ತಮ್ಮ ಕ್ಷೇತ್ರವನ್ನು ಲಂಚ, ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ ಎಂದು ಎಲ್ಲಾ ಅಭ್ಯರ್ಥಿಗಳು ಪ್ರತಿಜ್ಞೆ ಮಾಡಲಿ

0

ಪ್ರತಿಯೊಬ್ಬ ಅಭ್ಯರ್ಥಿಯನ್ನು ಪ್ರತಿಜ್ಞೆ ಮಾಡಿಸಲು ಮತದಾರರಿಗೆ 20 ದಿನಗಳ ಅವಕಾಶ

ಈ ಕೆಳಗಿನ ಫಲಕವನ್ನು ಮನೆ ಮನೆಗೆ, ದಾರಿ ದಾರಿಗಳಲ್ಲಿ ಅಳವಡಿಸಿ ಆಂದೋಲನ ಯಶಸ್ವಿಗೊಳಿಸಿರಿ

ಸುದ್ದಿ ಜನಾಂದೋಲನದ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಆಂದೋಲನದಿಂದ ಉತ್ತಮ ಸೇವೆ ಮಾಡುವವರಿಗೆ ಪುರಸ್ಕಾರ, ಪ್ರೋತ್ಸಾಹ ದೊರಕಿದೆ. ಲಂಚ, ಭ್ರಷ್ಟಾಚಾರ ಮಾಡುವವರಿಗೆ ಅಂಜಿಕೆ ಪ್ರಾರಂಭವಾಗಿದೆ. ಅದರ ಪ್ರಮಾಣ ಕಡಿಮೆಯಾಗಿದೆ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಆದರೆ ಲಂಚ, ಭ್ರಷ್ಟಾಚಾರವು ರಾಜ್ಯದ ಹಾಗೂ ದೇಶದ ಕೇಂದ್ರದಿಂದ ಪ್ರಾರಂಭವಾಗುವುದರಿಂದ ಅದನ್ನು ನಿಲ್ಲಿಸಲು ಅಥವಾ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬುವುದಂತು ಸತ್ಯ. ಈ ಊರಿನ ಭ್ರಷ್ಟಾಚಾರಕ್ಕೆ ರಕ್ಷಣೆ ಮೇಲಿನಿಂದ ದೊರಕುವುದರಿಂದ ಹಾಗೂ ಇಲ್ಲಿಯ ಲಂಚ, ಭ್ರಷ್ಟಾಚಾರದ ವಸೂಲಿಗಳು ಮೇಲೆ ರವಾನೆಯಾಗುವುದರಿಂದ ಅದು ಕಛೇರಿ ಕಛೇರಿಗಳಲ್ಲಿ ವ್ಯಾಪಿಸಿದೆ ಎಂದು ಹೇಳಿದರೆ ತಪ್ಪಾಗಲಾರದು.

ಇದನ್ನು ನಿಲ್ಲಿಸಲು ಮತದಾರರಿಗೆ ಸುವರ್ಣವಕಾಶ ದೊರಕಿದೆ. ನಮ್ಮ ರಾಜ್ಯದ 224 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಆರಿಸಿ ಬರುವವರು ಶಾಸಕರಾಗುತ್ತಾರೆ, ಮಂತ್ರಿಗಳಾಗುತ್ತಾರೆ, ಮುಖ್ಯಮಂತ್ರಿಗಳಾಗುತ್ತಾರೆ. ಇಡೀ ರಾಜ್ಯದ ಆಡಳಿತ ಅವರ ಕೈಗೆ ಬರುತ್ತದೆ. ರಾಜ್ಯದ ಎಲ್ಲ ಅಧಿಕಾರಿಗಳು ಅವರು ಹೇಳಿದಂತೆ ಕೆಲಸ ಮಾಡಬೇಕಾಗಿ ಬರುತ್ತದೆ. ತಾಲೂಕಿನ ಮಟ್ಟಕ್ಕೆ ತೆಗೆದುಕೊಂಡಾಗ ತಾಲೂಕಿನ ಶಾಸಕರು ಆಡಳಿತದ ಮೇಲೆ ನಿಯಂತ್ರಣ ಹೊಂದಿರುತ್ತಾರೆ. ಇಲ್ಲಿಗೆ ವರ್ಗಾವಣೆಯಾಗಿ ಬರುವವರು ಅವರ ಅನುಮತಿಯಿಂದ ಬರುತ್ತಾರೆ. ಅವರಿಗೆ ಅಸಮಾಧಾನ ಇದ್ದರೆ ಬೇರೆ ಕ್ಷೇತ್ರಕ್ಕೆ ವರ್ಗಾವಣೆಯಾಗುತ್ತಾರೆ. ಅಂದರೆ ಅವರ ಕ್ಷೇತ್ರದಲ್ಲಿ ಯಾವುದೇ ಅಧಿಕಾರಿ ಲಂಚ, ಭ್ರಷ್ಟಾಚಾರ ಮಾಡಿದರೆ ಅದಕ್ಕೆ ಆಯಾ ಕ್ಷೇತ್ರದ ಶಾಸಕರೇ ಹೊಣೆಗಾರರಾಗಬೇಕಲ್ಲವೇ?. ಅಂದರೆ ನಮ್ಮ ಕ್ಷೇತ್ರದಲ್ಲಿ ಆಗುವ ಲಂಚ, ಭ್ರಷ್ಟಾಚಾರಗಳಿಗೆ ನಾವು ಆಯ್ಕೆ ಮಾಡುವ ಶಾಸಕರೇ ಹೊಣೆಗಾರರು ಎಂದೇ ಅರ್ಥ ಮಾಡಿಕೊಳ್ಳಬೇಕು. ಹೀಗಿರುವಾಗ ನಮ್ಮ ಕ್ಷೇತ್ರದಲ್ಲಿ ಲಂಚ, ಭ್ರಷ್ಟಾಚಾರ ನಿಲ್ಲಬೇಕಾದರೆ ನಾವು ಮತದಾನ ನೀಡಿ ಆರಿಸುವ ಅಭ್ಯರ್ಥಿ ಲಂಚ, ಭ್ರಷ್ಟಾಚಾರವನ್ನು ನಿಲ್ಲಿಸುವವನೇ ಆಗಬೇಕು. ಪ್ರತಿಯೊಬ್ಬ ಮತದಾರ ತಾನು ಈ ಸಲ ಮತದಾನ ಮಾಡುವಾಗ ತಾನು ಆರಿಸುವ ಅಭ್ಯರ್ಥಿ ಲಂಚ, ಭ್ರಷ್ಟಾಚಾರ ನಿಲ್ಲಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದರೆ ಆತ ಗೆದ್ದು ಬಂದ ಮೇಲೆ ಲಂಚ, ಭ್ರಷ್ಟಾಚಾರ ನಿಲ್ಲುವುದು ಖಂಡಿತವಲ್ಲವೇ? ಒಂದು ವೇಳೆ ಮಾಡಿದರೆ ಆತನನ್ನು ಪ್ರಶ್ನಿಸುವ, ಕೇಳುವ ಶಕ್ತಿ ಪ್ರತೀ ಮತದಾರರಿಗೆ ಇರುತ್ತದೆಯಲ್ಲವೇ?

ಈ ಆಂದೋಲನದಲ್ಲಿ ಪ್ರತಿಯೊಬ್ಬ ಮತದಾರ ಭಾಗಿಯಾಗಿ ತಾನು ಆರಿಸುವ ಅಭ್ಯರ್ಥಿಯನ್ನು ಲಂಚ, ಭ್ರಷ್ಟಾಚಾರ ನಿಲ್ಲಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿಸಬೇಕು. ಈ ಪ್ರಯತ್ನದಲ್ಲಿ ಕ್ಷೇತ್ರದ ಎಲ್ಲಾ ಮತದಾರರು ಭಾಗವಹಿಸಿದರೆ ಆಂದೋಲನ ಯಶಸ್ವಿಯಾಗುವುದು ಖಂಡಿತ. ಅದಕ್ಕೆ ಈಗ ಉಳಿದಿರುವ ಸಮಯ ಕೇವಲ 20 ದಿನಗಳು. ಇದರಲ್ಲಿ ಯಾವುದೇ ಪಕ್ಷಕ್ಕೆ ವಿರೋಧವಿಲ್ಲ. ಇದು ನಮಗಾಗಿ ನಮ್ಮದೇ ಆಯ್ಕೆಯ ಪ್ರತಿನಿಧಿಯ ಆಡಳಿತ. ಅದಕ್ಕಾಗಿ ಈ ಮೇಲಿನ ಫಲಕವನ್ನು ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಬಲಾತ್ಕಾರದ ಬಂದ್‌ಗೆ ಬಹಿಷ್ಕಾರದ ಫಲಕದಂತೆ ಪ್ರತೀ ಮನೆ ಮನೆಗಳಲ್ಲಿ, ದಾರಿಗಳಲ್ಲಿ ಅಳವಡಿಸಿ ಚುನಾವಣೆಯ ಪ್ರತಿಯೊಂದು ಅಭ್ಯರ್ಥಿಯ ಚುನಾವಣೆಯ ಘೋಷಣೆಯಾಗಿ ಪರಿವರ್ತಿಸುವಂತೆ ಮಾಡಬೇಕಾಗಿ ವಿನಂತಿ. ಇದು ರಾಜ್ಯದ ಎಲ್ಲಾ ಕ್ಷೇತ್ರಗಳಿಗೆ ವಿಸ್ತರಿಸಿದರೆ ಇಡೀ ರಾಜ್ಯವೇ ಭ್ರಷ್ಟಾಚಾರ ಮುಕ್ತವಾಗಬಹುದು. ಆ ಪ್ರಯತ್ನವನ್ನು ಮಾಡಲಿಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುವ ವರುಣದಿಂದ ಮತ್ತು ಹಾಲಿ ಮುಖ್ಯ ಮಂತ್ರಿ ಬೊಮ್ಮಾಯಿಯವರು ಸ್ಪರ್ಧಿಸುವ ಶಿಗ್ಗಾವಿಯಿಂದ ಈ ಆಂದೋಲನವನ್ನು ಪ್ರಾರಂಭಿಸಲಿದ್ದೇವೆ. ಜನರು ಇದಕ್ಕೆ ಬೆಂಬಲ ನೀಡಬೇಕಾಗಿ ಆಶಿಸುತ್ತೇನೆ.

ಡಾ. ಯು.ಪಿ. ಶಿವಾನಂದ

LEAVE A REPLY

Please enter your comment!
Please enter your name here