ಬಂಟ್ವಾಳದಲ್ಲಿ ರಮಾನಾಥ ರೈಯವರಿಂದ ನಾಮಪತ್ರ ಸಲ್ಲಿಕೆ; ಅದ್ದೂರಿ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿ

0

ವಿಟ್ಲ : ನನ್ನ ಸುದೀರ್ಘ ಜನಸೇವೆಯ ಜೀವನದಲ್ಲಿ ಒಂಬತ್ತನೇ ಬಾರಿ ಒಂದೇ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಿದ್ದೇನೆ. ಎಂತಹುದೇ ಪ್ರತಿಕೂಲ ವಾತಾವರಣದಲ್ಲಿಯೂ ನನ್ನ ಜೊತೆ ನಿಂತ ನಿಮ್ಮ ಋಣವನ್ನು ಜನ್ಮ ಜನ್ಮಾಂತರಕ್ಕೂ ತೀರಿಸಲು ಸಾಧ್ಯವಿಲ್ಲ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಬಿ. ರಮಾನಾಥ ರೈರವರು ಹೇಳಿದರು.

ಈ ಬಾರಿಯ ವಿಧಾನಸಭಾ ಚುನಾವಣೆಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೊದಲು ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ಇಂದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನನ್ನೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿ, ನನ್ನನ್ನು ಆಶೀರ್ವದಿಸಿದ ತಮಗೆಲ್ಲರಿಗೂ ನಾನೂ ಅಭಾರಿಯಾಗಿದ್ದೇನೆ. ಅಧಿಕಾರದಲ್ಲಿದ್ದಾಗಲೂ ನಾನು ತಪ್ಪುಗಳನ್ನು ಮಾಡಿಲ್ಲ, ತಮಗೆ ಅಗೌರವವನ್ನುಂಟು ಮಾಡುವ ಯಾವುದೇ ಕೃತ್ಯವನ್ನು ನಾನು ಎಸಗಿಲ್ಲ. ಕಳೆದ ಚುನಾವಣೆಯಲ್ಲಿ ನನ್ನನ್ನು ಅಪಪ್ರಚಾರದಿಂದ ಸೋಲಿಸಲಾಯಿತು. ಸೋತ ಬಗ್ಗೆ ನನಗೆ ಬೇಸರವಿಲ್ಲ, ಆದರೆ ಸೋಲಿಸಿದ ರೀತಿ ನನಗೆ ಬೇಸರ ತಂದಿದೆ. ಈ ಚುನಾವಣೆಯಲ್ಲಿ ತಮ್ಮೆಲ್ಲರ ಸಹಕಾರದಿಂದ ಬಂಟ್ವಾಳದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸೋಣ. ನೀವೆಲ್ಲರೂ ನನ್ನನ್ನು ಆಶೀರ್ವದಿಸಬೇಕು ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಂಜೇಶ್ವರ ಶಾಸಕ ಅಶ್ರಫ್, ಕೇರಳದ ನ್ಯಾಯವಾದಿ ಗೋವಿಂದನ್, ನ್ಯಾಯವಾದಿ ಅಶ್ವನಿ ಕುಮಾರ್ ರೈ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.‌

ಕೆ.ಪಿ.ಸಿ.ಸಿ. ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪ್ರಮುಖರಾದ ಬಿ.ಎಚ್. ಖಾದರ್ ಮತ್ತು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ರೈಯವರು ನಾಮಪತ್ರ ಸಲ್ಲಿಸುವ ಸಂದರ್ಭ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಶಾಸಕ ಡಾ| ಮಂಜುನಾಥ ಭಂಡಾರಿ, ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜಾ, ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ, ಸುಳ್ಯ ಕ್ಷೇತ್ರದ ಅಭ್ಯರ್ಥಿ ಕೃಷ್ಣಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಪ್ರಮುಖರಾದ ಎಂ.ಎಸ್. ಮುಹಮ್ಮದ್, ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಜನಾರ್ದನ ಚೆಂಡ್ತಿಮಾರ್, ಅಬ್ಬಾಸ್ ಅಲಿ, ರಾಕೇಶ್ ಮಲ್ಲಿ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ, ನ್ಯಾಯವಾದಿ ಸುರೇಶ್ ಬಿ. ನಾವೂರ, ರಮಾನಾಥ ರೈಯವರ ಪತ್ನಿ ಧನಭಾಗ್ಯ ರೈ, ಸಹೋದರಿ ಚೆನ್ನವೇಣಿ ಎಂ. ಶೆಟ್ಟಿ ಮತ್ತು ಪಕ್ಷದ ಎಲ್ಲಾ ಮುಂಚೂಣಿ ಘಟಕದ ಅಧ್ಯಕ್ಷರುಗಳು, ಪ್ರಮುಖರುಗಳು ಉಪಸ್ಥಿತರಿದ್ದರು. ರಮಾನಾಥ ರೈಯವರ ಮಗಳು ಚರಿಷ್ಮಾ ರೈ ಮೆರವಣಿಗೆಯ ಆರಂಭದಿಂದ ಕೊನೆವರೆಗೂ ಇದ್ದು, ಕಾರ್ಯಕರ್ತರನ್ನು ಹುರಿದುಂಬಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು. ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ವಂದಿಸಿದರು.

ಮೆರವಣಿಗೆಯುದ್ದಕ್ಕೂ ಪುಷ್ಪಾರ್ಚನೆ: ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ರಮಾನಾಥ ರೈಗಳ ಅಭಿಮಾನಿಗಳು ಪುಷ್ಪಾರ್ಚನೆ ಗೈದರು. ಮೆರವಣಿಗೆ ಸಾಗಿ ಬಂದ ಹಾದಿಯುದ್ದಕ್ಕೂ ಅಪಾರ ಸಂಖ್ಯೆಯ ಜನರು ಮೆರವಣಿಗೆ ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿಯೂ ನಿಂತಿರುವುದು ಕಂಡುಬಂತು.

ಮೆರವಣಿಗೆಯಲ್ಲಿ ಸಾಗಿಬಂದು ನಾಮಪತ್ರ ಸಲ್ಲಿಕೆ: ಬಂಟ್ವಾಳದ ತಿರುಮಲ ವೆಂಕಟರಮಣ ದೇವಸ್ಥಾನದಿಂದ ಹೊರಟ ಸಹಸ್ರಾರು ಜನರ ಉತ್ಸಾಹಭರಿತ ಪಾದಯಾತ್ರೆ ಬಿ.ಸಿ.ರೋಡ್ ಬಸ್ ನಿಲ್ದಾಣದವರೆಗೆ ಸಾಗಿತು. ನಂತರ ಮಿನಿವಿಧಾನಸೌಧದಲ್ಲಿರುವ ಚುನಾವಣಾಽಕಾರಿಗಳ ಕಚೇರಿಗೆ ಪಕ್ಷದ ಪ್ರಮುಖರೊಂದಿಗೆ ತೆರಳಿ ರಮಾನಾಥ ರೈಯವರು ನಾಮಪತ್ರ ಸಲ್ಲಿಸಿದರು.

ವಿವಿಧ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಾರ್ಥನೆ : ಬಂಟ್ವಾಳದ ತಿರುಮಲ ವೆಂಕಟರಮಣ ದೇವಸ್ಥಾನದ ಬಳಿಯಿಂದ ಮೆರವಣಿಗೆ ಆರಂಭಕ್ಕೂ ಮುನ್ನಾ ರಮಾನಾಥ ರೈಯವರು ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೊಡಂಕಾಪು ಚರ್ಚ್‌ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಿತ್ತಬೈಲು ಮೊಯ್ದಿನ್ ಜುಮಾ ಮಸೀದಿ, ಕೆಳಗಿನಪೇಟೆ ಮಸೀದಿಯಲ್ಲೂ ಪ್ರಾರ್ಥಿಸಿದರು. ಆನಂತರ ಬಂಟ್ವಾಳದ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here