ಬರಹ : ಆದರ್ಶ ಶೆಟ್ಟಿ ಉಪ್ಪಿನಂಗಡಿ
ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಅಖಾಡ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.ಚುನಾವಣೆಗೆ ಬೇಕಾದ ಸರ್ವ ತಯಾರಿಗಳನ್ನು,ಕಟ್ಟುನಿಟ್ಟಿನ ಶಿಸ್ತು ಕ್ರಮಕ್ಕಾಗಿ ನೀತಿ ಸಂಹಿತೆಯನ್ನು ಕೂಡ ಚುನಾವಣಾ ಆಯೋಗ ಜಾರಿಗೆ ತಂದಿದೆ.ರಾಜಕೀಯ ಪಕ್ಷಗಳು ತಮ್ಮ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಏನೆಲ್ಲಾ ಆಶ್ವಾಸನೆಗಳನ್ನು ನೀಡಬೇಕೋ, ಬಹುಮತಕ್ಕಾಗಿ ನಾನಾ ಕಸರತ್ತುಗಳನ್ನು ನಡೆಸಿದರೆ,ಅತ್ತ ಅಭ್ಯರ್ಥಿಗಳು ತಮ್ಮ ಪಕ್ಷದಲ್ಲಿ ಟಿಕೆಟ್ ಪಡೆಯಲು ಏನೆಲ್ಲಾ ಕಸರತ್ತು, ಲಾಬಿ,ಒತ್ತಡ ತಂತ್ರಗಳನ್ನು ಅನುಸರಿಸಬೇಕಿದೆಯೋ ಅದೆಲ್ಲವೂ ಮಾಡುವುದು ಸರ್ವೇ ಸಾಮಾನ್ಯ ಸಂಗತಿ.ಜೊತೆ ಜೊತೆಗೆ ತಮ್ಮ ಪ್ರಚಾರಕ್ಕಾಗಿ ಫೇಸ್ ಬುಕ್, ಇನ್ಸ್ಟಾಗ್ರಾಂ ಖಾತೆಗಳನ್ನು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿ ಪ್ರಮೋಟ್ ಮಾಡುವುದು, ದೃಶ್ಯ ಮಾಧ್ಯಮ,ಮುದ್ರಣ ಮಾಧ್ಯಮಗಳಲ್ಲಿ ಅಭ್ಯರ್ಥಿತನಕ್ಕೆ ತಮ್ಮ ಹೆಸರು ತೇಲಿ ಬಿಡುವುದು ಹೀಗೆ ತಮ್ಮ ತಮ್ಮ ಪಕ್ಷದ ವರಿಷ್ಠರ ಗಮನ ಸೆಳೆಯುವ ನಾನಾ ತಂತ್ರಗಳು ಪ್ರಸ್ತುತ ರಾಜಕೀಯ ಪಡಸಾಲೆಯಲ್ಲಿ ಚಾಲ್ತಿಯಲ್ಲಿರುವ ವಸ್ತು ವಿಷಯಗಳು.
ಚುನಾವಣಾ ಕಾಲದಲ್ಲಿ ಸಾಮಾಜಿಕ ಮಾಧ್ಯಮ, ಜಾಲತಾಣಗಳ ಪ್ರಭಾವ ಮತ್ತು ಸಾಧಕತೆಯ ಬಗ್ಗೆ ಹೆಚ್ಚು ಮುನ್ನಲೆಗೆ ಬಂದಿರುವುದು 2014 ರ ಲೋಕಸಭಾ ಚುನಾವಣೆಯ ನಂತರ. ಪ್ರಧಾನಿ ನರೇಂದ್ರ ಮೋದಿಯವರು 2014 ರ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಸಮರ್ಪಕ ಬಳಕೆಯ ಮೂಲಕ ಫೇಸ್ ಬುಕ್, ವಾಟ್ಸಾಪ್, ಟ್ವಿಟರ್, ಇನ್ಸ್ಟಾಗ್ರಾಂ ಗಳನ್ನು ಚುನಾವಣಾ ಪ್ರಚಾರ ಮಾಧ್ಯಮವನ್ನಾಗಿ ಬಳಸಬಹುದೆಂದು ಅಂದಿನ ಚುನಾವಣೆಯಲ್ಲಿ ನಿರೂಪಿಸಿದ್ದರು.ಈ ಜಾಲತಾಣಗಳಲ್ಲಿ ಪ್ರಮುಖವಾಗಿ ವ್ಯಕ್ತಿಯ ಪೂರ್ವಾಪರ ಪರಿಚಯ, ಮುಂದಿನ ಯೋಜನೆ, ಗುರಿ,ಪಕ್ಷದ ಚುನಾವಣಾ ತಯಾರಿ,ಅಭ್ಯರ್ಥಿಗಳು ಮಾಡಿದ ಸಾಧನೆ, ವಿರೋಧ ಪಕ್ಷದ ಆಡಳಿತ ವಿರೋಧಿ ನೀತಿ,ಪಕ್ಷದ ಕಾರ್ಯಚಟುವಟಿಕೆ,ಅಭ್ಯರ್ಥಿಗಳ ದಿನಚರಿ,ಸಭೆ ಸಮಾರಂಭಗಳ ಕ್ಷಣ ಕ್ಷಣದ ಮಾಹಿತಿಗಳು,ಪ್ರಚಲಿತ ವಿದ್ಯಮಾನ, ರಾಷ್ಟ್ರೀಯ ಸವಾಲು ಹೀಗೆ ಎಲ್ಲವನ್ನೂ ಅಪ್ಡೇಟ್ ಮಾಡುವ ಪದ್ದತಿಗಳು ಆರಂಭಗೊಂಡವು.
ಯಾವಾಗ ಇಂತಹ ಒಂದು ಪ್ರಯೋಗ ರಾಜಕೀಯ ಅಂಗಳದಲ್ಲಿ ಯಶಸ್ವಿಯಾಗಿ ರೂಪುಗೊಂಡಿತೋ ಇದರ ಲಾಭ, ಅನುಕೂಲತೆಗಳನ್ನು ಪಡೆಯಲು ಎಲ್ಲಾ ರಾಜಕೀಯ ಪಕ್ಷಗಳು ಮುಗಿ ಬಿದ್ದು ತಮ್ಮ ತಮ್ಮ ಪಕ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ಘಟಕ ಸ್ಥಾಪಿಸಿ ಇದಕ್ಕೊಂದು ತಂಡವನ್ನು ಸಕ್ರಿಯಗೊಳಿಸಲಾರಂಭಿಸಿದವು. 2014 ರ ಬಳಿಕ ನಡೆದ ಲೋಕಸಭೆ,ವಿಧಾನಸಭೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ವ್ಯಾಪಕ ಪ್ರಮಾಣದಲ್ಲಿ ನಡೆದಿದೆ.ಪಕ್ಷದ ಅಧಿಕೃತ ಪೇಜ್‌ಗಳು, ತಾಲೂಕು, ಬೂತ್‌ಗಳಿಗೆ ವಾಟ್ಸಾಪ್ ಗ್ರೂಪ್‌ಗಳು, ಪ್ರತಿ ಜನಪ್ರತಿನಿಧಿಗಳ ಅಧಿಕೃತ ಫೇಸ್ ಬುಕ್, ವಾಟ್ಸಾಪ್, ಇನ್ಸ್ಟಾಗ್ರಾಂ, ಟ್ವಿಟರ್ ಖಾತೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.ತಮ್ಮ ಸರಕಾರದ ಸಾಧನೆ,ವಿರೋಧ ಪಕ್ಷಗಳ ಮೇಲೆ ಟೀಕಾಸ್ತ್ರಗಳನ್ನು ಪ್ರಯೋಗಿಸುವುದು ಹೀಗೆ ರಾಜಕೀಯವಾಗಿ ಎಲ್ಲದಕ್ಕೂ ಜಾಲತಾಣಗಳ ಬಳಕೆಯಾಗುತ್ತಿದೆ.
ಇದರ ಜೊತೆ ಜೊತೆಗೆ ರಾಜಕೀಯ ಪಕ್ಷಗಳ ಹೆಸರಿನಲ್ಲಿ ಮತ್ತೊಂದು ಪಕ್ಷವನ್ನು ಹೆಣೆಯಲು ನಕಲಿ ಖಾತೆಗಳನ್ನು ತೆರೆದು ಅಭ್ಯರ್ಥಿಗಳ, ರಾಜಕಾರಣಿಗಳ ವೈಯಕ್ತಿಕ ತೇಜೋವಧೆ ನಡೆಸುವ ಮೂಲಕ ಜಾಲತಾಣಗಳನ್ನು ದುರುಪಯೋಗಪಡಿಸುವುದು,ಇಲ್ಲಸಲ್ಲದ ಆರೋಪಗಳನ್ನು ಹೊರಿಸುವುದು,ಸುಳ್ಳು ಆಪಾದನೆಗಳನ್ನು ಹೊರಿಸುವುದು ಇತ್ಯಾದಿ ಘಟನೆಗಳನ್ನು ಕಾಣುತ್ತಿzವೆ.ಇನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಆಕಾಂಕ್ಷಿ ಗಳ ಬೆಂಬಲಿಗರ ನಡುವೆ ನಡೆಯುವ ವಾಗ್ಯುದ್ದಗಳು,ತೀವ್ರ ತರದ ಚರ್ಚೆಗಳನ್ನು ಹುಟ್ಟು ಹಾಕುವುದು,ಇತ್ತೀಚಿನ ರಾಜಕೀಯ ಬೆಳವಣಿಗೆಗಳಲ್ಲಿ ಕಾಣುತ್ತಿzವೆ.ಇಂತಹ ಚರ್ಚೆಗಳು ತಾರಕಕ್ಕೇರಿದಾಗ ಅನಿವಾರ್ಯವಾಗಿ ಗ್ರೂಪ್‌ಗಳು ಅಡ್ಮಿನ್ ಓನ್ಲಿ ಆಗಿ ಬ್ಲಾಕ್ ಆಗಿದ್ದೂ ಇದೆ. ತೀರಾ ಕಳೆದೊಂದು ತಿಂಗಳಿನಿಂದ ಪುತ್ತೂರು ಮತ್ತು ಸುಳ್ಯ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಹಾಗೂ ಕೆಲವೊಂದು ಘಟನೆಗಳು ಇಂದಿಗೂ ಕೆಲ ಗ್ರೂಪ್ ಗಳಲ್ಲಿ ವ್ಯಾಪಕವಾಗಿ ಚರ್ಚೆಗಳನ್ನು ಹುಟ್ಟು ಹಾಕಿ ಪರಸ್ಪರ ಸ್ನೇಹ ಸಂಬಂಧವನ್ನು ಕಳೆದುಕೊಳ್ಳುವ ಹಂತಕ್ಕೂ ತಲುಪಿ ಇದರ ಉಸಾಬರಿಯೇ ಬೇಡವೆಂದು ಸಾಕಷ್ಟು ವಾಟ್ಸಾಪ್ ಗ್ರೂಪ್ ಗಳು ಚುನಾವಣೆ ಮುಗಿಯುವ ತನಕ ಅಡ್ಮಿನ್ ಓನ್ಲಿ ನಿರ್ವಹಣೆಗೆ ಸೀಮಿತಗೊಂಡಿರುವುದು ಕಟು ಸತ್ಯ. ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು,ಜಾಲತಾಣಗಳು ಯಾವ ಮಟ್ಟದಲ್ಲಿ ಸಾಧಕ ಬಾಧಕಗಳನ್ನು ಉಂಟು ಮಾಡಲಿದೆ ಎಂಬುವುದನ್ನು ಕಾಲವೇ ನಿರ್ಧರಿಸಬೇಕಿದೆ.