ಪ್ರಜಾಪ್ರಭುತ್ವಕ್ಕೆ ಮಾರಕ.ಈ ಸಲ ಬಿಜೆಪಿಯಿಂದ ಹೊರಬರುವ ಹೊಸ ಮುಖಗಳು, ಹಳೇ ಮುಖಗಳು ಕೂಡ ಮೋದಿಯವರ ಕೃಪಾಕಟಾಕ್ಷದಿಂದ ಸೀಟು ದೊರಕಿದೆ ಎಂದಾದ ಕೂಡಲೇ ಅವರ ಅಣತಿಯಂತೆ ಕೆಲಸ ಮಾಡುತ್ತಾರೆ ಹೊರತು, ಊರಿನ ಜನರ ಪ್ರತಿನಿಧಿಯಾಗಿ ಕೆಲಸ ಮಾಡಲಾರರು. ಕಾಂಗ್ರೆಸ್‌ನಲ್ಲೂ ಅದೇ ಮನಸ್ಥಿತಿ ಇದೆ.ಡೆಲ್ಲಿಯಿಂದ ಅಭ್ಯರ್ಥಿ ಪಟ್ಟಿಗೆ ಕಾಯುತ್ತಿದ್ದಾರೆ.ಈ ರೀತಿ ಆಯ್ಕೆಯಾಗಿ ಬರುವ ಕಾಂಗ್ರೆಸ್, ಬಿಜೆಪಿಯ ಅಭ್ಯರ್ಥಿಗಳು ಆಯಾ ಪಕ್ಷದ ಕೇಂದ್ರದ, ರಾಜ್ಯದ ಪ್ರತಿನಿಧಿಗಳಾಗಿ ಅವರ ಗುಲಾಮರಾಗಿ ಇಲ್ಲಿ ಕೆಲಸ ಮಾಡಬೇಕೇ ಹೊರತು, ಇಲ್ಲಿಯ ಜನರ ಸ್ವಾಭಿಮಾನದ ಪ್ರತೀಕವಾಗಿ ಕೆಲಸ ಮಾಡಲು ಸಾಧ್ಯವೇ ಇಲ್ಲ.ಇಲ್ಲಿಯವರಿಗೆ ತೊಂದರೆಯಾದಾಗ ರಾಜ್ಯ ಮತ್ತು ಕೇಂದ್ರವನ್ನು ಎದುರಿಸಬೇಕಾಗಿ ಬಂದರೆ ಅವರು ರಾಜ್ಯ ಮತ್ತು ಕೇಂದ್ರದ ಕಡೆ ನಿಲ್ಲುತ್ತಾರೆಯೇ ಹೊರತು, ತಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಮತದಾರರ ಪರವಾಗಿ ನಿಲ್ಲರಾರರು. ಅದಕ್ಕಾಗಿ ಎರಡೂ ಪಕ್ಷಗಳ ಜನರು ತಮ್ಮ ತಮ್ಮ ಆಯ್ಕೆಯ ಪ್ರತಿನಿಧಿಗಳಿಗೆ ಸೀಟು ನೀಡುವಂತೆ ಒತ್ತಾಯ ಮಾಡಬೇಕು.ಆ ರೀತಿಯ ಶಕ್ತಿ ಪಕ್ಷದ ಕಾರ್ಯಕರ್ತರಿಗೆ ದೊರಕಿ ತಮ್ಮ ಆಯ್ಕೆಯ ಪ್ರತಿನಿಧಿಯನ್ನು ಆರಿಸುವಂತಾದರೆ ಮತದಾರರು ರಾಜರುಗಳಾಗಿ, ಅವರು ಮತದಾರರ ಪ್ರತಿನಿಧಿಗಳಾಗುತ್ತಾರೆ. ಇಲ್ಲದಿದ್ದರೆ ಅವರು ರಾಜ್ಯದ ಮತ್ತು ಡೆಲ್ಲಿಯ ಪ್ರತಿನಿಧಿಗಳಾಗುತ್ತಾರೆ.

LEAVE A REPLY

Please enter your comment!
Please enter your name here