ಮಠಂದೂರ್‌ಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ-ಬಜತ್ತೂರು, ಹಿರೇಬಂಡಾಡಿಯಲ್ಲಿ ಕಾರ್ಯಕರ್ತರ ಅಸಮಾಧಾನ:ಪಕ್ಷದ ಹುದ್ದೆಯಿಂದ ಹಿಂದೆ ಸರಿಯುವ ಮುನ್ಸೂಚನೆ

0

ಉಪ್ಪಿನಂಗಡಿ: ಮೇ 10ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ದಿನಗಣನೆ ಆರಂಭವಾದರೂ ಪುತ್ತೂರು ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆಗೆ ಬಿಜೆಪಿಯಲ್ಲಿ ಕಸರತ್ತು ನಡೆಯುತ್ತಿದೆ. ಹಾಲಿ ಶಾಸಕ ಸಂಜೀವ ಮಠಂದೂರು ಬದಲಿಗೆ ಹೊಸ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಮುಂದಾಗಿರುವುದು ಕ್ಷೇತ್ರದಲ್ಲಿನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಗೆಲ್ಲುವ ಅಭ್ಯರ್ಥಿಯಾಗಿರುವ ಸಂಜೀವ ಮಠಂದೂರು ಅವರಿಗೇ ಪುತ್ತೂರು ಕ್ಷೇತ್ರದಲ್ಲಿ ಮತ್ತೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಪಕ್ಷದ ಹುದ್ದೆಯಿಂದ ಹಿಂದೆ ಸರಿಯಲು ಹಿರೇಬಂಡಾಡಿ, ಬಜತ್ತೂರು, ಉಪ್ಪಿನಂಗಡಿ ಶಕ್ತಿಕೇಂದ್ರದ ಪ್ರಮುಖರು ಮುಂದಾಗಿದ್ದು ಈ ಬಗ್ಗೆ ಮಂಡಲ ಅಧ್ಯಕ್ಷರಿಗೆ ಹಾಗೂ ಪಕ್ಷದ ಜಿಲ್ಲಾಧ್ಯಕ್ಷರಿಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ.

ರಾಜ್ಯದ ಗಮನ ಸೆಳೆದಿರುವ ಪುತ್ತೂರು ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿಯಲ್ಲೂ ಗೊಂದಲ ಮುಂದುವರಿದಿದೆ. ಹಾಲಿ ಶಾಸಕ ಸಂಜೀವ ಮಠಂದೂರು ಅವರ ಬದಲಿಗೆ ಹೊಸ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಒಲವು ತೋರಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ಕ್ಷೇತ್ರಕ್ಕೆ ಬಿಜೆಪಿಯಲ್ಲಿ ದಿನಕ್ಕೊಂದು ಹೊಸ ಹೆಸರುಗಳೂ ಕೇಳಿಬರುತ್ತಿವೆ. ಈ ಎಲ್ಲಾ ಬೆಳವಣಿಗೆ ಮಧ್ಯೆ ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನು ಕೈ ಬಿಟ್ಟು ಹೊಸ ಅಭ್ಯರ್ಥಿಯ ಹುಡುಕಾಟಕ್ಕೆ ಮುಂದಾಗಿರುವ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಪಕ್ಷದ ಕಾರ್ಯಕರ್ತರಿಂದ ಅಸಮಾಧಾನ ವ್ಯಕ್ತವಾಗಿದೆ. ಸಂಜೀವ ಮಠಂದೂರು ಅವರು ಕಳೆದ 5 ವರ್ಷಗಳ ಅವಧಿಯಲ್ಲಿ 2 ವರ್ಷ ಕೋವಿಡ್ ಸಂಕಷ್ಟವಿದ್ದರೂ ಕ್ಷೇತ್ರಕ್ಕೆ ವಿವಿಧ ಮೂಲಗಳಿಂದ 1200 ಕೋಟಿ ರೂಪಾಯಿಗೂ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅನುದಾನ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ. ಜಾತಿ, ಧರ್ಮ ನೋಡಿಲ್ಲ. ಎಲ್ಲಾ ಬೂತ್‌ಗಳಿಗೂ ಸಮಾನವಾಗಿ ಅನುದಾನ ಹಂಚಿಕೆ ಮಾಡಿದ್ದಾರೆ. ಸಂಜೀವ ಮಠಂದೂರು ಅವರು ಎಲ್ಲರೂ ಒಪ್ಪುವ ಅಭ್ಯರ್ಥಿ. ಪಕ್ಷದ ಆಂತರಿಕ ಸಮೀಕ್ಷೆಯಲ್ಲೂ ಸಂಜೀವ ಮಠಂದೂರು ಅವರ ಪರವಾಗಿಯೇ ಒಲವು ವ್ಯಕ್ತಗೊಂಡಿದೆ. ಆದರೂ ಪಕ್ಷದ ನಾಯಕರು ಸಂಜೀವ ಮಠಂದೂರು ಬದಲಿಗೆ ಹೊಸ ಅಭ್ಯರ್ಥಿ ಆಯ್ಕೆಗೆ ಮುಂದಾಗಿರುವುದು ಪಕ್ಷದ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿದೆ. ಕೆಲವರು ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಪಕ್ಷದ ಮುಖಂಡರಿಗೆ ಈಗಾಗಲೇ ಮನವರಿಕೆ ಮಾಡಿರುವುದಾಗಿಯೂ ತಿಳಿದುಬಂದಿದೆ. ಹಿರೇಬಂಡಾಡಿ, ಬಜತ್ತೂರು, ಉಪ್ಪಿನಂಗಡಿ ಶಕ್ತಿಕೇಂದ್ರದ ಪ್ರಮುಖ್, ಬೂತ್ ಸಮಿತಿ ಪದಾಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರೂ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿ ಪಕ್ಷದ ಹುದ್ದೆಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದಾರೆ. ತಮ್ಮ ಅಭಿಪ್ರಾಯವನ್ನು ಪಕ್ಷದ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಿಗೆ ಹಾಗೂ ದ.ಕ.ಜಿಲ್ಲಾ ಅಧ್ಯಕ್ಷರಿಗೆ ಮೌಖಿಕವಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಅತೀ ಹೆಚ್ಚು ಅನುದಾನ ಬಂದಿದೆ:
ಸಂಜೀವ ಮಠಂದೂರು ಅವರು ಶಾಸಕರಾದ ಬಳಿಕ ಬಜತ್ತೂರು ಗ್ರಾಮದ ಇತಿಹಾಸದಲ್ಲಿಯೇ ಗ್ರಾಮಕ್ಕೆ ಅತೀ ಹೆಚ್ಚು ಅನುದಾನ ಬಂದಿದೆ. ಗ್ರಾಮದ ಪ್ರಮುಖ ರಸ್ತೆ, ಸೇತುವೆ ಅಭಿವೃದ್ಧಿ ಕೆಲಸ ಆಗಿದೆ. ಅನುದಾನ ಹಂಚಿಕೆಯಲ್ಲೂ ತಾರತಮ್ಯ ಎಸಗಿಲ್ಲ. ಎಲ್ಲಾ ಜಾತಿ, ಧರ್ಮದವರಿಗೂ ಅನುದಾನ ಹಂಚಿಕೆ ಮಾಡಿದ್ದಾರೆ. ಬಜತ್ತೂರು ಗ್ರಾಮವೊಂದಕ್ಕೆ 33 ಕೋಟಿ ರೂ.,ಅನುದಾನ ಬಂದಿದೆ. ಸಂಜೀವ ಮಠಂದೂರು ಅವರಿಗೆ ಪುತ್ತೂರು ಕ್ಷೇತ್ರದಲ್ಲಿ ಮತ್ತೊಮ್ಮೆ ಅವಕಾಶ ನೀಡಬೇಕು. ಇಲ್ಲದೇ ಇದ್ದಲ್ಲಿ ಪಕ್ಷದ ಶಕ್ತಿಕೇಂದ್ರದ ಪ್ರಮುಖ್, ಬೂತ್ ಸಮಿತಿ ಪದಾಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರೂ ಪಕ್ಷದ ಹುದ್ದೆಯಿಂದ ಹಿಂದೆ ಸರಿಯುವ ನಿರ್ಧಾರಕ್ಕೆ ಬಂದಿದ್ದೇವೆ.
-ವಸಂತ ಗೌಡ ಪಿಜಕ್ಕಳ
ಅಧ್ಯಕ್ಷರು, ಬಜತ್ತೂರು ಶಕ್ತಿಕೇಂದ್ರ

ಹೊಸ ಮುಖದಿಂದ ಗೆಲುವು ಕಷ್ಟ:
ಸಂಜೀವ ಮಠಂದೂರು ಬದಲಿಗೆ ಹೊಸ ಮುಖಗಳಿಗೆ ಟಿಕೆಟ್ ನೀಡಿದಲ್ಲಿ ಪುತ್ತೂರು ಕ್ಷೇತ್ರದಲ್ಲಿ ಗೆಲುವು ಕಷ್ಟ ಆಗಲಿದೆ. ಈ ವಿಚಾರವನ್ನು ನಾವು ಈಗಾಗಲೇ ಪಕ್ಷದ ಮುಖಂಡರ ಗಮನಕ್ಕೂ ತಂದಿದ್ದೇವೆ. ಸಂಜೀವ ಮಠಂದೂರು ಅವರ ಅವಧಿಯಲ್ಲಿ ಗ್ರಾಮ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸ ನಡೆದಿದೆ. ಹಿರೇಬಂಡಾಡಿ ಗ್ರಾಮಕ್ಕೂ ಅತೀ ಹೆಚ್ಚಿನ ಅನುದಾನ ಬಂದಿದೆ. ಅವರೇ ಮತ್ತೆ ಸ್ಪರ್ಧೆ ಮಾಡಿದಲ್ಲಿ ಗೆಲುವು ಸುಲಭವಾಗಿ ಸಿಗಲಿದೆ. ಆದ್ದರಿಂದ ಸಂಜೀವ ಮಠಂದೂರು ಅವರಿಗೇ ಟಿಕೆಟ್ ನೀಡಬೇಕೆಂಬುದು ನಮ್ಮ ಬೇಡಿಕೆ. ಅವರಿಗೆ ಅವಕಾಶ ನೀಡದೇ ಇದ್ದಲ್ಲಿ ಈ ಚುನಾವಣೆಯಲ್ಲಿ ನಾವು ತಟಸ್ಥರಾಗುತ್ತೇವೆ.
-ದಯಾನಂದ ಸರೋಳಿ
ಅಧ್ಯಕ್ಷರು, ಹಿರೇಬಂಡಾಡಿ ಶಕ್ತಿಕೇಂದ್ರ

LEAVE A REPLY

Please enter your comment!
Please enter your name here