ಬೆಟ್ಟಂಪಾಡಿ ಗ್ರಾಮದ ರೈತರಿಗೆ ಬೆಳೆ ವಿಮೆ ಅತೀ ಕಡಿಮೆ ಜಮೆ- ಸದಸ್ಯರ ಆರೋಪ – ಪರಿಶೀಲಿಸಿ ಸೂಕ್ತ ರೀತಿಯಲ್ಲಿ ಜಮೆ ಮಾಡುವಂತೆ ಸದಸ್ಯರ ಆಗ್ರಹ-ಬೆಟ್ಟಂಪಾಡಿ ಗ್ರಾ.ಪಂ.ಸಾಮಾನ್ಯ ಸಭೆ

0

ನಿಡ್ಪಳ್ಳಿ; ಬೆಟ್ಟಂಪಾಡಿ ಗ್ರಾಮದ ರೈತರ ಖಾತೆಗೆ ಜಮೆಯಾದ ಬೆಳೆ ವಿಮೆ ಮೊತ್ತ ಇತರ ಗ್ರಾಮದ ರೈತರ ಖಾತೆಗೆ ಜಮೆಯಾದ ಮೊತ್ತಕ್ಕೆ ಹೋಲಿಸಿದರೆ ಅತೀ ಕಡಿಮೆ ಜಮೆಯಾಗಿದೆ ಎಂದು, ಆರೋಪಿಸಿದ ಪಂಚಾಯತ್ ಸದಸ್ಯರು ಪರಿಶೀಲಿಸಿ ಸೂಕ್ತ ರೀತಿಯಲ್ಲಿ ಜಮೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಲು ಆಗ್ರಹಿಸಿದ ಘಟನೆ ಬೆಟ್ಟಂಪಾಡಿ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು. ಸಾಮಾನ್ಯ ಸಭೆ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ ಇವರ ಅಧ್ಯಕ್ಷತೆಯಲ್ಲಿ ಡಿ.9ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಸಭೆ ಆರಂಭಗೊಂಡ ಕೂಡಲೇ ಈ ಬಗ್ಗೆ ಸದಸ್ಯರಾದ ಮೊಯಿದುಕುಂಞ ಮತ್ತು ವಿನೋದ್ ರೈ, ನವೀನ್ ರೈ ಮತ್ತೀತರರು ಪ್ರಸ್ತಾಪಿಸಿ ನೆರೆಯ ಗ್ರಾಮಕ್ಕೆ ಕಟ್ಟಿದ ಮೊತ್ತಕ್ಕೆ ಅಂದಾಜು 6% ಪ್ರಕಾರ ಜಮೆಯಾಗಿದೆ ಎಂದು ತಿಳಿದು ಬಂದಿದೆ. ಆದರೆ ಬೆಟ್ಟಂಪಾಡಿ ಗ್ರಾಮದ ರೈತರು ಕಟ್ಟಿದ ಮೊತ್ತ ಮಾತ್ರ ಜಮೆಯಾಗಿದ್ದು ಇದಕ್ಕೆ ಕಾರಣವೇನು ಎಂದು ಹೆಚ್ಚಿನ ಸದಸ್ಯರು ಪ್ರಸ್ತಾಪಿಸಿದಾಗ ಬೆಳೆ ವಿಮೆ ಬಗ್ಗೆ ಬಹಳ ಚರ್ಚೆ ನಡೆಯಿತು.ಈ ವರ್ಷ ಬೆಳೆ ವಿಮೆ ತಡವಾಗಿ ಬಂದಿದೆ ಆದರೆ ಕಡಿಮೆ ಮೊತ್ತ ಜಮೆಯಾದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಾಗ ಉತ್ತರಿಸಿದ ಸದಸ್ಯ ನವೀನ್ ರೈಯವರು ಈಗ ಜಮೆಯಾದ ಮೊತ್ತ ಕೇವಲ ಕಾಳುಮೆಣಸು ಬೆಳೆಗೆ ಕಟ್ಟಿದ ಮೊತ್ತಕ್ಕೆ 4.75% ಪರಿಹಾರ ಧನ ಜಮೆಯಾಗಿದ್ದು ತಾಂತ್ರಿಕ ದೋಷದ ಕಾರಣ ಅಡಿಕೆ ಬೆಳೆಯ ವಿಮಾ ಮೊತ್ತ ಬರಲಿಲ್ಲ. ಇನ್ನು ಮುಂದಿನ ದಿನಗಳಲ್ಲಿ ಬರಬಹುದು. ಈ ಬಗ್ಗೆ ರೈತರು ಯಾವುದೇ ರೀತಿಯ ಗಾಬರಿ ಪಡುವುದು ಅಗತ್ಯವಿಲ್ಲ. ಈ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಅಡಿಕೆ ಬೆಳೆಗೆ ಬೆಳೆ ವಿಮೆ ಜಮೆಯಾಗಲಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ ಎಂದು  ತಿಳಿಸಿದರು.

ಗೋಳಿಪದವು ಅಂಬೇಡ್ಕರ್ ಭವನ ಎಲ್ಲಾ ಸೌಕರ್ಯ ಪೂರ್ತಿಗೊಳಸಲಿ;
ಇರ್ದೆ ಗ್ರಾಮದ ಗೇಳಿಪದವು ಎಂಬಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಿದ ಅಂಬೇಡ್ಕರ್ ಭವನ ಕಟ್ಟಡ ಮಾತ್ರ ಆಗಿದೆ. ಆದರೆ ಅಲ್ಲಿ ಶೌಚಾಲಯದ ವ್ಯವಸ್ಥೆ ಮತ್ತು ಕಟ್ಟಡಕ್ಕೆ ವಿದ್ಯುತ್ ಅಳವಡಿಕೆ ಆಗದ ಬಗ್ಗೆ ಚರ್ಚಿಸಲಾಯಿತು. ಎಲ್ಲಾ ಸೌಕರ್ಯವನ್ನು ಇಲಾಖೆ ಮಾಡದೆ ಪಂಚಾಯತ್ ಸುಪರ್ದಿಗೆ ಕಟ್ಟಡವನ್ನು ತೆಗೆದು ಕೊಂಡರೆ ನಂತರ ಬಾಕಿ ಉಳಿದ ಕಾಮಗಾರಿ ಪಂಚಾಯತ್ ಮಾಡ ಬೇಕಾದ ಪರಿಸ್ಥಿತಿ ಬಂದರೆ ಎಲ್ಲಿಂದ ಅನುದಾನ ನೀಡುವುದು. ಆದುದರಿಂದ ಸಮಾಜ ಕಲ್ಯಾಣ ಇಲಾಖೆ ಅಲ್ಲಿ ಬಾಕಿ ಉಳಿದ ಮೂಲಭೂತ ಸೌಕರ್ಯ ಒದಗಿಸಿದ ಮೇಲೆ ಪಂಚಾಯತ್ ಗೆ ತೆಗೆದು ಕೊಳ್ಳ ಬಹುದು ಎಂದು ಪಿಡಿಒ ಮತ್ತು ಸದಸ್ಯರು ಹೇಳಿದರು.ಬೇರೆ ಕೆಲವು ಗ್ರಾಮಗಳಲ್ಲಿ ಇದೆ ಪರಿಸ್ಥಿತಿ ಆಗಿದೆ. ಕಟ್ಟಡ ಮಾತ್ರ ಕಟ್ಟಿ ನಂತರ ಉದ್ಘಾಟನೆ ಕೂಡ ಆಗದೆ ಹಾಗೆಯೇ ಇದೆ ಎಂದು ಕೆಲವು ಸದಸ್ಯರು ಹೇಳಿದರು. ಅಲ್ಲಿ ಬೇಕಾದ ವ್ಯವಸ್ಥೆ ಕಲ್ಪಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ಬರೆಯಲು ನಿರ್ಣಯಿಸಲಾಯಿತು.

9/11 ಪಂಚಾಯತ್ ನಲ್ಲಿ ಕೊಡುವ ವ್ಯವಸ್ಥೆಯಾಗುವಂತೆ ಕೆಡಿಪಿ ಸಭೆಯಲ್ಲಿ ಚರ್ಚೆಗೆ ಬರಲಿ;
9/11 ಗಾಗಿ ಪುಡಾದಲ್ಲಿ ಅರ್ಜಿ ಕೊಟ್ಟು 6 ತಿಂಗಳು ಕಳೆದರೂ ಜನರಿಗೆ ಸಿಗುತ್ತಿಲ್ಲ. ಇದರಿಂದ ಮನೆ ಮತ್ತು ಇನ್ನಿತರ ಕಟ್ಟಡ ಕಟ್ಟುವವರಿಗೆ ಬಹಳ ಸಮಸ್ಯೆಯಾಗುತ್ತಿರುವ ಬಗ್ಗೆ ಜನರಿಂದ ಆರೋಪ ಕೆಲವು ವರ್ಷಗಳಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಕೆಲವು ಸದಸ್ಯರು ಪ್ರಸ್ತಾಪಿಸಿ ಪುಡಾಕ್ಕೆ ಅರ್ಜಿ ಕೊಟ್ಟು ಅಲೆದಾಡುವ ಪರಿಸ್ಥಿತಿ ಬಂದಿದೆ. ಅಲ್ಲಿ ಒಬ್ಬ ಇಂಜಿನಿಯರ್ ಇದ್ದು ವಾರದಲ್ಲಿ ಒಂದು ದಿವಸ ಕಚೇರಿಯಲ್ಲಿ ಇರುವುದು.ಆ ದಿವಸ ಅವರಿಗೆ ಸರಕಾರದ ಬೇರೆ ಕೆಲಸ ಇದ್ದರೆ ಅವತ್ತು ಅವರು ಸಿಗುವುದಿಲ್ಲ. ಜನ ಸಾಮಾನ್ಯರಿಗೆ ಅದಕ್ಕಾಗಿ ತನ್ನ ಉದ್ಯೋಗ ಬಿಟ್ಟು  ಅಲೆದಾಡುವ ಕೆಲಸವಾಗುತ್ತದೆ.ಅಲ್ಲಿ ಬ್ರೋಕರ್ ಗಳ ಮೂಲಕ ಹೋದ ಅರ್ಜಿಗಳು ಬೇಗ ಮುಂದೆ ಹೋಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತದೆ. ಹಾಗಿದ್ದರೆ ಲಂಚದ ವ್ಯವಹಾರ ನಡೆಯುತ್ತಿರ ಬೇಕು ಎಂಬ ಸಂಶಯ ಮೂಡುತ್ತಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು. ಹೀಗಾದರೆ ಜನರು ದಂಗೆ ಏಳುವ ದಿನ ದೂರವಿಲ್ಲ ಎಂದು ಸದಸ್ಯರು ಅಭಿಪ್ರಾಯ ಪಟ್ಟರು. ಪಂಚಾಯತ್ ಮೂಲಕ ನೀಡುವ ವ್ಯವಸ್ಥೆ ಮಾಡುವಂತೆ ನಾವು ಎಷ್ಟು ನಿರ್ಣಯ ಮಾಡಿ ಕಳಿಸಿದರೂ ಪ್ರಯೋಜನವಿಲ್ಲ. ಈ ಸಮಸ್ಯೆ ಬಗ್ಗೆ ಕೆಡಿಪಿ ಸಭೆಯಲ್ಲಿ ಮಹತ್ವದ ಚರ್ಚೆಗೆ ಬರುವಂತೆ ಆಗಬೇಕು ಎಂದು ಸದಸ್ಯ ಚಂದ್ರಶೇಖರ ರೈ ಮತ್ತಿತರರು ಒತ್ತಾಯಿಸಿದರು.

ಸೋಲಾರ್ ಲೈಟ್ ಮತ್ತು ಬೀದಿ ದೀಪ ಉರಿಯುತ್ತಿಲ್ಲ;
ರೆಂಜ ಬೆಟ್ಟಂಪಾಡಿ ವ್ಯಾಪ್ತಿಯ ಮುಖ್ಯ ರಸ್ತೆಯ ಬದಿಯಲ್ಲಿ ಹಾಕಿದ ಕೆಲವು ಸೋಲಾರ್ ಲೈಟ್ ಹಾಗೂ ವಿದ್ಯುತ್ ದಾರಿ ದೀಪಗಳು ಉರಿಯುತ್ತಿಲ್ಲ ಎಂದು ಸದಸ್ಯ ಮೊಯಿದುಕುಂಞ ಸಭೆಯ ಗಮನ ಸೆಳೆದರು. ಇದರ ದುರಸ್ತಿಗೆ ಕ್ರಮ ಕೈಗೊಳ್ಳಲು ಪ್ರಸ್ತಾಪಿಸಿದಾಗ ಸಮ್ಮತಿ ಸೂಚಿಸಲಾಯಿತು.

ಇರ್ದೆ ಜನತಾ ಕಾಲನಿಯ ಕೋನಡ್ಕದಲ್ಲಿ ನಾಯಿ ಕಾಟದ ಬಗ್ಗೆ ಮನೆಯವರಿಗೆ ನೋಟೀಸ್ ನೀಡುವುದು;
ಜನತಾ ಕಾಲನಿಯ ಒಂದು ಮನೆಯಲ್ಲಿ ಅತೀ ಹೆಚ್ಚು ನಾಯಿಗಳಿದ್ದು ಸಾರ್ವಜನಿಕರಿಗೆ ಇದರಿಂದ ಆಗುತ್ತಿರುವ ತೊಂದರೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈಗಾಗಲೇ ಅವರ ಮನೆಗೆ ಹೋಗಿ ನಾಯಿಗಳನ್ನು ಬಿಡದ ಹಾಗೆ ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದ ಪಿಡಿಒ ಇನ್ನು ಯಾವ ರೀತಿಯಲ್ಲಿ ಅವರಿಗೆ ತಿಳಿಸಲಿ ಎಂದು ಕಳವಳ ವ್ಯಕ್ತಪಡಿಸಿದರು. ಹತ್ತಿರದಲ್ಲೆ ಒಂದು ಅಂಗನವಾಡಿ ಕೇಂದ್ರ ಇದ್ದು ಸಣ್ಣ ಮಕ್ಕಳಿಗೂ ಇದರಿಂದ ಅಪಾಯ. ಇನ್ನೊಮ್ಮೆ ಅವರ ಮನೆಗೆ ಹೋಗಿ ಅವರಿಗೆ ಹೇಳಿ ಎಂದು ಸದಸ್ಯ ಪ್ರಕಾಶ್ ರೈ ಹೇಳಿದರು. ಕೂಡಲೆ ಅವರಿಗೆ ಒಂದು ನೋಟೀಸ್ ಮಾಡುವ ಎಂದು ಪಿಡಿಒ ಹೇಳಿದರು.

ಉಪ್ಪಳಿಗೆ ಪರಿಸರದಲ್ಲಿ ರಸ್ತೆ ಗುಂಡಿ ಸರಿಯಾಗಿ ಮುಚ್ಚಲಿ;
ರೆಂಜ ಸಂಟ್ಯಾರ್ ಮುಖ್ಯ ರಸ್ತೆಯ ಕೈಕಾರದಿಂದ ಚೆಲ್ಯಡ್ಕದವರೆಗೆ ಡಾಮರೀಕರಣ ಕಾಮಗಾರಿ ನಡೆಯುತ್ತಿದೆ. ಆದರೆ ಉಪ್ಪಳಿಗೆ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದೆ. ಆದರೆ ಅದು ಸಮರ್ಪಕವಾಗಿ ನಡೆಯುತ್ತಿಲ್ಲ. ಜಲ್ಲಿ ಹಾಕಿ ಹೋಗಿದ್ದು ಅದು ಚೆಲ್ಲಾಪಿಲ್ಲಿ ಆಗುತ್ತಿದೆ ಎಂದು ಹೇಳಿದ ಪ್ರಕಾಶ್ ರೈಯವರು ಗುಂಡಿಯನ್ನು ಸಂಬಂಧಿಸಿದವರು ಸರಿಯಾಗಿ ಮುಚ್ಚಲಿ ಎಂದು ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಮಹೇಶ್ ಕೆ, ಸದಸ್ಯರಾದ ಗಂಗಾಧರ ಗೌಡ, ಚಂದ್ರಶೇಖರ ರೈ, ಸುಮಲತಾ, ಮಹಾಲಿಂಗ ನಾಯ್ಕ, ಮೊಯಿದುಕುಂಞ, ನವೀನ್ ರೈ, ವಿನೋದ್ ರೈ, ಲಲಿತಾ ಚಿದಾನಂದ, ಬೇಬಿ, ಪವಿತ್ರ ಡಿ, ಲಲಿತ, ರಮ್ಯ, ಉಮಾವತಿ, ಪಾರ್ವತಿ ಎಂ, ಪ್ರಕಾಶ್ ರೈ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಬೆಟ್ಟಂಪಾಡಿ ಸಿ.ಎಚ್.ಒ ಯಶೋಧ ಆರೋಗ್ಯ ಮಾಹಿತಿ ನೀಡಿದರು.

ಪಿಡಿಒ ಸೌಮ್ಯ ಎಂ.ಎಸ್ ಸ್ವಾಗತಿಸಿ ಕಾರ್ಯದರ್ಶಿ ಶಿವರಾಮ ಮೂಲ್ಯ ವಂದಿಸಿದರು. ಸಿಬ್ಬಂದಿಗಳಾದ ಸಂದೀಪ್, ಸವಿತಾ, ಚಂದ್ರಾವತಿ, ಗ್ರಂಥ ಪಾಲಕಿ ಪ್ರೇಮಲತಾ ಸಹಕರಿಸಿದರು.

ಇತ್ತೀಚೆಗೆ ನಿಧನರಾದ ಗುಮ್ಮಟೆಗದ್ದೆ ಪರಿಸರದ ಕುಡಿಯುವ ನೀರಿನ ಪಂಪು ಚಾಲಕ ಮಹಮ್ಮದ್ ಹನೀಪ್ ಇವರ ಬಗ್ಗೆ ಪಿಡಿಒ ಸೌಮ್ಯ ಗುಣಗಾನ ಮಾಡಿದ ನಂತರ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಿ ಶ್ರದ್ದಾಂಜಲಿ ಅರ್ಪಿಸಲಾಯಿತು.ಸರಕಾರದ ವತಿಯಿಂದ  ಕಡ್ಡಾಯ ತೆರಿಗೆ ವಸೂಲಾತಿ ಅಭಿಯಾನ ನಡೆಯುತ್ತಿದ್ದು 15-2-2026 ರ ಒಳಗೆ ಎಲ್ಲರೂ ಕಡ್ಡಾಯವಾಗಿ ತೆರಿಗೆ ಪಾವತಿಸುವುದು ಎಂದು ಪಿಡಿಒ ಸಭೆಗೆ ತಿಳಿಸಿದರು.

LEAVE A REPLY

Please enter your comment!
Please enter your name here