ನೆಲ್ಯಾಡಿ: ವಿವಿ ಘಟಕ ಕಾಲೇಜಿನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ ಆಚರಣೆ

0

ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯದ ನೆಲ್ಯಾಡಿ ಘಟಕ ಕಾಲೇಜಿನಲ್ಲಿ ಭಾರತರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆಯನ್ನು ಎ.14ರಂದು ಆಚರಿಸಲಾಯಿತು.

ಕಾಲೇಜಿನ ಸಹ ಸಂಯೋಜಕರಾದ ಡಾ.ಸೀತಾರಾಮ ಪಿ ಅವರು ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಡಾ.ಬಿ.ಆರ್ ಅಂಬೇಡ್ಕರ್ ಅವರ ಬದುಕು, ಸಾಧನೆಗಳ ಕುರಿತು ಮಾತನಾಡಿ, ವಿಶ್ವಸಂಸ್ಥೆಯ ಮೂಲಕ ಇಡೀ ವಿಶ್ವದಲ್ಲಿಯೇ ಈ ದಿನವನ್ನು ’ವಿಶ್ವ ಜ್ಞಾನ ದಿನ’ ವನ್ನಾಗಿ ಆಚರಿಸುತ್ತಿರುವ ಮಹತ್ವವನ್ನು ತಿಳಿಸಿದರು. ಪ್ರಜಾಪ್ರಭುತ್ವದ ಪ್ರಮುಖ ಅಂಶಗಳಾದ ಸಮಾನತೆ, ಸಾಮಾಜಿಕ ನ್ಯಾಯದಂತಹ ಮಾನವೀಯ ಮೌಲ್ಯಗಳನ್ನು ಎಲ್ಲರಿಗೂ ದೊರಕಿಸಿಕೊಡುವಲ್ಲಿ ಅಂಬೇಡ್ಕರ್ ಅವರ ಪಾತ್ರ ವಿಶ್ವಕ್ಕೆ ಮಾದರಿಯಾಗಿದೆ. ಪೂನಾ ಒಪ್ಪಂದದ ಸಂದರ್ಭದಲ್ಲಿ ತೆಗೆದುಕೊಂಡ ಅವರ ನಿಲುವುಗಳು, ಹಿಂದೂ ಕೋಡ್ ಬಿಲ್ ರಚನೆಯಲ್ಲಿ ಅವರು ಜಾರಿಗೆ ತರಲು ಬಯಸಿದ ಸ್ತ್ರೀಪರ ಶಾಸನಾಂಶಗಳು ಹಾಗೂ ಶಿಕ್ಷಣ-ಸಂಘಟನೆ-ಹೋರಾಟದಂತಹ ಪರಿಕಲ್ಪನೆಗಳನ್ನು ಕೊಟ್ಟ ಅವರ ಚಿಂತನಾ ಲಹರಿಗಳು ಒಬ್ಬ ಆರ್ಥಿಕ ತಜ್ಞರಾಗಿ, ತತ್ವಶಾಸ್ತ್ರಜ್ಞರಾಗಿ, ಕಾನೂನು ತಜ್ಞ ಮತ್ತು ಸಚಿವರಾಗಿ, ಸಂವಿಧಾನ ಶಿಲ್ಪಿಯಾಗಿ ಅವರು ನಿರ್ವಹಿಸಿದ ಕರ್ತವ್ಯಗಳು ಭವ್ಯ ಭಾರತದ ನಿರ್ಮಾಣದಲ್ಲಿ ದೂರದೃಷ್ಟಿಯಿಂದ ಕೂಡಿದ್ದವು. ಇಂತಹ ಅನೇಕ ವಿಷಯಗಳ ಮೂಲಕ ಸಾರ್ವಕಾಲಿಕ ಮಹಾನ್ ನೇತಾರರಾಗಿ ಪ್ರತಿನಿಧಿಸುವ ಅಂಬೇಡ್ಕರ್ ಅವರು ನಮಗೆಲ್ಲ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ ಎಂದರು.

ಕನ್ನಡ ವಿಭಾಗದ ಉಪನ್ಯಾಸಕ ಡಾ.ನೂರಂದಪ್ಪ ಅವರು ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ ಸಂವಿಧಾನ ರಚನೆಯ ಹಿನ್ನಲೆಯಲ್ಲಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಸಂದರ್ಭಗಳಲ್ಲಿ ಅಂಬೇಡ್ಕರ್ ತೋರಿಸಿದ ದಾರಿಗಳು ಭಾರತವನ್ನು ಜಗತ್ತಿನಲ್ಲಿಯೇ ಮಾದರಿ ಪ್ರಜಾಪ್ರಭುತ್ವ ರಾಷ್ಟ್ರವಾಗುವಲ್ಲಿ ಮಹತ್ವದ ಪಾತ್ರವಹಿಸಿವೆ ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಂಘದ ನಾಯಕರಾದ ಗುರುಪ್ರಸಾದ್ ಎಂ, ಸಹ ಕಾರ್ಯದರ್ಶಿನಿಯರಾದ ಶುಭಾ, ನಿಷ್ಮಿತಾ, ಕ್ರೀಡಾ ಕಾರ್ಯದರ್ಶಿ ಪ್ರಜಿತ್ ಮತ್ತು ಎಲ್ಲಾ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು. ಉಪನ್ಯಾಸಕರಾದ ಡಾ.ನೂರಂದಪ್ಪ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

LEAVE A REPLY

Please enter your comment!
Please enter your name here