




ಪುತ್ತೂರು: ಗ್ರಾಮೀಣ ಭಾಗದ ಜನತೆ ಮನೆ ಕಟ್ಟುವುದೇ ಕಷ್ಟದಲ್ಲಿ. ಮನೆ ಕಟ್ಟಿದ ಬಳಿಕ ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಮನೆ ಕಟ್ಟಿದ್ದಕ್ಕಿಂತ ಕಷ್ಟ. ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಸುಪ್ರಿಂ ಕೋರ್ಟು ನಿರ್ದೇಶನದಂತೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಕಳೆದ ಕೆಲವು ತಿಂಗಳ ಹಿಂದೆ ಕಟ್ಟಿದ ನೂರಾರು ಮನೆಗಳಿಗೆ ಇನ್ನೂ ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗಲೇ ಇಲ್ಲ. ವಿದ್ಯುತ್ ಇಲ್ಲದ ಗ್ರಾಮೀಣ ಭಾಗದ ಮನೆ ಮಾಲೀಕರಿಗೆ ಪುತ್ತೂರು ಶಾಸಕರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಅದೇನೆಂದರೆ 2400 ಚ.ಅಡಿ ವಿಸ್ತೀರ್ಣದ ಯಾವುದೇ ಮನೆಗಳಿಗೆ ಇನ್ನು ಮುಂದೆ ಯಾವುದೇ ಎನ್ ಒಸಿ ಇಲ್ಲದೆ ವಿದ್ಯುತ್ ಸಂಪರ್ಕ ನೀಡುತ್ತದೆ. ರಾಜ್ಯ ಸರಕಾರ ಶಾಸಕ ಅಶೋಕ್ ರೈ ಅವರ ಮನವಿಗೆ ಸ್ಪಂದನೆಯನ್ನು ನೀಡಿದ್ದು ಇದು ಗ್ರಾಮೀಣ ಜನತೆಗೆ ಶಾಸಕರು ಮತ್ತು ಸರಕಾರ ನೀಡಿದ ಬಲು ದೊಡ್ಡ ಕೊಡುಗೆಯಾಗಿದೆ.



ಈ ಹಿಂದೆ ಯಾವುದೇ ದಾಖಲೆಗಳು ಇಲ್ಲದ ಮನೆಗೆ ಅಥವಾ ಸರಿಯಾದ ದಾಖಲೆ ಇಲ್ಲದ ಮನೆಗಳಿಗೆ ಶಾಸಕರ ಪತ್ರದ ಶಿಫಾರಸ್ಸಿನ ಮೇರೆಗೆ ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ನೀಡುತ್ತಿತ್ತು. ಪುತ್ತೂರು ಶಾಸಕರ ಶಿಫಾರಸ್ಸು ಪತ್ರದ ಮೂಲಕ ನೂರಾರು ಮಂದಿ ತಮ್ಮ ಮನೆಗೆ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕಳೆದ ಎರಡು ವರ್ಷದಿಂದ ಶಾಸಕರು ಮೆಸ್ಕಾಂ ಗೆ ಈ ಪತ್ರವನ್ನು ನೀಡಿ ಬಡವರಿಗೆ ನೆರವಾಗುತ್ತಿದ್ದರು.





ಆದರೆ ವ್ಯಕ್ತಿಯೋರ್ವರು ವಿದ್ಯುತ್ ಸಂಪರ್ಕ ನೀಡುವ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಆ ಬಳಿಕ ಸುಪ್ರೀಂ ಕೋರ್ಟ್ ಹೊಸ ಆದೇಶವನ್ನು ನೀಡಿತ್ತು. ಯಾವುದೇ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾದಲ್ಲಿ ಮನೆಗೆ ಸೂಕ್ತ ದಾಖಲೆ ಮತ್ತು ಸ್ಥಳೀಯ ಸಂಸ್ಥೆಯಿಂದ ಎನ್ ಒಸಿ ಪಡೆದುಕೊಳ್ಳುವುದು ಕಡ್ಡಾಯ ಮಾಡಿತ್ತು. ಸುಪ್ರಿಂ ಆದೇಶದ ಬಳಿಕ ಶಾಸಕರು ನೀಡುವ ಪತ್ರದಿಂದ ವಿದ್ಯುತ್ ಸಂಪರ್ಕ ಅಸಾಧ್ಯವಾಗಿತ್ತು.
ಎನ್ ಒ ಸಿ ಪಡೆಯುವುದು ಕಷ್ಟ ಸಾಧ್ಯವಾಗಿತ್ತು:
ಗ್ರಾಮೀಣ ಭಾಗದಲ್ಲಿ ಹೊಸ ಮನೆಗೆ ವಿದ್ಯುತ್ ಸಂಪರ್ಕ ಪಡೆಯಬೇಕಾದಲ್ಲಿ ಗ್ರಾಪಂ ನಿಂದ ಎನ್‌ಒಸಿ ಕಡ್ಡಾಯ ಮಾಡಲಾಗಿತ್ತು. ಎನ್ ಒ ಸಿ ಪಡೆಯಬೇಕಾದಲ್ಲಿ ಕನ್ವರ್ಶನ್ ಆಗಬೇಕು, 9/11 ಆಗಬೇಕು ಮತ್ತು ಗ್ರಾಪಂ ನಿಂದ ದೃಡೀಕರಣ ಪತ್ರದ ಅಗತ್ಯವಿತ್ತು. ದಾಖಲೆಗಳಿಲ್ಲದ ಕಾರಣ ಬಹುತೇಕರಿಗೆ ಎನ್ ಒಸಿ ಪಡೆಯಲು ಸಾಧ್ಯವೇ ಇರಲಿಲ್ಲ. ಈ ಬಗ್ಗೆ ಅನೇಕರು ಶಾಸಕ ಅಶೋಕ್ ರೈ ಮನವಿ ಮಾಡಿಕೊಂಡಿದ್ದರು. ಹೇಗಾದರೂ ಮಾಡಿ ಈ ವಿಚಾರದಲ್ಲಿ ಹೊಸ ಕಾನೂನು ಮಾಡಿ, ಸರಕಾರದ ಜೊತೆ ಮಾತನಾಡಿ ಎಂದು ಕೇಳಿಕೊಂಡಿದ್ದರು.
ಸ್ಪಂದಿಸಿದ ರಾಜ್ಯ ಸರಕಾರ:
ಶಾಸಕ ಅಶೋಕ್ ರೈ ಅವರು ವಿದ್ಯುತ್ ಸಂಪರ್ಕ ವಿಚಾರದಲ್ಲಿ ಆಗುತ್ತಿರುವ ತೊಂದರೆಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವರ ಬಳಿ ತಿಳಿಸಿದ್ದರು. ಗ್ರಾಮೀಣ ಭಾಗದ ಬಡವರು ತಮ್ಮ ಜಾಗದಲ್ಲಿ ಮನೆ ಕಟ್ಟಿಕೊಂಡಿರುತ್ತಾರೆ ಆದರೆ ಜಾಗಕ್ಕೆ ಸರಿಯಾದ ದಾಖಲೆ ಇರುವುದಿಲ್ಲ, ಅಥವಾ ಮನೆ ಕಟ್ಟಿಕೊಂಡವನ ಹೆಸರಿಗೆ ಜಾಗ ಇರದ ಕಾರಣ ಮನೆ ಕಟ್ಟಿದರೂ ಕತ್ತಲೆಯಲ್ಲೇ ಇರಬೇಕಾದ ಅನಿವಾರ್ಯತೆ ಇದೆ. ಸುಪ್ರಿಂ ಆದೇಶದ ಬಳಿಕ ಸಮಸ್ಯೆ ಇನ್ನಷ್ಟು ಜಠಿಲವಾಗಿದೆ ಎಂದು ತಿಳಿಸಿದ್ದರು. ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ ಗ್ರಾಮೀಣ ಭಾಗದಲ್ಲಿ 2400 ಚ.ಅಡಿ ವಿಸ್ತೀರ್ಣದ ಮನೆಗಳಿಗೆ ಯಾವುದೇ ಎನ್ ಒಸಿ ಇಲ್ಲದೆ ವಿದ್ಯುತ್ ಸಂಪರ್ಕ ಕಲ್ಪಿಸುವ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಮುಂದಿನ ಒಂದು ವಾರದೊಳಗೆ ಹೊಸ ಕಾನೂನು ಜಾರಿಯಾಗಲಿದೆ.
ಗ್ರಾಮೀಣ ಭಾಗದ ಜನರಿಗೆ ಮಾತ್ರ ಈ ಅವಕಾಶವನ್ನು ಸರಕಾರ ಕಲ್ಪಿಸಿದೆ. ಹೊಸ ಮನೆ ಕಟ್ಟಿಕೊಂಡು ಅದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗದ ಅದೆಷ್ಟೋ ಮಂದಿ ನನ್ನ ಬಳಿ ಬಂದು ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದರು. ಈ ವಿಚಾರವನ್ನು ಸರಕಾರದ ಗಮನಕ್ಕೆ ತಂದಿದ್ದೇನೆ. ಗ್ರಾಮೀಣ ಭಾಗದ ಜನರು 2400 ಚ.ಅಡಿ ವಿಸ್ತೀರ್ಣದ ಮನೆ ಕಟ್ಟಿಕೊಂಡಲ್ಲಿ ಅಥವಾ ಅದಕ್ಕಿಂತ ಚಿಕ್ಕ ಮನೆ ಕಟ್ಟಿಕೊಂಡಿದ್ದಲ್ಲಿ ಅದಕ್ಕೆ ಯಾವುದೇ ಎನ್ ಒ ಸಿ ಇಲ್ಲದೆ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ. ಬಡವರ ಮನೆಯೂ ಬೆಳಗಲಿ, ಬೆಳಕು ಕಾಣಲಿ, ಬಡವರ ಮಕ್ಕಳೂ ವಿದ್ಯುತ್ ಬೆಳಕಿನಲ್ಲಿ ಓದಲಿ ಎಂಬುದೇ ನನ್ನ ಆಸೆ.
ಅಶೋಕ್ ರೈ ಶಾಸಕರು ಪುತ್ತೂರು







