ಇನ್ನೊಬ್ಬರನ್ನು ಗೆಲ್ಲಿಸಲಿಕ್ಕಾಗಿ, ಸೋಲಿಸಲಿಕ್ಕಾಗಿ ಮತದಾನವಲ್ಲ, ನಮ್ಮನ್ನು ಗೆಲ್ಲಿಸಲಿಕ್ಕಾಗಿ ನಮಗೆ ಬೇಕಾದ ಆಡಳಿತಕ್ಕಾಗಿ ಚುನಾವಣೆ, ರಾಷ್ಟ್ರ, ರಾಜ್ಯ, ಭಾಷೆ, ಜಾತಿ-ಧರ್ಮ, ಜನ, ದೇಶಸೇವೆಗಾಗಿ ಸ್ಪರ್ಧೆ ಎನ್ನುತ್ತಾರೆ

0

ಆದರೆ ಲಂಚ ಭ್ರಷ್ಟಾಚಾರ ನಿರ್ಮೂಲನೆಯೇ ಅತೀ ದೊಡ್ಡ ಜನಸೇವೆ, ದೇಶಸೇವೆ ಎಂದು ಯಾಕೆ ಹೇಳುವುದಿಲ್ಲ, ಅದಕ್ಕಾಗಿ ಯಾಕೆ ಹೋರಾಟ ನಡೆಸುವುದಿಲ್ಲ

  • ನಮ್ಮ ಮತದಾನದ ಒಂದು ಓಟು ಅಭ್ಯರ್ಥಿಯನ್ನು ಗೆಲ್ಲಿಸಬಲ್ಲುದು, ಸೋಲಿಸಬಲ್ಲುದು
  • ನಮ್ಮ ನೂರು, ಸಾವಿರಾರು ಜನರ ಓಟು (ಆಶಯ) ರಾಜ್ಯವನ್ನು ಭ್ರಷ್ಟಾಚಾರ ಮುಕ್ತ ಮಾಡಬಲ್ಲುದು

ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತು 76 ವರ್ಷಗಳಾದವು. ನಮಗಾಗಿ ದೇಶ, ರಾಜ್ಯದಲ್ಲಿ ನಮ್ಮದೇ ಆಡಳಿತಕ್ಕಾಗಿ ಪ್ರಜಾಪ್ರಭುತ್ವ. ಇಲ್ಲಿ ನಮ್ಮ ಪ್ರತಿನಿಧಿಗಳ ಆಯ್ಕೆಗೆಂದು ಈ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗಿ 71 ವರ್ಷಗಳು ಕಳೆದವು. ನಾವು ಆರಿಸಿದ ಜನಪ್ರತಿನಿಧಿಗಳು, ನೇಮಿಸಲ್ಪಟ್ಟ ಅಧಿಕಾರಿಗಳು, ನಮ್ಮ ಸೇವೆಗಾಗಿ ಇರುವ ಜನಸೇವಕರು ಮತದಾರರಾದ ನಾವು (ಜನರು) ರಾಜರು, ಎಂಬುದನ್ನು ನಾವು ಮರೆತಿದ್ದೇವೆ. ಆಡಳಿತದಲ್ಲಿರುವವರ ಗುಲಾಮರಂತೆ ಬದುಕುತ್ತಿದ್ದೇವೆ, ಜೀವನ ನಡೆಸುತ್ತಿದ್ದೇವೆ. ಈ ಚುನಾವಣಾ ಓಟಿನ ಸಂದರ್ಭದಲ್ಲಿ ಮಾತ್ರ ನಾವು ನಿಜವಾದ ರಾಜರುಗಳಾಗುತ್ತೇವೆ. ಚುನಾವಣೆಗೆ ನಿಂತವರು ನಮ್ಮ ಸೇವಕರಂತೆ ವರ್ತಿಸುತ್ತಾರೆ. ಪ್ರತಿಯೊಂದು ಓಟಿಗೂ ಗೌರವ ಬೆಲೆ ಕೊಟ್ಟು ನಮ್ಮನ್ನು ಗುರುತಿಸಿ ಓಟಿಗೆ ಕರೆ ತರುತ್ತಾರೆ. ನಮಸ್ಕರಿಸುತ್ತಾರೆ, ಹಿರಿಯರ ಕಾಲಿಗೂ ಬೀಳುತ್ತಾರೆ. ನಮ್ಮ ಸಮಸ್ಯೆಗಳನ್ನು ಆಲಿಸುತ್ತಾರೆ, ಪರಿಹಾರದ ಭರವಸೆ ನೀಡುತ್ತಾರೆ. ನಮ್ಮ ಬೈಗಳನ್ನು ತಿಂದರೂ ನಿಮ್ಮ ಸೇವೆಗಾಗಿ ಮತದಾನ ಮಾಡಿ ಗೆಲ್ಲಿಸಿ ಎಂದು ಹೇಳುತ್ತಾ ಅವರು ಆರ್ಶೀವಾದ ಪಡೆದೇ ಹೋಗುತ್ತಾರೆ. ಯಾಕೆಂದರೆ ನಮ್ಮ ಒಂದೊಂದು ಓಟು ಅವರನ್ನು ಗೆಲ್ಲಿಸಬಲ್ಲುದು, ಸೋತರೆ ಅವರು ಏನೂ ಅಲ್ಲ. ಗೆದ್ದರೆ ರಾಜರಾಗುತ್ತಾರೆ.

ಸರಕಾರಿ ಕಚೇರಿಯ ಕಂಬ-ಕಂಬಗಳಲ್ಲಿ, ಕಾಮಗಾರಿಯಲ್ಲಿ ಲಂಚ, ಭ್ರಷ್ಟಾಚಾರ ಯಾಕೆ?

ನಮ್ಮಿಂದ ಚುನಾಯಿತರಾಗಿ ಗೆದ್ದ ಅಭ್ಯರ್ಥಿಗಳು ಸರಕಾರ ರಚಿಸುತ್ತಾರೆ, ಕಾನೂನು ಮಾಡುತ್ತಾರೆ. ನಮ್ಮ ಸೇವೆಗಾಗಿ ಅಧಿಕಾರಿಗಳನ್ನು ನೇಮಿಸುತ್ತಾರೆ. ಹೀಗಿರುವಾಗ ಸರಕಾರಿ ಕಚೇರಿಗಳ ಕಂಬ ಕಂಬಗಳಲ್ಲಿ, ಕಾಮಗಾರಿಗಳಲ್ಲಿ, ಎಲ್ಲಾ ಕೆಲಸಗಳಲ್ಲಿ ಎಲ್ಲೆಂದರಲ್ಲಿ ಲಂಚ, ಭ್ರಷ್ಟಾಚಾರ ಯಾಕೆ? ನಾವು ನೀವು ಆರಿಸಿದ ಪಕ್ಷಗಳಿಗೆ, ಜನಪ್ರತಿನಿಧಿಗಳಿಗೆ, ಶಾಸಕರಿಗೆ, ಮಂತ್ರಿಗಳಿಗೆ, ಮುಖ್ಯಮಂತ್ರಿಗೆ, ಕೇಂದ್ರ ಸರಕಾರಕ್ಕೆ ಅವೆಲ್ಲವೂ ಗೊತ್ತಿಲ್ಲವೇ, ಗೊತ್ತಿದೆ. ಹೀಗಿದ್ದರೂ ಲಂಚ, ಭ್ರಷ್ಟಾಚಾರವನ್ನು ಪರ್ಸಂಟೇಜ್ ವ್ಯವಹಾರವನ್ನು, ಕಚೇರಿಗಳಲ್ಲಿ ಜನರ ಸುಲಿಗೆಯನ್ನು ನೋಡಿಯೂ ನೋಡದಂತೆ ಇರುವುದು, ಜಾಸ್ತಿ ಮಾಡುತ್ತಿರುವುದು ಯಾಕೆ?. ಯಾಕೆಂದರೆ ನಮ್ಮಿಂದ ಆಯ್ಕೆಯಾದವರು ತಾವು ರಾಜರೆಂದು ತಿಳಿದುಕೊಳ್ಳುತ್ತಾರೆ. ಅಧಿಕಾರಿಗಳನ್ನು, ವ್ಯವಸ್ಥೆಯನ್ನು ನಮ್ಮ ಸುಲಿಗೆಗಾಗಿ ರೂಪಿಸಿ ಪಾಲು ಪಡೆಯುತ್ತಾರೆ. ಅದಲ್ಲದೇ ಪರ್ಸೆಂಟೇಜ್ ವ್ಯವಹಾರದಲ್ಲಿ ಸಂಪಾದನೆಯನ್ನೂ ಮಾಡುತ್ತಾರೆ. ಎಲ್ಲಿಯವರೆಗೆ ನಾವು ರಾಜರುಗಳು, ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು, ಜನಸೇವಕರು ಎಂದು ಅರ್ಥಮಾಡಿಕೊಂಡು ಹೇಳುವುದಿಲ್ಲವೋ ಅಲ್ಲಿಯವರೆಗೆ ನಾವುಗಳು ಗುಲಾಮರಾಗಿ ಅವರು ರಾಜರುಗಳಾಗಿ ಉಳಿದುಕೊಂಡಿರುತ್ತಾರೆ. ಸುಲಿಗೆಗಳು ನಡೆಯುತ್ತಾ ಇರುತ್ತದೆ. ಹಾಗಿದ್ದರೆ ಅದಕ್ಕೆ ಪರಿಹಾರ ಸಾಧ್ಯವಿದೆಯೇ? ಇದೆ.

ಈ ಸಲದ ವಿಧಾನಸಭಾ ಚುನಾವಣೆ ಅದಕ್ಕೆ ಪರಿಹಾರ ಕೊಡಬಲ್ಲುದು. ಆಯಾ ಕ್ಷೇತ್ರದ ಜನರು ಪಕ್ಷ ಯಾವುದೇ ಇರಲಿ, ರಾಜ್ಯ, ದೇಶಸೇವೆಗಾಗಿ, ಧರ್ಮಕ್ಕಾಗಿ, ಸಂಸ್ಕೃತಿ, ಭಾಷೆ ಉಳಿವಿಗಾಗಿ ನಮ್ಮ ಮತ ಕೇಳುತ್ತಾರೆ ಎಂದಿದ್ದರೂ ಅದನ್ನು ಕೊಡುವ ಮೊದಲು ನಮ್ಮ ಗೆಲುವಿಗಾಗಿ ಮತದಾನದ ವ್ಯವಸ್ಥೆ ಇರುವುದು. ನಮಗೆ ಬೇಕಾದ ಆಡಳಿತಕ್ಕಾಗಿ ಜನಪ್ರತಿನಿಧಿಗಳ ಆಯ್ಕೆ ಮಾಡುತ್ತಿzವೆಯೇ ? ಎಂದು ಮೊದಲು ಯೋಚಿಸಿ ಮತದಾನ ಮಾಡಿದರೆ ನಮ್ಮ ಒಂದೊಂದು ಓಟು ಅವರನ್ನು ಸೋಲಿಸಿ ಅಥವಾ ಗೆಲ್ಲಿಸುವ ಮೂಲಕ ಈ ಚುನಾವಣೆಯು ಲಂಚ, ಭ್ರಷ್ಟಾಚಾರಕ್ಕೆ ಪರಿಹಾರ ಕೊಡಬಲ್ಲುದು.

ಅಭ್ಯರ್ಥಿಗಳಿಂದ ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆ ಮಾಡಿಸಿರಿ:
ನಮ್ಮಂತಹ ನೂರಾರು, ಸಾವಿರಾರು ಜನರು ಬಯಸಿದರೆ ಈ ಬದಲಾವಣೆ ಮಾತ್ರವಲ್ಲ ನಮಗೆ ಬೇಕಾದ ಆಡಳಿತ ತರಬಹುದು ಎಂಬುದನ್ನು ಅರಿತುಕೊಂಡು ಯಾರಿಗೆ ಮತದಾನ ಎಂಬ ಬಗ್ಗೆ ಚಿಂತಿಸಿರಿ. ಅಭ್ಯರ್ಥಿಗಳು ನೂರಾರು ಆಶ್ವಾಸನೆಗಳನ್ನು ನಮ್ಮ ಮುಂದೆ ಇಟ್ಟಿರುತ್ತಾರೆ. ಅವೆಲ್ಲವನ್ನು ಅವರು ಹೇಳುವಾಗ ನಾವು ನಮ್ಮ ಒಂದೆರಡು ಕೇಳಿಕೆಗಳನ್ನು ಚುನಾವಣೆಯ ಸ್ಪರ್ಧಿಗಳ ಮುಂದೆ ಇಡಬಹುದಲ್ಲವೇ?
೧) ಲಂಚ, ಭ್ರಷ್ಟಾಚಾರವನ್ನು ನಿಲ್ಲಿಸಲು ನಿಮ್ಮಿಂದ ಸಾಧ್ಯವಿಲ್ಲವೇ? ಸಾಧ್ಯವಿದೆ ಎಂದಾದರೆ ಅದನ್ನು ನಿಲ್ಲಿಸುತ್ತೇನೆ ಎಂಬ ಪ್ರತಿಜ್ಞೆ ಮಾಡಬಲ್ಲಿರಾ?
೨) ಲಂಚ, ಭ್ರಷ್ಟಾಚಾರ ಮಾಡಿದವರಿಂದ ನಮಗೆ (ಜನರಿಗೆ) ತೊಂದರೆಯಾದರೆ ಅದಕ್ಕೆ ಜವಾಬ್ದಾರಿಯನ್ನು ನೀವು ಹೊರಬೇಡವೇ? ಹಾಗಿದ್ದರೆ ಆ ಜವಾಬ್ದಾರಿಯ ಬಗ್ಗೆ ಪ್ರತಿಜ್ಞೆ ಮಾಡಬಲ್ಲಿರಾ?
೩) ಲಂಚ, ಭ್ರಷ್ಟಾಚಾರದಿಂದಾಗಿ ಹಣ, ಕಳೆದುಕೊಂಡವರಿಗೆ ಆ ಹಣವನ್ನು ಪರಿಹಾರವನ್ನು ಅಧಿಕಾರಿಗಳಿಂದ ಮತ್ತು ಸಂಬಂಧಪಟ್ಟವರಿಂದ ತೆಗೆಸಿಕೊಡುತ್ತೇನೆ ಎಂಬ ಪ್ರತಿಜ್ಞೆ ಮಾಡಬಲ್ಲಿರಾ?

ಯಾವುದೇ ಪಕ್ಷದವರು ಭ್ರಷ್ಟಾಚಾರ ಮಾಡಿದರೂ ಅವರನ್ನು ಬಹಿಷ್ಕರಿಸಿ:
ಸ್ವಾತಂತ್ರ್ಯ ಸಿಕ್ಕಿ 76 ವರ್ಷಗಳು ಕಳೆದರೂ ಲಂಚ, ಭ್ರಷ್ಟಾಚಾರದ ಹಲವಾರು ಹಗರಣಗಳು ಬೆಳಕಿಗೆ ಬಂದರೂ ಪ್ರತಿಯೊಬ್ಬ ವ್ಯಕ್ತಿಗೂ ಲಂಚ, ಭ್ರಷ್ಟಾಚಾರದ ಅನುಭವ ಆಗಿದ್ದರೂ ಅದನ್ನು ನಿಲ್ಲಿಸುವ ಪ್ರಾಮಾಣಿಕ ಪ್ರಯತ್ನ ಆಗಿರುವುದಿಲ್ಲ. ಬದಲಿಗೆ ಜಾಸ್ತಿ ಮಾಡುವ ಪ್ರಯತ್ನಗಳೇ ನಡೆದಿದೆ. ವಿರೋಧ ಪಕ್ಷಗಳು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಅಧಿಕಾರಕ್ಕೆ ಬಂದವರು ಹೇಳುತ್ತಾ ಅವರಿಗಿಂತ ಜಾಸ್ತಿ ಭ್ರಷ್ಟಾಚಾರವನ್ನು ಮಾಡಿ ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಓಟಿನಲ್ಲಿ ಗೆದ್ದದ್ದನ್ನೇ ತಮಗೆ ಭ್ರಷ್ಟಾಚಾರ ಮಾಡಲು ನೀಡಿದ ಅನುಮತಿ ಮತ್ತು ಅಧಿಕಾರವೆಂದು ಪರಿಗಣಿಸಿಕೊಳ್ಳುತ್ತಾರೆ. ಭ್ರಷ್ಟಾಚಾರವನ್ನು ಕೇಳಲು ನೀವು ಯಾರು ಆಧಾರ ಕೊಡಿ ಎಂದು ಘಂಟಾಘೋಷವಾಗಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುದಂತೂ ತಮಗೆ ತಿಳಿದಿದೆ. ಪ್ರಧಾನಿ ಮೋದೀಜಿಯವರು ನಾ ಖಾವೂಂಗಾ, ನಾ ಖಾನೇದೂಂಗ ಎಂದು ಹೇಳಿದಾಗ ಸ್ವರ್ಗವೇ ಧರೆಗೆ ಬಂದಂತೆ ಅನಿಸಿತ್ತು. ಪ್ರಧಾನಿಯವರು ನಾ ಖಾವೂಂಗಾ ಎಂದು ಹೇಳುವುದು ಸತ್ಯವೇ ಇದೆ ಎಂದಿಟ್ಟುಕೊಳ್ಳುವ. ಆದರೆ ವಿರೋಧ ಪಕ್ಷದವರು ಮಾಡಿದ ಭ್ರಷ್ಟಾಚಾರವನ್ನು ಬಯಲಿಗೆಳೆಯುತ್ತಾ ತಮ್ಮ ಪಕ್ಷದವರು ಮಾಡುತ್ತಿರುವ ಭ್ರಷ್ಟಾಚಾರವನ್ನು ಧೃತರಾಷ್ಟ್ರ (ಪಕ್ಷ) ಪ್ರೇಮದಿಂದ ಸಹಿಸಿಕೊಳ್ಳಬೇಡಿ. ಅದು ಪರೋಕ್ಷವಾಗಿ ಅವರಿಗೆ ರಕ್ಷಣೆಯನ್ನು ಮಾತ್ರವಲ್ಲ, ಪ್ರೋತ್ಸಾಹವನ್ನು ನೀಡುತ್ತಿದೆ. ಭ್ರಷ್ಟಾಚಾರಿ ಯಾರೇ ಆಗಿದ್ದರೂ ಗೆಲ್ಲಿಸಬೇಡಿ, ಬಹಿಷ್ಕರಿಸಿ ಎಂದು ಕರೆ ನೀಡುವಂತೆ ಮತದಾರರ ಮೂಲಕ ಪ್ರಧಾನಿ ಮೋದೀಜಿಯವರ ಗಮನಕ್ಕೆ ತರಲು ಇಚ್ಛಿಸುತ್ತೇನೆ.

ರಾಜ್ಯದ 224 ಕ್ಷೇತ್ರಗಳಲ್ಲೂ ಲಂಚ, ಭ್ರಷ್ಟಾಚಾರದ ವಿರುದ್ಧ ಕಿಡಿ ಹಚ್ಚಬೇಕು:

ಭ್ರಷ್ಟಾಚಾರ ನಿರ್ಮೂಲನೆಯ ನೇತೃತ್ವವನ್ನು ಪ್ರತಿಯೊಬ್ಬ ಮತದಾರರು ವಹಿಸಿಕೊಂಡು, ಮತದಾನವು ತನಗೇ ಆಗುವ ಅನ್ಯಾಯವನ್ನು ತಡೆಯುವ ಕಾರ್ಯಕ್ಕೆ ಸಿಕ್ಕ ಅವಕಾಶವೆಂದು ಪರಿಗಣಿಸಬೇಕು. ತಾನು ಮತ ನೀಡುವ ಪ್ರತಿಯೊಬ್ಬ ಅಭ್ಯರ್ಥಿಯು ಲಂಚ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ. ಲಂಚದಿಂದಾಗಿ ಭ್ರಷ್ಟಾಚಾರದಿಂದಾಗಿ ಯಾರಿಗಾದರೂ ತೊಂದರೆಯಾದರೆ ಅದಕ್ಕೆ ಪರಿಹಾರವನ್ನು, ಹಣವನ್ನು ಜನರಿಗೆ ತೆಗೆಸಿ ಕೊಡುವುದು ನನ್ನ ಜವಾಬ್ದಾರಿ ಎಂದು ಅವರು ಪ್ರತಿಜ್ಞೆ ಮಾಡುವಂತಾಗಬೇಕು. ಯಾರೇ ಗೆದ್ದು ಬಂದರೂ ಯಾವುದೇ ಪಕ್ಷ ಆರಿಸಿ ಬಂದರೂ ಊರಿನ ಎಲ್ಲರೂ ಒಗ್ಗಟ್ಟಾಗಿ ಗೆದ್ದ ಅಭ್ಯರ್ಥಿಯನ್ನು ತಾನು ಲಂಚ, ಭ್ರಷ್ಟಾಚಾರದ ಬಗ್ಗೆ ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುವಂತೆ ಮಾಡಬೇಕು ಎಂದು ಆಯಾ ಕ್ಷೇತ್ರದ ಮತದಾರರಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಈ ಸಲ ಕರ್ನಾಟಕ ರಾಜ್ಯದ 224 ಕ್ಷೇತ್ರಗಳಲ್ಲಿ ಈ ಕಿಡಿಯನ್ನು ಅಲ್ಲಲ್ಲಿಯ ಮತದಾರರು ಹಚ್ಚಬೇಕಾಗಿದೆ ಮತ್ತು ಆ ಆಂದೋಲನವನ್ನು ಮುಂದುವರಿಸಿಕೊಂಡು ಹೋಗುವ ಪ್ರತಿಜ್ಞೆ ಯನ್ನು ಮಾಡಬೇಕೆಂದು ವಿನಂತಿ ಮಾಡುತ್ತಿದ್ದೇನೆ.

ಡೆಲ್ಲಿಯಿಂದ ಹಳ್ಳಿಗೆ ಅಲ್ಲ, ಹಳ್ಳಿಯಿಂದ ಡೆಲ್ಲಿಗೆ ಗ್ರಾಮ ಸ್ವರಾಜ್ಯದ ಆಡಳಿತ ಬರಲಿ:
ನಾನು 1985ರಲ್ಲಿ ಬಳಕೆದಾರರ ವೇದಿಕೆಯ ಅಧ್ಯಕ್ಷನಾಗಿದ್ದಾಗ ಲಂಚ, ಭ್ರಷ್ಟಾಚಾರದ ವಿರುದ್ಧ ಆಂದೋಲನ ನಡೆಸಿದ್ದೆವು. ಅದರ ಪರಿಣಾಮವಾಗಿ ಅಂದಿನ ಸಬ್‌ಇನ್ಸ್‌ಪೆಕ್ಟರ್ ಕಾಂಬ್ಳೆಯವರು ಅತಿ ದೊಡ್ಡ ಭ್ರಷ್ಟಾಚಾರಿ ಎಂದು ಜನರು ಘೋಷಣೆ ಮಾಡಿದ್ದರು. ಅದರಿಂದ ಪೊಲೀಸ್ ಇಲಾಖೆಯ ಕೆಂಗಣ್ಣಿಗೆ ಗುರಿಯಾದ ನಾನು ಅವರು ಮಾಡುವ ಕೇಸ್‌ಗಳಿಂದ ಹೊರಬರಲು ಮತ್ತು ಈ ವಿಚಾರವನ್ನು ಪ್ರಚಾರ ಮಾಡಲು ಅಂದಿನ ಸಂಭಾವ್ಯ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗ್ಗಡೆಯವರ ಎದುರು ಬಸವನಗುಡಿಯಲ್ಲಿ, ಬಂಗಾರಪ್ಪನವರ ಎದುರು ಶಿವಮೊಗ್ಗದ ಸೊರಬದಲ್ಲಿ, ಮೊಯ್ಲಿಯವರ ಎದುರು ದ.ಕ.ದ ಕಾರ್ಕಳದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಪ್ರಚಾರ ಮಾಡಿದ್ದೆ. ಅದು ಅಲ್ಲಿ ಎಷ್ಟರ ಮಟ್ಟಿಗೆ ಪ್ರಯೋಜನವಾಗಿದೆ ಎಂದು ಹೇಳಲಾಗದಿದ್ದರೂ ನನ್ನ ಮೇಲಿನ ಕೇಸುಗಳನ್ನು ನಿವಾರಣೆ ಮಾಡಲು ಸಹಾಯ ಮಾಡಿದೆ. ಅಲ್ಲಿಂದ ಮುಂದೆಗೆ ಈ ಹೋರಾಟವನ್ನು ಮುಂದುವರಿಸಲು ರಾಜಕೀಯ ಪ್ರವೇಶ ಮಾಡಲು ಇಚ್ಛಿಸದೇ ಇದ್ದುದರಿಂದ ಅದರ ಬದಲು ಹೋರಾಟಕ್ಕಾಗಿ ಸುದ್ದಿಬಿಡುಗಡೆ ಪತ್ರಿಕೆಗಳನ್ನು ದ.ಕ. ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಹೊರತಂದು ಕಳೆದ 38 ವರ್ಷಗಳಿಂದ ನಡೆಸಿದ್ದೇನೆ. ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಆಂದೋಲನವನ್ನು ಈ ಮೇಲಿನ ಮೂರು ತಾಲೂಕಿನಲ್ಲಿ ವ್ಯಾಪಕವಾಗಿ ನಡೆಸಿದ್ದೇವೆ. ಉತ್ತಮ ಸೇವೆ ಮಾಡುವ ನೂರಾರು ಅಧಿಕಾರಿಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದ್ದೇವೆ. ಜನ ಬೆಂಬಲ ಗಳಿಸಿದ್ದೇವೆ. ಆದರೆ ಈ ವಿಚಾರ ಯಶಸ್ವಿಯಾಗಬೇಕಾದರೆ ಅದು ದೇಶದ ರಾಜಧಾನಿ ಡೆಲ್ಲಿಯಿಂದ ಮತ್ತು ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಕಾರ್ಯರೂಪಕ್ಕೆ ಬರಬೇಕು ಎಂಬ ನಂಬಿಕೆಯಿಂದ ಅದಕ್ಕೆ ಪ್ರಯತ್ನ ನಡೆಸಿದ್ದೇನೆ. ಮಹಾತ್ಮಾಗಾಂಧಿಯವರ ಆಶಯವಾದ ಹಳ್ಳಿಯಿಂದ ಡೆಲ್ಲಿಗೆ ಆಡಳಿತವಾಗಬೇಕು, ಡೆಲ್ಲಿಯಿಂದ ಹಳ್ಳಿಗೆ ಅಲ್ಲ ಎಂಬ ಗ್ರಾಮ ಸ್ವರಾಜ್ಯದ ಆಡಳಿತ ವ್ಯವಸ್ಥೆಯನ್ನು ಮತ್ತು ನಾವು ಆರಿಸುವ ಪ್ರತಿನಿಧಿ ನಮ್ಮ ಹಿತಕ್ಕಾಗಿ ನಮ್ಮ ಪ್ರತಿನಿಧಿಯಾಗಿ ಕೆಲಸ ಮಾಡಬೇಕು ಕೇಂದ್ರದ ಪ್ರತಿನಿಧಿಯಾಗಿ ಅಲ್ಲ ಎಂಬುದನ್ನು ಪ್ರತಿಪಾದಿಸಲಿಕ್ಕಾಗಿ ಪ್ರಧಾನಿ ಮೋದೀಜಿಯವರ ಕ್ಷೇತ್ರ ಉತ್ತರಪ್ರದೇಶದ ವಾರಣಾಸಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯವರ ಕ್ಷೇತ್ರ ಅಮೇಠಿಯಲ್ಲಿ ಸ್ಪರ್ಧಿಸ ಬಯಸಿದ್ದೆ. ಅಲ್ಲಿ ಮತ್ತು ಡೆಲ್ಲಿಯಲ್ಲಿ ಪತ್ರಿಕಾ ಮಾಧ್ಯಮದ ಮೂಲಕ ನನ್ನ ವಿಚಾರಧಾರೆಯನ್ನು ಪ್ರಚಾರ ಮಾಡಲು ಪ್ರಯತ್ನಿಸಿದ್ದೇನೆ.

ಕನಿಷ್ಟ 100ರಿಂದ 1000 ಜನ ರಾಜ್ಯದ 224 ಕ್ಷೇತ್ರಗಳಲ್ಲೂ ಆಂದೋಲನ ಕೈಗೆತ್ತಿಕೊಂಡರೆ ನಾವು ಓಟಿನಲ್ಲಿ ಗೆದ್ದಂತೆ, ಭ್ರಷ್ಟಾಚಾರ ನಿರ್ಮೂಲನೆ ಖಂಡಿತ:

ಇದೀಗ ಕರ್ನಾಟಕ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಚುನಾವಣೆ ಇರುವುದರಿಂದ ಈ ಅವಕಾಶವನ್ನು ಉಪಯೋಗಿಸಿಕೊಂಡು ಸಾಧ್ಯವಾದರೆ ಎಲ್ಲಾ ಕ್ಷೇತ್ರಗಳಲ್ಲೂ, ಇಲ್ಲದಿದ್ದರೆ ಪ್ರತಿಯೊಂದು ಜಿಲ್ಲೆಯ ಒಂದೊಂದು ಕ್ಷೇತ್ರದಲ್ಲಿ, ಅದೂ ಸಾಧ್ಯವಾಗದಿದ್ದರೆ ಸಂಭಾವ್ಯ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಅಲ್ಲಿಯ ಮತದಾರರ ಮೂಲಕ ಈ ವಿಚಾರವನ್ನು ಸಂಭಾವ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಿದ್ದೇನೆ. ಮುಖ್ಯಮಂತ್ರಿಗಳಾಗಲು ಬಯಸುವ ಪ್ರತಿಯೊಬ್ಬ ಅಭ್ಯರ್ಥಿ, ಲಂಚ, ಭ್ರಷ್ಟಾಚಾರದ ವಿರುದ್ಧದ ಕ್ರಮ ಮತ್ತು ಅದರಿಂದ ತೊಂದರೆಯಾಗುವ ಜನರಿಗೆ ಪರಿಹಾರವನ್ನು, ಹಣವನ್ನು ತೆಗೆಸಿಕೊಡುವ ಪ್ರತಿಜ್ಞೆ ಮಾಡುವಂತೆ ಅವರವರ ಕ್ಷೇತ್ರದ ಮತದಾರರ ಮೂಲಕ ಮಾಡುವ ಪ್ರಯತ್ನ ನಡೆಸಲಿದ್ದೇವೆ. ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಳ್ಳುವವರ ಮೂಲಕ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಲಂಚ, ಭ್ರಷ್ಟಾಚಾರ ನಿರ್ಮೂಲನೆ ಕಾರ್ಯರೂಪಕ್ಕೆ ತರುವುದು ನಮ್ಮ ಯೋಜನೆಯ ಉದ್ದೇಶವಾಗಿದೆ. ಅವರುಗಳ ಕ್ಷೇತ್ರದಲ್ಲಿ ಮಾತ್ರವಲ್ಲ ಅಗತ್ಯ ಬಿದ್ದಲ್ಲಿ ಅಥವಾ ಬೆಂಬಲ ದೊರಕಿದ್ದಲ್ಲಿ ಚುನಾವಣೆಗೆ ಇತರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿಯಾದರೂ ಲಂಚ, ಭ್ರಷ್ಟಾಚಾರದ ವಿರುದ್ಧದ ಜನಜಾಗೃತಿಯ ಪ್ರಯತ್ನಕ್ಕೆ ಕೈಹಾಕಬೇಕೆಂದಿದ್ದೇನೆ. ಪ್ರತಿಯೊಂದು ಕ್ಷೇತ್ರದಿಂದ ಕನಿಷ್ಠ ನೂರರಿಂದ ಸಾವಿರ ಮತದಾರರು ಲಂಚ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಜವಾಬ್ದಾರಿಯನ್ನು ವಹಿಸಿಕೊಂಡರೆ, ಆಯಾ ಕ್ಷೇತ್ರದಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಪ್ರಯತ್ನಿಸಿದರೆ ಚುನಾವಣೆಯ ನಂತರವೂ ಕಾರ್ಯಶೀಲರಾದರೆ ನಾವು ಗೆದ್ದಂತೆ. ಒಂದುವೇಳೆ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸಬೇಕಾಗಿ ಬಂದರೆ ಅವರು ಓಟಿನ ಬದಲು ಈ ಆಂದೋಲನಕ್ಕೆ ಬೆಂಬಲ ನೀಡುವಂತೆ ಕೇಳಲಿದ್ದಾರೆ. ಆ ಮೂಲಕ ಈ ಆಂದೋಲನವನ್ನು ರಾಜ್ಯದಾದ್ಯಂತ ಹರಡುವುದು ಮಾತ್ರವಲ್ಲ, ಮುಂದಿನ ಲೋಕಸಭಾ ಚುನಾವಣೆಯ ಒಳಗಡೆ ಅದು ಎಲ್ಲಾ ಕ್ಷೇತ್ರಗಳಲ್ಲಿಯೂ ಕಾರ್ಯರೂಪಕ್ಕೆ ಬರುವಂತೆ ಮಾಡಿ ಎಲ್ಲಾ ಪಕ್ಷಗಳು ಲಂಚ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವಂತಹ ವಾತಾವರಣ ಸೃಷ್ಠಿಸಲಿದ್ದೇವೆ. ಲಂಚ, ಭ್ರಷ್ಟಾಚಾರದ ವಿರುದ್ಧ ಜನಾಭಿಪ್ರಾಯವಾದರೆ ಎಲ್ಲಾ ಪಕ್ಷಗಳು ಅದರ ಮೇಲೆಯೇ ತಮ್ಮ ಚುನಾವಣಾ ಅಜೆಂಡಾವನ್ನು ರೂಪಿಸುತ್ತವೆ ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತವೆ ಎಂಬ ವಿಶ್ವಾಸದ ಮೇಲೆ ನಾವು ನಂಬಿಕೆ ಇರಿಸಿzವೆ. ಜನರು ತಾವು ರಾಜರುಗಳೆಂದು ಪರಿಗಣಿಸಿ ಮತದಾನ ಮಾಡುತ್ತಾರೆ ಎಂಬ ವಿಶ್ವಾಸದ ಮೇಲೆ ಈ ಆಂದೋಲನಕ್ಕೆ ಕೈ ಹಾಕಿದ್ದೇನೆ. 38 ವರ್ಷಗಳ ಸುದೀರ್ಘ ಪತ್ರಿಕೋದ್ಯಮದಲ್ಲಿ ಸಾಕಷ್ಟು ಯಶಸ್ಸು, ಜನರ ಪ್ರೀತಿ ಗಳಿಸಿದ್ದರೂ ಇದೀಗ ಅದರಿಂದ ಹೊರಬಂದು ನಾನು ಲಂಚ, ಭ್ರಷ್ಟಾಚಾರದ ವಿರುದ್ಧದ ಈ ಆಂದೋಲನವನ್ನು ರಾಜ್ಯದ ಜನರ ಆಂದೋಲನವಾಗಿ ಮಾಡಲು ಪ್ರಯತ್ನಿಸುತ್ತಿದ್ದೇನೆ. ಪ್ರತಿಯೊಂದು ಕ್ಷೇತ್ರದಿಂದ ಕನಿಷ್ಠ ನೂರರಿಂದ ಸಾವಿರ ಜನರಾದರೂ ಅದನ್ನು ಮುಂದುವರಿಸಲಿ ಎಂಬ ಆಶಯದಿಂದ ರಾಜ್ಯದಲ್ಲಿ ನನ್ನ ಅಂತಿಮ ಪ್ರಯತ್ನಕ್ಕೆ ಕೈಹಾಕಿದ್ದೇನೆ. ಉಸಿರು ಇರುವವರೆಗೆ ನನ್ನ ಪ್ರಯತ್ನ ಮುಂದುವರಿಯಲಿದೆ. ಜನರು ಮತ್ತು ವಿಶೇಷವಾಗಿ ಮಾಧ್ಯಮದವರು ಅದನ್ನು ಯಶಸ್ಸು ಮಾಡಲು ಮುಂದೆ ಬರಬೇಕೆಂದು ವಿನಂತಿಸುತ್ತಿದ್ದೇನೆ. ಈ ಜನಾಂದೋಲನದಲ್ಲಿ ಕೈ ಜೋಡಿಸಲು, ತನು-ಮನ-ಧನ ಸಹಾಯ ಮಾಡಲು ಇಚ್ಛಿಸುವವರು ಈ ಕೆಳಗೆ ನೀಡುವ ನಂಬರ್‌ನ್ನು ಸಂಪರ್ಕಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.
ಸಂಪರ್ಕ ಸಂಖ್ಯೆ:9986398949

LEAVE A REPLY

Please enter your comment!
Please enter your name here