ವಿಟ್ಲ: ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಳಿಯ ಫುಟ್ಬಾಲ್ ಮೈದಾನದ ಬಳಿ ಮಲಗಿದ್ದ ಕಾರು ಚಾಲಕರೋರ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಮೂಲದ ಓರ್ವನ ಸಹಿತ ನಾಲ್ವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಪ್ರಶಾಂತ್ (40 ವ.), ಕುಶಲನಗರದ ಜಿ.ಕೆ ರವಿಕುಮಾರ್ ಅಲಿಯಾಸ್ ನಂದೀಶ (38 ವ.), ಕೊಣಾಜೆಯ ವಿಜಯ ಕುಟಿನ್ಹಾ (28 ವ.), ಮೂಲತಃ ವಿಟ್ಲ ಬೊಬ್ಬೆಕೇರಿ ನಿವಾಸಿ ಮಂಗಳೂರಿನಲ್ಲಿರುವ ಶರತ್.ವಿ (36 ವ.) ಬಂಧಿತ ಆರೋಪಿಗಳು.
ಏ.18 ರಂದು ಸಂಜೆ ಸ್ಟೇಟ್ ಬ್ಯಾಂಕ್ ಸಮೀಪ ಇರುವ ಪುಟ್ಬಾಲ್ ಮೈದಾನದ ಬಳಿ ಮಲಗಿದ್ದ ಜನಾರ್ದನ ಪೂಜಾರಿ ಅವರ ಹತ್ತಿರ ಬಂದ ಆರೋಪಿಗಳು ಜನಾರ್ದನ ಅವರ ಮೊಬೈಲ್ ಕೊಡುವಂತೆ ಹೇಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಘರ್ಷಣೆ ಉಂಟಾಗಿ ಓರ್ವ ಕಾಲಿನಿಂದ ಜನಾರ್ದನ ಪೂಜಾರಿ ಅವರ ಎದೆಗೆ ಒದ್ದಾಗ ಅವರು ಸುಮಾರು 6 ಅಡಿ ಮೇಲಿನಿಂದ ಕೆಳಗಡೆ ಬಿದ್ದರು. ಜನಾರ್ದನ ಪೂಜಾರಿ ಅವರು ಬಿದ್ದಲ್ಲಿಗೆ ತೆರಳಿದ ಆರೋಪಿಗಳು ಅವರ ಮೇಲೆ ಹಲ್ಲೆ ಮಾಡಿ ತಮ್ಮ ಕಾಲಿನಿಂದ ತುಳಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಜನಾರ್ದನ ಪೂಜಾರಿರವರ ಅಣ್ಣ ಉಮೇಶ್ ಪೂಜಾರಿಯವರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಸುಲಿಗೆ ಉದ್ದೇಶದಿಂದಲೇ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರು ಹಲವು ಪ್ರಕರಣಗಳ ಆರೋಪಿಗಳು: ಪೊಲೀಸರಿಂದ ಬಂಧನಕ್ಕೊಳಪಟ್ಟ ಆರೋಪಿಗಳ ಮೇಲೆ ಈಗಾಗಲೇ ಹಲವು ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಜಿ.ಕೆ. ರವಿಕುಮಾರ್ ಎಂಬಾತನ ಮೇಲೆ 2009ರಲ್ಲಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಶರತ್ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ 2007ರಲ್ಲಿ ಮನೆ ಕಳವು ಪ್ರಕರಣ, ಉಡುಪಿ ಜಿಲ್ಲೆಯ ಮಣಿಪಾಲ ಪೊಲೀಸ್ ಠಾಣೆಯಲ್ಲಿ 2022 ರಲ್ಲಿ ಸುಲಿಗೆ ಪ್ರಕರಣ ದಾಖಲಾಗಿದ್ದು ಈತ ಜೈಲಿನಿಂದ ಇತ್ತೀಚೆಗೆ ಬಿಡುಗಡೆಯಾಗಿದ್ದ. ಆರೋಪಿ ವಿಜಯ ಕುಟಿನ್ಹಾ ಎಂಬಾತನ ಮೇಲೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ 2022 ರಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.